Friday 29 May 2020

🕉️🕉️🕉️ಬ್ರಹ್ಮತತ್ವ🕉️🕉️🕉️


ಮೂಲ ಎಂಬ ಅರ್ಥವುಳ್ಳ ಬೃಃ ಶಬ್ದದಿಂದ ಬ್ರಹ್ಮಶಬ್ದ ಬಂದಿದೆ. ಯಾವುದು ತಾನೇ ತನ್ನ ಅಂತಃಶಕ್ತಿಯಿಂದಲೇ ನಿರಾತಂಕವಾಗಿ ಆವಿರ್ಭವಿಸುವುದೋ ಅದೇ ಬ್ರಹ್ಮ. ಇದೇ ಜಗತ್ತಿಗೆ ಏಕೈಕ ಕಾರಣ ಮತ್ತು ಏಕಮೇವಾದ್ವಿತೀಯವಾದದ್ದು. ಉಪನಿಷತ್ಕಾರರ ಮೊದಲ ತತ್ತ್ವವೇ ಬ್ರಹ್ಮನನ್ನು ಕುರಿತದ್ದು. ಬ್ರಹ್ಮ ಮತ್ತು ಆತ್ಮ ಎಂಬ ಶಬ್ದಗಳು ಮೊಟ್ಟಮೊದಲು ಅಥರ್ವವೇದದಲ್ಲಿ ಉಪಯೋಗಿಸಲ್ಪಟ್ಟಿವೆ. ಪರಮಾತ್ಮಪರವಾಗಿ ಬ್ರಹ್ಮಶಬ್ದದ ಅರ್ಥಪುಷ್ಟಿಯನ್ನು ಅಲ್ಲಿ ಕಾಣುತ್ತೇವೆ.

ಉಪನಿಷತ್ಕಾರರ ಮೊದಲ ಪ್ರಶ್ನೆ ಜಗತ್ತು ಮತ್ತು ನಾವು ಎಲ್ಲಿಂದ ಬಂದೆವು ? ನಮ್ಮ ಮುಂದಿನ ಗತಿಗೂ ಸುಖದುಃಖಗಳಿಗೂ ಕಾರಣರಾರು ? ಎಂಬುದೇ ಆಗಿದೆ. ಉತ್ತರವಾಗಿ ಸತ್, ಆತ್ಮ, ಬ್ರಹ್ಮ, ಅಕ್ಷರ, ಆಕಾಶ ಶಬ್ದಗಳಿಂದ ಜಗತ್ಕಾರಣವಾದ ಪರವಸ್ತುವನ್ನು ಹೇಳಲಾಗಿದೆ. ಬ್ರಹ್ಮನೇ ಜಗತ್ತಿಗೆ ಉಪಾದಾನ ಕಾರಣ ಮತ್ತು ನಿಮಿತ್ತಕಾರಣ ಎರಡೂ. ಬ್ರಹ್ಮ ಹೊರತು ಮತ್ತಾವುದೂ ಮೊದಲು ಇರಲಿಲ್ಲವಾದ್ದರಿಂದ ಜಗತ್ತು ಬ್ರಹ್ಮಮಯ. ಸಂಕಲ್ಪ ಮಾತ್ರದಿಂದ ಜಗತ್ತನ್ನು ಸೃಷ್ಟಿಸಿ ಅದರಲ್ಲಿ ಬ್ರಹ್ಮ ಅಂತರ್ಯಾಮಿಯಾಗಿದೆ. ಸರ್ವಭೂತಗಳಿಗೂ ಅಂತರಾತ್ಮನಾದ ಬ್ರಹ್ಮವೊಂದೇ ಶಾಶ್ವತ, ಸರ್ವಶಕ್ತ, ಅನಂತ, ಪೂರ್ಣಕಾಮ. ಸರ್ವರಿಗೂ ಅಂತರಾತ್ಮನಾದ ಬ್ರಹ್ಮನಲ್ಲಿ ಸರ್ವ ಆತ್ಮಗಳೂ ಚಕ್ರದ ನೇಮಿ ಮತ್ತು ನಾಭಿಯಲ್ಲಿ ಅರೆಕಾಲುಗಳು ಹೇಗೋ ಹಾಗೆ ಅಡಕವಾಗಿದ್ದಾರೆ. ಲವಣ ನೀರಿನಲ್ಲಿ ಕರಗಿ ವ್ಯಾಪಿಸುವಂತೆ ಬ್ರಹ್ಮ ಸರ್ವವನ್ನೂ ವ್ಯಾಪಿಸಿದ್ದಾನೆ. ಅಗ್ನಿಯಿಂದ ಅಗ್ನಿಕಣಗಳೂ ಜೇಡರ ಹುಳುವಿನಿಂದ ಬಲೆಯ ಎಳೆಗಳೂ ವೇಣುವಿನಿಂದ ನಾದದ ಅಲೆಗಳೂ ಉದ್ಭವಿಸುವಂತೆ ಎಲ್ಲ ಭೂತಜಾತಗಳೂ ಬ್ರಹ್ಮನಿಂದಲೇ ಉದ್ಭವಿಸುತ್ತವೆ. ಎಲ್ಲ ಭೂತ ಜಾತಗಳಿಗೂ ಬ್ರಹ್ಮ ಏಕಾಯನನಾಗಿದ್ದಾನೆ.

ಬ್ರಹ್ಮನಿಗೂ ಜಗತ್ತಿಗೂ ಹೇಗೆ ಸಂಬಂಧ ಎಂಬ ವಿಚಾರದಲ್ಲಿ ಉಪನಿಷತ್ತುಗಳು ಹೀಗೆಯೇ ಎಂದು ಸ್ಪಷ್ಟವಾಗಿ ಹೇಳಿಲ್ಲ. ಅಂದರೆ ಆತ ವಿಶ್ವಾಂತರ್ಯಾಮಿಯೆಂದೂ ವಿಶ್ವಾತೀತನೆಂದೂ ಎರಡು ಬಗೆಯಾಗಿ ಹೇಳಿವೆ. ಹಾಗೆಯೇ ಸಪ್ರಪಂಚ ಬ್ರಹ್ಮ, ನಿಷ್ಪ್ರಪಂಚ ಬ್ರಹ್ಮರ ವಿಚಾರವೂ ಬರುತ್ತದೆ. ಈ ಎರಡು ವಾದಗಳ ಸಮರ್ಥನೆಗೂ ಉಪನಿಷತ್ತಿನಲ್ಲಿ ಸಾಕಷ್ಟು ತತ್ತ್ವಪ್ರತಿಪಾದನೆಯನ್ನು ಕಾಣುತ್ತೇವೆ. ಮುಂಡಕೋಪನಿಷತ್ತಿನಲ್ಲಿ ಎರಡು ವಾದಗಳನ್ನೂ ಸಮನ್ವಯ ಮಾಡುವ ಅರ್ಥವುಳ್ಳ ಒಂದು ಮಂತ್ರವಿದೆ. ಬ್ರಹ್ಮನನ್ನು ಬಿಟ್ಟು ಜಗತ್ತಿಗೆ ಬೇರೆ ಅಸ್ತಿತ್ವವಿಲ್ಲ. ಆದರೆ ಬ್ರಹ್ಮ ಜಗತ್ತಿಗೆ ಪರಿಮಿತನಾಗಿಲ್ಲ. ನಾಮರೂಪಗಳಿಗೆ ಸಿಲುಕಿಲ್ಲ. ಬ್ರಹ್ಮ ಪರಿಣಾಮವಾದದ ಪ್ರಕಾರ ಬ್ರಹ್ಮನೇ ಜಗತ್ತಿನ ರೂಪವನ್ನು ತಾಳುತ್ತಾನೆ. ಇದು ಸಪ್ರಪಂಚವಾದ. ಬ್ರಹ್ಮ ಜಗತ್ತಿಗೆ ಕಾರಣನಾಗಿದ್ದು, ನಾಮರೂಪ ಜಗತ್ತು ಬ್ರಹ್ಮನಷ್ಟು ಸತ್ಯವಲ್ಲವೆಂಬುದು ನಿಷ್ಪ್ರಪಂಚವಾದ. ಇದರ ಪ್ರಕಾರ ಬ್ರಹ್ಮ ಜಗತ್ತಿನಂತೆ ಕಾಣಿಸಿಕೊಳ್ಳುತ್ತಾನೆ. ಅಂದರೆ ಬ್ರಹ್ಮವಿವರ್ತವಾದ ಸಮರ್ಥನೆ ಇದೇ. ಆದರೆ ಬ್ರಹ್ಮನೇ ಏಕಮೇವಾದ್ವಿತೀಯವಾದ ಸತ್ಯ ಎಂಬುದನ್ನು ನಿಸ್ಸಂಶಯವಾಗಿ ಸಾರಲಾಗಿದೆ. ನಿಷ್ಪ್ರಪಂಚನಾದ ಬ್ರಹ್ಮ ಸಪ್ರಪಂಚನಂತೆ ಕಾಣಿಸುತ್ತಾನೆಂದು ಹೇಳುವುದು ಮಾಯಾವಾದ. ಅದ್ವೈತವಾದ ಇದನ್ನೇ ಹೆಚ್ಚು ವಿಸ್ತಾರವಾಗಿ ವಿವರಿಸಿದೆ. ಉಪನಿಷತ್ತುಗಳಲ್ಲಿ ಮಾಯೆ ಎಂಬ ಶಬ್ದ ಅಷ್ಟು ನಿರ್ದಿಷ್ಟವಾಗಿಲ್ಲ. ಇದರ ಅರ್ಥವನ್ನೇ ಕೊಡುವ ಅವಿದ್ಯೆ ಎಂಬ ಮತ್ತೊಂದು ಪದದ ಪ್ರಯೋಗವೂ ಇದೆ.

ನಾಮರೂಪ ಜಗತ್ತಿನ ಸೃಷ್ಟಿಕ್ರಮವನ್ನು ಉಪನಿಷತ್ತುಗಳು ಹೇಳುವಾಗ ಚೇತನ, ಅಚೇತನ ಎಂಬ ಭೇದವನ್ನು ಹೇಳಿವೆ. ಅಚೇತನ ಜಗತ್ತು ಚೇತನ ಜೀವಗಳಿಗೆ ಸಾಧನಸಾಮಗ್ರಿ ಮಾತ್ರ. ಅದು ಪಂಚಭೂತಗಳಿಂದ ಕೂಡಿದೆ. ಪೃಥ್ವಿ, ಅಪ್, ತೇಜಸ್, ವಾಯು, ಆಕಾಶ ಎಂಬುವೇ ಇವು. ಛಾಂದೋಗ್ಯೋಪನಿಷತ್ತಿನಲ್ಲಿ ಅಗ್ನಿ, ಜಲ, ಪೃಥ್ವಿ ಎಂಬುವು ಬ್ರಹ್ಮನಿಂದ ಕ್ರಮವಾಗಿ ಸೃಷ್ಟಿಯಾದುವೆಂದು ಹೇಳಲಾಗಿದೆ. ತೇಜಸ್ಸು, ಜಲ, ಅನ್ನಗಳೇ ಇತರ ಸಕಲ ಭೂತಜಾತಗಳಿಗೆ ಮೂಲಕಾರಣ. ಈ ಮೂರನ್ನು ಸೃಷ್ಟಿಸಿದ ಮೇಲೆ ಇದನ್ನು ಒಂದುಗೂಡಿಸಿ ಅವುಗಳೊಂದಿಗೆ ಜೀವನಸಹಿತ ಪ್ರವೇಶಿಸಿ ನಾಮರೂಪಾತ್ಮಕವಾದ ಜಗತ್ತನ್ನು ಸೃಜಿಸಲು ಬ್ರಹ್ಮ ಸಂಕಲ್ಪಿಸಿತು. ಹೀಗೆ ಜಗತ್ತಿಗೆ ಬ್ರಹ್ಮವೇ ಉಪಾದಾನಕಾರಣ, ನಿಮಿತ್ತಕಾರಣ ಎರಡೂ ಆಗಿದೆ. ಐತರೇಯ, ತೈತ್ತಿರೀಯ ಉಪನಿಷತ್ತುಗಳಲ್ಲಿಯೂ ಪರಮಾತ್ಮಸಂಕಲ್ಪದಿಂದ ಸೃಷ್ಟಿ ಯೆಂದೂ ಅದರೊಳಗೆ ಬ್ರಹ್ಮನೇ ಅಂತಃಪ್ರವೇಶ ಮಾಡಿದನೆಂದೂ ಭಾವವಿದೆ. ಕಾರಣರೂಪಿ ಯಾದ ಬ್ರಹ್ಮನನ್ನು ತಿಳಿದವ ಅದರಿಂದಾದ ಪಂಚಭೌತಿಕ ಜಗತ್ತನ್ನೂ ಅರಿಯುತ್ತಾನೆ.

ಬ್ರಹ್ಮಜ್ಞಾನವನ್ನು ಪಡೆಯುವ ಕ್ರಮವನ್ನು ಕುರಿತು ಪರಾವಿದ್ಯೆ, ಅಪರಾವಿದ್ಯೆಗಳ ಭೇದವನ್ನು ಹೇಳಿದೆ. ಬ್ರಹ್ಮನನ್ನು ತಿಳಿಯುವುದು ಪರಾವಿದ್ಯೆ. ನಾಮರೂಪವಾದ ಜಗತ್ತನ್ನು ತಿಳಿಯುವುದು ಅಪರಾವಿದ್ಯೆ. ಮಣ್ಣನ್ನು ತಿಳಿಯುವುದರಿಂದ ಮಣ್ಣಿನಿಂದಾದುವೆಲ್ಲವನ್ನೂ ತಿಳಿಯುವಂತೆ, ಬ್ರಹ್ಮನನ್ನು ತಿಳಿದರೆ ಎಲ್ಲವನ್ನೂ ತಿಳಿದಂತೆ, ಇದಕ್ಕಿಂತ ಹೆಚ್ಚಿನ ವಿದ್ಯೆ ಯಾವುದೂ ಇಲ್ಲ. ಹೀಗೆಂದು ಮುಂಡಕೋಪನಿಷತ್ ಹೇಳುತ್ತದೆ. ಆದರೆ ಈಶೋಪನಿಷತ್ ಬ್ರಹ್ಮನನ್ನು ಅರಿಯಲು ಸಾಧ್ಯವಿಲ್ಲವೆಂದು ಬ್ರಹ್ಮಸ್ವರೂಪವನ್ನು ಹೇಳುವಾಗ ಸೂಚಿಸುತ್ತದೆ. ‘ಚಲಿಸುತ್ತದೆ, ಚಲಿಸುವುದಿಲ್ಲ, ದೂರದಲ್ಲಿದೆ, ಸಮೀಪದಲ್ಲಿದೆ, ಒಳಗೂ ಇದೆ, ಹೊರಗೂ ಇದೆ.’ ಹೀಗೆಯೇ ಬೃಹದಾರಣ್ಯಕದಲ್ಲಿ ಅಕ್ಷರರೂಪಿಯಾದ ವಿಶ್ವಾತ್ಮನನ್ನು ಕುರಿತು `ಸ್ಥೂಲನಲ್ಲ, ಅಣುವಲ್ಲ, ಹ್ರಸ್ವನಲ್ಲ, ದೀರ್ಘನಲ್ಲ, ಅಗ್ನಿಯಂತೆ ಕೆಂಪಾಗಿಲ್ಲ, ಜಲದಂತೆ ಹರಿಯುವುದಿಲ್ಲ. ನೆರಳಲ್ಲ, ಕತ್ತಲೆಯಲ್ಲ, ವಾಯುವಾಗಲೀ ಆಕಾಶವಾಗಲೀ ಅಲ್ಲ, ಸಂಸರ್ಗವುಳ್ಳದ್ದಲ್ಲ, ರಸವಲ್ಲ, ಗಂಧವಲ್ಲ. ಅದಕ್ಕೆ ಕಣ್ಣುಗಳಿಲ್ಲ, ಅದು ಅಳತೆಗೊಳಗಾದುದಲ್ಲ, ಒಳಗಿಲ್ಲ, ಹೊರಗಿಲ್ಲ’ ಎಂಬ ವಿವರಣೆ ಇದೆ. ಕೊನೆಯಲ್ಲಿ ಅರಿಯಲ್ಪಡುವವನೂ ನೋಡುವವನೂ ಮನನಮಾಡು ವವನೂ ಅರಿಯುವವನೂ ಅದಲ್ಲದೆ ಬೇರೆಯಲ್ಲ. ಈ ಅಕ್ಷರನಲ್ಲಿ ಎಲ್ಲವೂ ಓತಪ್ರೋತವಾಗಿದೆ. ಯಾವನು ಈ ಅಕ್ಷರನನ್ನು ತಿಳಿದು, ಈ ಲೋಕವನ್ನೇ ಬಿಡುವನೋ ಅವನು ಬ್ರಹ್ಮಜ್ಞನೆನಿಸುವನು ಎಂದು ಹೇಳಿದ್ದರೂ ವಾಕ್ಕಿಗೂ ಮನಸ್ಸಿಗೂ ದೂರನಾಗಿರುವನೆಂಬ ಸೂಚನೆ ಇದೆ. ಇದು ವಾಚಕ್ನವೀಗಾರ್ಗಿಗೆ ಯಾಜ್ಞವಲ್ಕ್ಯ ಜನಕನ ಸಭೆಯಲ್ಲಿ ಮಾಡಿದ ಉಪದೇಶ. ಧನದಲ್ಲಿ ನಿರಾಸಕ್ತಳಾಗಿ, ಅಮೃತತ್ವವನ್ನು ಪಡೆಯುವ ಅಭಿಲಾಷೆಯಿಂದ ತನ್ನ ಪತ್ನಿ ಮೈತ್ರೇಯಿ ಬ್ರಹ್ಮೋಪದೇಶ ಮಾಡಬೇಕೆಂದು ಬೇಡಿದಾಗಲೂ ಯಾಜ್ಞವಲ್ಕ್ಯ ಸರ್ವಾಂತರ್ಯಾಮಿಯಾದ ಆತ್ಮನನ್ನು (ಬ್ರಹ್ಮ) ತಿಳಿಯುವುದರಿಂದ ಮಾತ್ರವೇ ಅಮೃತತ್ವವನ್ನು ಪಡೆಯಬಹುದೆಂದೂ ಅವನೊಬ್ಬನನ್ನು ತಿಳಿದರೆ ಸರ್ವವನ್ನೂ ತಿಳಿದಂತಾಗುವುದೆಂದೂ ಹೇಳುತ್ತಾನೆ. ಆದರೆ ಬ್ರಹ್ಮತತ್ತ್ವವನ್ನು ತಿಳಿಯುವುದಾಗುವುದಿಲ್ಲ. ಬ್ರಹ್ಮನ ಹೊರತು ಮತ್ತಾವುದೂ ಇಲ್ಲ ಎಂದು ತಿಳಿಯಬೇಕಾದರೆ ಬ್ರಹ್ಮತ್ವವನ್ನು ಪಡೆಯುವುದರಿಂದ ಮಾತ್ರ ಸಾಧ್ಯ ಎಂದೂ ಅಹಂ ಬ್ರಹ್ಮಾಸ್ಮಿ, ತತ್ತ್ವಮಸಿ ಎಂಬ ಜ್ಞಾನವುಂಟಾಗಬೇಕೆಂದೂ ಇದೇ ಉಪನಿಷತ್ತಿನ ಸಾರವೆಂದೂ ಶಂಕರಾಚಾರ್ಯರು ಪ್ರತಿಪಾದಿಸುತ್ತಾರೆ. ಅವರ ವೇದಾಂತಸೂತ್ರಭಾಷ್ಯದಲ್ಲಿ ಬಾಷ್ಕಲಿ ಎಂಬ ಶಿಷ್ಯ ಬಾಧ್ವ ಎಂಬ ಗುರುವಿನಲ್ಲಿ ಬ್ರಹ್ಮಜ್ಞಾನವನ್ನು ಉಪದೇಶಿಸಬೇಕೆಂದು ಕೋರಿದ ಸಂದರ್ಭದಲ್ಲಿ ಮೂರನೆಯ ಸಲ ಕೇಳಿದಾಗಲೂ ಮೌನವಾಗಿದ್ದ ಗುರು ‘ಉಪಶಾಂತೋಯಂ ಆತ್ಮಾ’ ಎಂದು ಕೊನೆಯಲ್ಲಿ ಉಪದೇಶಿಸಿದುದನ್ನು ಉದಾಹರಿಸಿದ್ದಾರೆ. ಬ್ರಹ್ಮನನ್ನು ವರ್ಣಿಸಲು ಸಾಧ್ಯವಿಲ್ಲ, ಬ್ರಹ್ಮನನ್ನು ಅರಿತವ ಬ್ರಹ್ಮನಾಗುತ್ತಾನೆ-ಎಂಬುದೇ ಸಾರಾಂಶ. ಬೃಹದಾರಣ್ಯಕ ‘ನೇತಿ, ನೇತಿ’ ಎಂದು ಬ್ರಹ್ಮಸ್ವರೂಪವನ್ನು ತಿಳಿಸಲೆತ್ನಿಸಿದೆ.

ಜ್ಞಾನಮಾರ್ಗವನ್ನಷ್ಟೇ ಅಲ್ಲದೆ, ಉಪನಿಷತ್ತುಗಳು ಭಕ್ತಿ ಮತ್ತು ಕರ್ಮಮಾರ್ಗಗಳನ್ನೂ ಅನುಮೋದಿಸಿವೆ. ಜಾಗ್ರತ್, ಸ್ವಪ್ನ, ಸುಷುಪ್ತಿ, ತುರೀಯ ಎಂಬ ನಾಲ್ಕು ಅವಸ್ಥೆಗಳಲ್ಲಿ ನಾಲ್ಕನೆಯದರಲ್ಲಿ ಯೋಗಶಕ್ತಿಯಿಂದ ಬ್ರಹ್ಮಜ್ಞಾನ ಉಂಟಾಗುತ್ತದೆ ಎಂದು ಉಪನಿಷತ್ತುಗಳಲ್ಲಿ ಹೇಳಲಾಗಿದೆ. ಆದರೂ ಈ ಜ್ಞಾನಮಾರ್ಗದಲ್ಲಿ ಕರ್ಮಕ್ಕೂ ಭಕ್ತಿಗೂ ಅವಕಾಶವನ್ನು ಕಲ್ಪಿಸಲಾಗಿದೆ. ತೈತ್ತಿರೀಯೋಪನಿಷತ್ತಿನಲ್ಲಿ ಸತ್ಯನಿಷ್ಠೆ, ತಪಸ್ಸು, ವೇದಾಧ್ಯಯನಗಳಿಂದ ಅಮೃತತ್ವವುಂಟಾಗುತ್ತದೆ ಎಂದು ಹೇಳಲಾಗಿದೆ. ಅಹಂಕಾರನಿವೃತ್ತಿಯಾದಾಗಲೇ ಬ್ರಹ್ಮಜ್ಞಾನ ಪ್ರಾಪ್ತಿ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಎಂಬ ಮೂರು ಆಶ್ರಮಗಳಲ್ಲಿದ್ದು ಮಾನವ ಸರ್ವಸಂಗ ಪರಿತ್ಯಾಗ ಭಾವನೆಯಿಂದ ವೈರಾಗ್ಯವನ್ನು ಅಭ್ಯಾಸ ಮಾಡಿದರೆ ಸಂನ್ಯಾಸಾಶ್ರಮ, ಅದರೊಂದಿಗೆ ಬ್ರಹ್ಮಜ್ಞಾನ ಪ್ರಾಪ್ತಿಯಾಗುತ್ತವೆ ಎಂದು ತಿಳಿಸಲಾಗಿದೆ. ಹೀಗೆ ಮೋಕ್ಷಕ್ಕೆ ಅಂದರೆ ಬ್ರಹ್ಮಸಾಕ್ಷಾತ್ಕಾರಕ್ಕೆ ಪೂರ್ವಭಾವಿಯಾಗಿ ಸಾಧನೆಯೂ ಅಗತ್ಯ. ಬೃಹದಾರಣ್ಯಕದಲ್ಲಿ ಪ್ರಜಾಪತಿಯ ಮಕ್ಕಳನ್ನು ದೇವ, ಮನುಷ್ಯ, ಅಸುರ ಎಂದು ವರ್ಗೀಕರಿಸಿ ಅವರಿಗೆ ಪ್ರಜಾಪತಿ ಕರ್ತವ್ಯವನ್ನು ವಿಧಿಸುವಾಗ ಅಸುರರಿಗೆ ದಯಧ್ವಂ ಎಂದೂ ಮನುಷ್ಯರಿಗೆ ದತ್ತ ಎಂದೂ ದೇವತೆಗಳಿಗೆ ದಾಮ್ಯತ ಎಂದೂ ವಿಧಿಸಿರುವ ಸಂಗತಿ ಇದೆ. ಅಂದರೆ ಮಾನವರು ಸಮಾಜದಲ್ಲಿ ಪರಹಿತವನ್ನು ಆಚರಿಸತಕ್ಕದ್ದು, ಲೋಕವನ್ನು ತ್ಯಜಿಸಿ ಒಂಟಿಯಾಗಿದ್ದರೆ ಮಾತ್ರ ಮೋಕ್ಷಪ್ರಾಪ್ತಿಯಲ್ಲ ಎಂಬುದೇ ಸಾರಾಂಶ.

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...