Friday 29 May 2020

✡️✡️ ಈಶೋಪನಿಷತ್ ✡️✡️

ಪ್ರಮುಖ ಉಪನಿಷತ್ ಗಳಲ್ಲಿ ಒಂದು. ಯಜುರ್ವೇದದ ವಾಜಸನೇಯ ಶಾಖೆಗೆ ಸೇರಿದೆ. ಇದಕ್ಕೆ ಈಶಾವಾಸ್ಯೋಪ ನಿಷತ್ ಎಂಬ ಹೆಸರೂ ಇದೆ. ಗಾತ್ರದಲ್ಲಿ ಚಿಕ್ಕದು. ಕೇವಲ 18 ಶ್ಲೋಕಗಳಿಂದ ಕೂಡಿದೆ. ಆದರೂ ತತ್ತ್ವಗಾಂಭೀರ್ಯದಿಂದ ಅರ್ಥ ಸಂಪತ್ತಿನಿಂದ ಅತಿ ಮಹತ್ತ್ವದ್ದಾಗಿದೆ. ಇದರಲ್ಲಿ ಜಗತ್ತಿಗೂ ಬ್ರಹ್ಮನಿಗೂ ಇರುವ ಸಂಬಂಧ ವಿವರಣೆ ಪರಿಷ್ಕಾರವಾಗಿ ಬಂದಿದೆ. ಮಾನವಜೀವ ನದ ಅಂತರಾರ್ಥವನ್ನಿಲ್ಲಿ ಬಿಡಸಲಾಗಿದೆ. ಎಲ್ಲದಕ್ಕೂ ಪ್ರಭುವಾದ ಭಗವಂತನಲ್ಲಿ ಸಮರ್ಪಣ ಭಾವದಿಂದ ಕರ್ಮಮಾಡಿ ಪರೋಪಕಾರಿಯಾಗಿ ಸೇವಾನಿಷ್ಠನಾಗಿ ಮನುಷ್ಯಜೀವನವನ್ನು ಸಾಗಿಸಬೇಕೆಂಬ ಬೋಧೆ ಇಲ್ಲಿದೆ. ಭಗವದ್ಗೀತೆಯ ವಿಸ್ತಾರವಾದ ಉಪದೇಶ ಈ ಉಪನಿಷತ್ತಿನ ವಿವರಣೆಯಂತಿದೆ.



        🕉️🕉️ಕೇನೋಪನಿಷತ್🕉🕉️

ತಲವಕಾರ ಶಾಖೆಗೆ ಸೇರಿರುವುದರಿಂದ ಇದಕ್ಕೆ ತಲವಕಾರೋಪ ನಿಷತ್ತೆಂದೂ ಹೆಸರಿದೆ. ಇದರಲ್ಲಿ ನಾಲ್ಕು ಖಂಡಗಳಿವೆ. ಮೊದಲೆರಡು ಖಂಡಗಳು ಪದ್ಯಮಯವಾಗಿಯೂ ಕೊನೆಯ ಎರಡು ಖಂಡಗಳು ಗದ್ಯಮಯವಾಗಿಯೂ ಇದ್ದು ಒಟ್ಟು 34 ಮಂತ್ರಗಳಿವೆ. ಕೇನ (ಯಾರಿಂದ) ಎಂಬ ಪದದಿಂದ ಸಾಹಿತ್ಯ ಆರಂಭವಾಗುತ್ತದೆ. ಚಿಕ್ಕ ಚಿಕ್ಕ ಮಂತ್ರಗಳಲ್ಲಿ ಬ್ರಹ್ಮಸ್ವರೂಪವನ್ನು ಮಾರ್ಮಿಕವಾಗಿ ಇದು ವರ್ಣಿಸಿದೆ. ಯಾವುದನ್ನು ಕಣ್ಣಿನಿಂದ ಕಾಣಲಾಗುವುದಿಲ್ಲವೋ ಯಾವುದರಿಂದ ಕಣ್ಣು ಕಾಣುತ್ತದೋ ಅದು ಬ್ರಹ್ಮವೆಂದು ತಿಳಿ ಎಂಬುದು ಮೊದಲ ಬೋಧೆ. ಸರ್ವವೂ ಬ್ರಹ್ಮಮಯವಾಗಿರುವುದಲ್ಲದೆ ಪರತತ್ತ್ವ ಸಾಕ್ಷಾತ್ಕಾರ ಇಂದ್ರಿಯಾತೀತವೆಂಬುದು ತಾತ್ಪರ್ಯ. ಮೂರು ಮತ್ತು ನಾಲ್ಕನೆಯ ಖಂಡದಲ್ಲಿ ಬರುವ ವ್ಯಾಖ್ಯಾನದಲ್ಲಿ, ದೇವತೆಗಳು ಬ್ರಹ್ಮನಿಂದಾದ ವಿಜಯವನ್ನು ತಮ್ಮಿಂದಾದುದೆಂದು ಭ್ರಮಿಸಿ ಯಕ್ಷರೂಪದಲ್ಲಿ ಕಾಣಿಸಿಕೊಂಡ ಬ್ರಹ್ಮನನ್ನು ತಿಳಿಯಲಾಗದೆ, ಆತ ತಮ್ಮ ಮುಂದೆ ಇಟ್ಟ ಒಂದು ಹುಲ್ಲುಕಡ್ಡಿಯನ್ನು ದಹಿಸಲು, ಅಲುಗಿಸಲು ಅಗ್ನಿವಾಯುಗಳು ಅಸಮರ್ಥರಾ ದಾಗ, ಅಂತರ್ಧಾನನಾದ ಯಕ್ಷನೇ ಬ್ರಹ್ಮನೆಂದು, ಹೈಮವತಿ ಉಮಾದೇವಿಯಿಂದ ಅರಿತುಕೊಂಡರೆಂದು ಬೋಧಿಸಲಾಗಿದೆ. ಶ್ರೇಷ್ಠನಾಗಿದ್ದರೂ ಇಂದ್ರನೇ ಇಲ್ಲಿ ಪರಬ್ರಹ್ಮನಲ್ಲ.

           🌴🌴ಕಠೋಪನಿಷತ್ 🌴🌴

ಇದು ಎರಡು ಅಧ್ಯಾಯಗಳಿಂದ ಕೂಡಿದೆ. ಬ್ರಹ್ಮವಿದ್ಯೆಯನ್ನು ಬೇಡಿದ ನಚಿಕೇತನಿಗೆ ಯಮದೇವ ಪ್ರಲೋಭನಗಳನ್ನು ಒಡ್ಡಿದರೂ ಆತ ಅದಾವುದನ್ನೂ ಲಕ್ಷಿಸದೆ ಬ್ರಹ್ಮವಿದ್ಯೆಯನ್ನೇ ವರವಾಗಿ ಪಡೆದ ರೋಮಾಂಚನಕಾರಿ ಕಥೆ ಇರುವುದರಿಂದ ಅತ್ಯಂತ ಪ್ರಸಿದ್ಧವಾಗಿದೆ. ಜನ್ಮ, ಪುನರ್ಜನ್ಮಗಳು, ಮರಣಾನಂತರ ಆತ್ಮದ ಸ್ಥಿತಿ, ಇಂದ್ರಿಯನಿಗ್ರಹ ದಿಂದ ಪರಮಾತ್ಮಪ್ರಾಪ್ತಿ, ಶ್ರದ್ಧೆ, ಧೈರ್ಯಗಳಿಂದ ಪರಮಾತ್ಮ ಸ್ವರೂಪಜ್ಞಾನ, ಶಾಶ್ವತಸುಖ ಶಾಂತಿಗಳ ಪ್ರಾಪ್ತಿ-ಇವನ್ನು ಯಮ ಪ್ರಣವದಿಂದ ಸಂಗ್ರಹವಾಗಿ ನಚಿಕೇತನಿಗೆ ಉಪದೇಶಿಸಿ ದ್ದಾನೆ. ತಂದೆಯಾದ ವಾಜಶ್ರವಸ್ ಯಾಗ ಸಂದರ್ಭದಲ್ಲಿ ಕುಪಿತನಾಗಿ ತನ್ನನ್ನು ಯಮನಿಗೆ ಒಪ್ಪಿಸಿದರೂ ಧೈರ್ಯಗೆಡದೆ ಮಗನಾದ ನಚಿಕೇತ ಯಮನೊಂದಿಗೆ ವಾದಮಾಡಿ ಅಮೃತತ್ವವನ್ನು ಪಡೆಯುತ್ತಾನೆ. ತಂದೆಯ ಪ್ರಸನ್ನತೆಯೊಂದಿಗೆ ಅಗ್ನಿವಿದ್ಯೆಯನ್ನೂ ವರವಾಗಿ ಪಡೆಯುತ್ತಾನೆ. ಈ ಆಖ್ಯಾನವನ್ನು ಹೇಳಿದರೂ ಕೇಳಿದರೂ ಬ್ರಹ್ಮಲೋಕಪ್ರಾಪ್ತಿಯೆಂದು ಫಲಶ್ರುತಿ ಇದೆ. ಇದರಲ್ಲಿ ಮಾನವನ ಹುಟ್ಟು ಸಾವುಗಳ ಪ್ರಶ್ನೆಗೂ ಅವನ ಸುಖಕ್ಕೆ ಶ್ರೇಯ ಪ್ರೇಯಗಳಾವುವು ಎಂಬ ಪ್ರಶ್ನೆಗೂ ಉತ್ತರವಿದೆ. ನಿತ್ಯರಲ್ಲಿ ನಿತ್ಯನೂ ಚೇತನರಲ್ಲಿ ಚೇತನನೂ ಆಗಿ ಸಮಸ್ತಕ್ಕೂ ಏಕೈಕ ಕಾರಣನಾದ ಪರಮಾತ್ಮನನ್ನು ನಚಿಕೇತನಂಥ ಅಸಾಧಾರಣ ಧೀರನಾದವ ಮಾತ್ರ ಹೃದಯಗಹ್ವರದಲ್ಲಿ ಕಂಡುಕೊಳ್ಳುವನೆಂದು ಸ್ಪಷ್ಟಪಡಿಸಲಾಗಿದೆ. ಕೆಲವು ಸ್ವಾರಸ್ಯವಾದ ಅಂಶಗಳೂ ಇದರಲ್ಲಿ ಕಂಡುಬಂದಿವೆ. ಪರಲೋಕದಲ್ಲಿ ನಂಬಿಕೆ ಇಲ್ಲದವರು ಆ ಕಾಲದಲ್ಲೂ ಇದ್ದರೆಂದು ಸೂಚಿಸಲಾಗಿದೆ. ‘ಆಶ್ಚರ್ಯೋ ವಕ್ತಾ’. ‘ಅಣೋರಣೀಯಾನ್’, ‘ಅಜೋ ನಿತ್ಯಃ ಶಾಶ್ವತೋಯ ಪುರಾಣಃ’ ಎಂಬ ಉಕ್ತಿಗಳನ್ನು ಗೀತೆಯಲ್ಲಿ ತೆಗೆದುಕೊಳ್ಳಲಾಗಿದೆ. ಸಾಂಖ್ಯ ಮತ್ತು ಯೋಗದರ್ಶನಗಳಿಗಿಂತ ಈ ಉಪನಿಷತ್ ಹಿಂದಿನದೆಂದು ಕೆಲವು ವಾಕ್ಯಗಳು ಸೂಚಿಸುತ್ತವೆ: `ತದ್ವಿಷ್ಣೋಃ ಪರಮಂ ಪದಮ್’ ಎಂಬ ವಾಕ್ಯ ವಿಷ್ಣುವೇ ಪರಬ್ರಹ್ಮನೆಂದು ಈ ಉಪನಿಷತ್ತಿನ ನಿರ್ಣಯವೆಂದು ತೋರಿಸುತ್ತದೆ. ‘ಮೃತ್ಯೋಃ ಸಮೃತ್ಯುಮಾಪ್ನೋತಿ ಯ ಇಹ ನಾನೇವಪಶ್ಯತಿ’ ಎಂಬ ವಾಕ್ಯದಲ್ಲಿ ಅದ್ವೈತ ತತ್ತ್ವದ ಅಭಿಪ್ರಾಯವಿದೆ.

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...