Friday, 29 May 2020

*ತುಂಬಾ ಮನಮುಟ್ಟುವ ಕಥೆ ದಯವಿಟ್ಟು ಸಂಪೂರ್ಣ ಓದಿ.*

*ಒಂದು ಕಪ್ ಮೊಸರೂ,
ಅಪ್ಪನ ಬಿಸಿಯುಸಿರೂ. *

ಬೆಂಗಳೂರಿನ ಯಶವಂತಪುರದಿಂದ ಹಾಸನಕ್ಕೆ ಅಥವಾ ತುಮಕೂರಿಗೆ ಹೋಗುವ ದಾರಿಯಲ್ಲೇ ಗೊರಗುಂಟೆಪಾಳ್ಯವಿದೆ. ಅಲ್ಲಿಂದ ಹೆಬ್ಬಾಳಕ್ಕೆ ಹೋಗುವ ರಸ್ತೆಯಲ್ಲಿ ಅರ್ಧ ಕಿಲೋ ಮೀಟರ್ ಹೋದರೆ,ಸ್ಟ್ಯಾಂಡರ್ಡ್ ಮೆಕ್ಯಾನಿಕಲ್  ವರ್ಕ್ಸ್ ಫ್ಯಾಕ್ಟರಿ ಸಿಗುತ್ತದೆ. ಹೆಚ್ಚಿನ ಸದ್ದಾಗದಂತೆ ಕಾರ್ಯ ನಿರ್ವಹಿಸುವ ವಿದೇಶಿ ನಿರ್ಮಿತ ಯಂತ್ರಗಳು ಅಲ್ಲಿವೆ. ಫ್ಯಾನ್, ರೆಫ್ರಿಜರೇಟರ್, ಟಿ.ವಿಗಳಿಗೆ ಅಗತ್ಯವಾಗಿ ಬೇಕಾಗುವ ಬಿಡಿಭಾಗಗಳನ್ನು ಅಲ್ಲಿ ಉತ್ಪಾದಿಸಲಾಗುತ್ತದೆ. ಎಲ್ಲಾ ಪ್ರಮುಖ ಕಂಪನಿಗಳಿಗೂ ಬಿಡಿ ಭಾಗಗಳನ್ನು ಸಪ್ಲೈ ಮಾಡುತ್ತಿರುವುದರಿಂದ ಸ್ಟ್ಯಾoಡರ್ಡ್ ಮೆಕ್ಯಾನಿಕಲ್‌ಸ್‌ ಫ್ಯಾಕ್ಟರಿಗೆ ಒಳ್ಳೆಯ ಹೆಸರೂ ಇದೆ.

ಈ ಫ್ಯಾಕ್ಟರಿ ಮಾಲೀಕನೇ ರಂಗಸ್ವಾಮಿ. ಈತ, ಅರಸೀಕೆರೆ ಸಮೀಪದ ಹಳ್ಳಿಯವನು. ಸಿದ್ದಗಂಗಾ ಮಠದಲ್ಲಿ ಹೈಸ್ಕೂಲು, ತುಮಕೂರಿನಲ್ಲಿ ಐಟಿಐ ಓದಿದವನು ಸೀದಾ ಬಂದಿದ್ದು ಪೀಣ್ಯಕ್ಕೆ. ಹೆಲ್ಪರ್ ಆಗಿ ಒಂದು ಫ್ಯಾಕ್ಟರಿ ಸೇರಿಕೊಂಡವನು ಐದು ವರ್ಷದಲ್ಲಿ ಎಲ್ಲ ಬಗೆಯ ಕೆಲಸ ಕಲಿತ. ನಂತರ ಮಾರ್ಕೆಟಿಂಗ್ ಮ್ಯಾನೇಜರ್ ಆದ. ಮಾರಾಟಕ್ಕೆ ಸಂಬಂಧಿಸಿದ ಆಳ-ಅಗಲಗಳು ರಂಗಸ್ವಾಮಿಗೆ ಪರಿಚಯವಾದದ್ದೇ ಆಗ. ಹತ್ತಾರು ಕಂಪನಿಗಳ ಮುಖ್ಯಸ್ಥರ ಒಡನಾಟ, ವಿಶ್ವಾಸ, ಅಲ್ಲಿನ ವಹಿವಾಟುಗಳಿಗೆ ಇರುವ ಬೇಡಿಕೆಯನ್ನು ಗಮನಿಸಿದ ನಂತರ, ಹೇಗಿದ್ರೂ ಎಲ್ಲ ಕೆಲಸದ ಬಗ್ಗೆ ಗೊತ್ತಿದೆ. ಒಂದೆರಡು ಕಂಪನಿಗಳಿಂದ ಕಾಂಟ್ರಾಕ್ಟ್ ತಗೊಂಡು ಸ್ಪೇರ್ ಪಾರ್ಟ್ಸ್ ಉತ್ಪಾಾದನೆಯ ಸ್ವಂತ ಫ್ಯಾಕ್ಟರಿ ಶುರು ಮಾಡಿದ್ರೆ ಹೇಗೆ ಎಂಬ ಯೋಚನೆಯೂ ಅವನಿಗೆ ಬಂತು.

ರಂಗಸ್ವಾಮಿ ತಡಮಾಡಲಿಲ್ಲ. ಒಂದು ಪುಟ್ಟ ಶೆಡ್‌ನಲ್ಲಿ ಫ್ಯಾಕ್ಟರಿಯನ್ನು ಆರಂಭಿಸಿಯೇಬಿಟ್ಟ. ಯೌವನದ ಹುಮ್ಮಸ್ಸು ಹಾಗೂ ಗೆಲ್ಲಬೇಕೆಂಬ ಹಠದಿಂದ ಹಗಲಿರುಳೂ ದುಡಿದ. ಪರಿಣಾಮ, ಕೆಲವೇ ದಿನಗಳಲ್ಲಿ ರಂಗಸ್ವಾಮಿಯ ಬ್ಯಾಂಕ್ ಬ್ಯಾಲೆನ್ಸ್  ದುಪ್ಪಟ್ಟಾಯಿತು. ಅದುವರೆಗೂ ಸೆಕೆಂಡ್‌ ಹ್ಯಾಂಡ್  ಹೀರೋ ಹೋಂಡಾದಲ್ಲಿ ಓಡಾಡುತ್ತಿದ್ದವನು, ಒಟ್ಟಿಗೇ ಎರಡು ಕಾರ್ ಖರೀದಿಸುವಷ್ಟು ಶ್ರೀಮಂತನಾದ. 25 ಮಂದಿಗೆ ಕೆಲಸ ಕೊಟ್ಟ. ಫ್ಯಾಕ್ಟರಿಗೆ ಸ್ವಂತ ಬಿಲ್ಡಿಂಗ್ ಕಟ್ಟಿಸಿದ. ವಾಸಕ್ಕೆ, ಯಶವಂತಪುರದಲ್ಲೇ ಒಂದು ಮನೆ ಖರೀದಿಸಿದ. ಇಷ್ಟೆಲ್ಲ ಆದಮೇಲೆ, ರಂಗಸ್ವಾಮಿಯ ಯಶೋ ಗಾಥೆ ನೂರಾರು ಮಂದಿಯನ್ನು ತಲುಪಿತು. ಹೇಗಿದ್ದವನು ಹೇಗಾಗಿಬಿಟ್ಟ ಅಲ್ವ ಎಂದು ಎಲ್ಲರೂ ಬೆರಗಾಗುವ ವೇಳೆಗೇ, ಹಳೇ ಪರಿಚಯದ ಹುಡುಗಿಯೊಂದಿಗೆ ಮದುವೆಯಾದ ರಂಗಸ್ವಾಮಿ, ವರ್ಷದ ನಂತರ ಗಂಡು ಮಗುವಿನ ತಂದೆಯೂ ಆದ.

ಕೈ ತುಂಬಾ ವರಮಾನ ಕೊಡುವ ಕೆಲಸ, ಮನ ಮೆಚ್ಚಿದ ಹೆಂಡತಿ, ಖುಷಿ ಹೆಚ್ಚಿಸುವ ಮಗ, ಸಮಾಜದಲ್ಲಿ ವಿಶೇಷ ಸ್ಥಾನಮಾನ, ಯಾರಿಗೂ ಸಾಲ ಕೊಡಬೇಕಿಲ್ಲ ಎಂಬ ನಿರಾಳ ಭಾವ... ಲೈಫ್ ಈಸ್ ಬ್ಯೂಟಿಫುಲ್ ಎನ್ನಲು ಇಷ್ಟು ಸಾಕಲ್ಲವೇ? ರಂಗಸ್ವಾಮಿಯೂ ಇಂಥದೇ ಸಂಭ್ರಮದಲ್ಲಿದ್ದ. ಆಗಲೇ, ಯಾರೂ ನಿರೀಕ್ಷಿಸದ ಆಘಾತವೊಂದು ಅವನನ್ನು ಅಪ್ಪಳಿಸಿತು. ಅದೊಂದು ದಿನ ಮಾರ್ಕೆಟ್‌ಗೆ ಹೋಗಿ ವಾಪಸಾಗುತ್ತಿದ್ದ ರಂಗಸ್ವಾಮಿಯ ಪತ್ನಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ...
***
‘ಈಗಾಗ್ಲೇ ನನಗೂ ನಲವತ್ತೈದು ತುಂಬಿದೆ. ಮಗ 7ನೇ ಕ್ಲಾಸ್‌ಗೆ ಬಂದಿದಾನೆ. ಹೀಗಿರುವಾಗ ಇನ್ನೊಂದು ಮದುವೆಯಾಗಿ ಸಾಧಿಸೋದೇನಿದೆ? ಸೆಕೆಂಡ್ ಮ್ಯಾರೇಜ್ ಮಾಡ್ಕೊಂಡೆ ಅಂತಿಟ್ಕೊಳ್ಳಿ, ಹೊಸದಾಗಿ ಬಂದ ಹೆಂಡತಿ ನನ್ನ ಮಗನನ್ನು ತಿರಸ್ಕಾರದಿಂದ ನೋಡಿಬಿಟ್ರೆ, ಅಥವಾ ಹೆಂಡತಿಯ ಮೇಲಿನ ಮೋಹದಿಂದ ನಾನೇ ವಿಲನ್ ಥರಾ ವರ್ತಿಸಿಬಿಟ್ರೆ? ಬೇಡ ಬೇಡ. ಇಂಥ ಸಂದರ್ಭಗಳು ಜೊತೆಯಾಗೋದೇ ಬೇಡ. ನನಗಿನ್ನು ಮಗನೇ ಸರ್ವಸ್ವ . ಹೆಂಡತಿಯ ನೆನಪನ್ನು ಜೊತೆಗಿಟ್ಟುಕೊಂಡೇ ಇವನನ್ನು ಚೆನ್ನಾಗಿ ಓದಿಸ್ತೇನೆ...’. ಎರಡನೇ ಮದುವೆ ಮಾಡಿಕೊಳ್ಳಪ್ಪಾ ಎಂದು ಒತ್ತಾಯಿಸಲು ಬಂದ ಬಂಧುಗಳು ಹಾಗೂ ಹಿತೈಷಿಗಳಿಗೆ ರಂಗಸ್ವಾಮಿ ಹೇಳಿದ ಖಡಕ್ ಮಾತುಗಳಿವು.

ರಂಗಸ್ವಾಮಿ ಮಾತಿಗೆ ತಪ್ಪಲಿಲ್ಲ. ಅವನು ಮಗನನ್ನು ಕಣ್ರೆಪ್ಪೆಯಷ್ಟು ಜೋಪಾನವಾಗಿ ನೋಡಿಕೊಂಡ. ಒಳ್ಳೆಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಿಸಿದ. ನನಗೆ ನೀನೇ ಪ್ರಪಂಚ. ನೀನು ಜೊತೆಗಿಲ್ಲದೆ ನಾನು ಬದುಕಲಾರೆ ಎಂಬುದನ್ನು ಪರೋಕ್ಷವಾಗಿ ಮನದಟ್ಟು ಮಾಡಿಕೊಟ್ಟ.ಮುಂದೊಂದು ದಿನ- ‘ನನ್ನ ಕ್ಲಾಸ್ ಮೇಟ್ ಹುಡುಗೀನ ಲವ್ ಮಾಡಿದೀನಪ್ಪಾ. ಅವಳನ್ನೇ ಮದುವೆ ಆಗ್ತೀನಿ. ಅವರ ಮನೇಲಿ ಒಪ್ಪಿದಾರೆ. ನಿನ್ನ ಒಪ್ಪಿಗೆ ಬೇಕಪ್ಪಾ...’ ವಿಧೇಯನಾಗಿಯೇ ಹೇಳಿದ್ದ ಮಗ. ರಂಗಸ್ವಾಮಿ ಅದನ್ನೂ ಆಕ್ಷೇಪಿಸಲಿಲ್ಲ. ಅದ್ಧೂರಿಯಾಗಿ  ಮದುವೆ ಮಾಡಿಕೊಟ್ಟ. ಇದಾಗಿ ವರ್ಷ ಕಳೆಯುತ್ತಲೇ ಫ್ಯಾಕ್ಟರಿ ವ್ಯವಹಾರವನ್ನೆಲ್ಲ ಮಗನಿಗೆ ವಹಿಸಿಕೊಟ್ಟು, ‘ನನಗೆ ವಯಸ್ಸಾಯಿತು ಕಣಪ್ಪಾ. ರೆಸ್ಟ್ ಬೇಕು ಅನ್ನಿಸ್ತಿದೆ. ಇನ್ಮುಂದೆ ನಾನು ಮನೇಲಿರ್ತೀನಿ. ಶ್ರದ್ಧೆ ಮತ್ತು ಎಚ್ಚರದಿಂದ ಫ್ಯಾಕ್ಟರಿ ನಡೆಸ್ಕೊಂಡು ಹೋಗು’ ಎಂದಿದ್ದ. ಮರುದಿನವೇ ವಕೀಲರ ಜೊತೆಗೂ ಮಾತಾಡಿ ಫ್ಯಾಕ್ಟರಿಯನ್ನು ಮಗನ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಿಬಿಟ್ಟ.

ಚಿತ್ರಾನ್ನ-ಕಾಯಿಚಟ್ನಿ, ದೋಸೆ-ಜಾಮೂನ್, ಬಿಸಿಬೇಳೆಬಾತ್- ಚಿಪ್ಸ್, ವಾಂಗೀಬಾತ್-ಆಲೂಬೋಂಡಾ, ಪಲಾವ್-ಗಟ್ಟಿಮೊಸರು- ಹೀಗೆ ಪ್ರತಿಯೊಂದು ತಿಂಡಿಗೂ ಒಂದು ಸೈಡ್ ಐಟಂ ಇರಬೇಕು ಎಂಬುದು ರಂಗಸ್ವಾಮಿಯ ಆಸೆಯಾಗಿತ್ತು. ಅದರಲ್ಲೂ ಪಲಾವ್-ಮೊಸರು ಅವನ ಮೆಚ್ಚಿನ ತಿಂಡಿಯಾಗಿತ್ತು. ನಾವು ಎಷ್ಟು ದಿನ ಇರ್ತೀವೋ ಗೊತ್ತಿಲ್ಲ. ಇರುವಷ್ಟು ದಿನ ಚೆನ್ನಾಗಿ ತಿಂದುಂಡು ಬಾಳಬೇಕು ಎಂಬುದು ಅವನ ವಾದವಾಗಿತ್ತು.

ಅವತ್ತು ರಂಗಸ್ವಾಮಿಯ ಮಗ ಜಾಗಿಂಗ್ ಮುಗಿಸಿ ಬಾಗಿಲ ಬಳಿ ಬಂದಾಗಲೇ ಪಲಾವ್‌ನ ಘಮ ಮೂಗಿಗೆ ಅಡರಿತು. ಓಹ್, ಇವತ್ತು ಅಪ್ಪನ ಫೇವರಿಟ್ ತಿಂಡಿ ಎಂದುಕೊಂಡು ಅವನು ಒಳಬರುವುದಕ್ಕೂ, ಡೈನಿಂಗ್ ಟೇಬಲ್ ಮುಂದೆ ತಿಂಡಿಗೆ ಕುಳಿತಿದ್ದ ರಂಗಸ್ವಾಮಿ- ಸ್ವಲ್ಪ ಮೊಸರು ಇದ್ರೆ ಕೊಡಮ್ಮ. ಪಲಾವ್ ಜೊತೆ ಮೊಸರು ಕೊಡೋದನ್ನೇ ಮರೆತಿದ್ದೀಯಲ್ಲ.. ಅನ್ನುವುದಕ್ಕೂ ಸರಿಹೋಯಿತು. ರಂಗಸ್ವಾಮಿಯ ಸೊಸೆ ಸರ್ರನೆ ಹೊರಬಂದವಳೇ- ‘ಇಲ್ಲ, ಮೊಸರಿಲ್ಲ; ಮೊಸರು ಖಾಲಿಯಾಗಿದೆ’ ಅಂದು ಭರ್ರನೆ ಹೋಗಿಬಿಟ್ಟಳು. ಹೌದಾ? ಹೋಗ್ಲಿ ಬಿಡಮ್ಮ ಎನ್ನುತ್ತಾ ರಂಗಸ್ವಾಮಿ ತಿಂಡಿಯ ಶಾಸ್ತ್ರ ಮುಗಿಸಿದ.

ದಿನವೂ ಹೆಂಡತಿಯೊಂದಿಗೆ ತಿಂಡಿ ತಿಂದು ನಂತರ ಫ್ಯಾಕ್ಟರಿಗೆ ಹೋಗುವುದು ರಂಗಸ್ವಾಮಿಯ ಮಗನ ದಿನಚರಿಯಾಗಿತ್ತು. ಅವತ್ತೂ ಹಾಗೆಯೇ ತಿಂಡಿಗೆ ಕೂತವನು ಅಸಹನೆ ಮತ್ತು ಗೊಂದಲದಿಂದ ಹೆಂಡತಿಯನ್ನು ನೋಡಿದ. ಕಾರಣ; ಹೆಂಡತಿ ತಂದಿಟ್ಟ ತಿಂಡಿಯೊಂದಿಗೆ ಅರ್ಧ ಲೀಟರಿನಷ್ಟು ಗಟ್ಟಿ ಮೊಸರಿತ್ತು. ''ಅಪ್ಪ ಕೇಳಿದಾಗ ಮೊಸರೇ ಇಲ್ಲ ಅಂದೆಯಲ್ಲ? ಇದು ಎಲ್ಲಿತ್ತು? ಯಾಕೆ ಸುಳ್ಳು ಹೇಳ್ದೆ?'' ಎಂದು ಪ್ರಶ್ನಿಸಿದ. ಆಕೆ- ‘ಗಟ್ಟಿಯಾಗಿ ಮಾತಾಡಬೇಡಿ. ಸೈಲೆಂಟಾಗಿ ತಿಂಡಿ ತಿನ್ನಿ. ನಿಮ್ಮಪ್ಪ ಕೇಳ್ತಾರೆ ಅಂತ ಅವರು ಕೇಳಿದ್ದನ್ನೆಲ್ಲ ಕೊಡೋಕಾಗುತ್ತಾ? ಬಾಯಿ ಚಪಲ ಯಾವತ್ತೂ ಒಳ್ಳೆಯದಲ್ಲ. ಇವತ್ತು ಮೊಸರು ಕೇಳ್ತಾರೆ. ನಾಳೆ ತುಪ್ಪಾನೇ ಬೇಕು ಅಂತಾರೆ. ಕೇಳಿದ್ದನ್ನೆಲ್ಲ ರೆಡಿ ಮಾಡಿ ಇಟ್ಕೊoಡಿರೋಕೆ ಆಗುತ್ತಾ?’ ಅಂದುಬಿಟ್ಟಳು. ತಿರುಗಿ ಮಾತಾಡಿದರೆ ಜಗಳ ಆಗುತ್ತೆ. ಜಗಳ ಆಗಿಬಿಟ್ರೆ ರಾತ್ರಿ ಅನ್ನೋದು ನರಕ ಆಗುತ್ತೆ. ಉಹೂಂ, ಅಂಥ ಪರಿಸ್ಥಿತಿ ಜೊತೆಯಾಗಬಾರದು ಎಂದು ಯೋಚಿಸಿದ ರಂಗಸ್ವಾಮಿಯ ಮಗ, ಮೌನವಾಗಿ ಫ್ಯಾಕ್ಟರಿಗೆ ಹೋಗಿಬಿಟ್ಟ. ರಂಗಸ್ವಾಮಿ, ಮನೆಯ ಹೊರಗಿನ ಕೈ ತೋಟದಲ್ಲಿ ಇದ್ದುದರಿಂದ ಗಂಡ-ಹೆಂಡಿರ ದುಸುಮುಸು ಅವನಿಗೆ ಗೊತ್ತಾಾಗಲೇ ಇಲ್ಲ.

ಅವತ್ತು ನಾಲ್ಕೈದು ಕಂಪನಿಗಳ ಮುಖಂಡರೊಂದಿಗೆ ಹೋಟೆಲೊಂದರಲ್ಲಿ ವ್ಯವಹಾರ ಸಂಬಂಧಿ ಮೀಟಿಂಗ್ ನಡೆಸಬೇಕಾಗಿ ಬಂತು. ಊಟದ ಸಮಯದಲ್ಲಿ ಅವರೆಲ್ಲಾ- ''ಊಟ ಬೇಡ, ದೋಸೆ ವಡಾ ಥರದ ಐಟಮ್ಸ್ ತಗೊಳ್ಳೋಣ. ಕಡೆಗೆ ಮೊಸರನ್ನ ಇರಲಿ''ಎಂದರು. ಮೊಸರನ್ನದಲ್ಲಿದ್ದ ಕೆನೆಮೊಸರು, ದಾಳಿಂಬೆ, ಗೋಡಂಬಿಯ ಚೂರುಗಳನ್ನು ಕಂಡಾಗ ಛಕ್ಕನೆ, ಮೊಸರು ಇದ್ಯಾ ಎಂದು ಕೇಳಿದ ಅಪ್ಪನ ಮುಖವೇ ಎದುರು ಕಂಡಂತಾಗಿ ರಂಗಸ್ವಾಮಿಯ ಮಗ ತತ್ತರಿಸಿಹೋದ. ತನಗಾಗಿ ಏನೆಲ್ಲಾ ತ್ಯಾಗ ಮಾಡಿದ ತಂದೆಗೆ ಒಂದು ಕಪ್ ಗಟ್ಟಿ ಮೊಸರು ಕೊಡಲು ಆಗಲಿಲ್ಲವಲ್ಲ ಎಂಬ ಚಿಂತೆ ಅವನನ್ನು ಕ್ಷಣಕ್ಷಣಕ್ಕೂ ಕಾಡತೊಡಗಿತು.

ಉಹೂಂ, ಅವನ ಹೆಂಡತಿಗೆ ಇಂಥ ಯಾವ ‘ಗಿಲ್ಟ್ ಕೂಡ ಇರಲಿಲ್ಲ. ಪ್ರತಿಯೊಂದು ತಿಂಡಿಗೂ ಮತ್ತೊಂದು ಸೈಡ್ ಐಟಂ ಹಾಕಿಕೊಡೋಕೆ ಇದೇನು ಹೋಟ್ಲಾ? ಇಡೀ ದಿನ ಮನೇಲಿ ಇರೋರು ಕೊಟ್ಟಿದ್ದನ್ನು ತಿಂದುಕೊಂಡು ತೆಪ್ಪಗಿರಬೇಕು ಅಲ್ವ ಎಂದೇ ಅವಳು ವಾದಿಸಿದಳು. ಬೆಡ್‌ರೂಂ, ಜಗಳದ ತಾಣವಾದರೆ ಇಡೀ ದಿನದ ಕೆಲಸ ಕೆಡುತ್ತೆ ಎಂದು ಗೊತ್ತಿದ್ದುದರಿಂದ ರಂಗಸ್ವಾಮಿಯ ಮಗ ಹೆಂಡತಿಗೆ ಎದುರು ಮಾತಾಡಲು ಹೋಗಲಿಲ್ಲ.

ಹೀಗೇ ವಾರ ಕಳೆಯಿತು. ಅವತ್ತೊಂದು ದಿನ- ‘ಯಾವುದೋ ಕೋರ್ಟ್ ಕೇಸ್ ಬಂದಿದೆಯಪ್ಪಾ. ನನಗೆ ಸ್ವಲ್ಪ ಕನ್‌ಫ್ಯೂಶನ್ ಇದೆ. ನೀನು ಜೊತೆಗಿದ್ರೆ ದೊಡ್ಡ ಧೈರ್ಯ. ಮಧ್ಯಾಹ್ನ ಬೇಗ ಬಂದ್ಬಿಡೋಣ...’ ಎಂದೆಲ್ಲ ಹೇಳಿ ಆ ಮಗರಾಯ ತಂದೆಯೊಂದಿಗೆ ಕೋರ್ಟ್‌ಗೆ ಬಂದ. ಅಲ್ಲಿ ನೋಡಿದರೆ- ಫ್ಯಾಕ್ಟರಿ, ಮನೆ ಮತ್ತು ಇಡೀ ಆಸ್ತಿಯನ್ನು ರಂಗಸ್ವಾಮಿಯ ಹೆಸರಿಗೆ ಮರು ವರ್ಗಾಯಿಸಿದ ದಾಖಲೆ ಪತ್ರಗಳಿದ್ದವು. ಅವಕ್ಕೆಲ್ಲಾ ತುಂಬಾ ಒತ್ತಾಯದಿಂದಲೇ ಸಹಿ ಹಾಕಿಸಿದ ಮಗ- ‘ಅಪ್ಪಾ, ನೀನು ಇನ್ನೊಂದು ಮದುವೆ ಮಾಡ್ಕೊಳಪ್ಪಾ. ಜನ ಏನಾದ್ರೂ ಅಂದುಕೊಳ್ಳಲಿ. ಅದರ ಬಗ್ಗೆ ಚಿಂತೆ ಮಾಡ್ಬೇಡ. ನಿನ್ನ ಜೊತೆಗೆ ನಾನಿರ್ತೀನಿ. ಈ ವಿಷಯದಲ್ಲಿ ನಿಂಗೆ ಸಪೋರ್ಟ್ ಮಾಡ್ತೀನಿ. ದಯವಿಟ್ಟು ಇನ್ನೊಂದು ಮದುವೆ ಮಾಡ್ಕೊ..’ ಅಂದ.

ಈ ಮಾತುಗಳಿಂದ ರಂಗಸ್ವಾಮಿಗೆ ಅಚ್ಚರಿಯಾಯಿತು. ‘ಯಾಕಪ್ಪಾ? ಯಾಕೆ ಹೀಗೆ ಹೇಳ್ತಿದೀಯ? ನಿನಗೆ ಏನಾದ್ರೂ ಕೊರತೆ ಆಯ್ತಾ? ನಾನು ನಿನಗೆ ಹೊರೆ ಅನ್ನಿಸಿಬಿಟ್ನಾ? ಏನಾದ್ರೂ ತಪ್ಪು ಮಾಡಿದೀನೇನೋ ನಾನು? ಎಲ್ಲವನ್ನೂ ನನ್ನ ಹೆಸರಿಗೇ ಮಾಡಿಸಿದೀಯಲ್ಲ ಯಾಕೋ..,

ಈ ಮಾತುಗಳನ್ನು ಅಷ್ಟಕ್ಕೇ ತಡೆದ ರಂಗಸ್ವಾಮಿಯ ಮಗ ಹೇಳಿದ: ಛೆ,ಛೆ ಖಂಡಿತ ನಿನ್ನಿಂದ ಯಾವುದೇ ತಪ್ಪಾಗಿಲ್ಲಪ್ಪಾ. ಪ್ರತಿ ಹೆಂಗಸು, ತನ್ನ ಗಂಡ ಮತ್ತು ಮಕ್ಕಳ ಬಗ್ಗೆ ಮಾತ್ರ ವಿಶೇಷ ಕಾಳಜಿ ವಹಿಸ್ತಾಳೆ. ಉಳಿದವರನ್ನು ನಿರ್ಲಕ್ಷ್ಯದಿಂದ ನೋಡೋದು ಅವಳಿಗೆ ಅಭ್ಯಾಸ ಆಗಿಬಿಟ್ಟಿರುತ್ತೆ. ಅಂಥದೊಂದು ನಿರ್ಲಕ್ಷ್ಯದ ಅನುಭವ ನಿನಗೆ ಎಂದೆಂದೂ ಆಗದಿರಲಿ ಎಂಬ ಸದಾಶಯದಿಂದಲೇಇನ್ನೊಂದು ಮದುವೆ ಆಗು ಅಂತ ಒತ್ತಾಯಿಸ್ತಾ ಇದೀನಿ. ನಾಳೆಯಿಂದ ನಾನು ಹೆಂಡತಿಯೊಂದಿಗೆ ಬಾಡಿಗೆ ಮನೆಗೆ ಹೋಗ್ತೇನೆ. ಫ್ಯಾಕ್ಟರಿಗೆ ನೀನು ಎಂ.ಡಿ., ನೀನೇ ಸಿ.ಇ.ಒ. ನಾನು ಒಬ್ಬ ನೌಕರನಾಗಿ ಕೆಲಸ ಮಾಡ್ತೀನಿ. ನಮ್ಮಲ್ಲಿ ಎಂಜಿನಿಯರ್‌ಗಳಿಗೆ ಕೊಡ್ತೀಯಲ್ಲ; ಅಷ್ಟೇ ಸಂಬಳವನ್ನು ನನಗೂ ಕೊಡು. ಒಂದು ಬಟ್ಟಲಿನಷ್ಟು ಮೊಸರು ಸಂಪಾದಿಸಲು ಮನುಷ್ಯನಿಗೆ ಎಷ್ಟು ಕಷ್ಟ ಇದೆ ಎಂಬುದನ್ನು ನನ್ನ ಹೆಂಡತಿಗೆ ಪರಿಚಯ ಮಾಡಿಕೊಡಬೇಕು. ಅದರ ಜೊತೆಗೆ, ವೃದ್ಧಾಪ್ಯದಲ್ಲಿ ತುಂಬಾ ಮುತುವರ್ಜಿಯಿಂದ ನೋಡಿಕೊಳ್ಳುವ ಒಬ್ಬರು ನಿನ್ನೊಂದಿಗೆ ಇರುವಂತೆ ವ್ಯವಸ್ಥೆ ಮಾಡಬೇಕು. ಫ್ಯಾಕ್ಟರಿಯನ್ನು ನಿನ್ನ ಹೆಸರಿಗೆ ವರ್ಗಾಯಿಸಿದ್ದಕ್ಕೆ, ನಾಳೆಯಿಂದ ಒಬ್ಬ ಆರ್ಡಿನರಿ ನೌಕರನಾಗಿ ಕೆಲಸಕ್ಕೆ ಬರ್ತಿರೋದಕ್ಕೆ ಬೇರೆ ಯಾವ ಕಾರಣವೂ ಇಲ್ಲ. ಒಳ್ಳೇದಾಗ್ಲಿ ಅಂತ ಆಶೀರ್ವದಿಸಪ್ಪ...’

ರಂಗಸ್ವಾಮಿ ಏನೂ ಮಾತಾಡಲಿಲ್ಲ. ನಡೆದಿರುವುದೇನೆಂದು ತನಗೆ ಅರ್ಥವಾಗಿದೆ ಎಂಬಂತೆ ಮಗನನ್ನು ಮೆಚ್ಚುಗೆಯಿಂದ ನೋಡಿದ. ಅವನನ್ನು ಬಾಚಿ ತಬ್ಬಿಕೊಂಡು ಹಣೆಗೆ ಮುತ್ತಿಟ್ಟ...

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...