Friday 19 March 2021

*ಜ್ಞಾನ- ಭಕ್ತಿ*

ದೇವರು ಎಲ್ಲಿದ್ದಾನೆ? ಹೇಗಿದ್ದಾನೆ? ನಮಗೇಕೆ ಅವನು ಕಾಣಲಾರ? ಇವೆಲ್ಲ ದೇವರಷ್ಟೇ ಅನಾದಿ ಕಾಲದಿಂದಲೂ ಜನರು ಕೇಳುತ್ತಾ ಬಂದಿರುವ ಪ್ರಶ್ನೆಗಳು. ನಾಸ್ತಿಕರು ಕೃತ, ತ್ರೇತಾ, ದ್ವಾಪರ ಯುಗಗಳಲ್ಲೂ ಇದ್ದರು. ಕಲಿಯುಗದಲ್ಲೂ ಇದ್ದಾರೆ. ಅಂತಹ ಎಷ್ಟೆಷ್ಟು ಯುಗಗಳೋ? ಎಷ್ಟು ಕಲ್ಪಗಳೋ! ಅಂತೂ ಈ ಪ್ರಶ್ನೆ ಸಾರ್ವಕಾಲಿಕವಾದದ್ದು, ಸಾರ್ವತ್ರಿಕವೂ ಆದದ್ದು. 


ದೇವರು ಎಲ್ಲೆಲ್ಲೂ ಇದ್ದಾನೆ ಎಂಬುದೇ ಇದಕ್ಕೆ ಉತ್ತರ. ಬೆಟ್ಟ, ನದೀ, ಸಮುದ್ರ, ಗಿಡ, ಮರ, ಬಳ್ಳಿ ಹೂವು, ಕಾಯಿ, ಹಣ್ಣು, ಹೀಗೆ ನೈಸರ್ಗಿಕ, ಕೃತಕ ಎಲ್ಲದರಲ್ಲೂ ಅವನಿದ್ದೇ ಇದ್ದಾನೆ. ಅಷ್ಟೇಕೆ? ನನ್ನಲ್ಲಿ, ನಿಮ್ಮಲ್ಲಿ, ಅವರಲ್ಲಿ, ಇವರಲ್ಲಿ ಹಿಂದೂಗಳಲ್ಲಿ ಮುಸಲ್ಮಾನರಲ್ಲಿ ಕ್ರೈಸ್ತರಲ್ಲಿ ಎಲ್ಲರಲ್ಲೂ ಭೇದವಿಲ್ಲದೇ ಸಮಾನವಾಗಿದ್ದಾನೆ. ಇದು ಸುಂದರವಾದ ಶರೀರ, ಇದು ಕುರೂಪದ್ದು ಎಂದೆಣಿಸದೆ ಎಲ್ಲಾ ಸ್ಥಾವರ, ಜಂಗಮ ಜೀವಿಗಳಲ್ಲೂ ಇದ್ದಾನೆ. ನಾಸ್ತಿಕರು ಇದನ್ನು ಒಪ್ಪಲಿ ಬಿಡಲಿ,  ಆಸ್ತಿಕರಾದ ನಾವು ಇದನ್ನು ನಂಬಿದ್ದೇವೆ. 


ಆದರೆ, ಎಲ್ಲೆಲ್ಲೂ ಇರುವ ದೇವರನ್ನು ನಾವು  ಕಾಣುವುದು ಹೇಗೆ? ಅವನು ನಮಗೇಕೆ ಗೋಚರನಾಗಲಾರ? ಈ ಪ್ರಶ್ನೆಗಳಿಗೆ ಉತ್ತರ ಸಿಗುವುದು ಕಷ್ಟ. ಆದರೆ ನಾವೇ ಪ್ರಯತ್ನಿಸಿದರೆ ಸ್ವಲ್ಪವಾದರೂ ಸಾಧ್ಯವೇನೋ. 


ಭಗವಂತನ ವೈಭವವನ್ನು, ಸುಂದರ ರೂಪವನ್ನು ನಾವು ಎಲ್ಲೆಲ್ಲಿ ನೋಡಬಹುದು? ಅವನದೇ ಸೃಷ್ಟಿಯ ಎಲ್ಲಾ ಸುಂದರ ವಸ್ತು, ವ್ಯಕ್ತಿಗಳಲ್ಲಿ ಪ್ರಕೃತಿಯಲ್ಲಿ  ಅವನ ತೇಜದ ಅಂಶ ತುಸು ಹೆಚ್ಚಾಗಿದೆಯಂತೆ.   ಇದು ಶ್ರೀಕೃಷ್ಣನದೇ ಮಾತು.  


ಈಗ ಭಗವದ್ಗೀತೆಯ 10ನೆಯ ಅಧ್ಯಾಯಕ್ಕೆ ಹೋಗೋಣ. ಅದನ್ನು ವಿಭೂತಿ ಯೋಗವೆನ್ನುತ್ತಾರೆ. ಹಿಂದಿನ ಅಧ್ಯಾಯಗಳಲ್ಲಿ ಶ್ರೀಕೃಷ್ಣ, 

"ಹೇ ಅರ್ಜುನ! ಈ ಪ್ರಕೃತಿಯು  ನನ್ನ ಪತ್ನಿಯಂತೆ. ಅವಳಲ್ಲಿ ನಾನು ಗರ್ಭವಿಟ್ಟು ಸಕಲ ಜೀವರಾಶಿಗಳನ್ನೂ ಜಡವಸ್ತುಗಳನ್ನೂ ಸೃಷ್ಟಿಸಿದ್ದೇನೆ. ಆದರೆ ಕೆಲವಲ್ಲಿ ಮಾತ್ರ ನನ್ನ ತೇಜಸ್ಸು ಪ್ರಖರವಾಗಿ ಎದ್ದು ಕಾಣುತ್ತದೆ. ಅದೂ ನನ್ನದೇ ಸಂಕಲ್ಪ.  ಅಂದರೆ ನಾನೇ ಒಂದೊಂದು ಜೀವರಾಶಿಗಳ ಒಂದೊಂದು ಪ್ರಭೇದಗಳಲ್ಲಿ ಸುಂದರವಾಗಿ ಕಾಣಿಸಿಕೊಳ್ಳುತ್ತೇನೆ. ಎನ್ನುತ್ತಾನೆ ಕೃಷ್ಣ. ಹನ್ನೊಂದು ರುದ್ರರಲ್ಲಿ ಶಂಕರನೂ, ಪುರೋಹಿತರಲ್ಲಿ ಬೃಹಸ್ಪತಿಯೂ, ಸೇನಾನಿಗಳಲ್ಲಿ ಷಣ್ಮುಗನೂ, ಮಹರ್ಷಿಗಳಲ್ಲಿ ಭೃಗುವೂ...ಮುಂತಾಗಿ."


"ಜಲಾಶಯಗಳಲ್ಲಿ ಸಾಗರವೂ, ವೃಕ್ಷಗಳಲ್ಲಿ ಅಶ್ವತ್ಥವೂ, ಮನುಷ್ಯರಲ್ಲಿ ರಾಜರ ರೂಪದಲ್ಲೂ ನಾನಿದ್ದೇನೆ. ನದಿಗಳಲ್ಲಿ ಗಂಗೆಯಾಗಿಯೂ, ಗಿರಿಶಿಖರಗಳಲ್ಲಿ ಹಿಮಾಲಯವಾಗಿಯೂ ಇದ್ದೇನೆ." ಎನ್ನುತ್ತಾನೆ. " "ಪಾಂಡವರಲ್ಲಿ ಧನಂಜಯನಾದ ನಿನ್ನಲ್ಲೇ ನನ್ನ  ತೇಜಸ್ಸನ್ನು ನಾನು ಅಂಶವಾಗಿ ಇಟ್ಟಿದ್ದೇನೆ. " ಎಂದೂ ಹೇಳುತ್ತಾನೆ. 


 " ಸ್ತ್ರೀಯರಲ್ಲಿ ನೆನಪಿನ ಶಕ್ತಿಯಾಗಿಯೂ, ಬುದ್ಧಿಶಕ್ತಿ, ಧರಿಸುವ, ಭರಿಸುವ ಶಕ್ತಿಯಾಗಿಯೂ, ಕ್ಷಮಾಗುಣವಾಗಿಯೂ ನಾನಿದ್ದೇನೆ." ಎಂದಿದ್ದಾನೆ ಕೃಷ್ಣ.  ಹೀಗೆ, ವ್ಯಕ್ತ, ಅವ್ಯಕ್ತ, ಮೂರ್ತ, ಅಮೂರ್ತ ಎಲ್ಲ ರೂಪದಲ್ಲೂ ಇದ್ದೇನೆ ಎಂದು ಅವನೇ ಹೇಳಿದ ಮೇಲೆ, ನಾವು ಅವನನ್ನು ಕಾಣುವ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ಮಾತ್ರ ನಮಗೆ ಅವನ  ಇರುವಿಕೆಯ ಅನುಭವವಾಗುತ್ತದೆ. 

ಆದರೆ ಈ ರೂಪಗಳಲ್ಲಿ ಭಗವಂತನ ಧ್ಯಾನ, ಉಪಾಸನೆಯನ್ನು ಮಾಡಲು ನಾವು ಸಾಮಾನ್ಯರು ಬಹಳ ಸಾಧನೆ ಮಾಡಬೇಕು. 

ಅದಕ್ಕೆಂದೇ ಏನೋ ನಮ್ಮ ಪೂರ್ವೀಕರು ದೇವಾಲಯಗಳನ್ನು ನಿರ್ಮಿಸಿದರು. ಅಲ್ಲಿನ ಅರ್ಚಾಮೂರ್ತಿಗಳಲ್ಲಿ ವೇದ ಮಂತ್ರಗಳ ಮೂಲಕ, ಆಗಮಗಳಲ್ಲಿ ಹೇಳಲ್ಪಟ್ಟಿರುವ ವಿಧಿಗಳ ಮೂಲಕ  ಭಗವಂತನನ್ನು ಆವಾಹಿಸಿ ಕಳಾಕರ್ಷಣ ಮಾಡಿ ಶಕ್ತಿ ತುಂಬಿದರು. ಈ ವಿಧಿ, ಮಂತ್ರಗಳನ್ನೆಲ್ಲಾ ರಚಿಸಿದನೂ ಅವನೇ! ದೇವಾಲಯಗಳು ಕಟ್ಟಲ್ಪಟ್ಟಿರುವುದೂ ಅವನ ಸಂಕಲ್ಪದಿಂದಲೇ, ಸಂಕಲ್ಪದಂತೆಯೇ!


 ಅರ್ಚಾ ಮೂರ್ತಿಗಳಲ್ಲೂ ಎಲ್ಲೋ ಕೆಲವು ಮಾತ್ರ ಸ್ವಯಂವ್ಯಕ್ತ. ಇನ್ನಿತರ ಮೂರ್ತಿಗಳು, ದಾರು( ಮರದ), ಕಲ್ಲಿನಲ್ಲಿ ಕಟೆದ ಅಥವಾ ಸುಧಾ ಅಂದರೆ ಮರಳು, ಸುಣ್ಣದ ಮಿಶ್ರಣದಿಂದಾದವು. ( ಹೀಗೆ ಯೋಚಿಸುವುದೂ ಹೇಳುವುದೂ ಅಪರಾಧ. ದೇವರು ನನ್ನನ್ನು ಕ್ಷಮಿಸಲಿ! ) ಕೆಲವು ಚಿತ್ರಪಟಗಳಲ್ಲೂ ದೇವರ ಪೂಜೆ ಮಾಡುತ್ತೇವೆ. ಆದರೆ ಇವೆಲ್ಲದರಲ್ಲೂ ಭಗವಂತ ಸುಂದರವಾಗಿಯೇ ಮೂಡಿಬರಲು ಅವನ ಸಂಕಲ್ಪವಲ್ಲವೇ ಕಾರಣ? ಆ ಶಿಲ್ಪಿ, ಸ್ಥಪತಿ, ಚಿತ್ರಕಾರರ ಮನಸ್ಸಿನಲ್ಲಿ, ಕೈಯಲ್ಲಿ ತಾನೇ ಕುಳಿತು ತನ್ನನ್ನು ಅಭಿವ್ಯಕ್ತಿಪಡಿಸದಿದ್ದರೆ ಆ ಮೂರ್ತಿ ಸುಂದರವಾಗಿ ಕಾಣಲು ಸಾಧ್ಯವೇ?   ಈ  ಭಾವ ನಮ್ಮಲ್ಲಿ ಬಂದರೆ ಸಾಕು. ಭಕ್ತಿ ತಂತಾನೇ ಹೆಚ್ಚುತ್ತದೆ. ಇಂಥಾ ಭಕ್ತಿಭಾವದಿಂದ ದೇವಸ್ಥಾನಕ್ಕೆ ಹೋದಾಗ ಅವನ ದರ್ಶನ ಮಾಡಿದಾಗ  ಆಗುವ ಅನುಭವವೇ ವಿಶಿಷ್ಟ. 


ಈ ಅನುಭವವನ್ನು ಇನ್ನೂ ಪಕ್ವವಾಗಿಸಲು ನಾವು ನಮ್ಮ ಜ್ಞಾನವನ್ನೂ ವಿಸ್ತರಿಸಿಕೊಳ್ಳಬೇಕು. 


ಈ ಹಂತದಲ್ಲಿ ನಮಗೆ ಆಚಾರ್ಯರ, ಗುರುಗಳ, ವಿದ್ವಾಂಸರ ಪ್ರವಚನಗಳು ರುಚಿಸಲಾರಂಭಿಸುವುದು. ಅದೇ ನಮ್ಮ ಕರ್ಮಪಕ್ವ ಕಾಲ ಎನ್ನೋಣ. ಪ್ರವಚನಗಳಲ್ಲಿ ಆಗಾಗ ಉದಾಹರಿಸಲ್ಪಡುವ ಸ್ತೋತ್ರಗಳೂ, ತಮಿಳುನಾಡಿನ ಆಳ್ವಾರರ ಪದ್ಯಗಳೂ, ಹರಿದಾಸರ ಪದಗಳೂ, ಸಂತರ ಭಜನೆಗಳೂ, ವಾಗ್ಗೇಯಕಾರರ ಕೀರ್ತನೆಗಳೂ ಆಗ ನಮಗೆ ಅರ್ಥವಾಗಲಾರಂಭಿಸುತ್ತವೆ. ಇವೆಲ್ಲವೂ ನಮ್ಮನ್ನು ಬೇರೆಯೇ ಲೋಕಕ್ಕೆ ಕರೆದೊಯ್ಯುತ್ತವೆ. ಏಕೆಂದರೆ, ಈ ಭಕ್ತರು ತಾವು ಆನುಭವಿಸಿದ್ದನ್ನೇ ನಮಗೆ ಉಣಬಡಿಸಿದ್ದಾರೆ. "ಪೋಗದಿರೆಲೋ ರಂಗಾ! ಬಾಗಿಲಿಂದಾಚೆ! " ಎಂದ ದಾಸರಿಗೆ ಕೃಷ್ಣ ಹೊಸಿಲು ದಾಟುತ್ತಿರುವುದು ಕಣ್ಣಿಗೆ  ಕಂಡಿರಬೇಕು. 

'ರಾ ರಾಮ! ಮಾ ಇಂಟಿದಾಕ! " ಎಂದ ತ್ಯಾಗರಾಜರಿಗೆ ರಾಮಚಂದ್ರ ತನ್ನ ಮನೆಯ ಬೀದಿಗೆ ಬಂದದ್ದು ಕಂಡಿರಬೇಕು. " ಎಚ್ಚರಿಕದಾ ರಾರ ಶ್ರೀ ರಾಮಚಂದ್ರ ! ಎಂದ ತ್ಯಾಗರಾಜರಿಗೆ, ತನ್ನ ಮನೆಯ ತಗ್ಗು ಛಾವಣಿ ಶ್ರೀ ರಾಮಚಂದ್ರನ ತಲೆಗೆ ತಗುಲುವಂತೆ ಭಾಸವಾಯಿತಂತೆ!  ಹೀಗೇ ಬಹಳಷ್ಟು ಅನುಭವಗಳು ಈ ಅಪೂರ್ವ  ಭಕ್ತರಿಗೆ ಉಂಟಾದವು. 

 ಇನ್ನು ಆಳ್ವಾರುಗಳೋ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅಂತರ್ಯಾಮಿಯಾಗಿ ತನ್ನಲ್ಲಿ ಬಂದು ನಿಂತ ಪರಮಾತ್ಮನ ಸಾಂನ್ನಿಧ್ಯವನ್ನೇ ಹಿತವಾಗಿ ಅನುಭವಿಸುತ್ತಾರೆ. ಎಂಥಾ ಯೋಗಿಗಳು? 


ವಿಷ್ಣುಚಿತ್ತರು ಪೆರಿಯಾಳ್ವಾರರೆಂದೂ ವಿಖ್ಯಾತರಾದವರು. ಆಂಡಾಳ್ಗೆ 

( ಗೋದಾದೇವಿಗೆ) ತಂದೆಯಾದವರು. 


ಅವರು, " ನಿನ್ನನ್ನು ತಂದು ನನ್ನ ಹೃದಯಕಮಲದಲ್ಲಿಟ್ಟೆ! ನನ್ನನ್ನೂ ನಿನ್ನೊಳಗೆ ಇಟ್ಟೆ. ನನ್ನ ಅಪ್ಪಾ, ನನ್ನ ಇಂದ್ರಿಯಗಳನ್ನೆಲ್ಲಾ ನಿನ್ನ  ವಶದಲ್ಲಿಟ್ಟಿರುವ ಹೃಷೀಕೇಶನೇ! ನನ್ನ ಉಸಿರನ್ನು ಕಾಪಾಡುವವನೂ ನೀನಲ್ಲವೇ?" ಎನ್ನುತ್ತಾರೆ. ಎಂಥಾ ಅನುಭವ ! ಅಂತರ್ಯಾಮಿಯಾಗಿ ಭಗವಂತನನ್ನು ಅನುಭವಿಸುವುದು ಸುಲಭದ ವಿಷಯವೇ? 


ಮೊದಲ ಮೂರು ಆಳ್ವಾರುಗಳೋ? ಭಗವಂತನ ಸೃಷ್ಟಿಯಿಂದಲೇ ಅವನಿಗೆ ಆರತಿ ಎತ್ತಿದವರು ಪೊಯ್ಗೈ ಆಳ್ವಾರರು. ಇಡೀ ಭೂಮಂಡಲವನ್ನೇ ಹಣತೆಯನ್ನಾಗಿಸಿ, ಸಮುದ್ರವನ್ನಾಗಿ ಭಾವಿಸಿ, ದೀಪ ಹಚ್ಚಿ ಸೂರ್ಯನೆಂಬ ಜ್ಯೋತಿಯಿಂದ ಭಗವಂತನಿಗೆ ಆರತಿ ಬೆಳಗಿದರು. 


ಪೇಯಾಳ್ವಾರರು ಭಗವಂತನಲ್ಲಿ ತನಗಿರುವ ಪ್ರೇಮವನ್ನೇ ಹಣತೆಯಾಗಿಸಿ, ಅವನನ್ನು ಕಾಣುವ ಹಂಬಲವನ್ನೇ ತುಪ್ಪವಾಗಿಸಿ, ಸಂಸಾರದ  ಸುಖ, ದುಃಖಗಳನ್ನೇ ಬತ್ತಿಯನ್ನಾಗಿಸಿ ದೀಪ ಬೆಳಗಿದರು.  ಅದರಿಂದಲೇ ಆರತಿ ಎತ್ತಿ ಭಗವಂತನಿಗೆ ಕೈ ಮುಗಿದರು. 


ನಮ್ಮಾಳ್ವಾರರಂತೂ, ಉಣ್ಣುವ ಅನ್ನ, ಕುಡಿಯುವ ನೀರು, ಮೆಲ್ಲುವ ವೀಳ್ಯದೆಲೆ ಎಲ್ಲದರಲ್ಲೂ ಕೃಷ್ಣನನ್ನೇ ಕಂಡು " ಎಲ್ಲಾಂ ಕಣ್ಣನ್."  ಎಂದರು. 

ಮಿಕ್ಕ ಎಲ್ಲಾ ಆಳ್ವಾರರೂ ಹೀಗೇ ಅವರವರ ರೀತಿಯಲ್ಲಿ ಅನುಭವಿಸಿದ್ದಾರೆ. ( ಕ್ಷಮಿಸಿ. ಹೇಳುತ್ತ ಹೋದರೆ ಬಹಳ ಉದ್ದವಾಗುತ್ತದೆ.)


ಪಂಢರಪುರದ ವಿಠಲನ ಮಹಿಮೆಯೇನು ಕಡಿಮೆಯೇ? ಪುಂಡಲೀಕ ಭಕ್ತನ ವಶನಾಗಿ ಅವನೆಸೆದ ಇಟ್ಟಿಗೆಯ ಮೇಲೆ ನಿಂತವನಲ್ಲವೇ ಆವನು? 


ಪ್ರವಚನಗಳಲ್ಲಿ

ಇಂಥಾ ಅಪರೂಪದ ಅನುಭವಗಳನ್ನು  ಕೇಳಿ ಕೇಳಿ ಮನಸ್ಸು ಭಗವಂತನ ಗುಣಗಳನ್ನು ಅರಿಯಲಾರಂಭಿಸುತ್ತದೆ. ಅವನ ಕಥೆ ಕಿವಿಗೆ ರುಚಿಸಲಾರಂಭಿಸುತ್ತದೆ.  ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ. ಹೃದಯಕ್ಕೆ ತಂಪಾಗುತ್ತದೆ.  ಭಗವಂತನ ಲೀಲೆಗಳನ್ನು ವಿಸ್ತಾರವಾಗಿ ಕೇಳಿದಾಗ ಅವನಲ್ಲಿ ಪ್ರೀತಿ  ಹೆಚ್ಚಾಗಿ ಉಕ್ಕಲಾರಂಭಿಸುತ್ತದೆ. ವಾಮನ, ತ್ರಿವಿಕ್ರಮ, ನಾರಸಿಂಹ, ರಾಮ, ಕೃಷ್ಣ   ಈ ಅವತಾರಗಳ ವೈಭವವನ್ನು ಕೇಳಿ  ಆನಂದಿಸುವಾಗ, ನಾವು ಆ ಕಾಲದಲ್ಲಿರಬಾರದಿತ್ತೇ,  ಸುಂದರವಾದ ಶ್ರೀರಾಮನ ರೂಪವನ್ನು ನೋಡಿದ್ದರೆ? ಕೃಷ್ಣನನ್ನು ಒಮ್ಮೆಯಾದರೂ ಮುದ್ದಿಸಿದ್ದರೆ? .... ಎಂದೆಲ್ಲಾ ಭಾವನೆಗಳು ಬಾರದೇ ಇರಲಾರವು. ಅದೇ ಭಾವನೆಗಳನ್ನು ಮನದಲ್ಲಿ ತುಂಬಿಕೊಂಡು ಶ್ರೀರಾಮನ, ಶ್ರೀಕೃಷ್ಣನ ದೇವಾಲಯಕ್ಕೆ ಹೋದರೆ, ಭಗವಂತನ ದರ್ಶನದಿಂದ ಆಗುವ ಅನುಭವದ ಪರಾಕಾಷ್ಠೆಯನ್ನು ಬಾಯಿಂದ ವರ್ಣಿಸಲಾಗದು. ಇದೇ ಸತ್ಸಂಗದ, ಭಾಗವತ ಸಂಗದಿಂದ ಸಿಗುವ ಲಾಭ. ಇದನ್ನೇ ಅಲ್ಲವೇ ಕೃಷ್ಣ ಗೀತೆಯಲ್ಲೂ ಹೇಳಿರುವುದು? "

*"ಮಚ್ಚಿತ್ತಾ: ಮದ್ಗತ ಪ್ರಾಣಾ: ಬೋಧಯಂತಃ ಪರಸ್ಪರಂ.*

*ಕಥಯಂತಶ್ಚ ಮಾಂ ನಿತ್ಯಂ ತುಷ್ಯಂತಿ ಚ ರಮಂತಿ ಚ."* (10.9)


*ನನ್ನಲ್ಲೇ ಮನಸ್ಸನ್ನೂ ಪ್ರಾಣವನ್ನೂ ನೆಟ್ಟಿರುವ ಭಕ್ತರು ದಿನವೂ ನನ್ನ ಕಥೆಗಳನ್ನೇ, ಲೀಲೆಗಳನ್ನೇ ಮತ್ತೆ ಮತ್ತೆ ಕೇಳಿ ಆನಂದಿಸಿ ಪರಸ್ಪರರಿಗೆ ಸಂತೋಷವುಂಟು ಮಾಡುತ್ತಾರೆ.*

ಇದು ಜ್ಞಾನೀ ಭಕ್ತರ ಲಕ್ಷಣ. ಇಂಥಾ ಭಕ್ತರು ಕೃಷ್ಣನಿಗೆ ಬಹಳ ಪ್ರೀತಿಪಾತ್ರರಂತೆ. 


ಅವನೇ ಗೀತೆಯಲ್ಲಿ ಹೇಳಿರುವಂತೆ, ಜ್ಞಾನೀ ಭಕ್ತನೇ ಅವನಿಗೆ ಬಹಳ ಪ್ರೀತಿಪಾತ್ರನಂತೆ. ಅವನೇ ಕೃಷ್ಣನ ಆತ್ಮವಂತೆ! ಎಲ್ಲರ ಆತ್ಮನಾದ ಪರಮಪುರುಷನಿಗೆ ಜ್ಞಾನೀಭಕ್ತನು ಆತ್ಮನಂತೆ. ಎಂಥಾ ಸೌಲಭ್ಯ? ( 7- 16,17,18. ಜ್ಞಾನೀ ತು ಆತ್ಮೈವ ಮೇ ಮತಂ...)


  ಏನೂ ಅರಿಯದ, ಆದರೆ, ಶ್ರದ್ಧಾ ಭಕ್ತಿಗಳಿರುವ ಭಕ್ತನಿಗೆ ಭಗವಂತ ಒಲಿಯುತ್ತಾನಾದರೂ, ಅವನ ಮಹಿಮೆಯನ್ನು ಅರಿತು ಪೂಜಿಸುವ ಭಕ್ತರು ಅವನಿಗೆ ಹೆಚ್ಚು ಪ್ರಿಯರಾಗುತ್ತಾರೆ. 


ಬಂಧುಗಳೇ, ನಾವೂ ಪ್ರವಚನ, ಪಾರಾಯಣಗಳಿಂದ,ಸ್ತೋತ್ರಗಳಿಂದ ಭಗವಂತನನ್ನು ಅರಿತು ಅವನಿಗೆ ಪ್ರಿಯರಾಗೋಣ! ಅವನೆಡೆಗೆ ಸಾಗೋಣ!


ನಿರ್ಮಲಾ ಶರ್ಮ.

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...