Friday 29 May 2020

🕉️🕉️ ಬ್ರಹ್ಮತತ್ವ ಭಾಗ 2 🕉️🕉️

ವೈರಾಗ್ಯ ಮಾನವನನ್ನು ಜ್ಞಾನಕ್ಕೆ ಒಯ್ಯುತ್ತದೆ. ಜ್ಞಾನಮಾರ್ಗದಲ್ಲಿ ಶ್ರವಣ, ಮನನ, ನಿಧಿಧ್ಯಾಸನ ಎಂಬ ಮೂರು ವಿಧವಾದ ಸಾಧನೆ ಇದೆ. ಮೊದಲನೆಯದಾಗಿ ಉಪನಿಷತ್ತುಗಳನ್ನು ಸರಿಯಾದ ಗುರುವಿನಲ್ಲಿ ಅಧ್ಯಯನ ಮಾಡುವುದು ಶ್ರವಣ. ಬ್ರಹ್ಮಜ್ಞಾನಿಯಾದ ಗುರುವಿನ ಸಂಗದಿಂದಲೇ ಜ್ಞಾನ ಪ್ರಾಪ್ತಿಯಾಗಬೇಕಾದರೆ. ಶ್ರವಣ ಮಾತ್ರ ಸಾಲದು. ಪದೇ ಪದೇ ಕೇಳಿದುದನ್ನು ಮನನ ಮಾಡಿ ಮಂದಟ್ಟು ಮಾಡಿಕೊಳ್ಳಬೇಕು. ಅನಂತರ ನಿಧಿಧ್ಯಾಸನದಿಂದ ಜಗತ್ತಿನ ಏಕೈಕ ಸತ್ಯವನ್ನು ಕಂಡುಕೊಳ್ಳಬೇಕು. ನಿಧಿಧ್ಯಾಸನವೆಂಬ ಸಾಧನೆಯಲ್ಲಿ ಉಪಾಸನೆ ಗಳಿವೆ. ಈ ಉಪಾಸನೆಗಳು ಬ್ರಾಹ್ಮಣಗಳಲ್ಲಿ ಹೇಳಿರುವ ಯಜ್ಞಯಾಗಾದಿಗಳಂತೆ ಪ್ರಾಧಾನ್ಯವನ್ನು ಪಡೆದಿವೆ. ಬ್ರಹ್ಮಜ್ಞಾನಿಯಾಗಲು ಸಾಮಾನ್ಯ ಮನುಷ್ಯನಿಗೆ ಸಾಧ್ಯವಿಲ್ಲವೆಂತಲೂ ಅಂಥವನು ಅತ್ಯಂತ ವಿರಳನೆಂದೂ ಕಠೋಪನಿಷತ್ತಿನಲ್ಲಿ ಹೇಳಲಾಗಿದೆ. ಸರ್ವಶಕ್ತನಾದ ಪರಬ್ರಹ್ಮ ನಿರ್ಗುಣನಂತೆ ನಿರೂಪಿತನಾಗಿದ್ದರೂ ಅವನು ದಯಾಮಯ ನೆಂದೂ ಸಂಸಾರ (ಜನ್ಮ, ಮೃತ್ಯು) ಬಂಧನದಿಂದ ನಮ್ಮನ್ನು ಬಿಡುಗಡೆ ಮಾಡುವವನೆಂದೂ ತಿಳಿಸಿ 32 ಉಪಾಸನೆಗಳನ್ನು ಹೇಳಿದೆ. ಅದರಲ್ಲಿ ಶರಣಾಗತಿ ಎಂಬುದನ್ನು ಸೇರಿಸಲಾಗಿದೆ.

ಮುಮುಕ್ಷುರ್ವೈ ಶರಣಮಹಂ ಪ್ರಪದ್ಯೇ-ಎಂಬುದನ್ನು ಶ್ವೇತಾಶ್ವತರೋಪನಿಷತ್ತಿನಲ್ಲಿ ಹೇಳಿದೆ. ಆದ್ದರಿಂದ ದಯಾಮಯನಾದ ಭಗವಂತನನ್ನು ಭಜಿಸುವ ಭಕ್ತಿಗೂ ಉಪನಿಷತ್ತುಗಳಲ್ಲಿ ಪ್ರಶಂಸೆ ಇದೆ. ಆತ್ಮ ಮತ್ತು ಜೀವಾತ್ಮ: ಉಪನಿಷತ್ತುಗಳು ಮೊದಮೊದಲು ಆತ್ಮನಿಗೂ ಬ್ರಹ್ಮನಿಗೂ ಭೇದವನ್ನು ಹೇಳುವಂತೆ ತೋರುತ್ತವೆ. ಆತ್ಮ ಎಂದರೆ ಚೇತನದಲ್ಲಿರುವ ಪರತತ್ತ್ವ, ಬ್ರಹ್ಮ ಎಂದರೆ ಜಗತ್ತಿನಲ್ಲಿರುವ ಪರತತ್ತ್ವ ಎಂಬ ಭಾವನೆ ಇದೆ. ಅವಿನಾಶಿಯಾದ ಚೇತನ ಅಥವಾ ಪ್ರಾಣವೇ ಆತ್ಮ. ಮಾನವನಲ್ಲಿ ಇರುವ ಅಂತಸ್ಸತ್ತ್ವ ಯಾವುದು ? ದೇಹ ನಾಶವಾದಾಗ ಅವನು ಏನಾಗುತ್ತಾನೆ? ಎಂಬ ಪ್ರಶ್ನೆಗಳನ್ನು ಉಪನಿಷತ್ತುಗಳು ಕೇಳಿವೆ. ಆತ್ಮ ಎಂದರೆ ಮಾನವನ ಅಂತಸ್ಸತ್ತ್ವ: ನಾಶವಾಗದೆ ಉಳಿಯುವ ಸತ್ಯ. ಅದರಂತೆ ಜಗತ್ತಿಗೆ ಅಂತಸ್ಸತ್ತ್ವ ಬ್ರಹ್ಮ. ಈ ಎರಡು ಅಂತಸ್ಸತ್ತ್ವಗಳೂ ಒಂದೇ ಎಂಬ ತತ್ತ್ವ ಕ್ರಮೇಣ ಬೆಳೆಯಿತು. ಆತ್ಮ ಮತ್ತು ಬ್ರಹ್ಮ ಶಬ್ದಗಳನ್ನು ಒಂದೇ ಅರ್ಥದಲ್ಲಿ ಪ್ರಯೋಗಿಸಲಾಗಿದೆ. ತನ್ನಲ್ಲಿರುವ ಸತ್ಯ ಯಾವುದು ? ಜಗತ್ತಿನಲ್ಲಿ ಯಾವ ಸತ್ಯವಿದೆ ? ಎಂದು ಮಾನವ ಒಳಗೂ ಹೊರಗೂ ಶೋಧನೆ ಮಾಡಲು ಯತ್ನಿಸಿ ಕೊನೆಗೆ ಏಕೈಕ ಸತ್ಯವೇ ತನಗೂ ಜಗತ್ತಿಗೂ ಕಾರಣವಾಗಿದೆ ಎಂದು ತತ್ತ್ವವನ್ನು ಕಂಡುಕೊಂಡನೆಂದು ಉಪನಿಷತ್ತುಗಳು ಹೇಳಿವೆ. ಒಳಗೂ ಹೊರಗೂ ಬ್ರಹ್ಮವೊಂದೇ ಇರುವುದು. ಉಳಿದುದೆಲ್ಲ ಅಸತ್ಯ, ಅನಿತ್ಯ-ಎಂಬುದೇ ಸಾರಾಂಶ. ದೇಹಕ್ಕೂ ಆತ್ಮಕ್ಕೂ ಯಾವ ಸಂಬಂಧವಿದೆಯೋ ಅದೇ ಜಗತ್ತಿಗೂ ಬ್ರಹ್ಮನಿಗೂ ಇರುವ ಸಂಬಂಧ ವೆಂದೂ ತಿಳಿಸಲಾಗಿದೆ. ಆತ್ಮನಿಗೂ ಬ್ರಹ್ಮನಿಗೂ ಸಮನ್ವಯ ಮಾಡಿ `ಸತ್ಯಂ ಜ್ಞಾನಂ ಅನಂತಂ’ ಆಗಿರುವ ಪರವನ್ನು ನಿರ್ದೇಶಿಸಲಾಗಿದೆ. ಜೀವಾತ್ಮನ ಸ್ವರೂಪವನ್ನು ಹೇಳುವಾಗ ಕಠೋಪನಿಷತ್ತಿನಲ್ಲಿ ಶರೀರವೆಂಬ ವೃಕ್ಷದಲ್ಲಿ ಜೀವ ಈಶ್ವರನೊಡನೆ ವಾಸಿಸುತ್ತಾನೆಂದೂ ಈಶ್ವರನನ್ನು ಕಾಣುವವರೆಗೂ ಮೋಹದಿಂದ ದೇಹವೇ ತಾನೆಂದು ಭ್ರಮಿಸಿ ತನ್ನ ಅಸಹಾಯಕತೆಗೂ ದುಃಖಸ್ಥಿತಿಗೂ ಶೋಕಿಸುತ್ತಾನೆಂದೂ ಆದರೆ ನಿತ್ಯನೂ ಜನನ ಮರಣ ರಹಿತನೂ ಆದ ಆತ್ಮನ ಸ್ವರೂಪವನ್ನು ಅರಿತಾಗ ಅವನ ಶೋಕಗಳು ಕಳೆದುಹೋಗುವುವೆಂದೂ ಹೇಳಿದೆ. ಜೀವಾತ್ಮನ ಸ್ವರೂಪವನ್ನು ಹೇಳುವಾಗ ಪ್ರಜಾಪತಿ ಛಾಂದೋಗ್ಯೋಪನಿಷತ್ತಿನಲ್ಲಿ ಉಪದೇಶಿಸಿದ್ದು ಹೀಗಿದೆ: ಇದನ್ನು ನೋಡುವೆನು, ತಿಳಿಯುವೆನು ಎಂದು ಯಾರು ತಿಳಿಯುವನೋ ಅವನೇ ಆತ್ಮ. ಅಮೃತಸ್ವರೂಪಿಯೂ ಅಶರೀರಿಯೂ ಆದ ಆತ್ಮನಿಗೆ ಅವನ ಕರ್ಮಾನುಗುಣವಾಗಿ ಈ ದೇಹ ವಾಸಸ್ಥಾನವಾಗುವುದು. ದೇಹಸಂಬಂಧದಿಂದ ಪ್ರಿಯ ಅಪ್ರಿಯಗಳಿಂದ ಆವೃತವಾಗುವ ಆತ್ಮನಿಗೆ ದೇಹವಿರುವವರೆಗೂ ಸುಖದುಃಖಗಳು ತಪ್ಪುವುದಿಲ್ಲ.

ಜಗತ್ತಿನ ಚೇತನಾಚೇತನ ವಸ್ತುಗಳಲ್ಲಿ ಸೂತ್ರದಂತೆ ಒಂದಾಗಿರುವ ಬ್ರಹ್ಮವಸ್ತು ಅಸಂಖ್ಯಾತ ಜೀವರನ್ನು ಸೃಷ್ಟಿಸಿ ಜೀವಾತ್ಮನೂ ಆಗಿದೆ. ಇವರನ್ನು ಸೃಷ್ಟಿಸುವಾಗ ಅವರವರ ಕರ್ಮಾನುಸಾರವಾದ ಜನ್ಮಪ್ರಾಪ್ತಿಯಾಗುತ್ತದೆ. ಅನಾದಿಯಾದ ಅವಿದ್ಯೆಯೇ ಅವರ ಪುಣ್ಯಪಾಪರೂಪವಾದ ಕರ್ಮಕ್ಕೆ ಕಾರಣ. ಶರೀರದಲ್ಲಿ ವಾಸಿಸುವುದರಿಂದ ಜೀವಾತ್ಮನಿಗೆ ಪುರುಷ (ಪುರೀಶಯಃ) ಎಂದು ನಿರ್ದೇಶ. ಪಂಚಭೂತಗಳಿಂದ ಉತ್ಪನ್ನವಾಗಿರುವ ಶರೀರೇಂದ್ರಿಯಗಳಿಗೆ ಸಂಬಂಧಿಸಿರುವ ಸೋಪಾಧಿಕ ಬ್ರಹ್ಮನಿಗೆ ಮೂರ್ತ, ಮತರ್ಯ್‌, ಪರಿಚ್ಛಿನ್ನ, ಸರ್ತ ಎಂಬ ರೂಪವುಂಟು. ಇದಕ್ಕೆ ವಿರೋಧವಾದ ಅಜವೂ ಅಜರವೂ ಅಮೃತವೂ ಅಭಯವೂ ಆಗಿ ಅದ್ವೈತವಾಗಿರುವ ಬ್ರಹ್ಮನನ್ನು ನೇತಿ ನೇತಿ ಎಂದು ನಿರ್ದೇಶಿಸಲಾಗಿದೆ. ಆದರೆ ಶರೀರಗಳನ್ನು ಪ್ರವೇಶಿಸಿದ ಪರಮಾತ್ಮ ಜೀವಾತ್ಮನಂತೆ ಕಾಣುತ್ತಾನೆಯೇ ಹೊರತು ಬ್ರಹ್ಮ ಜೀವಾತ್ಮನಿಂದ ಭಿನ್ನವಾಗಿಲ್ಲ. ಜೀವಾತ್ಮ ಸತ್ಯ, ಬ್ರಹ್ಮ ಸತ್ಯದ ಸತ್ಯ. ಪ್ರಾಣ, ಇಂದ್ರಿಯ, ಮನಸ್ಸು ಜೀವಾತ್ಮನಿಗೋಸ್ಕರವಾಗಿಯೇ ಜೀವನಿಗೆ ಅಧೀನವಾಗಿವೆ. ಸುಷುಪ್ತಿಯಲ್ಲಿ ಆತ್ಮ ಬ್ರಾಹ್ಮೀಸ್ಥಿತಿಯಲ್ಲಿ, ತನ್ನ ಪರಮಪದದಲ್ಲಿ ಪರಮ ಸಂಪತ್ತಿನಿಂದ ಕೂಡಿ ಪರಮಾನಂದದಿಂದಿರುತ್ತಾನೆ. ಇದೇ ಅವನ ಸ್ವಾಭಾವಿಕ ಸ್ಥಿತಿ, ಇತರ ಸಂಪತ್ತುಗಳೆಲ್ಲ ಕೃತಕ. ಜಾಗ್ರದವಸ್ಥೆಯಲ್ಲಿ ಅಹಂಕಾರದಿಂದ ಆವೃತನಾಗುತ್ತಾನೆ. ಬ್ರಹ್ಮನಿಂದ ತಾನು ಭಿನ್ನವೆಂದು ಭ್ರಮಿಸುತ್ತಾನೆ. ಸರ್ವವೂ ಆತ್ಮನೆಂದು (ಬ್ರಹ್ಮನೆಂದು) ಅರಿಯದೆ ಎಲ್ಲವನ್ನೂ ಆತ್ಮನಿಗಿಂತ ಭಿನ್ನವೆಂದು ಅರಿಯುವವನನ್ನು ಎಲ್ಲವೂ ನಿರಾಕರಿಸುವುವು. ಅಸಂಗನೂ ನಿರಾಸಕ್ತನೂ ಬಂಧರಹಿತನೂ ಶೋಕರಹಿತನೂ ಆದ ಆತ್ಮನಿಗಾಗಿಯೇ ಅಂದರೆ ಆತ್ಮನ ಪ್ರಯೋಜನಕ್ಕಾಗಿಯೇ ಎಲ್ಲವೂ ಪ್ರಿಯವಾಗಿರುತ್ತದೆ. ಎಲ್ಲದರ ಪ್ರಯೋಜನ ಕ್ಕಾಗಿ ಎಲ್ಲವೂ ಪ್ರಿಯವಾಗಿರುವುದಿಲ್ಲ. ಆದ್ದರಿಂದ ಆತ್ಮನನ್ನೇ ಕೇಳಬೇಕು, ಮನನ ಮಾಡಬೇಕು. ನಿಧಿಧ್ಯಾಸನ ಮಾಡಿ ಆತ್ಮಸಾಕ್ಷಾತ್ಕಾರ-ಅಂದರೆ ಬ್ರಹ್ಮಸಾಕ್ಷಾತ್ಕಾರ ಹೊಂದಬೇಕು.

ಕರ್ಮಸಿದ್ಧಾಂತವನ್ನೂ ಉಪನಿಷತ್ತುಗಳಲ್ಲಿ ನಿರೂಪಿಸಲಾಗಿದೆ. ಜನನಮರಣ ಪರಂಪರೆಗಳಿಗೆ ಜೀವಾತ್ಮನ ಕರ್ಮವೇ ಕಾರಣ. ಜೀವರುಗಳು ಅವರವರ ಪುಣ್ಯ ಪಾಪಾನುಸಾರವಾದ ಪುನರ್ಜನ್ಮಗಳನ್ನು ಪಡೆಯುತ್ತಾರೆ. ಭಗವಂತ ನಿಷ್ಪಕ್ಷಪಾತಿ. ಪುಣ್ಯಪಾಪ ಫಲಗಳ ನಿಯಾಮಕ. ಆದ್ದರಿಂದ ಕರ್ಮವನ್ನು ಮಾಡುವುದಕ್ಕೆ ಮಾತ್ರ ಜೀವ ಅಧಿಕಾರಿ, ಫಲವನ್ನು ಕೊಡುವವ ಪರಮಾತ್ಮ. ಆದ್ದರಿಂದ ಕರ್ಮವನ್ನು ನಿಷ್ಕಾಮಬುದ್ಧಿಯಿಂದ ಮಾಡಬೇಕು. ಆತ್ಮರು ಅನಾದಿಯಾದ ಅವಿದ್ಯೆಯ ಸಂಬಂಧದಿಂದ ತಮ್ಮ ನಿಜಸ್ವರೂಪವನ್ನರಿ ಯದೆ ಕರ್ಮಬಂಧನಕ್ಕೂ ಅದರಿಂದ ಸಂಸಾರಕ್ಕೂ ಸಿಕ್ಕಿ ನರಳುತ್ತಾರೆ-ಎಂದು ಉಪನಿಷತ್ ಗಳು ಹೇಳಿವೆ. ಐಹಿಕ ಸುಖಗಳು ಪ್ರೇಯವೇ ವಿನಾ ಶ್ರೇಯವಲ್ಲ. ನಿರತಿಶಯವಾದ ಆನಂದವನ್ನೂ ಪಡೆಯುವುದು ಬ್ರಹ್ಮಸಾಕ್ಷಾತ್ಕಾರದಿಂದ ಮಾತ್ರ. ಆನಂದಂ ಬ್ರಹ್ಮಣೋ ವಿದ್ವಾನ್ ನಬಿಭೇತಿ ಕದಾಚನೇತಿ.

ಜನ್ಮಕಾರಣವನ್ನಷ್ಟೇ ಹೇಳದೆ ಜನಿಸುವ ಬಗೆಯನ್ನು ಬೃಹದಾರಣ್ಯಕ ಪಂಚಾಗ್ನಿ ವಿದ್ಯೆಯಲ್ಲಿ ಹೇಳಿದೆ. ಪಾಂಚಾಲ ರಾಜನಾದ ಜೈಬಲಿ ಆರುಣಿಗೂ ಅವನ ಮಗ ಶ್ವೇತಕೇತು ವಿಗೂ ಈ ವಿದ್ಯೆಯನ್ನು ಉಪದೇಶಿಸುತ್ತಾನೆ. ಮೃತರಾದ ಮೇಲೆ ಜೀವರು ಯಾವ ಯಾನದಲ್ಲಿ ಹೋಗಿ ಯಾವ ರೀತಿ ಪುನಃ ಭೂಲೋಕಕ್ಕೆ ಹಿಂತಿರುಗುತ್ತಾರೆ ಎಂದು ವಿವರಿಸಲಾಗಿದೆ. ಬ್ರಹ್ಮಜ್ಞಾನಿಗಳು ದೇವಯಾನದಲ್ಲಿ ಪ್ರಯಾಣ ಮಾಡಿ ಬ್ರಹ್ಮಲೋಕಕ್ಕೆ ಹೋಗಿ ಸೇರುವರು. ಪುನಃ ಸಂಸಾರಕ್ಕೆ ಹಿಂತಿರುಗುವುದಿಲ್ಲ. ಬ್ರಹ್ಮೋಪಾಸನೆಯನ್ನು ಮಾಡದೆ, ಯಜ್ಞದಾನಾದಿಗಳಲ್ಲಿ ನಿರತರಾಗಿ ಕರ್ಮ ಮಾಡುವವರು ಪಿತೃಯಾನವೆಂಬ ಧೂಮಮಾರ್ಗದಲ್ಲಿ ಚಲಿಸಿ ಕರ್ಮಫಲಕ್ಷಯವಾದ ಮೇಲೆ ಭೂಮಿಗೆ ಹಿಂತಿರುಗುವರು. ಇದೇ ಪುನರ್ಜನ್ಮ ಸಿದ್ಧಾಂತ.

ದುಃಖಕರವಾದ ಸಂಸಾರಚಕ್ರದಿಂದ ಬಿಡುಗಡೆ ಹೊಂದುವುದೇ ಮೋಕ್ಷ. ಮೋಕ್ಷೋಪಾಯವಾಗುವುದು? ಎಂಬ ಪ್ರಶ್ನೆಯನ್ನು ಉಪನಿಷತ್ತುಗಳಲ್ಲಿ ಪುನಃ ಪುನಃ ವಿಮರ್ಶಿಸಲಾಗಿದೆ. ಪರಿಶುದ್ಧವಾದ ನಡತೆ, ಇಂದ್ರಿಯನಿಗ್ರಹ, ಆತ್ಮಶುದ್ಧಿ ಅತ್ಯಾವಶ್ಯಕವೆಂದೂ ಬ್ರಹ್ಮಸಾಕ್ಷಾತ್ಕಾರವೇ ಮಾನವನ ಗುರಿಯೆಂದೂ ಉಪನಿಷತ್ತುಗಳ ಉತ್ತರ. ನಿಜವಾದ ಯೋಗಿಯನ್ನು ಶಾಂತ, ದಾಂತ, ತಿತಿಕ್ಷು, ಉಪರತ, ಸಮಾಹಿತ ಎಂದು ವರ್ಣಿಸುತ್ತವೆ. ಮುಕ್ತರಾದವರು ನದಿಗಳು ಸಾಗರವನ್ನು ಸೇರುವಂತೆ, ನಾಮರೂಪಗಳನ್ನು ಕಳೆದುಕೊಂಡು ಸರ್ವಾತ್ಮಗಳನ್ನು ಸೇರುವರು. ಮೋಕ್ಷ ಆತ್ಮನಾಶವಲ್ಲ. ಅನಾದಿಯಾಗಿದ್ದ ಕರ್ಮಲೇಪ ಪುರ್ತಿಯಾಗಿ ತೊಳೆದು ಹೋಗಿ ಆತ್ಮ ಸ್ವರೂಪಾವಿರ್ಭಾವದಿಂದ, ಪೂರ್ಣವಿಕಾಸವಾದ ಜ್ಞಾನದಿಂದ ಪ್ರಜ್ವಲಿಸುತ್ತ ನಿರತಿಶಯವಾದ ಆನಂದವನ್ನು ಅನುಭವಿಸುವುದೇ ಮೋಕ್ಷ. ಕೆಲವು ಉಪನಿಷತ್ತುಗಳು ಮುಕ್ತರು ಪರಮಾತ್ಮನಿಗೆ ಸಮರಾಗುವರೆಂದೂ ಮತ್ತೆ ಕೆಲವು ಪರಮಾತ್ಮನೊಡನೆ ಸೇರಿಹೋಗುವವೆಂದೂ ಹೇಳಿವೆ. ಇನ್ನು ಕೆಲವು ಮಂತ್ರಗಳು ಜೀವ ಪರಮರಿಗೆ ಭೇದ ಮತ್ತು ಐಕ್ಯ ಎರಡನ್ನೂ ಹೇಳುವ ಘಟಕಶ್ರುತಿಗಳಾಗಿವೆ.

ಅಭೇದ ಶ್ರುತಿಗಳು ಅದ್ವೈತ ದರ್ಶನಕ್ಕೂ ಭೇದಶ್ರುತಿಗಳು ಭೇದದರ್ಶನಕ್ಕೂ ಆಧಾರವಾಗಿವೆ. ಭೇದಾಭೇದ ದರ್ಶನಗಳು ಎರಡು ವಿಧವಾದ ಶ್ರುತಿಗಳನ್ನೂ ಸ್ವೀಕರಿಸುತ್ತವೆ. ಸಗುಣ ಬ್ರಹ್ಮನನ್ನು ಕೆಲವು ಉಪನಿಷತ್ತುಗಳೂ ನಿರ್ಗುಣ ಬ್ರಹ್ಮವನ್ನು ಮತ್ತೆ ಕೆಲವೂ ಪ್ರತಿಪಾದಿಸುತ್ತವೆ, ಸಗುಣ ಶ್ರುತಿಗಳಿಗೆ ಪ್ರಾಧಾನ್ಯ ಕೊಡುವ ದರ್ಶನಗಳು ನಿರ್ಗುಣ ಶ್ರುತಿಗಳಿಗೆ ಹೇಯಗುಣರಾಹಿತ್ಯವೆಂದು ವಿವರಣೆ ಕೊಡುತ್ತವೆ. ನಿರ್ಗುಣ ಶ್ರುತಿಗಳಿಗೇ ಪ್ರಾಧಾನ್ಯ ಕೊಡುವ ದರ್ಶನಗಳು ಸಗುಣ ಶ್ರುತಿಗಳೇ ಪರಮಾಧಾರವೆಂದೂ ಹೇಳುತ್ತವೆ. ಹೀಗೆ ಉಪನಿಷತ್ತುಗಳು ಸರ್ವ ದರ್ಶನಗಳಿಗೂ ಪರಮಾಧಾರವಾಗಿಯೂ ರಹಸ್ಯವಾದ ಜ್ಞಾನಪ್ರಚೋದಕವಾಗಿಯೂ ಮಾನವ ಕೋಟಿಯ ಉದ್ಧಾರದ ಅಮೃತಧಾರೆಯಾಗಿಯೂ ಇವೆ.

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...