Friday, 29 May 2020

📚📚 ಉಪನಿಷತ್ತುಗಳು📚📚

ವೇದಗಳ ಕೊನೆಯ ಹಾಗೂ ನಾಲ್ಕನೆಯ ವಿಭಾಗವನ್ನು ಈ ಹೆಸರಿನಿಂದ ಕರೆಯುತ್ತಾರೆ. ಉಳಿದ ಮೊದಲ ಮೂರು ಭಾಗಗಳೆಂದರೆ ಸಂಹಿತೆಗಳು, ಬ್ರಾಹ್ಮಣಗಳು, ಆರಣ್ಯಕಗಳು. ಆದ್ದರಿಂದಲೇ ಉಪನಿಷತ್ತುಗಳಿಗೆ ವೇದಾಂತವೆಂಬ ಹೆಸರೂ ರೂಢಿಯಲ್ಲಿದೆ. ಉಪನಿಷತ್ತುಗಳು ಸಂಖ್ಯೆಯಲ್ಲಿ ಎಷ್ಟಿವೆ, ಇವುಗಳ ಕಾಲವೇನು ಎಂಬ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿವೆ. ವೇದಧರ್ಮದ ಅತ್ಯುನ್ನತ ಆದರ್ಶ ಮತ್ತು ಸಿದ್ಧಿಗಳನ್ನು ಪ್ರತಿಪಾದಿಸಿ ಮೋಕ್ಷ ಶಾಸ್ತ್ರಗಳೆನ್ನಿಸಿಕೊಂಡಿರುವ ಇವು ವೇದಗಳ ಸಾರಸರ್ವಸ್ವವಾಗಿ ಮಾನವನನ್ನು ಅಮೃತತ್ವಕ್ಕೆ ಒಯ್ಯುವ ಹಂತಪಂಕ್ತಿಗಳೆನ್ನಬಹುದು. ಇವುಗಳಲ್ಲಿ ವಿಚಾರದ ಅಂತ್ಯವನ್ನು ಮೀರಿ ಹೋಗಿರುವ ಮಹಾಮಹಿಮರ, ಋಷಿಗಳ, ಮಂತ್ರದ್ರಷ್ಟಾರರ, ಅಂತರ್ದೃಷ್ಟಿ ಗೋಚರವಾದ ಪರಬ್ರಹ್ಮವಸ್ತುವಿನ ಸ್ವರೂಪ ನಿರೂಪಣೆ ದಿವ್ಯಜ್ಯೋತಿಯಂತೆ ಬೆಳಗುತ್ತಿದೆ. ಇವು ಭಾರತೀಯ ದರ್ಶನಗಳೆಲ್ಲಕ್ಕೂ ಸಿದ್ಧಾಂತಗಳೆಲ್ಲಕ್ಕೂ ಮೂಲವಾದ ತತ್ತ್ವ ತರಂಗಗಳ ಪಾವನ ಬುಗ್ಗೆಗಳಂತಿವೆ. ಅಂತೆಯೇ ವಿದ್ವಾಂಸರು ಇವನ್ನು ವೇದಗಳೆಂಬ ಪರ್ವತಪಂಕ್ತಿಗಳಲ್ಲಿನ ಗಗನಸ್ಪರ್ಶಿ ಶಿಖರಗಳೆಂದು ಬಣ್ಣಿಸಿದ್ದಾರೆ. ಇವುಗಳಲ್ಲಿ ಅಡಗಿರುವ ಮಹತ್ತ್ವವನ್ನು, ಆತ್ಮ ಪರಮಾತ್ಮ ಜ್ಞಾನವನ್ನು, ಗುರುವಿನ ಪದತಲದಲ್ಲಿ ಕುಳಿತು ಭಕ್ತಿಯಿಂದ ಕೇಳಿ ತಿಳಿಯಬೇಕಾಗಿರುವುದರಿಂದ ಈ ಅರ್ಥವನ್ನೊಳಗೊಂಡ ಉಪನಿಷತ್ ಎಂಬ ಹೆಸರು ಅನ್ವರ್ಥವಾಗಿದೆ. ಇವುಗಳಲ್ಲಿ ಬಹುಭಾಗ ಗುರುಶಿಷ್ಯರ ಸಂವಾದ ರೂಪದಲ್ಲಿದೆ.

ತತ್ತ್ವದೃಷ್ಟಿಯಿಂದ ಹೇಗೋ ಸಾಹಿತ್ಯದೃಷ್ಟಿಯಿಂದಲೂ ಇವು ಅದ್ಭುತವಾಗಿವೆ. ಸಂಸ್ಕೃತ ಭಾಷೆಯನ್ನು ಎಷ್ಟು ವೀರ್ಯವತ್ತಾಗಿ ಗದ್ಯದಲ್ಲಿ ಬಳಸಬಹುದೆಂಬುದಕ್ಕೆ ಇವು ನಿದರ್ಶನಗ ಳಾಗಿವೆ. ಕೆಲವು ಭಾಗಗಳಂತೂ ವಿಶ್ವಸಾಹಿತ್ಯದಲ್ಲಿಯೇ ಅತ್ಯುತ್ತಮವಾದುವೆನ್ನಬಹುದು.

ಋಗ್ವೇದಕ್ಕೆ ಐತರೇಯ, ಕೌಷೀತಕಿ ಉಪನಿಷತ್ತುಗಳೂ ಸಾಮವೇದಕ್ಕೆ ಛಾಂದೋಗ್ಯ ಮತ್ತು ಕೇನ ಉಪನಿಷತ್ತುಗಳೂ ಕೃಷ್ಣ ಯಜುರ್ವೇದಕ್ಕೆ ಕಠ, ಶ್ವೇತಾಶ್ವತರ, ಮೈತ್ರಾಯಣೀಯ, ತೈತ್ತಿರೀಯ ಮತ್ತು ಮಹಾ ನಾರಾಯಣೀಯ ಉಪನಿಷತ್ತುಗಳೂ ಶುಕ್ಲಯಜುರ್ವೇದಕ್ಕೆ ಬೃಹದಾರಣ್ಯಕ ಮತ್ತು ಈಶಾವಾಸ್ಯೋಪನಿಷತ್ತುಗಳೂ ಅಥರ್ವವೇದಕ್ಕೆ ಮುಂಡಕ, ಪ್ರಶ್ನ, ಮಾಂಡೂಕ್ಯ ಉಪನಿಷತ್ತುಗಳೂ ಸೇರಿವೆ. ಉಪನಿಷತ್ತುಗಳ ಸಂಖ್ಯೆಯ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಮುಕ್ತಿಕೋಪನಿಷತ್ತಿನಲ್ಲಿ ಇವು 108 ಎಂದು ತಿಳಿಸಲಾಗಿದೆ. ಬೇರೆ ಬೇರೆ ವೇದಶಾಖೆಗಳಿಗೆ ಸೇರಿದ ಅನೇಕ ಉಪನಿಷತ್ ಗಳಿದ್ದರೂ ಅತ್ಯಂತ ಪ್ರಾಚೀನವೂ ಮಹತ್ತ್ವಪೂರ್ಣವೂ ಆದವೆನ್ನಿಸಿಕೊಂಡಿರುವವು 13. ಅವುಗಳಲ್ಲಿ ದಶೋಪನಿಷತ್ತುಗಳೆಂದು ಸುಪ್ರಸಿದ್ಧವಾಗಿರುವವು ಈಶ, ಕೇನ, ಪ್ರಶ್ನ, ಕಠ, ಮುಂಡಕ, ಮಾಂಡೂಕ್ಯ, ತೈತ್ತಿರೀಯ, ಐತರೇಯ, ಛಾಂದೋಗ್ಯ, ಬೃಹದಾರಣ್ಯಕಗಳು. ಉಳಿದವು ಕೌಷೀತಕಿ, ಶ್ವೇತಾಶ್ವತರ, ಮೈತ್ರಾಯಣೀಯ. ಈ 13 ಉಪನಿಷತ್ತುಗಳಿಂದ ಭಾಷ್ಯಕಾರರು ಯಥೇಚ್ಛವಾಗಿ ಉಲ್ಲೇಖಿಸಿದ್ದಾರೆ; ಮತ್ತು ಇವನ್ನು ಕುರಿತು ಭಾಷ್ಯ ಬರೆದಿದ್ದಾರೆ. ಉಪನಿಷತ್ತುಗಳ ಕಾಲದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಆದರೆ ಇವು ಬೌದ್ಧ ಧರ್ಮಕ್ಕೆ ಹಿಂದಿನವು ಎಂಬಲ್ಲಿ ಒಮ್ಮತವಿದೆ. ಅಂದರೆ ಇವು ಪ್ರ.ಶ.ಪು. 600ಕ್ಕೆ ಹಿಂದಿನವು. ಋಗ್ವೇದ ಸಂಹಿತೆಗಳ ಕಾಲಕ್ಕೆ ಈಚಿನವು ಎಂದು ಹೇಳಬೇಕಾಗಿರುವುದರಿಂದಲೂ ಋಗ್ವೇದದ ಕಾಲ ಸು. ಪ್ರ.ಶ.ಪು. 1200 ಎಂದು ಪಂಡಿತರ ಅಭಿಪ್ರಾಯವಿರುವುದರಿಂದಲೂ ಉಪನಿಷತ್ತುಗಳ ಕಾಲವನ್ನು ಪ್ರ.ಶ.ಪು. 1200 ಮತ್ತು ಪ್ರ.ಶ.ಪು. 600ರ ಮಧ್ಯಕಾಲವೆನ್ನ ಬಹುದು. ಆದರೆ ಮೈತ್ರಾಯಣೀಯ ಉಪನಿಷತ್ತಿನಲ್ಲಿ ಬಂದಿರುವ ಜ್ಯೋತಿಶ್ಶಾಸ್ತ್ರಕ್ಕೆ ಸಂಬಂಧಿಸಿದ ಒಂದು ಉಲ್ಲೇಖದ ಆಧಾರದ ಮೇಲೆ ಬಾಲಗಂಗಾಧರ ತಿಲಕರು ಕಾಲವನ್ನು ಪ್ರ.ಶ.ಪು. 2000ದ ಹಿಂದಕ್ಕೆ ಹಾಕಬೇಕೆಂದು ಅಭಿಪ್ರಾಯಪಟ್ಟಿದ್ದರು. ಅತ್ಯಂತ ಪ್ರಾಚೀನ ವಾದವು ಛಾಂದೋಗ್ಯ, ಬೃಹದಾರಣ್ಯಕಗಳು.

ವೇದಗಳೆಂಬ ಕ್ಷೀರಸಾಗರವನ್ನು ಮಥಿಸಿ ತೆಗೆದ ಅಮೃತಕಲಶವೇ ಉಪನಿಷತ್ ಗಳೆನ್ನಬಹುದು. ಇವುಗಳಲ್ಲಿ ಕೇಳಿಬರುವುದು ಮಾನವವಾಣಿಯಲ್ಲ. ವೇದಗಳಂತೆ ಇವೂ ಅಪೌರುಷೇಯವೆಂದೇ ಆಸ್ತಿಕರ ನಂಬಿಕೆ. ಇವುಗಳ ನಿಗೂಢ ತತ್ತ್ವವನ್ನು ಪ್ರತಿಪಾದಿಸಿದವರು ವಿಚಾರಮಂಥನದ ಸೀಮೆಯನ್ನು ದಾಟಿಹೋದ ದೈವಾಂಶಸಂಭೂತರು. ತಮ್ಮ ದಿವ್ಯದೃಷ್ಟಿಗೆ ಗೋಚರವಾದ ದೇಶಕಾಲಾತೀತವಾದ ಪರಮ ಸತ್ಯವನ್ನು ಅಮೃತವಾಣಿಯಲ್ಲಿ ಅವರು ನುಡಿದಿದ್ದಾರೆ. ಉಪನಿಷತ್ತುಗಳು ವಿಶ್ವದ ಜ್ಞಾನಭಂಡಾರದಲ್ಲಿರುವ ಜ್ಯೋತಿರ್ಮಯವಾದ ಅಮೂಲ್ಯ ರತ್ನಗಳು. ಇವು ಭಾರತೀಯ ತತ್ತ್ವಸಾಮ್ರಾಜ್ಯದ ಸಿಂಹಾಸನವನ್ನಲಂಕರಿಸಿವೆ. ಇವುಗಳ ಪ್ರಭೆಗೆ ಭಾರತೀಯ ತತ್ತ್ವಜ್ಞರು, ಆಚಾರ್ಯರು, ದರ್ಶನಕಾರರಷ್ಟೇ ಅಲ್ಲದೆ ಪಾಶ್ಚಾತ್ಯ ಜ್ಞಾನವೇತ್ತರೂ ಮಣಿದು ಮಾರುಹೋಗಿದ್ದಾರೆ. ಷೋಪೆನ್ಹೌರ್, ಮ್ಯಾಕ್ಸ್‌ ಮ್ಯೂಲರ್, ಡೌಸನ್, ಹ್ಯೂಮ್ ಮೊದಲಾದವರು ಮುಕ್ತಕಂಠದಿಂದ ಇವನ್ನು ಶ್ಲಾಘಿಸಿದ್ದಾರೆ.

ಪ್ರಸ್ಥಾನತ್ರಯಗಳೆನ್ನಿಸಿಕೊಂಡ ಶಾಸ್ತ್ರಗ್ರಂಥಗಳಲ್ಲಿ ಉಪನಿಷತ್ತುಗಳು ಪ್ರಧಾನವಾದವು. ಬ್ರಹ್ಮಸೂತ್ರಗಳೂ ಭಗವದ್ಗೀತೆಯೂ ಇವನ್ನೇ ಆಶ್ರಯಿಸಿದ ಉಳಿದ ಎರಡು ಪ್ರಸ್ಥಾನಗಳು. ಬ್ರಹ್ಮಸೂತ್ರಗಳಲ್ಲಿ ಉಪನಿಷತ್ತುಗಳ ತೊಡಕಾದ ತತ್ತ್ವಗಳನ್ನು ಕ್ರಮಬದ್ಧವಾಗಿ ಸೂತ್ರಗಳ ರೂಪದಲ್ಲಿ ಜೋಡಿಸಲಾಗಿದೆ. ಭಗವದ್ಗೀತೆಯಲ್ಲಿ ಜನಸಾಮಾನ್ಯರಿಗೆ ಅರ್ಥವಾಗುವ ರೀತಿಯಲ್ಲಿ ಈ ತತ್ತ್ವಗಳನ್ನು ವಿಶದಪಡಿಸಲಾಗಿದೆ. ಉಪನಿಷತ್ತೆಂಬ ಗೋವಿನಿಂದ ಗೀತೆಯೆಂಬ ಕ್ಷೀರ(ಹಾಲು ) ವನ್ನು ಕೃಷ್ಣನೇ ಗೊಲ್ಲನಾಗಿ ಕರೆದುಕೊಟ್ಟಿದ್ದಾನೆ (ಹಾಲು ಕರೆಯುದು ) ಎಂದು ಒಂದು ಹೇಳಿಕೆ ಇದೆ. ಹೀಗೆ ಉಪನಿಷತ್ ಪ್ರಸ್ಥಾನತ್ರಯಗಳಲ್ಲಿ ಆಧಾರಸ್ತಂಭದಂತೆ ನಿಂತಿದ್ದು ಎಲ್ಲ ತತ್ತ್ವಗಳೂ ಇದರ ಶಾಖೋಪಶಾಖೆಗಳಾಗಿವೆ.

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...