Thursday 10 October 2019

ಜೀವನದುದ್ದಕ್ಕೂ ಅಣ್ಣಾವ್ರನ್ನ ದ್ವೇಷಿಸಿದ ಪುಟ್ಟಣ್ಣ ಕಣಗಾಲ್ ಕೊನೆಗಾಲದಲ್ಲಿ ಹೇಳಿದ ರೋಚಕ ಸತ್ಯ ಏನು ಗೊತ್ತಾ ತಪ್ಪದೇ ಓದಿ.!












ಅಣ್ಣಾವ್ರನ್ನು ತುಳಿಯಲು ಚಿತ್ರರಂಗದ ಹಲವರು ಪ್ರಯತ್ನಿಸಿದ್ದರಾ.? ಹೌದು ಎನ್ನುವುದಕ್ಕೆ ಸಾಕ್ಷಿ ಈ ಆತ್ಮಾವಲೋಕನ. ತುಳಿಯಲು ಪ್ರಯತ್ನಿಸಿದವರೇ ಒಪ್ಪಿಕೊಂಡ ಅಪ್ಪಟ ಸತ್ಯ ಇಲ್ಲಿದೆ.! ರಾಜ್ ಜನಿಸದ ಈ ಸುವರ್ಣ ಮಾಸದಲ್ಲಿ ಜಗತ್ತಿನ ಈ ಅಪ್ಪಟ ಸತ್ಯ ಬೆತ್ತಲೆಯಾಗಿ ನಿಂತಿದೆ
ಡಾ.ರಾಜ್ ಕುಮಾರ್ ಕುರಿತಂತೆ ಕನ್ನಡಚಿತ್ರರಂಗ ಕಂಡ ಶ್ರೇಷ್ಠ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಮಾಡಿಕೊಂಡ ಆತ್ಮಾವಲೋಕನಕ್ಕೆ ನಿಮಗೆಲ್ಲಾ ಸ್ವಾಗತ.

ಈ ಸಂಚಿಕೆಯಲ್ಲಿರುವ ಸಂಪೂರ್ಣ ಮಾಹಿತಿ ಅವರು ನಿವೇದಿಸಿದ್ದೆ. ಬರವಣಿಗೆ ಮಾತ್ರ ನನ್ನದು.ಈ ಸಂಚಿಕೆಯಲ್ಲಿ ಯಾರಿಗಾದರೂ ನೋವಾಗುವ ಸಂಗತಿಯಿದ್ದಲ್ಲಿ ಅದಕ್ಕೆ ನಾನು ಬಾಧ್ಯನಲ್ಲ. ಬಹಳಷ್ಟು ಸದಸ್ಯರ ಕೋರಿಕೆಯ ಮೇರೆಗೆ 33 ವರ್ಷಗಳ ಹಿಂದಿನ ಘಟನೆಯನ್ನು ನೆನಪು ಮಾಡಿಕೊಂಡು ನಿಮ್ಮ ಮುಂದೆ ಇರಿಸಿದೆ.

ಈ ಸಂಚಿಕೆಯ ಉದ್ದೇಶ್ಯ ನಿರ್ದೇಶಕ ಪುಟ್ಟಣ್ಣ ನವರ ಬಗ್ಗೆ ಕೆಲವು ಡಾ.ರಾಜ್ ಕುಮಾರ್ ರವರ ಅಭಿಮಾನಿಗಳಿಗೆ ಇರುವಂಥ ಅಸಮಾಧಾನ,ಬೇಸರ, ತಿರಸ್ಕಾರ ಮನೋಭಾವವನ್ನು ದೂರಮಾಡಿ ಅವರಲ್ಲಿ ಪುಟ್ಟಣ್ಣ ನವರ ಬಗ್ಗೆ ವಾಸ್ತವಿಕ ಹೆಮ್ಮೆ ಉಂಟಾಗಲಿ ಎಂಬುದೇ ಪರಂತು ಮತ್ತ್ಯಾವ ಸ್ವಾರ್ಥ ಮನೋಭಾವವಲ್ಲ. ಏಕೆಂದರೆ ನಂಜುಂಡನಂತೆ ನೋವನ್ನುಂಡ ನಮ್ಮ ಆರಾಧ್ಯ ದೈವವೇ ಪುಟ್ಟಣ್ಣ ನವರನ್ನು ವಿಶಾಲ ಮನೋಭಾವದಿಂದ ಕ್ಷಮಿಸಿ,
ಪ್ರೀತ್ಯಾದರಗಳಿಂದ ಅಪ್ಪಿ ಆನಂದಿಸಿರುವಾಗ ಅವರ ಅಭಿಮಾನಿ ದೇವರುಗಳಾದ ನಾವೇಕೆ ಮಣ್ಣಲ್ಲಿ ಮಣ್ಣಾಗಿರುವ ವಿಷಯವನ್ನು ಇನ್ನೂ ಮನಸ್ಸಿನಲ್ಲಿಟ್ಟು ಕೊಂಡು ದ್ವೇಷ ಸಾಧಿಸಬೇಕು?
ಪುಟ್ಟಣ್ಣ ಕಣಗಾಲ್ ರವರ ಆತ್ಮಾವಲೋಕನ
ಚಿತ್ರರಂಗದಲ್ಲಿ ನಿರ್ದೇಶಕರನ್ನು ಗುರುತಿಸುವ ಪರಂಪರೆಗೆ ನಾಂದಿ ಹಾಡಲು ದಾರಿ ಮಾಡಿ ಕೊಟ್ಟವರು ಎಸ್.ಆರ್.ಪುಟ್ಟಣ್ಣ ಕಣಗಾಲ್. ಕನ್ನಡ ಚಿತ್ರರಂಗ ಹೆಮ್ಮೆ ಪಡಬಹುದಾದ ನಿರ್ದೇಶಕ.ಬೇರೆ ಭಾಷೆಯ ಚಿತ್ರರಂಗದವರೂ ಕನ್ನಡ ಚಿತ್ರರಂಗದತ್ತ ಕಣ್ಣು ಹಾಯಿಸುವಂತೆ ಮಾಡಿದ ಎರಡನೇಯ ಕನ್ನಡಿಗ.ಮೊದಲನೇಯವರು ಡಾ.ರಾಜ್ ಕುಮಾರ್.
ಈ ಮಹಾನ್ ನಿರ್ದೇಶಕ ತನ್ನ ಅಭಿಮಾನಿ ಬಳಗವನ್ನು ಅಗಲಿ ಹೋಗುವ ಕೆಲ ದಿನಗಳ ಮುನ್ನ ತನ್ನ ಆತ್ಮಾವಲೋಕನ ಮಾಡಿಕೊಳ್ಳಲು ಬಯಸಿದರು.ಅವರನ್ನು ಪಾಪಪ್ರಜ್ಞೆ ಕಾಡಿತ್ತು .ಅವರನ್ನು ಬಹುವಾಗಿ ಕಾಡಿದ ನಾಲ್ಕು ವಿಷಯಗಳಲ್ಲಿ ಅಗ್ರಸ್ಥಾನ ಡಾ.ರಾಜ್ ಕುಮಾರ್ ರವರಿಗೆ ಸಂಬಂಧಿಸಿದುದು. ಅದರ ಸಂಬಂಧ ಅವರ ಆತ್ಮಾವಲೋಕನ ದರ್ಶನವಾಗಿದ್ದು ಖಾಸಗಿ ಆಸ್ಪತ್ರೆಯೊಂದರಲ್ಲಿ.
ಅದಕ್ಕಾಗಿ ಅವರು ಬರಮಾಡಿಕೊಂಡದ್ದು ಓರ್ವ ಪತ್ರಕರ್ತರನ್ನು (ಕ್ಷಮಿಸಿ ಆ ಪತ್ರಕರ್ತರ ಹೆಸರನ್ನು ನಾವಿಲ್ಲಿ ಬಹಿರಂಗ ಪಡಿಸಲು ಇಚ್ಛಿಸುವುದಿಲ್ಲ.ಏಕೆಂದರೆ ಅವರಿಂದು ಜೀವಂತವಾಗಿಲ್ಲ).ಆ ಪತ್ರಕರ್ತರು ನನ್ನ ಗುರುಗಳು.ಅಂದಿನ ಚರ್ಚೆಯ ಮಾಹಿತಿಗಳನ್ನು ಗುರುತು ಮಾಡಿಕೊಂಡು ಲೇಖನ ರೂಪದಲ್ಲಿ ಮೂಡಿಸುವ ಸಲುವಾಗಿ ನನ್ನನ್ನು ಅವರೊಡನೆ ಕರೆದೊಯ್ದಿದ್ದರು.

ಆತ್ಮಾವಲೋಕನದ ಆರಂಭದಲ್ಲೇ ಪುಟ್ಟಣ್ಣ ಕಣಗಾಲ್ ಒಂದು ಷರತ್ತು ಹಾಕಿದ್ದರು.ಅದೇನೆಂದರೆ ಅವರ ಆತ್ಮಾವಲೋಕನದ ಮಾಹಿತಿ ಅವರ ಜೀವಿತಾವಧಿಯಲ್ಲಿ ಪ್ರಕಟವಾಗಬಾರದು. ಏಕೆಂದರೆ ಪತ್ರಕರ್ತರ ಸಮೂಹದೆದುರು ಅವರಿಗೆ ಚಿಕ್ಕವನಾಗಿ ನಿಲ್ಲುವ ಇಚ್ಛೆಯಿಲ್ಲ. ಹಾಗಾಗಿ ಅವರ ಮರಣಾನಂತರವಷ್ಟೇ ಅವರ ಆತ್ಮಾವಲೋಕನದ ಮಾಹಿತಿ ಹೊರಬೀಳಬೇಕು.
ಆದರೆ ಅವರ ಮರಣಾನಂತರ ನನ್ನ ಗುರುಗಳು ಪುಟ್ಟಣ್ಣನವರ ಆತ್ಮಾವಲೋಕನ ಮಾಹಿತಿಯನ್ನು ಪ್ರಕಟಿಸಲು ಹಿಂಜರಿದರು. ಅದಕ್ಕೆ ಕಾರಣವಿತ್ತು. ಆ ಪತ್ರಕರ್ತರು ಡಾ.ರಾಜ್ ಕುಮಾರ್ ರವರ ಅಭಿಮಾನಿ. ಎಂದೂ ಡಾ.ರಾಜ್ ಕುಮಾರ್ ರವರ ಬಗ್ಗೆ ಅನುಚಿತವಾಗಿ ಬರೆದವರಲ್ಲ. ಡಾ.ರಾಜ್ ಕುಮಾರ್ ರವರ ಬಗ್ಗೆ ಉತ್ಪ್ರೇಕ್ಷೆಯಾಗಿ ಬರೆದವರೂ ಅಲ್ಲ. ನ್ಯಾಯಬದ್ಧವಾಗಿ ಬರೆದವರು. ಪುಟ್ಟಣ್ಣ ನವರ ಆತ್ಮಾವಲೋಕನದ ಮಾಹಿತಿಯನ್ನು ಪ್ರಕಟಿಸಿ ಅದನ್ನು ಜನ ನಂಬದೇ ಹೋದರೆ, ಅಭಿಮಾನದ ಸಲುವಾಗಿ ಕಟ್ಟು ಕಥೆ ಎಂದು ಭಾವಿಸಿದರೆ ? ನನಗಂತೂ ಆ ಕಾಲಘಟ್ಟದಲ್ಲಿ ಬಹಳ ನಿರಾಶೆಯಾಗಿತ್ತು.
ಕಾರಣ ಆತ್ಮಾವಲೋಕನದ ಮಾಹಿತಿಯನ್ನು ಶ್ರಮವಹಿಸಿ ಸೊಗಸಾಗಿ ಮನ ಮುಟ್ಟುವಂತೆ ಲೇಖನದ ಮೂಲಕ ಸಿದ್ಧಪಡಿಸಿದ್ದೆ. ಅದರ ಪ್ರತಿಯನ್ನು ಪುಟ್ಟಣ್ಣ ನವರಿಗೂ ತೋರಿಸಿ ಪ್ರಕಟಣೆಗೆ ಅವರ ಸಮ್ಮತಿ ಪಡೆದಿದ್ದೆ. ನನ್ನ ಲೇಖನವನ್ನು ಮನಸಾರೆ ಮೆಚ್ಚಿ ತಮ್ಮ ಪ್ರಶಂಸೆಯ ದ್ಯೋತಕವಾಗಿ ಆ ಪ್ರತಿಯ ಮೇಲೆ ತಮ್ಮ ಹಸ್ತಾಕ್ಷರ ನೀಡುವ ಮೂಲಕ ನನ್ನನ್ನು ಹರಸಿದ್ದರು.ಆಗ ನನಗೆ 33 ವರ್ಷ. ಪುಟ್ಟಣ್ಣ ನವರ ಮಾತುಗಳು ಇಂದಿಗೂ ನನ್ನ ಕಿವಿಯಲ್ಲಿ ಪ್ರತಿಧ್ವನಿಸುತ್ತಿವೆ.ಸಾಧ್ಯವಾದಷ್ಟು ಅವರ ಮಾತಿನಲ್ಲೇ ತಿಳಿಸುವ ಪ್ರಯತ್ನ ಮಾಡುತ್ತೇನೆ. ಉಳಿದಂತೆ ನನ್ನ ಮಾತಿನಲ್ಲಿ ಹೇಳುತ್ತೇನೆ. ದಯವಿಟ್ಟು ಬಿಡುವು ಮಾಡಿಕೊಂಡು ಪುಟ್ಟಣ್ಣ ನವರ ಆತ್ಮಾವಲೋಕನದ ದರ್ಶನ ಮಾಡಿ
ಈ ವರೆಗೂ ನನ್ನಲ್ಲೇ ಉಳಿದು ಶೀತಲ ಮರೀಚಿಕೆಯಂತಿದ್ದ ಮಾಹಿತಿ ಇಂದು ಹೊರಬೀಳುತ್ತಿದೆ. ಅದರ ಹಿಂದೆ ಒಂದು ಶ್ರದ್ಧಾವಂತ ಉದ್ದೇಶ್ಯವಿದೆ.ಅದೇನೆಂದರೆ ಇನ್ನಾದರೂ ಡಾ.ರಾಜ್ ಕುಮಾರ್ ರವರಿಗೆ ಸಂಬಂಧಿಸಿದಂತೆ ಪುಟ್ಟಣ್ಣ ಕಣಗಾಲ್ ರವರನ್ನು ನಿಂದಿಸುವುದು, ಅವಾಚ್ಯ ಶಬ್ಧ ಗಳಿಂದ ಅವಹೇಳನ ಮಾಡುವುದು ನಿಲ್ಲಲಿ. ಕನ್ನಡ ಚಿತ್ರರಂಗಕ್ಕೆ ಅನರ್ಘ್ಯ ಚಿತ್ರಗಳನ್ನು ನೀಡಿದ, ಪ್ರತಿಭಾವಂತ ನಟ-ನಟಿಯರನ್ನು ಪರಿಚಯಿಸಿದ, ನಮ್ಮ ಸಂಸ್ಕೃತಿಯ ದರ್ಶನವನ್ನು ಉಣಬಡಿಸಿದ ಆ ಮಹಾನ್ ಚೇತನವನ್ನು ಕೃತಜ್ಞತಾ ಪೂರ್ವಕವಾಗಿ ನೆನೆಯೋಣ, ಸ್ಮರಿಸೋಣ ಹಾಗೂ ನಮನ ಸಲ್ಲಿಸೋಣ.
ಆತ್ಮಾವಲೋಕನ ಆರಂಭ-(ಪುಟ್ಟಣ್ಣ ನವರು ನಿವೇದಿಸಿಕೊಂಡಂತೆ) ರಾಜ್ ಕುಮಾರ್ ರವರನ್ನು ನಾನು ಚಿತ್ರರಂಗಕ್ಕೆ ಬಂದಾಗಿನಿಂದ ಬಲ್ಲೆ. ಅವರ ಅಭಿನಯದ ಚಿತ್ರ”ಬೇಡರ ಕಣ್ಣಪ್ಪ” ನೋಡಿದಾಗಲೆ ಈ ಮನುಷ್ಯನಲ್ಲಿ ಪ್ರತೆಭೆಯಿದೆ ಎಂದು ಗುರುತಿಸಿದ್ದೆ ಆಗಾಗ್ಗೆ ಪರಸ್ಪರ ಭೇಟಿ. ಉಭಯ ಕುಶಲೋಪರಿ,ಮುಗುಳ್ನಗೆ ವಿನಿಮಯ ಅಷ್ಟೇ. ವಿಶೇಷ ಸ್ನೇಹ, ಬಾಂಧವ್ಯವೇನೂ ಇರಲಿಲ್ಲ. ಆ ಕಾಲಘಟ್ಟದಲ್ಲಿ ರಾಜ್ ಕುಮಾರ್ ರವರನ್ನು ಇಷ್ಟ ಪಡುವವರ ಜೊತೆ ಜೊತೆಗೆ ಇಷ್ಟಪಡದವರೂ ಇದ್ದರು. ಬಹುಶಃ ನಾನು ಹೆಚ್ಚಾಗಿ ಎರಡನೇಯ ಗುಂಪಿನವರ ಜೊತೆ ಬೆರೆತೆ ಅಂತ ಕಾಣಿಸುತ್ತೆ. ನನಗರಿವಿಲ್ಲದ ಹಾಗೆ, ಸ್ಪಷ್ಟ ಕಾರಣವೂ ಇಲ್ಲದೇ ರಾಜ್ ಕುಮಾರ್ ರವರನ್ನು ಕಂಡಾಗ ನನಗೆ ಅವರ್ಣನೀಯವಾದ ಅಸಹನೆ, ಬೇಸರ, ಇರಿಸು ಮುರಿಸು ನನ್ನನ್ನು ಭಾದಿಸುತ್ತಿತ್ತು.
ಡಾ.ರಾಜ್ ಕುಮಾರ್ ರವರು ನನ್ನನ್ನು ಭೆಟ್ಟಿಯಾದಾಗಲೆಲ್ಲಾ ವಿಶ್ವಾಸದಿಂದ ಕಾಣುತ್ತಿದ್ದರು.ನಾನು ಮಾತ್ರ ನನ್ನದೇ ವಿಚಿತ್ರ ನಡವಳಿಕೆಯಿಂದ ವರ್ತಿಸುತ್ತಿದ್ದೆ. ನಾನು ರಾಜ್ ಕುಮಾರ್ ಜೊತೆ ಕೆಲಸ ಮಾಡಿದ ಮೊದಲ ಚಿತ್ರ”ಕಿತ್ತೂರು ಚೆನ್ನಮ್ಮ”-ನನ್ನ ಗುರು ಶ್ರೀಮಾನ್ ಬಿ.ಆರ್.ಪಂತುಲು ರವರ ಚಿತ್ರ.ನಿಜ ಹೇಳ ಬೇಕೆಂದರೆ ಆ ಚಿತ್ರ ನಿರ್ಮಾಣ ಮಾಡುವಂತೆ ನನ್ನ ಗುರುಗಳನ್ನು ಹುರಿದುಂಬಿಸಿದ್ದು ನಾನೇ.ನಾಯಕ ಪಾತ್ರಕ್ಕೆ ರಾಜ್ ಕುಮಾರ್ ರವರ ಹೆಸರನ್ನು ಸೂಚಿಸಿದ್ದೂ ನಾನೇ.ಏಕೆಂದರೆ ನನ್ನ ಗುರುಗಳು ಆವರೆಗೂ ತಮ್ಮ ಯಾವ ಚಿತ್ರದಲ್ಲೂ ರಾಜ್ ಕುಮಾರ್ ರವರಿಗೆ ಅವಕಾಶ ನೀಡಿರಲಿಲ್ಲ.ಅವಕಾಶ ಇದ್ದ ಕಡೆಯೂ ಅವರು ತಮಿಳಿನ ಶಿವಾಜಿ ಗಣೇಶನ್ ರವರಿಗೆ ಕರೆದು ಅವಕಾಶ ಮಾಡಿ ಕೊಟ್ಟಿದ್ದರು.
“ಕಿತ್ತೂರು ಚೆನ್ನಮ್ಮ” ಚಿತ್ರ ಕಥೆ ಸಿದ್ಧ ಪಡಿಸುವಾಗಲೂ ನನ್ನ ಗುರುಗಳು ಮಲ್ಲಸರ್ಜನ ಪಾತ್ರಕ್ಕೆ ಹೆಚ್ಚಿನ ಮಹತ್ವ ನೀಡದೆ ಚೆನ್ನಮ್ಮನ ಪಾತ್ರಕ್ಕೆ ಒತ್ತು ಕೊಟ್ಟಾಗಲೂ ಅದು ಸರಿಯಲ್ಲವೆಂದು ತಿಳಿದೂ ಸುಮ್ಮನಿದ್ದೆ. ಕಿತ್ತೂರು ಚೆನ್ನಮ್ಮ ಚಿತ್ರದಲ್ಲೇ ನನಗರಿವಾಗಿತ್ತು ರಾಜ್ ಕುಮಾರ್ ಕನ್ನಡ ಚಿತ್ರರಂಗದ ಮೇರು ನಟನಾಗುತ್ತಾರೆಂದು. ಆ ಚಿತ್ರದ ಚಿತ್ರೀಕರಣ ಸಮಯದಲ್ಲಿ ಅವರ ಶಿಸ್ತು,ಸಮಯಪ್ರಜ್ಞೆ,ಕರ್ತವ್ಯ ನಿಷ್ಟೆ ,ಸಹನೆ,ಸಂಯಮ,ಅಭಿನಯ ಪ್ರತಿಭೆ ಇವೆಲ್ಲಾ ನನ್ನ ಮೇಲೆ ಮೋಡಿ ಮಾಡಿದ್ದವು.ಆದರೆ ಅವರ ಬಗ್ಗೆ ನನ್ನೊಳಗಿದ್ದ ತಾತ್ಸಾರ ಮನೋಭಾವ ಅವನ್ನೆಲ್ಲಾ ಮುಚ್ಚಿಬಿಟ್ಟಿದ್ದವು.
ಮುಂದೆ ಅವರ ಜೊತೆ ಇನ್ನೆರಡು ಚಿತ್ರಗಳಲ್ಲಿ (ಗಾಳಿ ಗೋಪುರ, ಸಾಕುಮಗಳು) ಕೆಲಸ ಮಾಡಿದಾಗ ಆವರನ್ನು ತೆಲುಗು ಚಿತ್ರರಂಗದ ಜನಪ್ರಿಯ ನಟ ಎನ್.ಟಿ.ರಾಮರಾವ್ ರೊಡನೆ ಹೋಲಿಕೆ ಮಾಡಿ ನೋಡುವ ಅವಕಾಶ ಲಭ್ಯವಾಯಿತು. ಆಗ ನನಗೆ ರಾಜ್ ಕುಮಾರ್ ರ ವಿಶಿಷ್ಟತೆ,ವಿಭಿನ್ನತೆ ಹಾಗೂ ಲವಲೇಶವೂ ಕಾಣಸಿಗದ ನಾನತ್ವ ನನ್ನಲ್ಲಿ ಅವರ ಬಗ್ಗೆ ವಿಮರ್ಶೆ ಮಾಡುವಂಥ ಪ್ರಚೋದನೆ ಉಂಟಾಗಿತ್ತು. ಆದರೆ ನಾನಿನ್ನು ಆಗ ಬಿಸಿರಕ್ತದವ ಹಾಗಾಗಿ ವಿನಾ ಕಾರಣ ಅವನನ್ನೇನು ವಿಮರ್ಶೆ ಮಾಡುವುದು ಅಂತ ನಿರ್ಲಕ್ಷ್ಯನಾಗಿ ವರ್ತಿಸಿದೆ.
ಮತ್ತೆ ನಾನು ಅವರೊಡನೆ ಕೆಲಸ ಮಾಡಿದ್ದು (ಸಹ ನಿರ್ದೇಶಕನಾಗಿ ಕೊನೆಯ ಚಿತ್ರ) “ಸತಿ ಶಕ್ತಿ” ಚಿತ್ರದಲ್ಲಿ. ಆ ಚಿತ್ರದ ಚಿತ್ರೀಕರಣ ಸಂದರ್ಭದಲ್ಲಿ ನಡೆದ ಒಂದು ಅಹಿತಕರ ಘಟನೆ ಅವರಿಂದ ನನ್ನನ್ನು ವಿರುದ್ಧ ದಿಕ್ಕಿಗೆ ನಿಲ್ಲಿಸಿಬಿಡ್ತು.
ಆ ಚಿತ್ರದಲ್ಲಿ ರಾಜ್ ಕುಮಾರ್ ರವರದು ದ್ವಿಪಾತ್ರ. ಖಳನಾಯಕ ನಡೆದು ಬರುವ ದೃಶ್ಯ-ನಾಯಕನ ವೇಷಧಾರಿಯಾಗಿ. ನಡಿಗೆಯ ವಿಚಾರದಲ್ಲಿ ಭಿನ್ನಾಭಿಪ್ರಾಯ. ರಾಜ್ ಕುಮಾರ್ ಐದಾರು ಬಾರಿ ನಡೆದುಬಂದರೂ ನನಗೆ ಸಮಾಧಾನವಾಗಲಿಲ್ಲ. ಮತ್ತೆ ನಡೆದು ಬನ್ನಿ ಎಂದೆ. ಎಂದೂ ಸಹನೆ ಕಳೆದು ಕೊಳ್ಳದ ರಾಜ್ ಕುಮಾರ್ ಸಹನೆ ಕಳೆದುಕೊಂಡು ಅದ್ಹ್ಯಾಗೆ ನಡೀ ಬೇಕೋ ನನಗೆ ಗೊತ್ತಾಗುತ್ತಿಲ್ಲ. ನೀವೇ ನಡೆದು ತೋರಿಸಿ ಎಂದು ನನ್ನನ್ನು ಕೇಳಿದರು ಮೊದಲೇ ಅವರ ವಿಷಯದಲ್ಲಿ ನನಗೆ ಅಷ್ಟಕಷ್ಟೇ ಹಾಗಾಗಿ ನನಗೆ ಸಹಜವಾದ ಕೋಪದಿಂದಲೇ “ನಾನು ನಡೆದು ತೋರಿಸಬೇಕು ಅಂತಾದರೆ ನಿನ್ನನ್ಯಾಕೆ ಹೀರೋ ಮಾಡಬೇಕಿತ್ತು ನಾನೇ ಹೀರೋ ಆಗುತ್ತಿದ್ದೆ” ಎಂದು ಅನಿರೀಕ್ಷಿತವಾಗಿ ಏಕವಚನದಲ್ಲಿ ಕೂಗಾಡಿಬಿಟ್ಟೆ.
ನನ್ನ ವರ್ತನೆಯಿಂದ ರಾಜ್ ಕುಮಾರ್ ರವರಿಗೆ ಸಹಜವಾಗಿ ಬೇಸರವಾಗಿ ಅಲ್ಲಿಂದ ಯಾರಿಗೂ ಹೇಳದೆ ಕೇಳದ ಹೊರಟು ಹೋದರು. ನಾನು ಅವರ ಬಗ್ಗೆ ಎಳ್ಳಷ್ಟೂ ತಲೆ ಕೆಡಿಸಿಕೊಳ್ಳಲಿಲ್ಲ. ಬಂದರೆ ಬರಲಿ ಇಲ್ಲದಿದ್ದರೆ ಬಿಡಲಿ ಎಂದು ನಾನು ಸುಮ್ಮನಾಗಿಬಿಟ್ಟೆ ಸ್ವಲ್ಪ ಹೊತ್ತಿನಲ್ಲೇ ರಾಜ್ ಕುಮಾರ್ ಮರಳಿ ಬಂದವರೇ ನನ್ನ ಬಳಿ ಬಂದು ಪುಟ್ಟಣ್ಣ ನವರೇ ದಯವಿಟ್ಟು ಕ್ಷಮಿಸಿ ನನ್ನ ಇಂದಿನ ವರ್ತನೆ ಸರಿಯಾಗಿರಲಿಲ್ಲ ನಾನು ಹಾಗೆ ನಡೆದುಕೊಳ್ಳಬಾರದಿತ್ತು ಎಂದವರೇ ನನ್ನ ಕೈ ಕುಲುಕಿ ಸೆಟ್ ಗೆ ಹೋಗಿ ನಡಿಗೆಯ ದೃಶ್ಯದಲ್ಲಿ ಮತ್ತೆ ಪಾಲ್ಗೊಂಡರು. ಅವರ ಪ್ರಥಮ ನಡಿಗೆ ಓಕೆ ಆಯಿತು ಆದರೂ ಅವರು ನನ್ನ ಬಳಿ ಬಂದು ನಿಮಗೆ ಸಮಾಧಾನವಾಗಿಲ್ಲದಿದ್ದರೆ ಹೇಳಿ ಮತ್ತೆ ಅಭಿನಯಿಸುತ್ತೇನೆ ಎಂದಾಗ ನಾನು ಅಗತ್ಯವಿಲ್ಲ, ದೃಶ್ಯ ಸರಿಯಾಗಿ ಬಂದಿದೆ ಎಂದು ಹೇಳಿದೆ.
ಅವರು ಸೆಟ್ ನಲ್ಲಿ ಇದ್ದವರೆಲ್ಲರತ್ತ ಕೈಬೀಸಿ ತಾನು ಹೋಗಿ ಬರುವೆನೆಂದು ಸೂಚಿಸುತ್ತಾ ಅಲ್ಲಿಂದ ಹೊರಟುಹೋದರು. ಅವರು ಹೋದಮೇಲೆ ರವಿ (ಕೆ.ಎಸ್.ಎಲ್.ಸ್ವಾಮಿ) ಬಂದು ಕೆಲಹೊತ್ತಿನ ಹಿಂದೆ ನಡೆದುದೆಲ್ಲವನ್ನೂ ವಿವರಿಸಿದ. ಅವನು ಹೇಳಿದ ಪ್ರಕಾರ ರಾಜ್ ಕುಮಾರ್ ಅಂದಿನ ತನ್ನ ವರ್ತನೆಗೆ ಬೇಸರಗೊಂಡು ಬಹಳ ನೊಂದುಕೊಂಡಿದ್ದರಂತೆ. ಅದನ್ನು ಕೇಳಿಯೂ ನನ್ನ ಆ ದಿನದ ವರ್ತನೆ ನನಗೆ ತಪ್ಪಾಗಿ ಕಾಣಲಿಲ್ಲ. ನಾನು ಅವರಂತೆ ಕ್ಷಮಾಪಣೆಯನ್ನೂ ಕೇಳಲಿಲ್ಲ.
ಆ ನಂತರ ಚಿತ್ರದ ಚಿತ್ರೀಕರಣ ಮುಗಿಯುವವರೆಗೆ ರಾಜ್ ಕುಮಾರ್ ಆ ಅಹಿತಕರ ಘಟನೆ ನಡೆದೇ ಇಲ್ಲವೇನೋ ಎಂಬಂತೆ ವರ್ತಿಸಿದರು.ಎಂದಿನ ಪ್ರೀತಿ, ವಿಶ್ವಾಸ. ಅವರ ನಡವಳಿಕೆಯಲ್ಲಿ ಬದಲಾವಣೆಯೇ ಇಲ್ಲ.
ನನಗಂತೂ ಆಶ್ಚರ್ಯ ಒಬ್ಬ ವ್ಯಕ್ತಿ ಇಷ್ಟು ಸಮಾಧಾನದಿಂದ ಇರಲು ಸಾಧ್ಯವೇ ಅಂತ. ನನಗಂತೂ ಹಾಗಿರಲು ಸಾಧ್ಯವೇ ಇಲ್ಲ.
ಸತಿಶಕ್ತಿ ಚಿತ್ರದ ನಂತರ ನಾನು ಅವರ ಅಭಿನಯದ ಯಾವ ಚಿತ್ರಕ್ಕೂ ಸಹ ನಿರ್ದೇಶಕನಾಗಿ ಕೆಲಸ ಮಾಡಲಿಲ್ಲ. ಆಗಾಗ್ಗೆ ನಾವಿಬ್ಬರು ಭೇಟಿಯಾಗುತ್ತಿದ್ದೆವು. ರಾಜ್ ಕುಮಾರ್ ರವರ ನಡವಳಿಕೆಯಲ್ಲಿ ಸ್ಪಷ್ಟ ಬದಲಾವಣೆ ಇತ್ತು.ನನ್ನ ಸ್ನೇಹ,ವಿಶ್ವಾಸ ಬಯಸಿ ಬಹಳ ಕಾಲ ಅದಕ್ಕಾಗಿ ಕಾದು ಅದು ಸಿಗದೆ ಬಹುಶಃ ನಿರಾಶರಾಗಿ ಬೇಡ ಬಿಡು ಅವರ ಗೋಜು ಅಂದುಕೊಂಡಿರಬೇಕು. ಆ ಸಂದರ್ಭದಲ್ಲೂ ನಾನು ಬದಲಾಗಲಿಲ್ಲ.
ನಾನು ಸ್ವತಂತ್ರ ನಿರ್ದೇಶಕನಾದ ಮೇಲೆ ನನಗೆ ಕನ್ನಡದಲ್ಲಿ ಬಂದ ಮೊದಲ ಅವಕಾಶ ಕಾಕತಾಳೀಯವೆಂಬಂತೆ ರಾಜ್ ಕುಮಾರ್ ನಾಯಕತ್ವದ ಚಿತ್ರವಾಗಿತ್ತು. ಅದು ಶ್ರೀನಿವಾಸನ್ ಎಂಬ ನಿರ್ಮಾಪಕರ ಚಿತ್ರ. ನನಗೆ ಒಪ್ಪಿಕೊಳ್ಳಲು ಮನಸ್ಸಿಲ್ಲ. ಬಿಡಲೂ ಇಷ್ಟವಿಲ್ಲ. ನಾನು ಆಯ್ಕೆ ಮಾಡಿದ್ದ ಕಾದಂಬರಿ “ಬೆಳ್ಳಿಮೋಡ”. ನಾಯಕನದು ನೆಗಟೀವ್ ಪಾತ್ರ. ಸರಿ ನನ್ನ ವಿಕೃತ ಮನಸ್ಸು ನನ್ನನ್ನು ಪ್ರಚೋದಿಸಿತು. ನಾಯಕನನ್ನು ತೀರಾ ಕೆಟ್ಟವನಂತೆ ಚಿತ್ರಿಸಲು ನಿಶ್ಚಯಿಸಿ ಕಥೆ ಸಿದ್ಧಪಡಿಸಿದೆ. ನನ್ನ ಉದ್ದೇಶ್ಯ ರಾಜ್ ಕುಮಾರ್ ರವರ ಜನಪ್ರಿಯತೆ ಕುಗ್ಗಿಸುವುದಾಗಿತ್ತು. ಇದೆಲ್ಲದರ ಸೂಕ್ಷ್ಮವೂ ಇಲ್ಲದ ರಾಜ್ ಕುಮಾರ್ ಆ ಪಾತ್ರ ನಿರ್ವಹಿಸಲು ಒಪ್ಪಿಕೊಂಡಿದ್ದರು. ಆದರೆ ದೈವಬಲ ಅವರ ಪರ ಇತ್ತು ಅನಿಸುತ್ತೆ. ಅವರ ಕಡೆಯವರು ಇದನ್ನು ಗ್ರಹಿಸಿ ರಾಜ್ ಕುಮಾರ್ ಬೆಳ್ಳಿಮೋಡ ಚಿತ್ರದಲ್ಲಿ ನಟಿಸುವುದನ್ನು ತಪ್ಪಿಸಿದರು.ರಾಜ್ ಜಾಗಕ್ಕೆ ಕಲ್ಯಾಣ್ ಕುಮಾರ್ ಆಯ್ಕೆಯಾದರು.
ಮತ್ತೆ ನಾನು ವಾಸ್ತವಕ್ಕೆ ಬಂದು ನಾಯಕನ ಪಾತ್ರದಲ್ಲಿ ದುಷ್ಟತನವನ್ನು ಕಡಿಮೆ ಮಾಡಿ ಚಿತ್ರಿಸಿದೆ.
ಆ ಚಿತ್ರದ ನಂತರ ಮತ್ತೆ ನನಗೆ ಕನ್ನಡ ಚಿತ್ರಗಳಲ್ಲಿ ಅವಕಾಶವಿಲ್ಲ. ನಿರಾಶೆಯಲ್ಲಿದ್ದ ನನಗೆ ಮತ್ತೊಂದು ಅವಕಾಶ ಅರಸಿ ಬಂತು. ಅದರಲ್ಲಿ ಮತ್ತೆ ರಾಜ್ ಕುಮಾರ್ ನಾಯಕ.ಆದರೆ ಈ ಬಾರಿ ನಿರ್ಮಾಪಕರು ಕಥೆ ಆಯ್ಕೆ ಮಾಡಿದ್ದರು .ಚಿತ್ರದಲ್ಲಿ ರಾಜ್ ಕುಮಾರ್ ರವರದು ಸಾತ್ವಿಕ ಪಾತ್ರ. ಆ ಪಾತ್ರ ನಿರೂಪಿಸುತ್ತಾ ನನಗೆ ರಾಜ್ ಕುಮಾರ್ ರವರ ಸಾತ್ವಿಕ ಸ್ವಭಾವದ ಸ್ವರೂಪ ದರ್ಶನವಾಯಿತು. ಅದೇ ಮನಸ್ಥಿತಿಯಲ್ಲಿ ಅವರ ಪಾತ್ರಪೋಷಣೆ ಸಂಯಮಪೂರಿತವಾಗಿ ಮಾಡುವಲ್ಲಿ ಯಶಸ್ವಿಯಾದೆ.
ಮಲ್ಲಮ್ಮನ ಪವಾಡ ಚಿತ್ರದ ತಯಾರಿಕೆ ಸಂದರ್ಭದಲ್ಲಿ ರಾಜ್ ಕುಮಾರ್ ನನಗೊಂದು ಉಪಕಾರ ಮಾಡಿದರು. ಆಗ ಅದು ನನಗೆ ಬೇಸರ ತಂದಿತ್ತು. ಆದರೆ ಅದನ್ನು ಈಗ ನೆನೆದಾಗ ಕೃತಜ್ಞತೆ ನನ್ನಲ್ಲಿ ಉದ್ಭವಿಸುತ್ತದೆ.
ನಾನು ವಜ್ರಮುನಿಗೆ ತನ್ನ ಮುಂದಿನ ಚಿತ್ರದಲ್ಲಿ ಅವಕಾಶ ಕೊಡುವುದಾಗಿ ಭರವಸೆ ನೀಡಿದ್ದೆ . ಅದಕ್ಕನುಗುಣವಾಗಿ ಆ ಚಿತ್ರದಲ್ಲಿ ಒಂದು ಮಹತ್ವಪೂರ್ಣ ಪಾತ್ರವಿತ್ತು.ನಾಯಕನ ತಮ್ಮನ ಪಾತ್ರ. ಆದರೆ ಅವರ ಆಯ್ಕೆಗೆ ನಿರ್ಮಾಪಕರು ಒಪ್ಪಲಿಲ್ಲ. ಅವರ ಆಯ್ಕೆ ಉದಯ ಕುಮಾರ್ ಆಗಿತ್ತು. ಮೊದಲೇ ಆ ಚಿತ್ರ ತೆಲುಗು ಭಾಷೆಯ “ಅರ್ಧಾಂಗಿ” ಚಿತ್ರದ ಕನ್ನಡ ಅವತರಣಿಕೆ ಎಂಬ ಬೇಸರವಿತ್ತು. ಆದರೆ ಆ ಬೇಸರ, ಕಥೆ ಕನ್ನಡದ ಕಾದಂಬರಿಯ ಪ್ರತಿರೂಪ ಎಂಬ ಸಮಾಧಾನವಿತ್ತು. ನಿರ್ದೇಶಕನಾಗಿ ನನಗೆ ಸ್ವತಂತ್ರವಿರದೆ ಬೇಸರವಾಗಿತ್ತು. ವಜ್ರಮುನಿ ಆಯ್ಕೆಯ ಬಗ್ಗೆ ನಿರ್ಮಾಪಕರು ರಾಜ್ ಕುಮಾರ್ ರವರ ಸಲಹೆ ಕೇಳಿದಾಗ ನನ್ನ ಕೋಪ ನೆತ್ತಿಗೇರಿತ್ತು. ಅವರನ್ನೇನು ಕೇಳುವುದು? ಇದು ನನ್ನ ಅನಿಸಿಕೆ. ಆದರೆ ಅಂದು ರಾಜ್ ಕುಮಾರ್ ಆಡಿದ ಮಾತುಗಳು ನನಗೆ ಅಚ್ಚರಿವುಂಟು ಮಾಡಿತ್ತು.
ರಾಜ್ ಕುಮಾರ್ ಅಂದು ನಿರ್ಮಾಪಕರಿಗೆ ಹೇಳಿದ್ದು -ನೋಡಿ ನಿರ್ದೇಶಕ ಚಿತ್ರದ ನಿಜವಾದ ನಾಯಕ. ಆತನ ಇಚ್ಛೆಯಂತೆ ಚಿತ್ರ ಮೂಡಿಬಂದರೆ ಸೊಗಸಾಗಿರುತ್ತದೆ. ಹಾಗಾಗಿ ಒಂದು ಪ್ರಯತ್ನ ಮಾಡಿ. ಅವರಾಸೆಯಂತೆ ಆ ಹೊಸ ನಟನನ್ನೇ ಹಾಕಿಕೊಳ್ಳಿ. ಆತನ ಅಭಿನಯ ನಿಮಗೆ ಇಷ್ಟವಾಗಲಿಲ್ಲವೆಂದರೆ ಆತನ ಬದಲು ಉದಯ ಕುಮಾರ್ ರವರನ್ನೇ ಹಾಕಿಕೊಳ್ಳೋಣ. ರಾಜ್ ಕುಮಾರ್ ಮಾತಿಗೆ ಪ್ರತಿ ಮಾತನಾಡದೆ ನಿರ್ಮಾಪಕರು ವಜ್ರಮುನಿಯನ್ನು ಒಪ್ಪಿಕೊಂಡಿದ್ದರು. ರಾಜ್ ಕುಮಾರ್ ರವರ ಬಗ್ಗೆ ನನ್ನ ಅಸಮಾಧಾನ ಕಡಿಮೆಯಾಗಿತ್ತು. ಆದರೆ ವಿಶ್ವಾಸದ ರೂಪ ತಾಳಿರಲಿಲ್ಲ. ಅವರೊಡನೆ ನನ್ನ ಮುಂದಿನ ಚಿತ್ರ” ಕರುಳಿನ ಕರೆ”. ಅದು ತಮಿಳಿನ ಬಾಲಸುಬ್ರಂಹಣ್ಯಂ ರವರ ಕಥೆ ಆದರಿಸಿದ್ದು.
ಆದರೆ ಆ ಕಥೆ ನನಗೆ ಇಷ್ಟವಾಗಲಿಲ್ಲ. ಹಾಗಾಗಿ ಕಥೆಯನ್ನು ಬದಲಾಯಿಸುತ್ತಾ ಹೋದೆ. ಕೊನೆಗೆ ಅದು ನನ್ನ ಕಥೆಯಾಗಿ ಹೊರಬಂತು. ಹಾಗಾಗಿ ಚಿತ್ರದ ಟೈಟಲ್ ಕಾರ್ಡ್ಸ್ ನಲ್ಲಿ ಕಥೆ ನನ್ನದೆಂದೇ ದಾಖಲಾಗಿದೆ. ನಾನು ರಚಿಸಿದ ಕಥೆ ಹೆಚ್ಚು ಕಡಿಮೆ ನನ್ನ ಜೀವನದ ಕಥೆಯ ಸ್ಫೂರ್ತಿಯಾಗಿ ರೂಪುಗೊಂಡಿತ್ತು. ಆ ಚಿತ್ರದಲ್ಲಿ ನನ್ನ ಭಾವನೆಗಳನ್ನು ನಾಯಕನ ಪಾತ್ರದಲ್ಲಿ ಅಳವಡಿಸಿದೆ.ಅಚ್ಚರಿ ಅಂದರೆ ರಾಜ್ ಕುಮಾರ್ ನನ್ನ ನಿಜ ಜೀವನದ ಪಾತ್ರವನ್ನು ಮೈ ಮರೆಯುವಂತೆ,ಮನ ತಣಿಸುವಂತೆ ಅಭಿನಯಿಸಿದಾಗ ನಾನು ಮಾತು ಬಾರದ ಮೂಗನಾಗಿದ್ದೆ. ರಾಜ್ ಕುಮಾರ್ ರವರಲ್ಲಿ ನನ್ನನ್ನು ನಾನೇ ಕಂಡುಕೊಂಡೆ.ಅವರಲ್ಲಿ ನನಗೀಗ ಪ್ರೀತಿ,ವಿಶ್ವಾಸ,ಗೌರವ, ಮೆಚ್ಚುಗೆ ಎಲ್ಲವೂ ಉಂಟಾಗಿತ್ತು.
ಅದೇ ಕಾರಣ ನಾನು ಮನಃಪೂರ್ವಕವಾಗಿ ರಾಜ್ ಕುಮಾರ್ ನಟನೆಯಲ್ಲಿ ಚಿತ್ರವೊಂದನ್ನು ನಿರ್ದೇಶಿಸಲು ಆಸೆ ಪಟ್ಟೆ. ಅಂದುಕೊಂಡ ಹಾಗೆ ಅವಕಾಶ ಅರಸಿ ಬಂತು. ನಿರ್ಮಾಪಕ ಮಲ್ಲಿಕ್ ತನಗಾಗಿ ಚಿತ್ರವೊಂದನ್ನು ನಿರ್ದೇಶಿಸಬೇಕಾಗಿ ಕೋರಿದರಲ್ಲದೇ ಕಥೆ ಇನ್ನಿತರ ವಿಚಾರಗಳಲ್ಲಿ ನನಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದರು.ಅದರ ಪರಿಣಾಮವೇ “ಸಾಕ್ಷಾತ್ಕಾರ”.
ಸಾಕ್ಷಾತ್ಕಾರ ನಾನು ಅತ್ಯಂತ ಪ್ರೀತಿಯಿಂದ ನಿರ್ದೇಶಿಸಿದ ಚಿತ್ರ. ವ್ಯಯುಕ್ತಿಕವಾಗಿ ರಾಜ್ ಕುಮಾರ್ ಅನುಭವಿಸಿ ಆನಂದದಿಂದ ನಟಿಸಿದ ಚಿತ್ರ. ಆ ಚಿತ್ರದ ನಂತರ ರಾಜ್ ಕುಮಾರ್ ಅಭಿನಯದಲ್ಲಿ ಅಪರೂಪವೆನಿಸುವ ಚಿತ್ರ ನಿರ್ಮಾಣಕ್ಕೆ ಮಾನಸಿಕವಾಗಿ ಸಿದ್ಧನಾದೆ. ಆಗ ನನ್ನ ಮನಸ್ಸಿನಲ್ಲಿ ನಾಗರ ಹಾವು, ಹೃದಯ ಗೀತೆ,ಕೋವಿ ಕುಂಚ,ಅನಾಥೆ, ರೂಪದರ್ಶಿ ಮುಂತಾದ ಕಾದಂಬರಿಗಳು ಮನಸ್ಸಿನಲ್ಲಿದ್ದವು.
ಆಗ ನಾನೊಂದು ತಪ್ಪು ಮಾಡಿದೆ ಪತ್ರಕರ್ತರಲ್ಲಿ ರಾಜ್ ಕುಮಾರ್ ರವರ ಬಗ್ಗೆ ಮೆಚ್ಚುಗೆಯ ಮಾತನಾಡಿದೆ. ಅಲ್ಲದೇ ನನ್ನ ಭವಿಷ್ಯದ ಕನಸುಗಳ ಪರಿಚಯ ಮಾಡಿಕೊಟ್ಟೆ. ನನ್ನ ಹಾಗೂ ರಾಜ್ ಕುಮಾರ್ ನಡುವಣ ಸೌಹಾರ್ದತೆ ಅವರಿಗೆ ಇಷ್ಟವಾಗಲಿಲ್ಲವೇನೋ. ಸಾಕ್ಷಾತ್ಕಾರ ಚಿತ್ರದ ಬಿಡುಗಡೆ ಯಾದಾಗ ಅವರ ಕೆಂಗೆಣ್ಣಿಗೆ ಆ ಚಿತ್ರ ಉರಿದು ಬೂದಿಯಾಯಿತು. ನನ್ನ ಕನಸುಗಳು ನುಚ್ಚು ನೂರಾದವು. ಪತ್ರಿಕೆಗಳು ಸಾಕ್ಷಾತ್ಕಾರ ಚಿತ್ರವನ್ನು ಮನಬಂದಂತೆ ಟೀಕಿಸಿದವು. ಅದರಿಂದ ಚಿತ್ರದ ಯಶಸ್ಸಿಗೆ ತೊಂದರೆಯಾಯಿತು. ಚಿತ್ರರಂಗದಲ್ಲಿ ನಾನು ಸೋತುಹೋದೆನೆಂದು ಮತ್ತೆ ಚಿತ್ರರಂಗದಲ್ಲಿ ಎದ್ದು ನಿಲ್ಲಲು ನಾನು ರಾಜ್ ಕುಮಾರ್ ಸಹಾಯ ಕೋರಿ ಹೋಗಿದ್ದೇನೆಂದು ನನ್ನನ್ನು ಹೀಯಾಳಿಸಿದರು.
ಆ ಸಮಯದಲ್ಲಿ ನಾನೊಂದು ಪತ್ರಿಕಾ ಗೋಷ್ಟಿ ಕರೆದು ನನ್ನ ಅಣ್ಣನೊಡನೆ ಸೇರಿ ಅವರನ್ನೆಲ್ಲಾ ಜಾಲಾಡಿದೆ.ಅಂದೇ ಅಲ್ಲೇ ಮತ್ತೆ ನಾನು ರಾಜ್ ಕುಮಾರ್ ಅಭಿನಯದ ಚಿತ್ರ ನಿರ್ದೇಶಿಸುವುದಿಲ್ಲವೆಂದು ಘೋಷಿಸಿದೆ. ಅಷ್ಟೇ ಅಲ್ಲ ರಾಜ್ ಕುಮಾರ್ ರವರನ್ನು ಮೀರಿಸುವ ನಟನನ್ನು ಹುಟ್ಟು ಹಾಕುವುದಾಗಿಯೂ ಸವಾಲ್ ಹಾಕಿದೆ. ಅಂದೇ ಅಲ್ಲೇ ರಾಜ್ ಕುಮಾರ್ ರೊಡನೆ ನನಗೆ ಲಭ್ಯವಾಗಿದ್ದ ಮಧುರ ಸಂಬಂಧ ಪೂರ್ತಿಯಾಗಿ ಮಾಯವಾಯಿತು. ಅಲ್ಲದೇ ನಾನು ಹಿಂದಿನ ಪುಟ್ಟಣ್ಣನಾದೆ. ಪಾಪ ರಾಜ್ ಕುಮಾರ್ ರವರ ಪರಿಸ್ಥಿತಿ ಗಂಡ ಹೆಂಡಿರ ನಡುವಣ ವಿರಸಕ್ಕೆ ಮಗು ಬಲಿಯಾಯಿತು ಎನ್ನುವಂತಾಯಿತು. ಈ ವಿಚಾರ ರಾಜ್ ಕುಮಾರ್ ರವರನ್ನು ತಲುಪಿತು.ಅವರು ವಿಷಯ ಕೇಳಿ ತುಂಬಾ ನೊಂದುಕೊಂಡರಂತೆ.
ಆದರೆ ಛಲವಾದಿಯಾದ ನನ್ನ ಮೇಲೆ ಅವರ ದುಗುಡ ಪರಿಣಾಮ ಬೀರಲಿಲ್ಲ. ನಾನು- ರಾಜ್ ಕುಮಾರ್ ಮತ್ತೆ ಮಾನಸಿಕವಾಗಿ ಹತ್ತಿರವಾಗಲಿಲ್ಲ. ಆದರೆ ಹೊರ ಪ್ರಪಂಚಕ್ಕೆ ನಾವು ಆತ್ಮೀಯರಂತೆಯೇ ಇದ್ದೆವು. ಆದರೆ ರಾಜ್ ಕುಮಾರ್ ನನ್ನ ಬಗ್ಗೆ ಅದೇ ಪ್ರೀತಿ,ವಿಶ್ವಾಸ,ಗೌರವ ಹೊಂದಿದ್ದರು. ಅದನ್ನು ಹಲವಾರು ಸಂದರ್ಭದಲ್ಲಿ ಅವರು ಪ್ರಕಟಿಸಿದ್ದರು ಕೂಡ.
ಮಾತು ಮುಂದುವರಿಸಿ ಪುಟ್ಟಣ್ಣ- ನಾನು ರಾಜ್ ಕುಮಾರ್ ರವರನ್ನು ಮೀರಿಸುವ ನಟನನ್ನು ಹುಟ್ಟು ಹಾಕುವುದಾಗಿ ಶಪಥ ಮಾಡಿದ ಬೆನ್ನಲ್ಲೇ ವೀರಾಸ್ವಾಮಿಯವರು ತಮಗೊಂದು ಚಿತ್ರ ನಿರ್ದೇಶಿಸಬೇಕೆಂದು ಅದರಲ್ಲಿ ಹೊಸ ನಾಯಕನನ್ನು ಪರಿಚಯಿಸಬೇಕೆಂದು ಕೋರಿದರು. ಅವರಿಗೂ ಕೆಲವರು ರಾಜ್ ಕುಮಾರ್ ವಿಷಯದಲ್ಲಿ ಅಸಮಾಧಾನವುಂಟಾಗುವಂತೆ ರಾಜಕೀಯ ಮಾಡಿದ್ದರೆಂಬುದು ಬೇರೊಬ್ಬರಿಂದ ಕೇಳಲ್ಪಟ್ಟ ವಿಚಾರ.
ರೋಗಿ ಬಯಸಿದ್ದು ಹಾಲು ಅನ್ನ,ವೈದ್ಯ ಹೇಳಿದ್ದು ಹಾಲು ಅನ್ನ ಅನ್ನುವಂತಾಯಿತು. ನಾನು ಸಂಭ್ರಮಿಸಿದೆ ಸರಿ ಹೊಸ ನಟರ ಅನ್ವೇಷಣೆ ಆರಂಭವಾಯಿತು. ಕೊನೆಯಲ್ಲಿ ನಾಲ್ವರು ನಾಯಕ ಪಾತ್ರದ ಆಯ್ಕೆಯಲ್ಲಿ ಉಳಿದರು.ಅದರಲ್ಲಿ ಉತ್ತರ ಕರ್ನಾಟಕದ ಓರ್ವ ಸುರಧ್ರೂಪಿ ಯುವಕ ನನ್ನ ಆಯ್ಕೆಯ ಪ್ರಥಮ ಸ್ಥಾನದಲ್ಲಿದ್ದ ಸಂಪತ್ ಕುಮಾರ್ (ವಿಷ್ಣುವರ್ಧನ್) ದ್ವಿತೀಯ ಸ್ಥಾನದಲ್ಲಿದ್ದ. ಇಬ್ಬರೂ ನನಗೆ ಮೆಚ್ಚುಗೆಯಾದರು. ಆದರೆ ಶಂಕರ್ ಸಿಂಗ್ ರವರ ಕೋರಿಕೆಯ ಮೇರೆಗೆ ವೀರಾಸ್ವಾಮಿ ಯವರು ಸಂಪತ್ ಕುಮಾರ್ ನನ್ನು ಆಯ್ಕೆ ಮಾಡಿದರು. ಶಂಕರ್ ಸಿಂಗ್ ಹಾಗೂ ಸಂಪತ್ ಕುಮಾರನ ತಂದೆ ಹೆಚ್.ಎಲ್.ನಾರಾಯಣರಾವ್ ಪರಿಚಿತರುಹಾಗೂ ಆತ್ಮೀಯರೂ ಕೂಡ. ಉತ್ತರ ಕರ್ನಾಟಕದ ಯುವಕ ನಿರಾಶೆಯಿಂದ ಹೊರಹೋದ.
ಅವನ ಬಗ್ಗೆ ನನಗೆ ಕನಿಕರವುಂಟಾಗಿ ನನ್ನ ಮುಂದಿನ ಚಿತ್ರದಲ್ಲಿ ಅವನಿಗೆ ಅವಕಾಶ ಕೊಟ್ಟೆ. ಆದರೆ ನಾಗರಹಾವು ಚಿತ್ರದಲ್ಲಿ ಆಯ್ಕೆಯಾಗದ ನೋವು ಅವನಿಗೆ ಚಿತ್ರರಂಗದ ಮೇಲೆ ಅಸಹ್ಯ ಭಾವನೆ ಮೂಡಿಸಿತ್ತು. ಆತ ಮತ್ತೆ ಚಿತ್ರರಂಗಕ್ಕೆ ಬರಲೇ ಇಲ್ಲ
ನಾನು ವಿಷ್ಣುವರ್ಧನ್ ಗೆ ಪದೇ ಪದೇ ಎಚ್ಚರಿಸುತ್ತಿದ್ದೆ-ನೀನು ರಾಜ್ ಕುಮಾರ್ ರವರನ್ನು ಮೀರಿಸುವ ಇಲ್ಲವೇ ಕೊನೆಯಪಕ್ಷ ಅವರ ಸರಿಸಮಾನ ನಟನಾಗಿ ನಿಲ್ಲಬೇಕು. ನನ್ನ ಮಾತನ್ನು ನೀನು ಉಳಿಸಬೇಕು ಅಂತ .ಆತನೂ ನನ್ನ ಕೋರಿಕೆಗೆ ಸ್ಪಂದಿಸಿ ಶ್ರದ್ಧೆಯಿಂದ ನಟಿಸಿದ.ಚಿತ್ರ ಅಭೂತಪೂರ್ವ ಯಶಸ್ಸು ಕಂಡಿತು ಪತ್ರಕರ್ತರು ಈಗ ನನ್ನೊಡನೆ ಸೌಹಾರ್ಧಯುತವಾಗಿ ಬೆರೆತರು. ಎಲ್ಲರೂ ಕೂಡಿ ವಿಷ್ಣುವರ್ಧನ್ ನನ್ನು ಬೆಳಸುವ ಹಾದಿಯಲ್ಲಿ ನಿರತರಾದರು. ಉದ್ದೇಶ್ಯಪೂರ್ವಕವಾಗಿ ಚಿತ್ರದ ಸಂಭ್ರಮಾಚರಣೆಗೆ ರಾಜ್ ಕುಮಾರ್ ರವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಿದೆ ಅವರ ಕೈಯಲ್ಲೇ ವಿಷ್ಣುವರ್ಧನ್ ಗೆ ಶ್ರೇಷ್ಠ ನಟ ಪ್ರಶಸ್ತಿ ಕೊಡಿಸಿ ಸಂಭ್ರಮಿಸಿದೆ. ಛಲದಿಂದ ಗೆದ್ದ ಸಂಭ್ರಮ ನನ್ನದಾಗಿತ್ತು.
ಆದರೆ ರಾಜ್ ಕುಮಾರ್ ಮಾತ್ರ ಯಾವುದನ್ನೂ ಮನಸ್ಸಿಗೆ ತೆಗೆದುಕೊಳ್ಳದೆ ನಿರ್ಲಿಪ್ತ ಸಂತನಾಗಿ ವಿರಾಜಿಸಿದರು.
ಆದರೆ ಆ ಸಂಭ್ರಮ, ಸಂತೋಷ ಕೆಲದಿನಗಳ ಕಾಲ ಉಳಿಯಿತಷ್ಟೇ. ಯಶಸ್ಸಿನ ಜೊತೆ ಜೊತೆಗೆ ವಿಷ್ಣು ವರ್ಧನ್ ನಲ್ಲಿ ಬದಲಾವಣೆಗಳು ಕಂಡು ಬಂದವು. ಅವನನ್ನು ಹಾಕಿಕೊಂಡು ಚಿತ್ರ ಮಾಡುವ ಮನಸ್ಸಾಗಲಿಲ್ಲ. ಮತ್ತೆ ನಾನು ಹೊಸ ಪ್ರತಿಭೆಯ ಹುಡುಕಾಟದಲ್ಲಿ ನಿರತನಾದೆ. ಆತ ಬೆಳೆದು ಕನ್ನಡ ಚಿತ್ರರಂಗದಲ್ಲಿ ರಾಜ್ ಕುಮಾರ್ ತರಹ ಆಗಲಿಲ್ಲವಾದರು ನಂತರದ ಸ್ಥಾನವನ್ನು ಅಲಂಕರಿಸಿದ. ಆದರೆ ಆತನನ್ನು ಕೆತ್ತಿ ಮೂರ್ತಿಯಾಗಿ ಮಾರ್ಪಡಿಸಿದ ಶಿಲ್ಪಿಯಾದ ನಾನು ದಿನೇ ದಿನೇ ನನ್ನ ಬೇಡಿಕೆ ಕಳೆದುಕೊಂಡು ಇಂದು ಯಾರಿಗೂ ಬೇಡದವನಾಗಿದ್ದೇನೆ ಎಂದು ಹೇಳುವಾಗ ಅವರ ಕಣ್ಣಲ್ಲಿ ನೀರು ತುಂಬಿತ್ತು.
ಇನ್ನು ಆತ್ಮಾವಲೋಕನಕ್ಕೆ ಸ್ಫೂರ್ತಿಯಾದರೂ ಯಾರು? ಏನು ? ಪುಟ್ಟಣ್ಣನವರಿಗೆ ಮೊದಲಿನ ಹೆಸರಿಲ್ಲ ಜನಪ್ರಿಯತೆ ಇಲ್ಲ, ಚಿತ್ರವನ್ನು ತಯಾರಿಸುವ ಹಂಬಲ ಬತ್ತಿಲ್ಲ. ಆದರೆ ಅವಕಾಶಗಳು ಅರಸಿ ಬರುತ್ತಿಲ್ಲ. ನಿರಾಶೆ,ನೋವು ತೀವ್ರವಾಗಿ ಕಾಡಿದೆ. ನೆಚ್ಚಿಕೊಂಡವರೆಲ್ಲಾ ಮರೆತಿದ್ದಾರೆ. ಎಲ್ಲೋ ಒಂದಿಬ್ಬರು ಕೃತಜ್ಞತೆಯಿಂದ ಅವರನ್ನು ಭಾವಿಸುತ್ತಿದ್ದಾರೆ. ಕಡೆಗಣಿಸಿ ದೂರ ಮಾಡಿಕೊಂಡಿದ್ದ ವ್ಯಕ್ತಿ ತಾನಾಗಿಯೇ ಪ್ರೀತಿ ತೋರಿ ಬಳಿ ಬಂದಿದ್ದಾರೆ. ಇದೇ ಮಹೂರ್ತದಲ್ಲಿ ಪುಟ್ಟಣ್ಣನವರಿಗೆ ತನ್ನ ತಪ್ಪುಗಳ ಅರಿವಾಗಿದೆ. ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳುವ ಬಯಕೆಯಾಗಿದೆ. ಅದರ ಫಲವೇ ಈ ಆತ್ಮಾವಲೋಕನ.
ಪುಟ್ಟಣ್ಣ ನವರು ಆಸ್ಪತ್ರೆಯಲ್ಲಿದ್ದಾಗ ರಾಜ್ ಕುಮಾರ್ ಏಳೆಂಟು ಬಾರಿ ಬಂದು ಅವರ ಯೋಗಕ್ಷೇಮ ವಿಚಾರಿಸಿ ಹೋಗಿದ್ದಾರೆ. ಒಳ್ಳೊಳ್ಳೆಯ ಮಾತುಗಳಿಂದ ಅವರಿಗೆ ಸಾಂತ್ವನ ಹೇಳಿದ್ದಾರೆ. ಪುಟ್ಟಣ್ಣ ನವರೇ ಹಳೆಯದನ್ನು ಪ್ರಸ್ತಾಪಿಸಿದಾಗ ಅದೆಲ್ಲಾ ಈಗ ಯಾಕೆ? ಏನೂ ನಡೆದಿಲ್ಲವೆಂದು ಭಾವಿಸಿ ಮುಂದಾದರೂ ಒಳ್ಳೆಯ ಬಾಂಧವ್ಯ ವನ್ನು ಬೆಳೆಸಿಕೊಳ್ಳೋಣ ಅಂತ ಹೇಳಿದಾಗ ಅವರ ಮುಖದಲ್ಲಿ ಲವಲೇಶವೂ ಕೃತಿಮತೆ ಕಂಡು ಬರಲಿಲ್ಲವಂತೆ.ಆಗ ಪುಟ್ಟಣ್ಣ ನವರು ಭವಿಷ್ಯದಲ್ಲಿ ತಮ್ಮ ಯೋಜನೆಗಳ ಬಗ್ಗೆ ವಿವರಿಸಿ ಹೇಳಿದಾಗ ತಮ್ಮ ಮಾಮೂಲು ಭಾಷೆಯಲ್ಲಿ ಜಮಾಯಿಸಿ ಬಿಡೋಣ ಬಿಡಿ ಅಂದರಂತೆ. ಆ ಮಾತು ಹೇಳುವಾಗ ಪುಟ್ಟಣ್ಣ ನವರಿಗೆ ಅದಕ್ಕೆ ಹೇಗೆ ಪ್ರತಿಕ್ರಿಯಿಸಬೇಕು ಎಂಬುದೇ ಗೊತ್ತಾಗಲಿಲ್ಲವಂತೆ.
ಆದರೆ ರಾಜ್ ಕುಮಾರ್ ತನ್ನನ್ನು ಕ್ಷಮಿಸಿದುದು ಅವರಿಗೆ ಸಮಾಧಾನ ತಂದುಕೊಟ್ಟಿತಂತೆ. ತನ್ನ ಆತ್ಮಾವಲೋಕನ ಮುಗಿಸುವಾಗ ಪುಟ್ಟಣ್ಣ ಗಳಗಳನೆ ಅತ್ತು ಬಿಟ್ಟರು. ತಮ್ಮ ದಿಂಬಿನ ಬದಿಯಲ್ಲಿ ಇರಿಸಿದ್ದ ಅವರು ಹಾಗೂ ರಾಜ್ ಕುಮಾರ್ ಜೊತೆಯಾಗಿ ನಿಂತು ತೆಗೆಸಿಕೊಂಡ ಭಾವಚಿತ್ರ ವನ್ನು ಹೊರತೆಗೆದು ರಾಜ್ ಕುಮಾರ್ ರನ್ನು ಮುಟ್ಟಿ ಕಣ್ಣಿಗೊತ್ತಿಕೊಂಡು ತದನಂತರ ಆ ಭಾವಚಿತ್ರವನ್ನು ಎದೆಗೆ ಅಪ್ಪಿ ಹಿಡಿದರು.ಅದನ್ನು ನೋಡುತ್ತಿದ್ದಂತೆ ನನ್ನ ಕಣ್ಣಲ್ಲೂ ಹನಿಯಾಡಿತು. ಅವರನ್ನು ಇಂದು ಈ ಸ್ಥಿತಿಗೆ ತಂದು ನಿಲ್ಲಿಸಿದ ಪತ್ರಕರ್ತರನ್ನು ಮನದಲ್ಲೇ ನಿಂದಿಸಿದೆ. ಅವರ ಹೇಯ ರಾಜಕೀಯ ನೋಡಿಯೇ ನಾನು 1981 ರಲ್ಲಿ ಪತ್ರಕರ್ತ ವೃತ್ತಿಯಿಂದ ಭಾರವಾದ ಮನಸ್ಸಿನಿಂದ ನಾನು ದೂರವಾಗಿದ್ದೆ.
ಕೊನೆಯಲ್ಲಿ ಕಣ್ಣುಗಳಲ್ಲಿ ನೀರು ತುಂಬಿಸಿಕೊಂಡು ಪುಟ್ಟಣ್ಣ ಹೇಳಿದ ಮಾತು (ಅದೇ ಅರ್ಥ ಬರುವ ರೀತಿಯಲ್ಲಿ- ನಾನು ಅದೆಷ್ಟೋ ಮಂದಿಯನ್ನು ಗುರುತಿಸಿದೆ, ಪೋಷಿಸಿದೆ, ಬೆಳೆಸಿದೆ. ಆದರೆ ಅವರಲ್ಲಿ ಕೇವಲ ಇಬ್ಬರು(ರಾಮಕೃಷ್ಣ, ಚಂದ್ರ ಶೇಖರ್) ನನ್ನನ್ನು ಕೊನೆಯವರೆಗೂ ಮರೆಯದೆ ತನಗೆ ಆಸರೆಯಾಗಿದ್ದರು. ಉಳಿದವರು ನಾನು ಆಸ್ಪತ್ರೆಯಲ್ಲಿದ್ದಾಗಲೂ ಔಪಚಾರಿಕವಾಗಿ ಒಮ್ಮೆ ಬಂದು ಹೋದುದನ್ನು ಬಿಟ್ಟರೆ ಮತ್ತೆ ಆಸ್ಪತ್ರೆಯ ಕಡೆ ಮುಖ ಮಾಡಲಿಲ್ಲ. ಆದರೆ ಜೀವನಪರ್ಯಂತ ನಾನು ಯಾರನ್ನು ದೂರವಿಟ್ಟೆನೋ, ಯಾರನ್ನು ಪ್ರೀತಿಸುವ ಬದಲು ದ್ವೇಷಿಸಿದೆನೋ ಆತ ಹಳೆಯದೆಲ್ಲವನ್ನೂ ಮರೆತು ಏಳೆಂಟು ಬಾರಿ ಬಂದು ನನಗೆ ಸಾಂತ್ವನ ಹೇಳಿ ಸಾತ್ವಿಕ ವ್ಯಕ್ತಿ ಎನಿಸಿದ. ಎಂದು ರಾಜ್ ಅವರನ್ನು ನೆನೆಯುತ್ತ ಪುಟ್ಟಣ್ಣ ಇದ್ದಕ್ಕಿದ್ದಂತೆ ಮೌನ ತಾಳಿದರು.
ಅವರ ಕಣ್ಣುಗಳಲ್ಲಿ ನೀರು ತುಂಬಿತ್ತು. ಕರವಸ್ತ್ರದಿಂದ ಕಣ್ಣೊರಸಿಕೊಂಡು ನಮ್ಮತ್ತ ನೋಡಿದರು.ಇನ್ನೇನಾದರೂ ಹೇಳುವುದಿದೆಯಾ? ಎಂದು ಪ್ರಶ್ನಿಸಿದೆ. ಪುಟ್ಟಣ್ಣ ಉತ್ತರ ನೀಡಲಿಲ್ಲ.
ನಮ್ಮ ಗುರುಗಳು ಅಲ್ಲಿಯವರೆಗೆ ಮೌನವಾಗಿದ್ದವರು ಪುಟ್ಟಣ್ಣ ನವರನ್ನು ಉದ್ದೇಶಿಸಿ ನೀವೇನೋ ಕ್ಷಮೆ ಕೇಳಿದಿರಿ. ಅವರು ನಿಮ್ಮನ್ನು ಕ್ಷಮಿಸಿದರಾ? ಎಂದು ಪ್ರಶ್ನಿಸಿದಾಗ ಪುಟ್ಟಣ್ಣ ನಕ್ಕರಷ್ಟೇ. ಆ ನಗುವಿನಲ್ಲಿ ಪ್ರಶಾಂತತೆ ಇತ್ತು. ನಮ್ಮ ಪ್ರಶ್ನೆಗೆ ಉತ್ತರ ಸಿಗದೆ ಮುಂದೇನು ಮಾಡುವುದು ಎಂಬ ಆಲೋಚನೆಯಲ್ಲಿದ್ದ ನಮ್ಮನ್ನು ಪುಟ್ಟಣ್ಣ ನವರೇ ಮತ್ತೆ ಮಾತಿಗೆಳೆದರು. ನಾನು ಕ್ಷಮೆ ಕೇಳಿದಾಗ ರಾಜ್ ಕುಮಾರ್ ಹೇಳಿದ್ದೇನು ಗೊತ್ತೆ? -ಪುಟ್ಟಣ್ಣ ಧನ್ಯತಾಭಾವದಿಂದ ಕಣ್ಣನ್ನು ಮುಚ್ಚಿ ಎದೆಯ ಮೇಲೆ ಕೈಯಿಟ್ಟು ಭಗವಂತನನ್ನು ಸ್ಮರಿಸಿ ಹೇಳಿದರು- ರಾಜ್ ಕುಮಾರ್ ರವರಿಗೆ ನನ್ನ ಮೇಲೆ ಬೇಸರವಾಗಿದ್ದರೆ ತಾನೇ ಕ್ಷಮಿಸುವ ಪ್ರಶ್ನೆ ಉದ್ಭವಿಸುವುದು. ಅವರಿಗೆ ನನ್ನ ಮೇಲೆ ಕೋಪವೂ ಇರಲಿಲ್ಲ, ಬೇಸರವೂ ಇರಲಿಲ್ಲ. ಅವರಿಗಿದ್ದುದು ನಮ್ಮ ನಡುವೆ ಈ ಸಂದರ್ಭಗಳು ಏಕೆ ಉಂಟಾದವು ಎಂಬ ಜಿಜ್ಞಾಸೆ.
ಅವರ ಪ್ರಕಾರ ನಾನು,ಅವರೂ,ಎಲ್ಲರೂ ನಿಮಿತ್ತ ಮಾತ್ರ.ಎಲ್ಲವೂ ಆಡಿಸುವಾತನ ನಿರ್ಣಯ. ನಾವು ಕೇವಲ ಅವನು ನಡೆಸಿದಂತೆ ನಡೆಯುವ, ಕುಣಿಸಿದಂತೆ ಕುಣಿಯುವ ಬೊಂಬೆಗಳಷ್ಟೇ. ಅವನೇ ಪ್ರತಿಯೊಂದು ಘಟನೆಗೆ ಕಾರಕ,ತಾರಕ.”ಅವರ ಮಾತನ್ನು ಕೇಳುತ್ತಿದ್ದರೆ ಮಧ್ಯ ಪ್ರವೇಶ ಮಾಡುವುದೇ ಬೇಡ ಅನ್ನಿಸುತ್ತೆ. ಅಷ್ಟು ಸೊಗಸಾಗಿ ಮಾತನಾಡುತ್ತಾರೆ. ಅವರು ಓದಿದ್ದು ಕೇವಲ ಮೂರನೇಯ ತರಗತಿಯಾದರೂ ಅವರ ಜ್ಞಾನದ ಮಟ್ಟ ಯಾವ ಪಂಡಿತನಿಗೂ ಕಡಿಮೆಯಿಲ್ಲ. ಅವರ ಬಾಯಿಂದ ಹೊರಬರುವ ಕನ್ನಡ ಪದ ಕೇಳುತ್ತಿದ್ದರೆ ಕನ್ನಡ ಭಾಷೆ ಕಸ್ತೂರಿ ಎನಿಸುತ್ತೆ.‌ ಪಾಪ ಅವರ ದುರ್ದೈವ ಅವರನ್ನು ಚಿತ್ರರಂಗದಲ್ಲಿ ಪ್ರೀತಿಸಿದವರಿಗಿಂತ ದ್ವೇಷಿಸಿದವರೇ ಹೆಚ್ಚೇನೋ ಎನಿಸುತ್ತೆ. ಆದರೆ ಮೇಲ್ನೋಟಕ್ಕೆ ಎಲ್ಲರೂ ಅವರಿಗೆ ತುಂಬಾ ಆಪ್ತರಾಗಿದ್ದರು. ಆ ದ್ವೇಷಿಸುವವರ ಗುಂಪಿನಲ್ಲಿ ನಾನೊಬ್ಬನಾದೆನಲ್ಲ ಎಂಬ ವಿಷಯ ನನ್ನನ್ನು ಬಹಳವಾಗಿ ಬಾಧಿಸುತ್ತಿದೆ.
ನಾನವರನ್ನು ದ್ವೇಷ ಮಾಡದೆ ಪ್ರೀತಿಸಿದ್ದರೆ ಈ ಹದಿನೇಳು ವರ್ಷಗಳಲ್ಲಿ ನಾವಿಬ್ಬರು ಸೇರಿ ಎಂತೆಂಥ ಚಿತ್ರಗಳನ್ನು ನೀಡಬಹುದಾಗಿತ್ತು. ನಾನು ಹೊಸ ಪ್ರತಿಭೆಗಳನ್ನು ಪೋಷಿಸಿದೆ,ಬೆಳಸಿದೆ. ಬೇರೆಯವರು ಅವರನ್ನು ಉಪಯೋಗಿಸಿಕೊಂಡು ಮೆರೆದರು.ನಾನು ಬಿಸಿಲಿಗೆ ಬಾಡಿದ ಮರವಾಗಿ ಬೇಡದ ವಸ್ತುವಾದೆ. ನಾನು ರಾಜ್ ಕುಮಾರ್ ರವರನ್ನು ಭಾವಿಸಿದ್ದಲ್ಲಿ ಇಂದು ನನಗೆ ಈ ದುಸ್ಸ್ಥಿತಿ ಬರುತ್ತಿರಲಿಲ್ಲ. ರಾಜ್ ಕುಮಾರ್ ನಿಜಕ್ಕೂ ಭೂಮಿ ತೂಕದ ಮನುಷ್ಯ.ಬಂಗಾರದ ಮನುಷ್ಯ ಅವರಿಗೆ ಅನ್ವರ್ಥ ನಾಮ. ಮಾತು ಮುಗಿಸಿದ ಪುಟ್ಟಣ್ಣ ರಾಜ್ ಕುಮಾರ್ ರವರ ಮತ್ತೊಂದು ಭಾವಚಿತ್ರವನ್ನು ಕಣ್ಣಿಗೆ ಒತ್ತಿಕೊಂಡರು.ಅವರ ನಡವಳಿಕೆಯಲ್ಲಿ ಯಾವುದೇ ಕೃತ್ತಿಮತೆ ಕಂಡು ಬರಲಿಲ್ಲ.

ಕೃಫೆ – ವಾಟ್ಸಪ್.!




TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...