Wednesday 22 August 2018

ಉಪಾಕರ್ಮ ಮತ್ತು ಉತ್ಸರ್ಜನ ಎಂಬ ವೇದವ್ರತಗಳು:

ವೇದವ್ರತಗಳಲ್ಲಿ ಎರಡು ವಿಧ. ಉಪಾಕರ್ಮ ಮತ್ತು ಉತ್ಸರ್ಜನ ವಿಧಿಗಳು.ಉಪಾಕರ್ಮದ ಬಗ್ಗೆ ಹಲವಾರು ರೀತಿಯ ಸಂಪ್ರದಾಯಗಳು ಇವೆ. ಆದರೇ ಈಗಿನ ಕಾಲಕ್ಕೆ ಅದು ಕೇವಲ ಜನಿವಾರ ಹಾಕಿಕೊಳ್ಳುವ ಕಾರ್ಯಕ್ರಮವೆಂದೇ ಪ್ರತೀತಿಯಾಗಿರುವದು  ವಿಷಾದನೀಯ. ಇದು ಕೇವಲ ಒಂದು ಸಾಂಕೇತಿಕವಾದ ಸಂಪ್ರದಾಯವಾಗಿರುವದು ಶೋಚನೀಯ.ಈಗಿನ ಕಾಲಕ್ಕೆ ಇದು ಕೇವಲ  "ಅಹಂ ಬ್ರಹ್ಮಾಸ್ಮಿ" " ಹೆಮ್ಮೆಯಿಂದ ಹೇಳು ಬ್ರಾಹ್ಮಣನೆಂದು" ಎಂಬ ಸಂಪ್ರದಾಯಕ್ಕೆ ಸೇರಿರುವಂತೆ ಕೇವಲ ಔಪಚಾರಿಕ ವಿಷಯಮೌಢ್ಯತೆಯಾಗಿರುವದು ದುರ್ದೈವ ಹಾಗೂ ಖಂಡನೀಯ. ಆದರೇ ಈ ಉಪಾಕರ್ಮ ಮತ್ತು ಉತ್ಸರ್ಜನ ಎಂಬ ಎರಡು ವಿಧಿಗಳಿಗೂ ಮತ್ತು ಜನಿವಾರ ಹಾಕಿಕೊಳ್ಳುವ ಕ್ರಿಯೆಗೂ ಯಾವದ್ವಿಧವಾದ ಸಂಬಂಧವೂ ಇರುವದಿಲ್ಲ.ಇದರ ಬಗ್ಗೆ ಪ್ರಶ್ನೋತ್ತರ ಮಾಲಿಕೆಯನ್ನು ಸಹೃದಯರಿಗೆ ಅರ್ಪಿಸಬೇಕೆಂದು ಈ ಕಿರು ಹೊತ್ತಿಗೆಯನ್ನು ಪರಿಚಯಿಸಿಕೊಡುತ್ತಿದ್ದೇನೆ.ಇದರಿಂದ ವೇದಾಧ್ಯಯನದ ಪುನರುತ್ಥಾನವಾದರೇ  ಸಂಪ್ರದಾಯದ ಪುನರುತ್ಥಾನವಾದಂತೆಯೇ ಎನ್ನುವದರಲ್ಲಿ ಸಂಶಯವಿಲ್ಲ.

೧.ಪ್ರ:  ಉಪಾಕರ್ಮ ಎಂದರೇನು ?

ಉ:  "ಉಪಾಕರ್ಮ" ಅಥವಾ ಉಪಕ್ರಮ ಎಂದರೆ ಪ್ರಾರಂಭ.

೨.ಪ್ರ: -  ಯವುದರ ಪ್ರಾರಂಭ ?

ಉ: ವೇದಾಧ್ಯಯನದ ಪ್ರಾರಂಭ.

೩. ಪ್ರ:- ಉತ್ಸರ್ಜನ ಎಂದರೇನು ? ಅದರ ಕ್ರಿಯಾರ್ಥವೇನು ?

ಉ: ಅಧ್ಯಯನವನ್ನು ಮನನ ಮಾಡಿಕೊಳ್ಳುವದಕ್ಕಾಗಿ ಮಾಡುವ ತಾತ್ಕಾಲಿಕ ವಿರಮನ.

೪.ಪ್ರ:- ವೇದಗಳ ಅಧ್ಯಯನದ ಆರಂಭ ಮತ್ತು ವಿರಮನ ಯಾವಾಗ ಹೇಗೆ ಮಾಡಬೇಕು.?

ಉ: ಆಪಸ್ತಂಬರು ಇದಕ್ಕೆ ಸೂತ್ರವನ್ನು ಹೇಳಿದ್ದಾರೆ.
"ಶ್ರಾವಣ್ಯಾಂ ಪೌರ್ಣಮಾಸ್ಯಾಂ ಅಧ್ಯಾಯೋ ಪ್ರಾಕೃತ್ಯ ತೈಷ್ಯಾಂ ಪೌರ್ಣಮಾಸ್ಯಾಂ ರೋಹಿಣ್ಯಾಂ ವಾ ವಿರಮೇತ್ "
ಮೇಲಿನ ಶ್ಲೋಕದ ಅರ್ಥವೇನೆಂದರೆ :- ಶ್ರಾವಣ ಮಾಸದ  ಹುಣ್ಣಿಮೆಯ ದಿನದಂದು ವೇದಾಧ್ಯಯನವನ್ನು ಪ್ರಾರಂಭಿಸಿ ಪುಷ್ಯ ಮಾಸದ ಹುಣ್ಣಿಮೆಯ ದಿನದಲ್ಲಾಗಲೀ ಅಥವಾ ಪುಷ್ಯಮಾಸದ ರೋಹಿಣೀ ನಕ್ಷತ್ರಯುಕ್ತ ದಿನದಲ್ಲಾಗಲೀ ವಿರಮಿಸ ಬೇಕು.ಅರ್ಥಾತ್ ಅಧ್ಯಯನದ ಕಾಲ ಕೇವಲ ಐದು ತಿಂಗಳು.

೫.ಪ್ರ:- ಕೇವಲ ಐದು ತಿಂಗಳಷ್ಟೇ ಅಧ್ಯಯನವನ್ನು ಏಕೆ ಮಾಡಬೇಕು ?

ಉ: ಇದಕ್ಕೆ ನಿರ್ದಿಷ್ಟವಾದ ಕಾರಣವೇನೆಂಬುದು ತಿಳಿದಿಲ್ಲ.ಆದರೂ  ಕಲಿತದ್ದದ್ದನ್ನು ಮನನ ಮಾಡಬೇಕೆಂದು ಮತ್ತು ಮಿಕ್ಕ ಕಾಲದಲ್ಲಿ ವೇದಾಂಗಗಳನ್ನು ಅಧ್ಯಯನ ಮಾಡುವದಕ್ಕಾಗಿ ಅನುಕೂಲವಾಗಲಿ ಎಂದು ಸೂತ್ರಕಾರರು ಹೀಗೆ ಹೇಳಿರಬಹುದು.ಹಾಗೂ ಹಿಂದಿನ ಗುರುಕುಲ ಪದ್ಧತಿಯನ್ನು ಪರಿಶೀಲಿಸಿದಾಗ ನಮಗೆ ತಿಳಿಯುವ ವಿಷಯವೇನೆಂದರೇ   ಮಾಘಮಾಸದಿಂದಾಚೆಗೆ ಹಬ್ಬಹರಿದಿನಗಳೂ, ಯಜ್ಞಯಾಗಾದಿಗಳೂ ನಡೆಯುವ ಕಾಲವಾದ್ದರಿಂದ ಅಧ್ಯಾಪಕರು ವ್ಯಾವಹಾರಿಕ , ದ್ರವ್ಯ ಸಂಗ್ರಹಣೆ ಹಾಗೂ ವಿತರಣೆಗೆ ಕಾಲಾವಕಾಶವು ಬೇಕಾದ್ದರಿಂದ ಈ ರೀತಿಯಾಗಿ ಕಾಲಾನುಕೂಲವನ್ನು ಮಾಡಿಕೊಂಡಿರಬಹುದಾಗಿದೆ.

೬.  ವೇದವ್ರತಗಳಾದ  ಈ  ಉಪಾಕರ್ಮ ಮತ್ತು ಉತ್ಸರ್ಜನಗಳಿಗೆ ಅಧಿಕಾರಿಗಳಾರು ?

ಉ:- ವೇದಾಧ್ಯಯನವನ್ನು ಮಾಡುವವರೇ ಇದಕ್ಕೆ ಅಧಿಕಾರಿಗಳು. ಹಾಗೂ ವೇದಾಧ್ಯಯನ ಮಾಡಿರುವವರಿಗೇ ಬ್ರಹ್ಮಯಜ್ಞವನ್ನೂ ಹೇಳಿರುವದು. ಯಾವುದಾದರೊಂದು ಶಾಖೆಯನ್ನು ವೇದಾಂಗಗಳೊಡನೆ ಪರಿಪೂರ್ಣ ಅಧ್ಯಯನ ಮಾಡಿ  ಪ್ರತಿನಿತ್ಯ ಸಂಧ್ಯೋಪಾಸನೆ,ಬ್ರಹ್ಮಯಜ್ಞ,ಅಗ್ನಿಕಾರ್ಯ ,ವೇದ ಪಠನ ಹಾಗೂ ಅನುಷ್ಠಾನ ಮಾಡುವವರಿಗೆ ಈ ವ್ರತಗಳನ್ನು  ಮಾಡಲೇಬೇಕೆಂಬ ನಿಯಮವಿಲ್ಲ. 

೭.ಪ್ರ:- ಉಪಾಕರ್ಮ ಮತ್ತು ಉತ್ಸರ್ಜನಗಳ ಔಚಿತ್ಯವೇನು ?

ಉ:- ವೇದಸಮೂಹವನ್ನು ಪ್ರಪಂಚದ ಒಳಿತಿಗಾಗಿ ಕಂಡುಕೊಟ್ಟ ,ದ್ರಷ್ಟಾರರಾದ ಋಷಿಗಳಿಗೂ ಅದನ್ನು ಹೇಳಿಕೊಟ್ಟ ಅಧ್ಯಾಪಕರಿಗೂ ಕೃತಜ್ಞತಾಭಾವವನ್ನು ವ್ಯಕ್ತಪಡಿಸುವದೇ ಇದರ ಮುಖ್ಯ ಉದ್ದೇಶ. ಅದಕ್ಕನುಗುಣವಾಗಿ ಆಯಾ ದೇವತೆಗಳಿಗೂ , ಆಯಾ ಮಂತ್ರಗಳ ದ್ರಷ್ಟಾರರಾದ ಋಷಿಗಳಿಗೂ ಹೋಮಗಳ ಮೂಲಕ ಹವಿಸ್ಸುಗಳನ್ನು ,ತರ್ಪಣಗಳನ್ನೂ ಕ್ರಮವಾಗಿ ಕೊಡಬೇಕು.

೮.ಪ್ರ:-ಉಪಾಕರ್ಮ ಮತ್ತು ಉತ್ಸರ್ಜನಗಳ ಸಂಪ್ರದಾಯವೇನು ?

ಉ:- ಉಪಾಕರ್ಮವು ಎರಡು ವಿಧ.ಕಾಂಡೋಪಾಕರ್ಮ ಮತ್ತು ಅಧ್ಯಾಯೋಪಾಕರ್ಮ.
ಕಾಂಡೋಪಾಕರ್ಮ: ಗುರುಕುಲದಲ್ಲಿ ಯಜುರ್ವೇದದ ಅಧ್ಯಯನವನ್ನು ಪ್ರಾರಂಬಿಸಿದಾಗ ಇದನ್ನು ಮಾಡಬೇಕು.ಉಪಾಕರ್ಮವನ್ನು ಪ್ರತಿಯೊಂದು ಕಾಂಡದ ಆದಿಯಲ್ಲೂ , ಉತ್ಸರ್ಜನವನ್ನು ಅಂತ್ಯದಲ್ಲೂ ಮಾಡಬೇಕು.ಇದನ್ನು ಯಜುರ್ವೇದದ ಏಳು ಕಾಂಡ ಸಂಹಿತೆ, ಮೂರು ಆಷ್ಟಕ ಬ್ರಾಹ್ಮಣ ,ಆರು ಆರಣ್ಯಕಗಳು,ಏಕಾಗ್ನಿಕಾಂಡ ಮತ್ತು ನಾಲ್ಕು ಉಪನಿಷತ್ತುಗಳು  (ಇಷ್ಟೂ ಸೇರಿ ಮಾಡುವದಕ್ಕೆ ಸಾರಸ್ವತ ಪಾಠವೆನ್ನುತ್ತಾರೆ)   ಇವುಗಳ ಅಧ್ಯಯನ ಸಂಪೂರ್ಣವಾಗುವವರೆಗೂ ಮಾಡುವದಕ್ಕೆ ಕಾಂಡೋಪಾಕರ್ಮ ಎಂಬುದಾಗಿ ಹೇಳುತ್ತಾರೆ.
ಅಧ್ಯಾಯೋಪಾಕರ್ಮ: ಇದು ಸಾಮಾನ್ಯವಾಗಿ ವೇದದ ಎಲ್ಲಾ ಶಾಖೆಗಳಿಗೂ ಅನ್ವಯಿಸುತ್ತದೆ.ಪ್ರತಿವರ್ಷವೂ ಶ್ರಾವಣ ಹುಣ್ಣಿಮೆಯಲ್ಲಿ ಉಪಕ್ರಮಿಸಿ ಪುಷ್ಯ ಹುಣ್ಣಿಮೆಯಲ್ಲಿ  ಉತ್ಸರ್ಜಿಸುವ ಕ್ರಮ.

೯.ಪ್ರ:- ಈ ಕರ್ಮಗಳನ್ನು ಮಾಡಲಾಗದಿದ್ದರೇ ಪ್ರಾಯಶ್ಚಿತ್ತವೇನು ?

ಉ: ಇವುಗಳು   ನಿತ್ಯನೈಮಿತ್ತಿಕಕರ್ಮಗಳಾದ್ದರಿಂದ ಇವುಗಳನ್ನು ಮಾಡಲೇ ಬೇಕು.ಮಾಡದೇ ಇರುವದರಿಂದ ಪ್ರತ್ಯವಾಯ ದೋಷಗಳು ಅಂಟಿಕೊಳ್ಳುತ್ತವೆ. ಆದ್ದರಿಂದ ಇದಕ್ಕೆ ಪ್ರಾಯಶ್ಚಿತ್ತವೆಂಬ ಮಾರ್ಗವಿಲ್ಲ.ಆದರೂ ಗೃಹ್ಯಸೂತ್ರಗಳಲ್ಲಿ ಇದಕೆ ಪ್ರಾಯಶ್ಚಿತ್ತಕರ್ಮಗಳನ್ನೂ ಹೇಳಿರುತ್ತಾರೆ.

೧೦.ಪ್ರ:- ಜನಿವಾರ ಹಾಕಿಕೊಳ್ಳುವುದಕ್ಕೂ ಉಪಾಕರ್ಮೋತ್ಸರ್ಜನಕ್ಕೂ ಏನೂ ಸಂಬಂಧವಿಲ್ಲ ಎಂದಿರಲ್ಲ.ಅದು ಹೇಗೆ ?

ಉ:- ನಾವು ಇಲ್ಲಿ ತಿಳಿದುಕೊಳ್ಳಬೇಕಾದ ವಿಷಯವೇನೆಂದರೇ ಜನಿವಾರ ಹಾಕಿಕೊಳ್ಳುವದು ಉಪಾಕರ್ಮೋತ್ಸರ್ಜನಗಳ ಒಂದು ಅಂಗವಲ್ಲ.ಅದು ನಾವು ಪವಿತ್ರರಾಗಿ,ಶುಚಿರ್ಭೂತರಾಗಿದ್ದೇವೆ ಎಂಬ ಭಾವನೆಯನ್ನು ದೃಢಪಡಿಸುವ ಕೇವಲ ಸಾಂಕೇತಿಕವಾದ ಕ್ರಿಯೆ.ಜನಿವಾರ ಹಾಕಿಕೊಳ್ಳುವದೇ ಉಪಾಕರ್ಮೋತ್ಸರ್ಜನಗಳಲ್ಲ.ಹೀಗೆ ಮಾಡಿ ಕೃತಾರ್ಥರಾದೆವು ಎಂಬುವದು ಇತ್ತೀಚಿನ ಒಂದು ಸಾಂಪ್ರದಾಯಿಕವಾದ ಅಪಾಯಕಾರೀ ಭ್ರಾಂತಿ ಎನ್ನುವದರಲ್ಲಿ ತಪ್ಪೇನಿಲ್ಲ.

೧೧.ಪ್ರ:- ಪ್ರಥಮೋಪಾಕರ್ಮ ಎಂದರೇನು?

ಉ:- ಇದರಲ್ಲಿ ವಿಶೇಷವಾದ ಯಾವ ಅರ್ಥವೂ ಇಲ್ಲ. ಉಪನಯನವಾದಮೇಲೆ ಹೊಸದಾಗಿ ವೇದಾಧ್ಯಯನ ಪ್ರಾರಂಭಮಾಡುವ ಒಂದು ಕ್ರಿಯೆಯಲ್ಲಿ ಅದು ನಿರ್ವಿಘ್ನವಾಗಿ ನೆರವೇರಲಿ ಮತ್ತು ಮುಂದೆವರೆಯಲಿ ಎಂಬುವಲ್ಲಿ ಮಹತ್ವವುಳ್ಳದ್ದಾಗಿದೆ.

೧೨.ಪ್ರ:- ಉಪಾಕರ್ಮೋತ್ಸರ್ಜನಗಳ ಪ್ರಯೋಜನವೇನು?

ಉ:- ಇದರ ಮುಖ್ಯ ಮಹತ್ವ ಎಂದರೆ ನಮ್ಮ ಆರ್ಷೇಯಪದ್ಧತಿಯು ನಿರಂತರವಾಗಿ ಮುಂದುವರೆಯಲಿ ಎಂಬುವದು. ನಾವು ಕಲಿತದ್ದನ್ನು ಮೆಲುಕು ಹಾಕುತ್ತಾ ಅರ್ಥಾತ್ ಮನನ ಮಾಡಿಕೊಳ್ಳುವದು ಮತ್ತೂ ಅದರಿಂದುಂಟಾದ ಜ್ಞಾನವನ್ನು ಲೋಕೋಪಯೋಗಕ್ಕೆ ಮಾಡಿಕೊಳ್ಳುವದು ಇನ್ನೊಂದು. ಮೇಲ್ನೋಟಕ್ಕೆ ಹೀಗೆ ಕಂಡರೂ ಇದರಲ್ಲಿ ಅತಿಮುಖ್ಯವಾದ ಮಹತ್ತರವಾದ ಉದ್ದೇಶವೂ ಇದೆ.ಅದು ವೇದಗಳ ಯಾತಯಾಮತಾ ನಿವಾರಣಾ ಪ್ರಯೋಜನ ಎಂಬುವದು.

೧೩.ಪ್ರ:- ವೇದಗಳ ಯಾತಯಾಮತಾ ನಿವಾರಣಾ ಪ್ರಯೋಜನ ಎಂದರೆ ಏನು ?

ಉ:- ಯಾತಯಾಮತೆ ಎಂದರೆ ಹಳಸುವದು,ನಿಸ್ಸಾರವಾಗುವದು ಎಂದರ್ಥ. ಇದಕ್ಕೂ ವೇದಕ್ಕೂ ಏನುಸಂಬಂಧವೆಂದರೆ ವೇದಗಳು ಹಿಂದಿನ ಕಾಲದಿಂದಲೂ ಗುರುಮುಖೇನ ಶಿಷ್ಯನಿಗೆ ಪುಸ್ತಕಗಳ ನೆರವಿಲ್ಲದೇ ನಡೆದು ಬಂದ ಆರ್ಷೇಯಪದ್ಧತಿಯು.ಇದು ನಿರಂತರವಾಗಿ ನಡೆಯಬೇಕೆಂಬುದೇ ಇದರ ಮುಖ್ಯ ಉದ್ದೇಶ. ಅದು ಹೇಗೆಂದರೇ , ಯಾವ ವೇದಗಳೇ  ಆಗಲೀ ಶಾಸ್ತ್ರಗಳೇ ಆಗಲಿ ಅದಕ್ಕೆ ಅಧಿಕಾರಿ,ವಿಷಯ,ಸಂಬಂಧ ಮತ್ತು ಪ್ರಯೋಜನಗಳೆಂಬ ಅನುಬಂಧ ಚತುಷ್ಟಯಗಳು ಇದ್ದೇ ಇರುತ್ತದೆ.ವೇದಮಂತ್ರಗಳಿಗೆ ದ್ರಷ್ಟೃ ಋಷಿ, ದೇವತಾ, ಛಂದಸ್ಸುಗಳಿರುತ್ತದೆ.ಇವುಗಳನ್ನು ಸ್ಮರಿಸಿಕೊಂಡೇ ಮಂತ್ರಗಳನ್ನು ಹೇಳಿಕೊಳ್ಳಬೇಕೆಂಬ ನಿಯಮವೂ ಇದೆ. ಹೀಗೆ ಹೇಳಿಕೊಳ್ಳದಿದ್ದರೇ ಮಂತ್ರಾರ್ಥಗಳೂ ಮತ್ತು ಅವುಗಳಿಂದುಂಟಾಗುವ ಜ್ಞಾನವೂ ಪೂರ್ತಿಯಾಗುವದಿಲ್ಲ ಎಂಬ ಭಾವನೆ.ಯಜುರ್ವೇದದ ಮಂತ್ರಗಳಿಗೆ ಈ ಸೌಲಭ್ಯವು ಮರೆಯಾಗಿರುವದು ಈ ಯಾತಯಾಮತಾ ದೋಷದಿಂದಲೇ ಎನ್ನುವದರಲ್ಲಿ ಸಂಶಯವಿಲ್ಲ. ಆದರೂ ಕೆಲವು ಯಜುರ್ವೇದ ಮಂತ್ರಗಳಿಗೆ ಭಟ್ಟ ಭಾಸ್ಕರರೂ ,ವಿಷ್ಣುಸೂರಿಗಳೂ  ದ್ರಷ್ಟೃ ಋಷಿ, ದೇವತಾ, ಛಂದಸ್ಸುಗಳನ್ನು ಅವರ ಭಾಷ್ಯದಲ್ಲಿ ಅಲ್ಲಲ್ಲಿ ಸೂಚಿಸಿರುತ್ತಾರೆ. ಉಪಾಕರ್ಮೋತ್ಸರ್ಜನಗಳಲ್ಲಿ ನಾವು ಈ ವಿಧಾನವನ್ನು ಕಂಡುಕೊಳ್ಳಬಾಹುದಾಗಿದೆ. ಅದರಿಂದ ಇವುಗಳು ಮನುಷ್ಯನ ಸ್ಮೃತಿಯಲ್ಲಿ ಅಳಿಯದೇ ನಿಲ್ಲವದು.ಇದೇ ಈ ಉಪಾಕರ್ಮೋತ್ಸರ್ಜನಗಳ ಮುಖ್ಯ ಧ್ಯೇಯೋದ್ದೇಶ.

೧೪.ಪ್ರ:- ಬ್ರಹ್ಮಯಜ್ಞಕ್ಕೂ ಉಪಾಕರ್ಮೋತ್ಸರ್ಜನ ಕರ್ಮಕ್ಕೂ ಏನು ವ್ಯತ್ಯಾಸ?

ಉ:- ಬ್ರಹ್ಮಯಜ್ಞವು ನಿತ್ಯ ಕರ್ಮಗಳಲ್ಲಿ ಸೇರಿರುತ್ತದೆ. ಬ್ರಹ್ಮ ಎಂದರೆ ವೇದಗಳು ಯಜ್ಞ ಎಂದರೆ ಅದ್ಯಯನ ಮಾಡುವದು.ಗುರುಮುಖೇನ ಕಲಿತದ್ದನ್ನು ನಿತ್ಯ ಅಧ್ಯಯಿಸಿ ಮನದಟ್ಟು ಮಾಡಿಕೊಳ್ಳುವದೇ ಇದರ ಉದ್ದೇಶವು.
ಉಪಾಕರ್ಮೋತ್ಸರ್ಜನ ಕರ್ಮಗಳು ನೈಮಿತ್ತಿಕ ಕರ್ಮಗಳು . ಇದಕ್ಕೆ ಮೇಲೆ ಹೇಳಿದ ಕೃತಜ್ಞತಾ ಸೂಚಿಸುವ ಮತ್ತು ಯಾತಯಾಮತಾ ದೋಷನಿವಾರಣೆ ಎಂಬ ಉದ್ದೇಶಗಳೇ ಮೂಲ.

ಹರಿಃ ಓಂ ತತ್ ಸತ್ ||

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...