Saturday 12 December 2020

ಶ್ರೀ ಸೀತಾರಾಮಚಂದ್ರ ಪರಬ್ರಹ್ಮಣೇ ನಮಃ.

*ತೋಳ್ ಕಂಡಾರ್ ತೋಳೇ ಕಂಡಾರ್,*

*ತೊಡು ಕழರ್ ಕಮಲಂ ಅನ್ನ ತಾಳ್ ಕಂಡಾರ್*

*ತಾಳೇ ಕಂಡಾರ್,*

*ಆರೇ ವಡಿವಿನೈ ಮುಡಿಯ ಕಂಡಾರ್,*

*ಊழ்ಕಂಡ ಶಮಯತ್ತು*

*ಅನ್ನಾನ್ ಉರುವು ಕಂಡಾರೈ ಒತ್ತಾರ್.*


ಇದು ತಮಿಳು ಮಹಾಕವಿ ಕಂಬನ್ ತಮ್ಮ ರಾಮಾಯಣದಲ್ಲಿ ಶ್ರೀ ರಾಮಚಂದ್ರನ ಸೌಂದರ್ಯವನ್ನು ವರ್ಣಿಸಿರುವ ಒಂದು ಪದ್ಯ. 


ಮಿಥಿಲಾಪಟ್ಟಣದಲ್ಲಿ ವಿಶ್ವಾಮಿತ್ರರ ಹಿಂದೆ ರಾಮ ಲಕ್ಷ್ಮಣರು ನಡೆದು ಹೋಗುತ್ತಿದ್ದ ಸಂದರ್ಭ. ಈ ಮೂವರೇ ನಡೆದು ಹೋಗುತ್ತಿದ್ದರೂ ದೊಡ್ಡ ಮೆರವಣಿಗೆ ಹೋದರೆ ಬೆರಗಾಗಿ ನೋಡಲು ಸೇರುವ ಜನಸಂದಣಿಯಂತೆ ಜನ ಸೇರಿದ್ದರಂತೆ. ಅದರಲ್ಲೂ ಹೆಚ್ಚುಜನ ಸ್ತ್ರೀಯರೇ. ಅದಕ್ಕೆ ಕಾರಣ ರಾಮಲಕ್ಷ್ಮಣರ ರೂಪ, ನಡಿಗೆಯ ಸೊಬಗು. ಲಕ್ಷ್ಮಣ ಶುದ್ಧ ಗೌರವರ್ಣದ ಸುಂದರ. ರಾಮನದು ಅಪರೂಪದ ಶ್ಯಾಮವರ್ಣ. ಈ ಅಪೂರ್ವ ರೂಪ ಲಾವಣ್ಯವನ್ನು, ಸೌಂದರ್ಯವನ್ನು ನೋಡಿ ಸವಿಯಲೆಂದೇ ಹೆಂಗಸರು ಸೇರಿದ್ದರು. 


ಅವರಲ್ಲಿ ಒಬ್ಬಳು ಶ್ರೀರಾಮಚಂದ್ರನ  ದೃಢವಾದ  ದುಂಡು ತೋಳುಗಳನ್ನು ನೋಡಿದಳು. ಅವುಗಳ ಚೆಲುವನ್ನೇ ತನ್ನ ಕಂಗಳಿಂದ ಹೀರುತ್ತಾ ಮೈಮರೆತಳು. ತನ್ನ ದೃಷ್ಟಿಯಿಂದ ರಾಮಚಂದ್ರ ಮರೆಯಾಗುವವರೆಗೂ ಅವಳು ಆ ತೋಳುಗಳನ್ನೇ ನೋಡುತ್ತಿದ್ದಳೇ ವಿನಃ ರಾಮಚಂದ್ರನನ್ನು ಪೂರ್ತಿಯಾಗಿ ಅವಳು ನೋಡಲೇ ಇಲ್ಲ. ಅದನ್ನೇ ಕಂಬಮಹಾಕವಿ *ತೋಳ್ ಕಂಡಾರ್ ತೋಳೇ ಕಂಡಾರ್* ಎಂದು ವರ್ಣಿಸಿರುವುದು.   


ಅವಳಂತೆಯೇ ಇನ್ನೊಬ್ಬಳು ತಾವರೆ ಹೂವಿನಂತಿದ್ದ ರಾಮನ ಪಾದಗಳನ್ನು ನೋಡಿ ಆ ಪಾದಕಮಲಗಳಲ್ಲೇ ಕಣ್ಣನ್ನೂ ಮನವನ್ನೂ ನೆಟ್ಟಳು. ಅಷ್ಟು ಚಂದ ಆ ಪಾದಗಳು! ಇನ್ನೂ ಒಬ್ಬಳು ರಾಮನ ಅಗಲವಾದ ಹಸ್ತಗಳನ್ನೂ ನೀಳಬೆರಳುಗಳನ್ನೂ ನೋಡುತ್ತಾ ಅವುಗಳ ಸೌಂದರ್ಯದಲ್ಲೇ ಮಗ್ನಳಾಗಿ ಹೋದಳು. 

ಹೀಗೆ ಒಬ್ಬೊಬ್ಬರೂ ರಾಮಚಂದ್ರನ ಒಂದೊಂದೇ ಅವಯವಗಳ ಸೊಬಗನ್ನು ಕಂಡು ಅನುಭವಿಸಿದರೂ, ತಾವು ಅವನ ಪರಿಪೂರ್ಣ ಸೌಂದರ್ಯವನ್ನು ಅನುಭವಿಸಿದಂತೆಯೇ ಅವರವರಲ್ಲಿ  ವರ್ಣಿಸತೊಡಗಿದರಂತೆ.  


ತೋಳನ್ನೇ ಕಂಡವಳು ರಾಮನ ಪಾದಗಳನ್ನು ಕಾಣಲಿಲ್ಲ!

ಪಾದಗಳನ್ನು ನೋಡಿದವಳು ರಾಮನ ತೋಳುಗಳನ್ನು ನೋಡಲಿಲ್ಲ. ಅವನ ಸುಂದರ ಮುಂಗೈಯನ್ನು ನೋಡಿದವಳು ತೋಳುಗಳನ್ನೂ, ಪಾದಗಳನ್ನೂ ಕಾಣಲಿಲ್ಲ. ಆದರೆ ಅವರು ನೋಡಿದ ಒಂದೊಂದೇ ಅಂಗಗಳ ಸೌಂದರ್ಯ ಆಸ್ವಾದನೆಯಲ್ಲೇ ಅವರು ಮೈಮರೆತರಂತೆ. ಭಗವಂತನ ಮುಡಿಯ ಚೆಲುವನ್ನು ಯಾರೂ ಕಾಣಲಿಲ್ಲವಲ್ಲ! ತೊಡೆಯ ಚೆಲುವನ್ನೂ ಕಾಣಲಿಲ್ಲ.  ಅಯ್ಯೋ! ಇವರಾರೂ ರಾಮನನ್ನು ಪೂರ್ಣವಾಗಿ ನೋಡಿ ಅನುಭವಿಸಲಿಲ್ಲವಲ್ಲಾ ಎಂದು ಕಂಬರು ಆಳುತ್ತಾರೆ. 


ಈ ಹೆಂಗಸರು ಹೀಗೆ ಮೈಮರೆಯಲೂ ಒಂದು ಕಾರಣವಿದೆಯಂತೆ. 

ರಾಮನ ತೋಳುಗಳನ್ನು ನೋಡಿದವಳು, " ಓ! ಇದೇ ತೋಳಲ್ಲವೇ ಶಿವಧನುಸ್ಸನ್ನು ಮುರಿದದ್ದು?" ಎನ್ನುತ್ತಾ  ಆ ಶಿವಧನುರ್ಭಂಗದ ಘಟನೆಯನ್ನೇ ನೆನೆದುಕೊಂಡಳಂತೆ. 


ಪಾದಗಳನ್ನು ನೋಡಿ ಆನಂದಿಸಿದವಳು "ಅಬ್ಬಾ! ಇದೇ ಪಾದಗಳಲ್ಲವೇ ಕಲ್ಲಾಗಿದ್ದ ಅಹಲ್ಯೆಯ ಶಾಪ ವಿಮೋಚನೆ ಮಾಡಿದ್ದು? " ಎಂದು ತಾನೇ ಅಹಲ್ಯೆ ಎನ್ನುವಂತೆ ಮೈಮರೆತಳಂತೆ!


ಅವನ ಮುಂಗೈ ಬೆರಳುಗಳ ಚೆಲುವನ್ನು ಕಂಡವಳು, " ಇದೇ ಕೈಗಳಿಂದಲ್ಲವೇ  ತಾಟಕೆಯನ್ನು ರಾಮ ವಧಿಸಿದ್ದು ? " ಎಂದು ತನ್ನ ಗೆಳತಿಯೊಡನೆ ಹೇಳಿದಳಂತೆ. ಹೀಗೇ ಮಾತಾಡುತ್ತಾ ಅವರೆಲ್ಲ ಗದ್ಗದಿತರಾದರಂತೆ. ತಾವು ರಾಮಚಂದ್ರನನ್ನು ಪೂರ್ತಿಯಾಗಿ ನೋಡಲಿಲ್ಲವಲ್ಲಾ ಎಂದು ಅವರಿಗೆ ತೋಚಲೇ ಇಲ್ಲವಂತೆ. 


ಅಷ್ಟು ಸುಂದರ ಶ್ರೀ ರಾಮಚಂದ್ರ. ರಾಮಾವತಾರದುದ್ದಕ್ಕೂ

ಅವನ ಸೌಂದರ್ಯವನ್ನು ಆಸ್ವಾದಿಸಿದವರು ಎಷ್ಟೋ ಜನ. ಮಲಗಿದ್ದ ಬಾಲರಾಮನನ್ನು ಕಂಡ ವಿಶ್ವಾಮಿತ್ರರು  ಕೌಸಲ್ಯೆಯ ಭಾಗ್ಯವನ್ನು ಕಂಡು ಕರುಬಿ, ಕೌಸಲ್ಯಾ ಸುಪ್ರಜಾ ರಾಮ ಎಂದು ಹಾಡಿದರು. ಶಾಂತನಾಗಿ ಕಣ್ಣು ಮುಚ್ಚಿ ಮಲಗಿದ್ದ ಬಾಲಕ ರಾಮಚಂದ್ರ ಎಷ್ಟು  ಮುದ್ದಾಗಿರಬಹುದು? 


ಮಿಥಿಲೆಯ ಜನರಂತೂ ರಾಮನನ್ನು ಕಂಡು ಹಿಗ್ಗಿ,  ತಮ್ಮೂರಿನ ಸುಂದರಿ ಸೀತೆಗೆ  ಅಳಿಯ ರಾಮ ಹೇಳಿ ಮಾಡಿಸಿದಂಥ ಜೋಡಿ ಎಂದೇ ಸಂತೋಷಪಟ್ಟರಂತೆ. 


ಮುಂದೆ ಚಿತ್ರಕೂಟದಲ್ಲಿ ಕುಳಿತ ರಾಮಚಂದ್ರನನ್ನು ಕಂಡು ಭರತ ನಿಧಿಯನ್ನು ಕಂಡವನಂತೆ ಆ ಕುಳಿತ ಭಂಗಿಗೇ ಮನಸೋತನಂತೆ. 

ಶೂರ್ಪಣಖೆಯೋ! ಪಂಚವಟಿಯಲ್ಲಿ ಸೀತಾ ಲಕ್ಷ್ಮಣರೊಡನೆ ವಿನೋದವಾಗಿ ಹರಟುತ್ತಿದ್ದ ರಾಮಚಂದ್ರನನ್ನು ಕಂಡು ಮೋಹಗೊಂಡಳು. 

ಕಿಷ್ಕಿಂಧೆಯಲ್ಲಿ ವಾಲಿವಧೆಯ ನಂತರ ಅವನ ಪತ್ನಿ  ತಾರೆಗೆ, ತನ್ನ ಬಿಲ್ಲಿನ ಒಂದು ತುದಿಯನ್ನು ನೆಲದಲ್ಲಿ ಊರಿ  ಇನ್ನೊಂದು ತುದಿಗೆ ಗಲ್ಲವಾನಿಸಿ ನಿಂತ ರಾಮಚಂದ್ರ ಮೋಹಕವಾಗಿ ಕಂಡ. 

ಅದೇ ರಾಮನೇ ಮಂಡೋದರಿಗೆ ಶಂಖಚಕ್ರಧಾರಿಯಾಗಿ ದರ್ಶನ ಕೊಟ್ಟ. 


ಹೀಗೆ ರಾಮಾಯಣದುದ್ದಕ್ಕೂ ಶ್ರೀರಾಮನ ವರ್ಣನೆಯನ್ನು ಕಾಣುವ ನಮಗೆ ಅಯ್ಯೋ! ನಾವು ರಾಮನನ್ನು ಕಾಣಲಿಲ್ಲವಲ್ಲ! ಎಂದು ಅನ್ನಿಸದೇ ಇರದು. 

ಇಂದಿಗೂ ಅರ್ಚಾಮೂರ್ತಿಯಾಗಿ ಪೂಜೆಗೊಳ್ಳುತ್ತಿರುವ ಕೋದಂಡ ರಾಮ ಅಥವಾ ಪಟ್ಟಾಭಿರಾಮ, ಅಷ್ಟೇಕೆ,  ವನವಾಸಿರೂಪದ  ರಾಮನ ಸೌಂದರ್ಯ ಕೂಡ ಇತರ ಎಲ್ಲಾ ವಿಗ್ರಹರೂಪೀ ದೇವರುಗಳಿಗಿಂತ ಒಂದು ಕೈ ಹೆಚ್ಚೇ ಎಂದು ಹೇಳಬಹುದು. 

ತಮಿಳಿನಲ್ಲಿ ಕಂಬ ಮಹಾಕವಿಯ ಈ ತೋಳ್ ಕಂಡಾರ್ ತೋಳೇ ಕಂಡಾರ್ ಎಂಬುದು ಒಂದು ನಾಣ್ಣುಡಿಯಂತೆಯೇ ಆಗಿಹೋಗಿದೆ. 


ಭಗವಂತನ ಸೌಂದರ್ಯವನ್ನು ಪರಿಪೂರ್ಣವಾಗಿ  ಅನುಭವಿಸಲು ನಮ್ಮಂಥ ಪಾಮರರಿಂದ ಸಾಧ್ಯವೇ ಇಲ್ಲ. 

ಒಂದೇ ಒಂದು ಬಾರಿ ಶ್ರೀರಂಗನಾಥನ  ದರ್ಶನ ಮಾಡಿದ  ಕೂಡಲೇ, ಅಡಿಯಿಂದ ಮುಡಿಯವರೆಗೆ ಅವನ ಸೌಂದರ್ಯವನ್ನು ಅನುಭವಿಸಿದ ತಿರುಪ್ಪಾಣಾಳ್ವಾರರು ಇವನೇ ರಾಮ, ಇವನೇ ಕೃಷ್ಣ ಎಂದು ಕಂಡುಕೊಂಡರು. *ಆಪಾದ ಚೂಡಮನುಭೂಯ ಹರಿ ಶಯಾನಂ* ಎಂದು ಅನುಭವಿಸಿ ಹಾಡಿದವರು, ಅವನನ್ನು ಕಂಡ ಕಂಗಳು ಮತ್ತೇನನ್ನೂ ಕಾಣಲಾರವು ಎಂದು ಹೇಳುತ್ತಾ ಅಲ್ಲೇ ಕುಸಿದು ರಂಗನಲ್ಲೇ ಐಕ್ಯರಾದರು. ಹಾಗಿದೆ ಭಗವಂತನ ಸೌಂದರ್ಯ!


🙏🙏🙏🙏🙏


ಉಪದೇಶ: 

ಶ್ರೀ ಕೆ.ಎಸ್. ನಾರಾಯಣಾಚಾರ್ಯರು.


No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...