Saturday 23 February 2019

ಹಾಡಿದ್ದ ಹಾಡೋ ಕಿಸಬಾಯಿ ದಾಸಾ

ಪ್ರಸಿದ್ಧ ಆಡುಮಾತು ಇದು.

ಹೇಳಿದ್ದನ್ನೇ ಪುನಃ ಪುನಃ ಹೇಳಿ bore ಹೊಡಿಸಿದರೆ ಈ ಗಾದೆ ಉಪಯೋಗಿಸುತ್ತೇವೆ ವ್ಯಂಗ್ಯಾರ್ಥದಲ್ಲಿ.

ಒಳಾರ್ಥ ಬಹಳುಂಟು ಇದಕೆ. 'ಕಿಸಬಾಯಿ' ಮತ್ತು 'ದಾಸ' ಪದಗಳನ್ನು

ಭಿನ್ನವಾಗಿ ನೋಡೋಣ.

ಕಿಸಬಾಯಿ ಎಂದರೇನು?

ಹಿಗ್ಗಿದ ಅಥವಾ ಅಗಲವಾದ ಬಾಯಿ ಉಳ್ಳವ ಕಿಸಬಾಯಿ. ಯಾರಿಗಿದೆ ಇಂಥ ಬಾಯಿ?

ನರಸಿಂಹದೇವರಿಗೆ.

ಹೀಗಾಗಿ ಕಿಸಬಾಯಿ ಎಂದರೆ ಅಗಲ ಬಾಯಿಯ ಒಡೆಯ ನರಸಿಂಹ.

ಅವನ ದಾಸ ಯಾರು?

ಬಾಲ ಪ್ರಲ್ಹಾದ.

ಅವನಿಗಾಗಿಯೇ ಅವತರಿಸಿದ್ದು

ನರಸಿಂಹ ದೇವರು.

ಹಾಗಾದರೆ

ಕಿಸಬಾಯಿ ದಾಸ ಎಂದರೆ

ನರಸಿಂಹ ದೇವರು ಹಾಗೂ ಭಕ್ತ ಪ್ರಲ್ಹಾದ.

ಅವರ ಹಾಡನ್ನು ಹಾಡು. ಅಂದರೆ

ನರಸಿಂಹ ಚರಿತ್ರೆ ಹೇಳು. ಪ್ರಲ್ಹಾದ ಚರಿತ್ರೆಯುಳ್ಳ ಭಾಗವತ ಹೇಳು.

ಮೇಲಿಂದ ಮೇಲೆ  ಹೇಳು.

ಮತ್ತೆ ಮತ್ತೆ ಕೇಳು.

ಎಂದೂ bore ಆಗುವದಲ್ಲ.

ಭಕ್ತಿ ಬೆಳೆಸುವದು.

ಮುಕ್ತಿ ಕೊಡಿಸುವದು.

ಭಾಗವತ ಕೇಳಿ ಸದ್ಗತಿ ಪಡೆಯಲಿಲ್ಲವೇ ಪರೀಕ್ಷಿತ ರಾಜ!

ಮತ್ತೆ

ಕಿಸಬಾಯಿ ಎಂದರೆ ನರಸಿಂಹ ಅರ್ಥಾತ್ ಪರಮಾತ್ಮ.

'ಅಖಿಲಾ ವೇದಾಃ ಉದ್ಗೀರ್ಯಂತೇ ಯತಃ' -

ಪರಮಾತ್ಮನ ಕಂಠದಿಂದ, ಬಾಯಿ ತುಂಬಾ ಸದಾ ವೇದಗಳು ನಿರಂತರ   ವಾಗಿ  ಹಾಡಲ್ಪಡುತ್ತಿರುತ್ತವೆ.

ಯಾರೂ ಹಾಡದ (ಅಪೌರಷೇಯ) ದೇವರು ಹಾಡಿದ್ದೇ ಹಾಡೋ,

ಮತ್ತೆ ಮತ್ತೆ ಹಾಡೋ ಈಶನ ದಾಸನೇ.

ವೇದಮಂತ್ರಗಳನ್ನು ಮತ್ತೆ ಮತ್ತೆ ಹೇಳು. ಶಾಸ್ತ್ರಗಳ ಪಾರಾಯಣ ಮಾಡು. ಪುಣ್ಯ ಗಳಿಸು.

ವೇದ ಹೇಳಿ ಹೇಳಿ ವೇದವೇದ್ಯನ.ಅನುಗ್ರಹ ಹೊಂದು.

ಮತ್ತೆ

ನಕ್ಕಾಗ ಬಾಯಿ ಅಗಲವಾಗುತ್ತೆ.

ಕಿಸಬಾಯಿಯಾಗುತ್ತೆ.

ಸದಾ ನಗು ಮೊಗದವರು

ಶ್ರೀ ರಾಮ,  ಮತ್ತು  ಶ್ರೀ ಕೃಷ್ಣ.

ರಾಮನ ಮುಗುಳುನಗೆ  ಜಗತ್

ಪ್ರಸಿದ್ಧ.

ಕಂಡವರೆಲ್ಲರ ಯೋಗಕ್ಷೇಮ ತಾನೇ ಮೊದಲಾಗಿ ಬಾಯಿತುಂಬ ವಿಚಾರಿಸುತ್ತಿದ್ದ ಶ್ರೀ ರಾಮ.

ಅದಕ್ಕಾಗಿ ಆತ ಕಿಸಬಾಯಿ ಈಶ.

ಆತನ ದಾಸ - ಮತ್ತಾರು?

ಹನುಮಂತ ದೇವರು.

ರಾಮನಲ್ಲಿ ಹನುಮನ ಭಕ್ತಿ, ಹನುಮನಲ್ಲಿ ರಾಮನ ಸಕ್ತಿ

ರಾಮ, ಹನುಮರ  ಶಕ್ತಿ-

ರಾಮಾಯಣ ಚರಿತೆ ಹಾಡೋ.

ಈ ಹಾಡಿದ್ದೇ ಹಾಡಿ, ಹನುಮನ ಹಾಡು ಹಾಡಿ

 ಶ್ರೀ ರಾಮನ ಅನುಗ್ರಹ ಪಡಿ.

ಪಡೆದು ವಾಲ್ಮೀಕಿ,  ಮಹರ್ಷಿಯಾದ.

ರಾಮ, ರಾಮ, ಶ್ರೀ ರಾಮ ಎಂದು ಹಾಡಿದ್ದೇ ಹಾಡಿದ ಆತ.

ಮತ್ತೆ ಹನುಮಂತ, ರಾಮನಾಮವೇ ಆತನ ಉಸಿರು. ರಾಮ, ರಾಮ

ಶ್ರೀ ರಾಮ. ಅಲ್ಲೂ ರಾಮ ಇಲ್ಲೂ ರಾಮ. ಎಲ್ಲೆಲ್ಲೂ ರಾಮ ರಾಮ.

ಹಾಡಿದ್ದೇ ರಾಮನಾಮ ಹಾಡಿದ. ರಾಮನೆದುರು ಸಕಲ ಶಾಸ್ತ್ರ ಪಾರಾಯಣ ಮಾಡಿದ.

ಹನುಮಂತ, ಏಕಾಂತ ಭಕ್ತನಾದ.  ರಾಮನ ಪೂರ್ಣ ಅನುಗ್ರಹ ಪಡೆದ.

ಆನಂದದ ನಗೆ ತುಂಬಿತು ಮುಖದ ತುಂಬ. ಬಾಯಿ ಅಗಲವಾಯಿತು.

ಕಿಸಬಾಯಿ ಈಶನ ಕಿಸಬಾಯಿ ದಾಸನಾದ. ವಿಶೇಷನಾದ.

ರಾಮ ಭಕ್ತ ಹನುಮಂತನೆಂದು ಲೋಕ ಪ್ರಸಿದ್ಧನಾದ.

ಮತ್ತೆ

ಶ್ರೀ ಕೃಷ್ಣ.

ಜಗದ ತುಂಬೆಲ್ಲ ಆತನ ತುಂಟನಗೆ, ಮೊಹಕನಗೆ ಮುಗುಳನಗೆ.

ಮತ್ತೆ ಪುಟ್ಟ ಕೃಷ್ಣನ ಬಾಯಿ ಎಷ್ಟು ಅಗಲ ಗೊತ್ತಾ?

ತಾಯಿ ಯಶೋಧೆಗೆ ತನ್ನ ಬಾಯಿಯಲ್ಲಿ   ಬ್ರಹ್ಮಾಂಡವನ್ನೇ ತೋರಿದನಲ್ಲ!.

ಅದಕ್ಕಾಗಿ ಆತ ದೊಡ್ಡ ಬಾಯಿಯ (ಕಿಸಬಾಯಿ) ಈಶ.

 ಅವನ ದಾಸರು ಭೀಮಸೇನ ಮತ್ತು ಎಲ್ಲ ಪಾಂಡವರು.

ದಾಸ ಪಾಂಡವರು ಈಶ ಕೃಷ್ಣನನ್ನು ಸದಾ ಹಾಡಿ ಸ್ತುತಿಸುತ್ತದ್ದರು.

ಕೃಷ್ಣನ ಹಾಡು   -   ಭಾಗವತ

ಪಾಂಡವರ ಹಾಡು - ಮಹಾಭಾರತ

ಭಾಗವತ, ಮಹಾಭಾರತ ಮತ್ತೆ ಮತ್ತೆ ಹಾಡು. ಹಾಡಿದ್ದೇ ಹಾಡು.

ನಿತ್ಯ ನೂತನ ಅವು. ಕೇಳಿದಷ್ಟು ಕೇಳಬೇಕು ಎಂದೆನಿಸುವವು.

ಪಾಪ ಕಳೆದು ಪುಣ್ಯ ತಂದು ಪುನೀತರನ್ನಾಗಿಸುವವು.

ಮತ್ತೆ

ಪರಮಾತ್ಮ ಶ್ರೀ ವಿಷ್ಣು.

ಎಷ್ಟು ದೊಡ್ಡದು ಆತನ ಬಾಯಿ!  ಪ್ರಳಯದಲ್ಲಿ ಇಡೀ ಬ್ರಹ್ಮಾಂಡವನ್ನೇ

ನುಂಗಿ ಹೊಟ್ಟೆಯೊಳಿಟ್ಟು

ಕೊಳ್ಳುತ್ತಾನಲ್ಲ! ಆತನಷ್ಟು ಅಗಲಬಾಯಿ(ಕಿಸಬಾಯಿ) ಮತ್ತೊಬ್ಬನಿಗಿಲ್ಲ.

ನಾವು ಆತನ ದಾಸರು. ಆತ ಈಶ.

ಈಶನ ಮಹಿಮೆ ಹಾಡಿ.

ಹಾಡಿದ್ದೇ ಮತ್ತೆ ಮತ್ತೆ ಹಾಡಿ.

ವೈಕುಂಠ ನೆರೆಮನೆಯಾಗುವದು ಎನ್ನುತ್ತಾರೆ ಜ್ಞಾನಿಗಳು.

ಇನ್ನು 'ಕಿಸಬಾಯಿ: ಶಬ್ದವನ್ನು 'ದಾಸ' ಶಬ್ದದೊಂದಿಗೆ ಹಚ್ಚೋಣ.

ಕಿಸಬಾಯಿ ಮಾಡಿ ಹಾಡಿದ್ದೇ ಹಾಡೋ.

ಬಾಯಿ ದೊಡ್ಡದು ಮಾಡಿ,

ಬಾಯಿ ತುಂಬಾ ಹರಿ ಮಹಾತ್ಮೆ ಹಾಡು. ಹಾಡಿದ್ದೇ ಹಾಡು ಹರಿದಾಸ.

ಹಾಡಿದ್ದೇ ಮತ್ತೆ ಮತ್ತೆ ಯಾಕೆ ಹಾಡ ಬೇಕು?

ಒಮ್ಮೆ  ಮನವ ತುಂಬಿ ಹಾಡು.

ಇನ್ನೊಮ್ಮೆ  ಮೈ ಮರೆತು ಹಾಡು.

 ಮತ್ತೊಮ್ಮೆ ಹೃದಯದಾಳದಿ ಹಾಡು.

ಮರಳಿ ಯುಕ್ತಿ ತಿಳಿದು ಹಾಡು.

ಮತ್ತೆ  ಭಕ್ತಿ ತುಂಬಿ ತುಂಬಿ ಹಾಡು.

ಹಾಗೇ ಸಂಸಾರ ಮರೆತು ಹರಿಯ ಬೆರೆತು ಹಾಡು.

. ಕಿಸಬಾಯಿಯ ಬಗ್ಗೆ - ದೇವರ ಬಗ್ಗೆ

ಕಿಸಬಾಯಿಯಾಗಿ - ದಾಸನಾಗಿ

ಹಾಡಿದ್ದೇ ಹಾಡು

ಹರಿ ಅನುಗ್ರಹ ಕಟ್ಟಿಟ್ಟ ಬುತ್ತಿ.

ಹರಿ ಕರೆದು ಕೊಡುವ ಸೌಭಾಗ್ಯವ.

          ಹೀಗಿದೆ - 'ಹಾಡಿದ್ದೇ ಹಾಡೋ ಕಿಸಬಾಯಿ ದಾಸಾ' ಮಾತಿನ ಮರ್ಮ.

   ಶ್ರೀ ಕೃಷ್ಣಾರ್ಪಣಮಸ್ತು

      💐💐💐💐💐

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...