Sunday, 31 May 2020

🏹🐒 ವಾಲಿವಧೆಯ ಧರ್ಮಸೂಕ್ಷ್ಮತೆ 🏹🐒

ವಾಲಿ-ಸುಗ್ರೀವರ ಮಧ್ಯೆ ಘನಘೋರ ಕದನವೇ ನಡೆದಿತ್ತು. ಜಯ ಯಾರ ಕೊರಳಿಗೆಂದು ಇನ್ನೂ ನಿಶ್ಚಯವಾಗಿರಲಿಲ್ಲ. ಯಾರೂ ಯಾರಿಗೆ ಕಡಿಮೆಯಿಲ್ಲವೆಂಬಂತಿತ್ತು. ಆದರೆ ವಾಲಿ ಸುಗ್ರೀವನಿಗಿಂತಲೂ ಬಲಶಾಲಿ ಬರುಬರುತ್ತಾ ವಾಲಿಯ ಕೈ ಮೇಲಾಗುತ್ತಾ ಬಂತು ಸುಗ್ರೀವ ದಣಿಯುತ್ತಾ ಬಂದ ಸಹಾಯಕ್ಕಾಗಿ ಸುತ್ತಮುತ್ತಲೂ ನೋಡಹತ್ತಿದ ವಾಲಿಯ ಕೈಮೇಲಾಗುತ್ತಿರುವುದನ್ನು ಗ್ರಹಿಸಿದ ರಾಮ ಮರೆಯಿಂದಲೇ ವಾಲಿಯ ಮೇಲೆ ಬಾಣವನ್ನು ಪ್ರಯೋಗಿಸಿದ.”ರಾಮಬಾಣ” ಎಂದರೆ ಕೇಳಬೇಕೇ..? ಇಟ್ಟಗುರಿ ತಪ್ಪಿದ ನಿದರ್ಶನಗಳಿಲ್ಲ ಬಾಣ ನೇರವಾಗಿ ಬಂದು ವಾಲಿಯ ವಕ್ಷಸ್ಥಳವನ್ನು ಛೇದಿಸಿತು ಬುಡಕಡಿದ ಮರದಂತೇ ರಣವಿಕ್ರಮ ವಾಲಿ ಧರೆಗುರುಳಿದ.

ವಾಲಿಯ ತೇಜಸ್ಸು ಅಲ್ಪವಾಗಿತ್ತು ಆಗಲೋ ಈಗಲೋ ಪ್ರಾಣವಾಯು ಜಾರುವಂತಿತ್ತು ನಿತ್ರಾಣನಾಗಿದ್ದ ಬುದ್ಧಿಗೆಟ್ಟಿದ್ದ ಅಂತಹ ಪರಿಸ್ಥಿತಿಯಲ್ಲೂ ಶ್ರೀರಾಮನನ್ನು ನಿಂದಿಸಿದ. ವಾಲಿ : ”ರಾಮ..ಸುಗ್ರೀವನೊಡನೆ ಯುದ್ಧ ಮಾಡುತ್ತಿದ್ದ ನನ್ನ ಮೇಲೆ ಮರೆಯಲ್ಲೇ ನಿಂತು ಬಾಣವನ್ನು ಪ್ರಯೋಗಿಸಿ ಯಾವ ಪುರುಷಾರ್ಥವನ್ನು ಸಂಪಾದಿಸಿದೆ..?
ಶ್ರೀರಾಮ ಕುಲೀನ, ಸತ್ವಗುಣಸಂಪನ್ನ, ಕರುಣಾಮಯ, ತೇಜಸ್ವಿ, ಧರ್ಮಕಾರ್ಯಗಳಲ್ಲೇ ನಿರತನಾಗಿರುವವ ಎಂದು ಇಡೀ ಪ್ರಪಂಚ ಹಾಡಿ ಹೊಗಳುತ್ತದೆ. ಅಂತಹ ಗುಣಗಳು ನಿನ್ನಲ್ಲಿವೆಯೆಂದು ತಿಳಿದು, ನನ್ನ ಪತ್ನಿ ತಾರೆ ತಡೆದರೂ ಸುಗ್ರೀವನೊಡನೆ ಯುದ್ಧ ಮಾಡಲು ಬಂದೆ. ಕೋಪಾವಿಷ್ಟನಾಗಿ ಇನ್ನೊಬ್ಬನ ಮೇಲೆ ಯುದ್ಧ ಮಾಡುತ್ತಿರುವಾಗ ಧರ್ಮಾತ್ಮನಾದ ನೀನು ಮಧ್ಯಪ್ರವೇಶ ಮಾಡುವುದಿಲ್ಲವೆಂಬ ಭಾವನೆ ನನಗಿತ್ತು. ಆದರೆ ರಾಮ, ನೀನು ಮಾಡಿದ್ದೇನು..?
ನೀನು ಹೃದಯಶೂನ್ಯನೆಂದು ಭಾವಿಸುತ್ತೇನೆ. ಧರ್ಮದ ಸೋಗನ್ನು ಹಾಕಿಕೊಂಡು ಧರ್ಮಾತ್ಮನಂತೇ ಭುವಿಯ ಮೇಲೆ ತಿರುಗುತ್ತಿರುವವ ನೀನು. ನಿನ್ನ ಆಚಾರ-ವಿಚಾರಗಳು ಧರ್ಮಕ್ಕೆ ವಿರುದ್ಧ. ಬೂದಿಮುಚ್ಚಿದ ಕೆಂಡದಂತೇ ಸತ್ಪುರುಷರ ವೇಷವನ್ನು ಧರಿಸಿರುವ ಪಾಪಿ..!!
ನಿನಗಾಗಲೀ, ನಿನ್ನ ದೇಶಕ್ಕಾಗಲೀ ನಾನೇನಾದರೂ ಹಾನಿ ಮಾಡಿದ್ದುಂಟೇ..? ನಿನ್ನನ್ನು ಅವಮಾನಿಸಿದವನಲ್ಲ, ನಿನ್ನ ದೇಶಕ್ಕೆ ದ್ರೋಹ ಬಗೆದವನೂ ಅಲ್ಲ. ನಾನು ನಿನ್ನೊಡನೆ ಯುದ್ಧ ಮಾಡಲು ಬಂದವನಲ್ಲ, ಯುದ್ಧವನ್ನು ಮಾಡುತ್ತಲೂ ಇರಲಿಲ್ಲ. ಹಾಗಿದ್ದೂ ನನ್ನ ಮೇಲೇಕೆ ವೈರವನ್ನು ಸಾಧಿಸಿದೆ..?ಧರ್ಮಾತ್ಮನಾದ ದಶರಥನ ಪುತ್ರ ನೀನು. ವೇದವೇದಾಂಗಗಳನ್ನೂ ಅಭ್ಯಾಸ ಮಾಡಿ ಧರ್ಮಸೂಕ್ಷ್ಮತೆಗಳನ್ನು ತಿಳಿದುಕೊಂಡವನು. ನಿನ್ನಂತವನು ವನಚಾರಿಗಳಾದ ನಮ್ಮಂತಹ ಬಡಪಾಯಿಗಳ ವಿಷಯದಲ್ಲಿ ಹೀಗೆ ಮಾಡಬಹುದೇ..?
ಹೆಣ್ಣು, ಹೊನ್ನು, ಮಣ್ಣು ಈ ಮೂರು ವಿಷಯಗಳು ಯುದ್ಧಕ್ಕೆ ಕಾರಣವಾಗಿರುತ್ತವೆ.
ಈ ಮೂರರಲ್ಲಿ ಯಾವುದಕ್ಕಾಗಿ ನನ್ನನ್ನು ಸಂಹರಿಸಿದೆ..? ಈ ವನದ ಮೇಲೆ ನಿನಗೆ ಆಸೆಯುಂಟಾಯಿತೇ..? ಅಥವಾ ಸುಗ್ರೀವನಿಗೆ ಸಂತಸವನ್ನುಂಟು ಮಾಡಬೇಕೆಂಬ ಉದ್ದೇಶದಿಂದ ನನ್ನನ್ನು ವಧಿಸಿದೆಯಾ..? ಸೀತೆಯ ಅಪಹರಣದ ವಿಷಯವನ್ನು ನನಗೆ ತಿಳಿಸಿದ್ದರೆ ನಾನೇ ಅವಳನ್ನು ತಂದು ನಿನಗೊಪ್ಪಿಸುತ್ತಿದ್ದೆ. ದುರಾತ್ಮನಾದ ರಾವಣನ ಕುತ್ತಿಗೆಯನ್ನು ಹಿಡಿದು ಜೀವಸಹಿತನಾಗಿ ತಂದು ನಿನ್ನ ವಶಕ್ಕೊಪ್ಪಿಸುತ್ತಿದ್ದೆ. ದಂಡನೀತಿ, ವಿನಯ, ನಿಗ್ರಹ, ಅನುಗ್ರಹ ಇವು ರಾಜನಲ್ಲಿರಬೇಕಾದ ಮುಖ್ಯ ಗುಣಗಳು. ಆದರೆ ನಿನ್ನಲ್ಲಿ ಯಾವ ಗುಣಗಳೂ ಕಾಣಿಸುತ್ತಿಲ್ಲ. ನಿನಗೆ ಕಾಮವೇ ಪ್ರಧಾನ. ಕೋಪಿಷ್ಟ, ಅಸ್ಥಿರವಾದ ಮನವುಳ್ಲವ, ರಾಜವ್ಯವಹಾರದಲ್ಲಿ ಜ್ಞಾನವಿಲ್ಲದವ, ಸದಾ ಧನುಸ್ಸಿನಲ್ಲೇ ಆಸಕ್ತಿಯುಳ್ಳವ. ನಿನಗೆ ಧರ್ಮದಲ್ಲಿ ಶ್ರದ್ಧೆಯಿಲ್ಲ, ಇಂದ್ರಿಯಗಳಲ್ಲಿ ನಿಯಂತ್ರಣವಿಲ್ಲ.”ವಾಲಿಯನ್ನು ಅನಾವಶ್ಯಕವಾಗಿ ಕೊಂದುದೇಕೆ..?” ಎಂಬ ಪ್ರಶ್ನೆಯನ್ನು ಯಾರಾದರೂ ಕೇಳಿದರೆ ಏನೆಂದು ಉತ್ತರಿಸುವೆ ರಾಮ..?
ನನ್ನ ಮಾಂಸಕ್ಕಾಗಿ ಕೊಂದೆಯಾ..? ಚರ್ಮಕ್ಕಾಗಿ ಕೊಂದೆಯಾ..? ಅದೂ ಸಾಧ್ಯವಿಲ್ಲ.
ಏಕೆಂದರೆ ಕಪಿಗಳ ಮಾಂಸ, ಚರ್ಮ ನಿಷಿದ್ಧ. ಸರಿ, ಪ್ರಾಣಿಗಳ ಮರಣ ಕಾಲಪುರುಷನಿಗೆ ಅಧೀನವಾದದ್ದು. ವಿಧಿನಿಯಮದಂತೇ ನಾನು ಮರಣಹೊಂದುತ್ತೇನೆ. ಆದರೆ ಅದೃಶ್ಯನಾಗಿ ನಿಂತು, ನನ್ನನ್ನು ಕೊಂದದ್ದು ಸರಿಯೆಂದು ಸರ್ವಸಮ್ಮತವಾಗುವಂತೇ ಉತ್ತರ ನೀಡಲು ನೀನು ಸಮರ್ಥನಾ ಶ್ರೀರಾಮ..?”ವಾಲಿ ಶ್ರೀರಾಮನ ಉತ್ತರವನ್ನು ನಿರೀಕ್ಷಿಸುತ್ತಾನೆ.

ವಾಲಿಯ ಪ್ರಶ್ನೆಗಳಿಂದ ಸ್ವಲ್ಪವೂ ವಿಚಲಿತನಾಗದ ರಾಮ ಹೀಗೆ ಉತ್ತರಿಸುತ್ತಾನೆ.”ಕಪಿಶ್ರೇಷ್ಠ ವಾಲಿ.. ಸಮಸ್ತ ಭೂಮಂಡಲವೇ ಇಕ್ಷ್ವಾಕುವಂಶದವರಿಗೆ ಸೇರಿದ್ದು. ಮನುಷ್ಯರ, ಮೃಗ, ಪಕ್ಷಿಗಳ ನಿಗ್ರಹಾನುಗ್ರಹ ಮಾಡುವಂತಹ ಅಧಿಕಾರ ಇಕ್ಷ್ವಾಕುವಂಶದವರಿಗಿದೆ. ಇಕ್ಷ್ವಾಕುವಂಶವನ್ನೀಗ ಧರ್ಮಾತ್ಮ, ಸತ್ಯಸಂಧ, ಭರತ ಆಳುತ್ತಿದ್ದಾನೆ. ನಾವೂ ಹಾಗೂ ಇತರ ರಾಜರು ಭರತನಿಂದ ಧರ್ಮೋದ್ಧಾರದ ಆದೇಶವನ್ನು ಪಡೆದು ವಿಶ್ವದಲ್ಲಿ ಧರ್ಮಪರಂಪರೆಯನ್ನು ವೃದ್ಧಿಗೊಳಿಸಬೇಕೆಂಬ ಆಶಯದಿಂದ ಭೂಪ್ರದಕ್ಷಿಣೆ ಮಾಡುತ್ತಿದ್ದೇವೆ. ಧರ್ಮಭ್ರಷ್ಟರಾದ ಯಾವುದೇ ಜೀವಿಗಳನ್ನು ಶಿಕ್ಷಿಸಲು ನಮಗೆ ಅಧಿಕಾರವಿದೆ. ನೀನು ಧರ್ಮಕ್ಕೆ ಲೋಪ ಮಾಡಿ, ಅಧರ್ಮಿಯಾಗಿರುವೆ. ಅತಿನಿಂದ್ಯವಾದ ತಪ್ಪುಗಳನ್ನು ಮಾಡಿರುವೆ. ಸನಾತನಧರ್ಮದ ನಿಯಮಗಳನ್ನು ಧಿಕ್ಕರಿಸಿ ತಮ್ಮನ ಪತ್ನಿಯೊಂದಿಗೆ ಸಂಬಂಧವನ್ನು ಬೆಳೆಸಿರುವೆ. ನಿನ್ನನ್ನು ವಧಿಸಲು ಮುಖ್ಯ ಕಾರಣ ಇದೇ. ಸುಗ್ರೀವ ಇನ್ನೂ ಜೀವಂತವಿರುವಾಗ, ಸೊಸೆಯ ಸ್ಥಾನದಲ್ಲಿರುವ, ಆತನ ಪತ್ನಿ ರುಮೆಯಲ್ಲಿ ಕಾಮಾಂಧನಾಗಿ ಏಕೆ ವರ್ತಿಸಿದೆ..? ಯಾವನು ತನ್ನ ಮಗಳ ವಿಷಯದಲ್ಲಿ, ತಂಗಿಯ ವಿಷಯದಲ್ಲಿ ಹಾಗೂ ತಮ್ಮನ ಹೆಂಡತಿಯ ವಿಷಯದಲ್ಲಿ ಕಾಮುಕನಾಗಿ ವರ್ತಿಸುವನೋ ಆತನಿಗೆ ಮರಣದಂಡನೆ ಶಿಕ್ಷೆಯನ್ನು ಧರ್ಮಶಾಸ್ತ್ರದಲ್ಲಿ ವಿಧಿಸಲಾಗಿದೆ. ಮೇಲಾಗಿ ಒಂದು ದೇಶದ ರಾಜನೇ ಇಂತಹ ಅನಿಂದ್ಯವಾದ ಕರ್ಮವನ್ನು ಮಾಡಿದರೆ ಧರ್ಮವೆಲ್ಲಿ ಉಳಿಯುವುದು..?”
ಯಥಾ ರಾಜಾ ತಥಾ ಪ್ರಜಾಃ”
ಪ್ರಜೆಗಳೆಲ್ಲರೂ ಅಧರ್ಮಿಗಳಾಗುತ್ತಾರೆ. ಕಾಮಪ್ರವೃತ್ತನಾದ ನೀನು ತಮ್ಮನ ಹೆಂಡತಿಯೊಡನೆ ಸಂಬಂಧ ಇರಿಸಿಕೊಂಡದ್ದಕಾಗಿ ಮರಣದಂಡನೆಯನ್ನು ವಿಧಿಸಲಾಗಿದೆ. ಮರಣದಂಡನೆಗೆ ಒಳಗಾದವರನ್ನು ಹೇಗಾದರೂ ಶಿಕ್ಷಿಸಬಹುದು. ಕಲ್ಲುಗಾಣಕ್ಕಾದರೂ ಹಾಕಬಹುದು, ವಿಷವುಣಿಸಬಹುದು, ನೇಣುಹಾಕಬಹುದು, ಬೆಟ್ಟದಮೇಲಿಂದ ತಳ್ಳಬಹುದು. ಮರೆಯಲ್ಲಿ ನಿಂತು ಬಾಣಪ್ರಯೋಗವನ್ನು ಮಾಡಿಯೂ ಕೊಲ್ಲಬಹುದು. ಮರಣದಂಡನೆಗೆ ಒಳಗಾಗಿರುವ ವ್ಯಕ್ತಿಯನ್ನು ಧರ್ಮಮಾರ್ಗದಲ್ಲೇ ಶಿಕ್ಷಿಸಬೇಕೆಂಬ ಯಾವುದೇ ನಿಯಮವಿಲ್ಲ.

ಇನ್ನು ನನ್ನ ಹಾಗೂ ಸುಗ್ರೀವನ ಸಂಬಂಧದ ಬಗ್ಗೆ ಹೇಳುತ್ತೇನೆ. ನನಗೆ ಹೇಗೆ ಲಕ್ಷ್ಮಣನೊಂದಿಗೆ ಸಖ್ಯವಿದೆಯೋ ಹಾಗೇ ಸುಗ್ರೀವನೊಂದಿಗಿದೆ. ಪತ್ನೀ ಹಾಗೂ ರಾಜ್ಯದ ಸಂಬಂಧದಿಂದಾಗಿ ಈ ಸಖ್ಯವಾಗಿದೆ. ಧರ್ಮಾತ್ಮನಾದ ಸುಗ್ರೀವ ಸದಾ ಪ್ರಜೆಗಳ ಸೌಖ್ಯವನ್ನೇ ಬಯಸುತ್ತಾನೆ. ಅಗ್ನಿಸಾಕ್ಷಿಯಾಗಿ ಆತನೊಂದಿಗೆ ಸೌಖ್ಯಮಾಡಿಕೊಂಡು ಎಲ್ಲ ವಾನರರ ಸಮಕ್ಷದಲ್ಲಿ ವಾಲಿಯನ್ನು ಸಂಹರಿಸುತ್ತೇನೆಂದು ಪ್ರತಿಜ್ಞೆ ಮಾಡಿದ್ದೆ. ರಾಮನ ಪ್ರತಿಜ್ಞೆಯೆಂದೂ ಸುಳ್ಳಾಗಿಲ್ಲ. ಅದಕ್ಕಾಗಿ ನಿನ್ನ ವಧೆಯಾಗಲೇಬೇಕಿತ್ತು.

ರಾಜರು ಬಲೆಗಳಿಂದಲೂ, ಇನ್ನೂ ಹಲವಾರು ಕಪಟವಿಧಾನಗಳಿಂದಲೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮೃಗಗಳನ್ನು ವಧಿಸುತ್ತಾರೆ. ಮೃಗಗಳು ಓಡುತ್ತಿರಲಿ, ಹೆದರಿಕೊಂಡಿರಲಿ, ಎದುರಾಗಿ ನಿಂತಿರಲಿ, ಪ್ರಮತ್ತವಾಗಿರಲಿ, ಅಪ್ರಮತ್ತವಾಗಿರಲಿ, ಯಾವುದೇ ರೂಪದಲ್ಲಿರಲಿ, ಪ್ರಾಣಿಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ವಧಿಸುವುದು ತಪ್ಪಲ್ಲ. ನೀನೂ ಕೂಡ ಶಾಖಾಮೃಗ. ನಿನ್ನನ್ನು ಪರೋಕ್ಷವಾಗಿ ವಧಿಸಿದ್ದರಲ್ಲಿ ಯಾವುದೇ ತಪ್ಪಿಲ್ಲ. ಯಾವ ದೋಷವೂ ಇಲ್ಲ. ಈ ಕಾರಣದಿಂದ ಸುಗ್ರೀವನೊಂದಿಗೆ ಯುದ್ಧ ಮಾಡುತ್ತಿದ್ದ ನಿನ್ನನ್ನು ವಧಿಸಿದೆ.

ಯಾವುದೇ ಜೀವಜಂತುವಿರಲಿ, ಪಾಪಗಳನ್ನು ಮಾಡಿದಾಗ ರಾಜನಿಂದ ಯಥೋಚಿತವಾದ ಶಿಕ್ಷೆಯನ್ನು ಪಡೆದು ಅದನ್ನು ಅನುಭವಿಸಿ ಪರಿಶುದ್ಧರಾಗಿ, ಪುಣ್ಯವಂತರಾಗಿ, ಸಾಧುಪುರುಷರಂತೇ ಸ್ವರ್ಗಲೋಕವನ್ನು ಸೇರುತ್ತಾರೆ. ವಾಲಿ.. ಈಗ ನಿನ್ನ ತಪ್ಪಿಗೆ ಶಿಕ್ಷೆಯಾಗಿದೆ. ಆ ಶಿಕ್ಷೆಯನ್ನನುಭವಿಸಿ ಸ್ವರ್ಗವನ್ನು ಸೇರುತ್ತಿರುವೆ”ಎಂದು ರಾಮ ವಾಲಿಯನ್ನು ಅನುಗ್ರಹಿಸುತ್ತಾನೆ. ವಾಲಿಯ ಸಂದೇಹಗಳೆಲ್ಲಾ ನಿವಾರಣೆಯಾಗುತ್ತವೆ.

ರಾಮನನ್ನು ನಿಂದಿಸಿದ್ದಕ್ಕೆ ಪಶ್ಚಾತ್ತಾಪವಾಗುತ್ತದೆ. ”ನರಶ್ರೇಷ್ಟ ರಾಮ ! ನೀನು ಹೇಳಿದ್ದೆಲ್ಲಾ ಸಮುಚಿತವಾಗಿವೆ. ಹಿಂದೆ ನಾನು ಪ್ರಮಾದದಿಂದಾಡಿದ ಮಾತುಗಳನ್ನು ಮನ್ನಿಸು. ನೀನು ಧರ್ಮಾರ್ಥಕಾಮಗಳ ತತ್ವವನ್ನು ಸಂಪೂರ್ಣವಾಗಿ ತಿಳಿದಿರುವೆ. ನಿನ್ನ ಅಂತಃಕರಣ ಸ್ಥಿರ ಹಾಗೂ ನಿರ್ಮಲವಾಗಿದೆ. ನಾನು ಧರ್ಮಭ್ರಷ್ಟರಲ್ಲಿ ಅಗ್ರಗಣ್ಯನಾಗಿದ್ದೇನೆ. ಧರ್ಮದಿಂದ ಪತಿತನಾಗಿದ್ದೇನೆ. ನನ್ನ ಅಪರಾಧಗಳನ್ನೆಲ್ಲ ಮನ್ನಿಸಿ, ಸದ್ಗತಿಯನ್ನು ಕರುಣಿಸು ದೇವ”ಎಂದು ದೀನನಾಗಿ ರಾಮನಲ್ಲಿ ಪ್ರಾರ್ಥಿಸುತ್ತಾನೆ.

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...