Friday 29 May 2020

📂📂 ತತ್ತ್ವಪ್ರತಿಪಾದನೆ 📋📋

ಉಪನಿಷತ್ತುಗಳನ್ನು ಪರಮ ಪ್ರಮಾಣವಾದ ಅಪೌರುಷೇಯ ಮಂತ್ರಗಳೆಂಬ ದೃಷ್ಟಿಯಿಂದ ಪರಿಶೀಲಿಸಿದಾಗ ಅವೆಲ್ಲವೂ ಒಂದೇ ತತ್ತ್ವವನ್ನು ಪ್ರತಿಪಾದಿಸು ವುವು ಎಂದು ಒಪ್ಪಿಕೊಳ್ಳಬೇಕಾಗುತ್ತದಾದರೂ ಭಾಷ್ಯಕಾರರ ದೃಷ್ಟಿಯಲ್ಲಿ ಅವುಗಳಲ್ಲಿ ಭಿನ್ನ ಭಿನ್ನ ಸಿದ್ಧಾಂತಗಳ ನಿರೂಪಣೆ ಇದೆ. ಬಾದರಾಯಣರು ವೇದಾಂತಸೂತ್ರದಲ್ಲಿ ಇದನ್ನು ಒಪ್ಪಿಕೊಂಡಿದ್ದಾರೆ. ಅನೇಕ ಸಿದ್ಧಾಂತಗಳ ಉಲ್ಲೇಖವಿದ್ದರೂ ಅವುಗಳೆಲ್ಲಕ್ಕೂ ಸಮಪ್ರಾಧಾನ್ಯ ದೊರೆತಿಲ್ಲ. ಕೆಲವು ಮಿಂಚಿನಂತೆ ಕಂಡು ಮಾಯವಾಗುವುವು. ಕೆಲವು ಸಂಗ್ರಹವಾಗಿ ಬಂದರೆ ಮತ್ತೆ ಕೆಲವು ಹಳೆಯ ತತ್ತ್ವಗಳನ್ನೇ ಸಮರ್ಥಿಸುವುವು. ಆದರೆ ಈ ಎಲ್ಲ ಸಂಶಯಗಳನ್ನೂ ಬದಿಗೊತ್ತಿ ಪರಿಶೀಲಿಸಿದಲ್ಲಿ ಪ್ರಧಾನವಾಗಿ ಅಲ್ಲಿ ಘೋಷಿತವಾಗಿ ರುವ ತತ್ತ್ವ ವೇದಾಂತ ದರ್ಶನವೆನ್ನಿಸಿಕೊಂಡಿರುವ ಬ್ರಹ್ಮತತ್ತ್ವ ಅಥವಾ ಬ್ರಹ್ಮ ಮತ್ತು ಆತ್ಮಗಳೆಂಬ ಆಧಾರಸ್ತಂಭಗಳ ಮೇಲೆ ನಿಂತಿರುವ ಭಾರತೀಯ ದರ್ಶನಸಾರ. ಉಪನಿಷತ್ತುಗಳು ಬ್ರಾಹ್ಮಣಗಳೊಂದಿಗೆ ಸೇರಿಕೊಂಡಿದ್ದರೂ ಇವುಗಳ ವಿಚಾರಧಾರೆ ಬೇರೆಯಾಗಿವೆ. ಬ್ರಾಹ್ಮಣಗಳು ಪ್ರತಿಪಾದಿಸುವ ಯಾಗಾದಿಗಳನ್ನು ಕಾಮ್ಯ ಕರ್ಮಗಳೆಂದು ಉಪನಿಷತ್ತುಗಳು ತಿರಸ್ಕರಿಸಿ ಅವುಗಳಿಂದ ಆತ್ಮೋದ್ಧಾರವಿಲ್ಲವೆನ್ನುತ್ತವೆ; ಮತ್ತು ಬಾಹ್ಯಯಜ್ಞ ಆತ್ಮಯಜ್ಞದ ಪ್ರತೀಕವೆಂದು ಹೇಳಿವೆ. ಹೀಗೆ ಉಪನಿಷತ್ತುಗಳ ಕಾಲಕ್ಕೆ ಭಾರತೀಯ ದರ್ಶನದ ಸರಣಿಯಲ್ಲಿ ಗಮನಾರ್ಹವಾದ ಬದಲಾವಣೆಯಾಗಿತ್ತು. ಅದಲ್ಲದೆ ಉಪನಿಷತ್ ರಹಸ್ಯವಾದ ವಿದ್ಯೆ ಎಂಬ ಅರ್ಥವನ್ನೂ ಹೊಂದಿದೆ. ಇದನ್ನು ಗುರುಮುಖೇನ ಪಡೆಯುವವ ಅಸಾಧಾರಣ ಶ್ರದ್ಧಾಭಕ್ತಿಗಳಿಂದ ಕೂಡಿದವನಾಗಿದ್ದು ಜ್ಞಾನಪಿಪಾಸುವೂ ಸಮ್ಯಗುಪಸನ್ನನೂ ಶಮಾನ್ವಿತನೂ ಆಗಿರಬೇಕು. ಈ ಆದರ್ಶವಿದ್ಯೆಗೆ ಆದರ್ಶ ಶಿಷ್ಯನೇ ಪಾತ್ರವೆಂದು ಕಟ್ಟುನಿಟ್ಟಾಗಿ ನಿರ್ದೇಶಿಸ ಲಾಗಿದೆ. ಮೇಲೆ ಹೇಳಿದ ಉಪನಿಷತ್ತುಗಳಲ್ಲಿ ಈ ಬಗೆಯ ಗುರುಶಿಷ್ಯ ಸಂವಾದಗಳೇ ಚಿತ್ರಿತವಾಗಿವೆ. ಪ್ರವಚನದಲ್ಲೂ ಕೆಲವು ಗೂಢತತ್ತ್ವಗಳು ಸೂತ್ರರೂಪದಲ್ಲಿವೆಯೇ ಹೊರತು ಸ್ಪಷ್ಟವಾದ ವಿವರಣೆ ಇಲ್ಲ. ಈ ಕಾರಣದಿಂದಲೇ ಅರ್ಥವೃತ್ತಿಗಳಲ್ಲಿ ಭಿನ್ನತೆಗೆ ಅವಕಾಶವಾಗಿದೆ. ಸಂಹಿತೆಗಳಂತೆ ಬೇರೆ ಬೇರೆ ಕಾಲದಲ್ಲಿ ಬೇರೆ ಬೇರೆ ದಾರ್ಶನಿಕರಿಂದ ಸಂಗ್ರಹವಾಗಿರುವುದು ಸಿದ್ಧಾಂತಗಳ ವ್ಯತ್ಯಾಸಕ್ಕೆ ಕಾರಣವಿರಬಹುದೆಂದು ವಿದ್ವಾಂಸರ ಅಭಿಪ್ರಾಯ.

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...