Friday, 29 May 2020

🌺🌺ಪ್ರಶ್ನೋಪನಿಷತ್🌺🌺

‘ಭದ್ರಂ ಕರ್ಣೇಭಿಃ ಶೃಣು ಯಾಮ ದೇವಾಃ’ ಎಂಬುದು ಇದರ ಶಾಂತಿಮಂತ್ರ. ಪ್ರಶ್ನೆಗಳಿಂದ ಕೂಡಿದ ಇದು ಅಥರ್ವವೇದಕ್ಕೆ ಸೇರಿದ್ದು. ಗದ್ಯಮಯವಾಗಿದ್ದು, ಆರು ಮಂದಿ ಬ್ರಹ್ಮಾನ್ವೇಷಕರು ಭಗವಂತನಾದ ಪಿಪ್ಪಲಾದ ಮಹರ್ಷಿಯೊಡನೆ ಮಾಡಿದ ಸಂವಾದ ರೂಪದ ಆರು ಪ್ರಶ್ನೆಗಳನ್ನೊಳಗೊಂಡಿದೆ. ಲೋಕದಲ್ಲಿ ಪ್ರಜೆಗಳು ಹೇಗೆ ಎಲ್ಲಿಂದ ಜನಿಸುತ್ತಾರೆ ? ಎಂಬುದು ಕಬಂಧಿ ಕಾತ್ಯಾಯನ ಮೊದಲು ಕೇಳಿದ ಪ್ರಶ್ನೆ. ಪ್ರಜಾಪತಿಯ ತಪಸ್ಸಿನ ಫಲವಾಗಿ ಆದಿತ್ಯನೂ (ಪ್ರಾಣ) ಚಂದ್ರಮನೂ (ರಯಿ) ಸೃಷ್ಟಿಯಾಗಿ ಅವರಿಂದ ಪ್ರಜಾಸೃಷ್ಟಿಯಾಯಿತು ಎಂಬುದು ಅದಕ್ಕೆ ಉತ್ತರ. ದೇವತೆಗಳೆಷ್ಟು ಮಂದಿ ಪ್ರಜೆಗಳಿಗೆ ಆಧಾರಭೂತರು ? ಅವರಲ್ಲಿ ವರಿಷ್ಠರು ಯಾರು ? ಎಂಬುದು ಭಾರ್ಗವ ವೈದರ್ಭಿ ಕೇಳಿದ ಎರಡನೆಯ ಪ್ರಶ್ನೆ. ಆಕಾಶ, ವಾಯು, ಅಗ್ನಿ, ಆಪಃ, ಪೃಥಿವೀ, ವಾಕ್, ಮನಸ್ಸು, ಚಕ್ಷುಸ್ಸು, ಶ್ರೋತ್ರ ಇವರು ದೇವತೆಗಳು; ಇವರಲ್ಲಿ ವರಿಷ್ಠ ಪ್ರಾಣ, ಇದು ಉತ್ತರ. ಕೊನೆಯಲ್ಲಿ ಪ್ರಾಣಸ್ವರೂಪಿಯಾದ ಪರಬ್ರಹ್ಮನ ಸ್ತುತಿ ಇದೆ. ಮೂರನೆಯ ಪ್ರಶ್ನೆ ಈ ಪ್ರಾಣ ಎಲ್ಲಿಂದ ಹುಟ್ಟಿ ಈ ಶರೀರಕ್ಕೆ ಹೇಗೆ ಬಂದು ವಿಭಾಗ ಮಾಡಿಕೊಂಡು ಪ್ರತಿಷ್ಠಿತವಾಗುತ್ತದೆ ? ಎಂಬುದು ಅಶ್ವಲಾಯನ ಕೇಳಿದುದು. ಇದಕ್ಕೆ ಉತ್ತರ: ಪುರುಷನನ್ನು ನೆರಳು ಹಿಂಬಾಲಿಸುವಂತೆ, ಈ ಶರೀರದಲ್ಲಿ ಆತ್ಮನಿಂದ ಕರ್ಮನಿಮಿತ್ತವಾಗಿ ಪ್ರಾಣ ಜನಿಸುತ್ತದೆ. ಸಾಮ್ರಾಟನಾದವ ಬೇರೆ ಬೇರೆ ಗ್ರಾಮಗಳಲ್ಲಿ ಅಧಿಕಾರಿಗಳನ್ನು ನಿಯೋಜಿಸುವಂತೆ ಇದು ಇತರ ಪ್ರಾಣಗಳನ್ನು ನಿಯೋಜಿಸುತ್ತದೆ. ಪುಣ್ಯಾಧಿಕ್ಯವಾದರೆ ದೇವಲೋಕಕ್ಕೂ ಪಾಪಾಧಿಕ್ಯವಾದರೆ ನರಕಕ್ಕೂ ಮೇಲ್ಮುಖವಾದ ನಾಡಿಯಿಂದ ಇದು ಉತ್ಕ್ರಮಿಸುತ್ತದೆ. ನಾಲ್ಕನೆಯ ಪ್ರಶ್ನೆ ಸೌರ್ಯಾಯಣಿ ಗಾಗರ್ಯ್‌ರದು: ಈ ಪುರುಷನಲ್ಲಿ ನಿದ್ರಿಸುವವರು ಯಾರು ? ಜಾಗೃತರಾಗಿರುವವರು ಯಾರು ? ಸ್ವಪ್ನಗಳನ್ನು ಕಾಣುವವರೂ ಅನುಭವಿಸುವವರೂ ಯಾರು ? ಯಾರಲ್ಲಿ ಎಲ್ಲರೂ ಸಂಪ್ರತಿಷ್ಠಿತರಾಗುತ್ತಾರೆ ? ಉತ್ತರ: ಶ್ರೋತ್ರಾದಿ ಇಂದ್ರಿಯಗಳು ಮನಸ್ಸಿನಲ್ಲಿ ಏಕೀಭವಿಸಿ ನಿದ್ರಿಸುವುವು. ಪ್ರಾಣಾದಿ ಪಂಚವಾಯುಗಳು ಎಚ್ಚರವಾಗಿರುವುವು. ಮನಸ್ಸೆಂಬ ದೇವ ಸ್ವಪ್ನಗಳನ್ನು ಕಾಣುವಾತ. ಪಕ್ಷಿಗಳು ವೃಕ್ಷದಲ್ಲಿರುವಂತೆ ಅಕ್ಷರರೂಪಿಯಾದ ಪರಮಾತ್ಮನಲ್ಲಿ ಎಲ್ಲರೂ ಸಂಪ್ರತಿಷ್ಠಿತರಾಗಿರುತ್ತಾರೆ. ಶೈಬ್ಯ ಸತ್ಯಕಾಮನದು ಐದನೆಯ ಪ್ರಶ್ನೆ. ಪ್ರಣವೋಪಾಸಕ ಯಾವ ಲೋಕವನ್ನು ಜಯಿಸುತ್ತಾನೆ ? ಅಂಥವ ಸೂರ್ಯನಲ್ಲಿ ಸಂಗತವಾಗಿ ಪಾಪವಿಮುಕ್ತ ನಾಗಿ ಬ್ರಹ್ಮಲೋಕವನ್ನು ಸೇರುತ್ತಾನೆಂದು ಪಿಪ್ಪಲಾದಿ ಋಷಿ ಉತ್ತರ ಹೇಳಿದ್ದಾನೆ. ಸುರೇಶ ಭಾರದ್ವಾಜ ಷೋಡಶ ಕಲಾ ಪುರುಷನ ವಿಚಾರವಾಗಿ ಕೇಳಿದ ಆರನೆಯ ಪ್ರಶ್ನೆಗೆ ಪ್ರಾಣಾದಿ ಷೋಡಶ ಕಲೆಗಳು ಹೃದಯ ಪುಂಡರೀಕಾಕ್ಷದ ಮಧ್ಯದಲ್ಲಿ ಸಂಭವಿಸುವುದರಿಂದ ಆ ಪುರುಷ ಶರೀರದೊಳಗಿದ್ದಾನೆಂಬ ಉತ್ತರವಿದೆ. ಅನಂತರ ಆರು ಮಂದಿ ಶಿಷ್ಯರೂ ತಮ್ಮ ಅವಿದ್ಯೆಯನ್ನು ಹೋಗಲಾಡಿಸಿದ ಆಚಾರ್ಯರನ್ನು ವಂದಿಸುತ್ತಾರೆ.

🕉️✡️ ಮುಂಡಕೋಪನಿಷತ್ ✡️✡️

ಅಥರ್ವ ವೇದದ ಶೌನಕ ಶಾಖೆಗೆ ಸೇರಿದ ಇದರಲ್ಲಿ 3 ಮುಂಡಕಗಳು, 6 ಖಂಡಗಳು, 64 ಮಂತ್ರಗಳು ಇವೆ. ಇಡೀ ಉಪನಿಷತ್ತು ಪದ್ಯಮಯ ವಾಗಿದೆ. ಮೊದಲ ಮುಂಡಕದಲ್ಲಿ ಅಥರ್ವಣ ಪರಂಪರೆಯ ವಿವರಣೆಯೂ ಪರಾಪರ ವಿದ್ಯೆಗಳ ವಿಭಾಗವೂ ಕರ್ಮಕಾಂಡದ ನಿರಾಕರಣೆಯೂ ಜ್ಞಾನಕಾಂಡದ ಪ್ರಾಧಾನ್ಯವೂ ಸನ್ಯಾಸದ ಶ್ರೇಷ್ಠತೆಯೂ ನಿರೂಪಿತವಾಗಿವೆ. ಋಗ್ವೇದ, ಯಜುರ್ವೇದಗಳನ್ನು ಅಪರಾವಿದ್ಯೆಗೆ ಸೇರಿಸಿರುವುದೂ ಯಜ್ಞಸಂಸ್ಥೆಯ ಫಲದ ನಶ್ವರತೆಯನ್ನು ಸ್ಪಷ್ಟಪಡಿಸಿರುವುದೂ ಗಮನಾರ್ಹ ವಾಗಿದೆ. ವೇದಾಂಗಗಳ ಸಂಖ್ಯೆಯನ್ನೂ ಹೆಸರುಗಳನ್ನೂ ಕ್ರಮವಾಗಿ ಇಲ್ಲಿ ಕೊಡಲಾಗಿದೆ. ಎರಡನೆಯ ಮುಂಡಕದಲ್ಲಿ ಸೃಷ್ಟಿಸ್ಥಿತಿ ನಾಶಗಳಿಗೆ ಸರ್ವಭೂತಾಂತರಾತ್ಮವಾದ ಬ್ರಹ್ಮವಸ್ತುವೇ ಕಾರಣವೆಂದೂ ಅಮೃತತ್ವಕ್ಕೆ ಸೇತುವಾದ ಆ ಪರಮಾತ್ಮನೊಬ್ಬನನ್ನೇ ತಿಳಿಯಬೇಕೆಂದೂ ಇತರ ವಿಷಯಗಳಲ್ಲಿ ವಿರಕ್ತಿ ಇರಬೇಕೆಂದೂ ಬೋಧಿಸಲಾಗಿದೆ. ತದೇ ತತ್ಸತ್ಯಂ ತದಮೃತಂ ತದ್ವೇದ್ಧವ್ಯಂ, ತಮೇವೈಕಂ ಜಾನಥ ಆತ್ಮಾನಂ ಅನ್ಯವಾಚೋ ವಿಮುಂಚಥ-ಎಂದು ಇಲ್ಲಿ ಸಾರಿದೆ. ಮೂರನೆಯ ಮುಂಡಕದಲ್ಲಿ ವೇದಾಂತ ದರ್ಶನದ ಮುಖ್ಯ ವಿಚಾರವಾದ ಜೀವಾತ್ಮ ಪರಮಾತ್ಮರನ್ನು ಒಂದೇ ವೃಕ್ಷವನ್ನಾಶ್ರಯಿಸಿ ಅದರ ಫಲವನ್ನು ಭುಂಜಿಸುವ, ಭುಂಜಿಸದೇ ಇರುವ, ಎರಡು ಪಕ್ಷಿಗಳ ದೃಷ್ಟಾಂತದಿಂದ ನಿರೂಪಿಸಲಾಗಿದೆ. ದ್ವೈತಾದ್ವೈತ ಪಂಥಗಳು ಇದನ್ನು ಬಗೆಬಗೆಯಾಗಿ ವಿವರಿಸುತ್ತವೆ. ಜ್ಞಾನ ಪ್ರಸಾದದಿಂದ ಮಾತ್ರವೇ ಪರಮಾತ್ಮನನ್ನು ಪಡೆಯಬಹುದೆಂಬುದನ್ನು ಪರಮಾತ್ಮನನ್ನು ಕಂಡವನು ಪುಣ್ಯಪಾಪ ವಿಮುಕ್ತನಾಗಿ ಪರಮಾತ್ಮನ ಪರಮ ಸಾಮ್ಯವನ್ನು ಪಡೆಯುತ್ತಾನೆಂದು ಹೇಳಲಾಗಿದೆ. ಕಾಮಗಳನ್ನು ಜಯಿಸಿದವನಿಗೆ ಭಗವಂತನ ದಯೆಯಿಂದ ಬ್ರಹ್ಮಪ್ರಾಪ್ತಿಯಾಗುವುದೆಂದು ತಿಳಿಸಲಾಗಿದೆ. ವೇದಾಂತ ಶಬ್ದದ ಪ್ರಯೋಗ ಇಲ್ಲಿಯೇ ಮೊದಲು ಬಂದಿರುವುದು. ಇದರಲ್ಲಿ (ಮುಂಡನ ಮಾಡಿಕೊಂಡು) ವಿರಕ್ತಿಯಿಂದ ಇಂದ್ರಿಯಾತೀತವಾದ ಬ್ರಹ್ಮಾನಂದವನ್ನು ಪಡೆಯುವ ಸಾಧನೆ, ತಪಸ್ಸು, ಇಹಲೋಕ ತ್ಯಾಗ ಇವನ್ನು ವಿಶೇಷವಾಗಿ ವಿವರಿಸಿರುವುದರಿಂದ ಸಂನ್ಯಾಸಿಗಳ (ಮುಂಡಕ) ಉಪನಿಷತ್ತು ಎಂದು ಪರ್ಯಾಯವಾಗಿ ಇದನ್ನು ಕರೆಯಲಾಗಿದೆ.

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...