*ಗುಟ್ಟು*
ಸ್ವಲ್ಪವೂ ಸುಳಿವು ನೀಡದೆ
ಸಾವಿರ, ಐನೂರರ ನೋಟು
ಸ್ಥಗಿತಗೊಳಿಸಿದರು ಮೋದಿ.
ಗುಟ್ಟು ರಟ್ಟಾಗದಿರಲು
ಕಾರಣ ಅವರ
ಮನೆಯಲ್ಲಿ ಇಲ್ಲ ಮಡದಿ!
- ಎಚ್.ಡುಂಡಿರಾಜ್
☘☘☘☘☘☘☘☘☘☘
*ಮೇಳ*
ಒಂದು ಕಾಲದಲ್ಲಿ ಇತ್ತು
ಬ್ಯಾಂಕಲ್ಲಿ ಜನಜಂಗುಳಿ
ಕಾರಣ ಪೂಜಾರಿ ಲೋನ್ *ಮೇಳ*
ಈಗ ರಜಾದಿನಗಳಲ್ಲೂ
ನೂಕು ನುಗ್ಗಲು
ಕಾರಣ ಮೋದಿ
ಎಕ್ಸ್‌ಚೇಂಜ್ *ಮೇಳ!*
- ಎಚ್.ದುಂಡಿರಾಜ್.
☘☘☘☘☘☘☘☘☘☘
*ನಗು*
ದುಡ್ಡಿನ ಮದದಿಂದ
ಗಹಗಹಿಸಿ ನಗುತ್ತಿದ್ದ
ಇವರ ಮುಖದಲ್ಲೀಗ
ನಗು ಕಾಣ ಸಿಗದು,
ಕಾರಣ ಮನೆಯಲ್ಲಿದೆ
ಕೋಟಿಗಟ್ಟಲೆ ನಗದು!
- ಎಚ್. ಡುಂಡಿರಾಜ್
☘☘☘☘☘☘☘☘☘☘
*ಸಂಹಾರ*
ಸಾವಿನ ವ್ಯಾಪಾರಿ ಎಂದು
ವಿರೋಧಿಗಳು ಹೇಳಿದ್ದು
ನಿಜವಾಯಿತು ಈ ದಿನ
ಒಂದೇ ಏಟಲ್ಲಿ ಮೋದಿ
ಕೊಂದು ಹಾಕಿದರು
ಕೋಟಿಗಟ್ಟಲೆ ಕಾಳಧನ!
- ಎಚ್.ಡುಂಡಿರಾಜ್
*
ಬ್ಯಾಂಕಿನಲ್ಲಿ 
*
ಕ್ಯಾಶ್ ಕೌಂಟರಿನ
ಚೆಲುವೆಯ
ಸೌಂದರ್ಯದತ್ತ
ಹರಿದು ನೋಟ,
ಗಮನಿಸಲಿಲ್ಲ
ಅವಳು ಕೊಟ್ಟ
ಹರಿದ ನೋಟ!
*
ಪತ್ರೆ 
*
ಶನಿದೇವರಿಗೆ ಶಮೀ ಪತ್ರೆ
ವಿಷ್ಣುವಿಗೆ ತುಳಸಿ ಪತ್ರೆ
ಈಶ್ವರನಿಗೆ ಪ್ರಿಯವಂತೆ
ಬಿಲ್ವ ಪತ್ರೆ
ಯಮನಿಗೆ ಸರಕಾರಿ
ಆಸ್-ಪತ್ರೆ
*
ಅವಶ್ಯ 
*
ನದಿ ದಾಟಲು
ತೆಪ್ಪ ಇರಬೇಕು.
ಸಂಸಾರ
ಶರಧಿ ದಾಟಲು
ತೆಪ್ಪಗಿರಬೇಕು 


*
ಚಿಂತೆ 
*
ಬಡವರಿಗೆ ಸದಾ
ಹೊಟ್ಟೆ ಹೊರೆವ
ಚಿಂತೆ.
ಶ್ರೀಮಂತರಿಗೆ
ಹೊಟ್ಟೆ
ಹೊರುವ ಚಿಂತೆ.
*
ಅಧ್ಯಕ್ಷ ಭಾಷಣ 
*
ಅದ್ಭುತವಾಗಿತ್ತು
ಅಧ್ಯಕ್ಷರ ಭಾಷಣ
ವಿಷಯ, ಶೈಲಿ, ಭಾಷೆ
ಎಲ್ಲವೂ ಚೆನ್ನ.
ಆದರೂ ನೋಡಬೇಕಾಗಿತ್ತು
ಒಮ್ಮೆಯಾದರೂ
ತಮ್ಮ ವಾಚನ್ನ


*
ಭಾಷಣ 
*
ಆರಂಭದಲ್ಲಿ
ಹೇಳುತ್ತಾರೆ
ಎರಡೇ ಎರಡು ಮಾತು.
ಮುಗಿಸುವಾಗ
ಆಗುವುದೇ ಬೇರೆ
ಎರಡೂ ಕಿವಿ ತೂತು! 

*
ನುಡಿದರೆ 
*
ಗೆಳೆಯಾ ಒಪ್ಪಿದೆ,
ನೀನು ನುಡಿದರೆ
ಮುತ್ತಿನ ಹಾರದಂತೆ.
ಆದರೂ ತುಸು
ಎಚ್ಚರ ವಹಿಸು
ಎಂಜಲು ಹಾರದಂತೆ! 

*
ಆದರೂ 
*
ವಯಸ್ಸಾದರೂ
ಹೆಂಗಸರು
ಗಂಡಸರನ್ನು ಕಂಡರೆ
ನಾಚ್ಕೊತಾರೆ.
ಗಂಡಸರು
ಬೋಳು ತಲೆ
ಬಾಚ್ಕೋತಾರೆ !


No comments:
Post a Comment