Friday, 29 May 2020

ಛಾಂದೋಗ್ಯೋಪನಿಷತ್

ಇದು ಅತ್ಯಂತ ಪ್ರಾಚೀನವಾದುದೆಂದು ಎಲ್ಲರೂ ಒಪ್ಪುತ್ತಾರೆ. ಸಾಮವೇದಕ್ಕೆ ಸೇರಿದ್ದು ಪ್ರಾಚೀನತೆ, ಅರ್ಥಗಾಂಭೀರ್ಯ, ಬ್ರಹ್ಮಜ್ಞಾನ ಪ್ರತಿಪಾದನೆ-ಈ ದೃಷ್ಟಿಗಳಿಂದ ಇದು ಬಹಳ ಪ್ರೌಢವೂ ಪ್ರಮೇಯ ಬಹುಲವೂ ಆಗಿದೆ. ಎಂಟು ಅಧ್ಯಾಯಗಳೂ (ಪ್ರಪಾಠಕಗಳು) ಒಂದೊಂದರಲ್ಲೂ ಅನೇಕಾನೇಕ ಖಂಡಗಳೂ ಇವೆ. ಒಂದೊಂದು ಖಂಡದಲ್ಲೂ ಹಲವಾರು ಗದ್ಯ ಮಂತ್ರಗಳಿವೆ. ಈ ಖಂಡಗಳು ಬೇರೆ ಬೇರೆ ವಿಚಾರಗಳನ್ನು ವಿವೇಚಿಸುವುದರಿಂದ ಇವು ಬೇರೆ ಬೇರೆ ಕಾಲಕ್ಕೆ ಸೇರಿರಬಹುದೆಂದು ವಿಮರ್ಶಕರು ಭಾವಿಸುತ್ತಾರೆ. ಗೃಹಸ್ಥಜೀವನ ಬ್ರಹ್ಮಲೋಕ ಪ್ರಾಪ್ತಿಗೆ ವಿಹಿತಮಾರ್ಗವೆಂದು ಕೊನೆಯ ಖಂಡದಲ್ಲಿ ಹೇಳಿರುವುದರಿಂದ ಯಾಗಾದಿಗಳ ಪ್ರಾಧಾನ್ಯ ತಪ್ಪುವುದಕ್ಕೆ ಮುಂಚೆಯೇ ಇದು ಸಂಕುಲಿತವಾಗಿರಬೇಕೆಂದು ನಿರ್ಣಯಿಸಬಹುದು. ಪಶುಹಿಂಸೆಯೂ ಅನುಮೋದಿತ ವಾಗಿದೆ. ಆಚಾರ್ಯ ಪರಂಪರೆಯನ್ನೂ ಸಂಗ್ರಹವಾಗಿ ಕೊಡಲಾಗಿದೆ. ಮೊದಲ ಅಧ್ಯಾಯದಲ್ಲಿ ಪ್ರಣವ ಸ್ವರೂಪವನ್ನೂ ಸಾಮಗಾನದ ಗೂಢ ಸ್ವರೂಪವನ್ನೂ ಮಾರ್ಮಿಕವಾಗಿ ತಿಳಿಸಲಾಗಿದೆ. ಉದ್ಗೀಥ ವಿದ್ಯೆಯ ಮಹತ್ತ್ವದ ನಿರೂಪಣೆಯೊಂದಿಗೆ ಉದ್ಗೀಥ, ಪ್ರಣವಗಳ ತಾದಾತ್ಮ್ಯವನ್ನು ಹೇಳಲಾಗಿದೆ. ಎರಡನೆಯ ಅಧ್ಯಾಯದಲ್ಲಿ ವಿಶ್ವವೇ ಸಾಮವೆಂದು ಸಾರಿ ಪಂಚವಿಧ ಸಪ್ತವಿಧ ಸಾಮೋಪಾಸನೆಯನ್ನು ಬೋಧಿಸಲಾಗಿದೆ. 3ನೆಯ ಅಧ್ಯಾಯದಲ್ಲಿ ಮಧುವಿದ್ಯೆಯ ನಿರೂಪಣೆಯೊಂದಿಗೆ ಆದಿತ್ಯನೇ ದೇವಮಧು, ಅವನೇ ಆತ್ಮ ಎಂದು ಸಾರಲಾಗಿದೆ. ಶಾಂಡಿಲ್ಯ ವಿದ್ಯೆ ಉಪವರ್ಣಿತವಾಗಿದೆ. 4ನೆಯ ಅಧ್ಯಾಯದಲ್ಲಿ ರೈಕ್ವನೆಂಬ ಬ್ರಹ್ಮಜ್ಞನಿಂದ ಜಾನು ಶ್ರುತಿ ಪೌತ್ರಾಯಣ ರಾಜಬ್ರಹ್ಮೋಪದೇಶವನ್ನು ಪಡೆದ ಕಥಾನಿರೂಪಣೆ ಇದೆ. ಸಂವರ್ಗ ವಿದ್ಯೆ ಮತ್ತು ಉಪಕೋಸಲ ವಿದ್ಯೆಗಳ ಉಪದೇಶ, ಸತ್ಯಕಾಮ ಜಾಬಾಲನ ವೃತ್ತಾಂತ, ದೇವಯಾನದ ಮುಖಾಂತರ ಆತ್ಮ ಬ್ರಹ್ಮಲೋಕವನ್ನು ಸೇರುವ ಕ್ರಮದ ವರ್ಣನೆಗಳು ಬಂದಿವೆ. 5ನೆಯ ಅಧ್ಯಾಯದಲ್ಲಿ ಇಂದ್ರಿಯಗಳಲ್ಲೆಲ್ಲ ಪ್ರಾಣವೇ ಶ್ರೇಷ್ಠವೆಂದು ತಿಳಿಸಲಾಗಿದೆ. ಜೈವಲಿಯಲ್ಲಿ ಪಂಚಾಗ್ನಿ ವಿದ್ಯೆಯ ಉಪದೇಶವಿದೆ. ಐದು ಜನ ಜಿಜ್ಞಾಸುಗಳು ಕೇಕಯ ಅಶ್ವಪತಿಯಿಂದ ವೈಶ್ವಾನರವಿದ್ಯೆಯ ಉಪದೇಶವನ್ನು ಪಡೆದ ಸಂವಾದವಿದೆ. 6ನೆಯ ಅಧ್ಯಾಯದಲ್ಲಿ ಉದ್ದಾಲಕ ಆರುಣಿ ಮಗನಾದ ಶ್ವೇತಕೇತುವಿಗೆ ಆತ್ಮವಿದ್ಯೆಯನ್ನು ಬೋಧಿಸಿದ ಸುಂದರವಾದ ಸಂವಾದವಿದೆ. ವಿಶ್ವವಿಖ್ಯಾತವಾದ ತತ್ತ್ವಮಸಿ ಮಂತ್ರದ ಉಪದೇಶ ಇದರಲ್ಲಿಯೇ ಬರುತ್ತದೆ. 7ನೆಯ ಅಧ್ಯಾಯದಲ್ಲಿ ನಾರದನಿಗೆ ಸನತ್ಕುಮಾರ ಮಾಡಿದ ಆತ್ಮವಿದ್ಯೋಪದೇಶವಿದೆ. 8ನೆಯ ಅಧ್ಯಾಯದಲ್ಲಿ ದಹರ ವಿದ್ಯೆಯ ಉಪದೇಶವೂ ಪ್ರಜಾಪತಿಯಿಂದ ಇಂದ್ರ ಆತ್ಮೋಪದೇಶವನ್ನು ಪಡೆದ ವೃತ್ತಾಂತವೂ ಇದೆ. ಇದು ಈ ಉಪನಿಷತ್ತಿಗೆ ಶಿಖರಪ್ರಾಯವಾಗಿದೆ. ಈ ಉಪನಿಷತ್ತಿನಲ್ಲಿ ತಿಳಿದುಬರುವ ಅಂಶಗಳು ಹೀಗಿವೆ: ಋಗ್ವೇದ ಸಾಮವೇದಗಳನ್ನು ಇನ್ನೂ ಅಧ್ಯಯನ ಮಾಡುತ್ತಿದ್ದರು; ಸಾಮದ ಸ್ವರವನ್ನೂ ಋಷಿದೇವತೆಗಳನ್ನೂ ನಿರ್ಧರಿಸಲಾಗಿತ್ತು; ಸಾಮಗಾನದೊಂದಿಗೆ ವೀಣಾಗಾನವೂ ಇತ್ತು; ಮಾಂಸಭಕ್ಷಣವನ್ನು ನಿಷೇಧಿಸಲಾಗಿತ್ತು; ಗೋತ್ರ ಪದ್ಧತಿ ದೃಢವಾಗಿತ್ತು; ವ್ಯಾಕರಣದ ಅಧ್ಯಯನವನ್ನೂ ಇತರ ವಿದ್ಯೆಗಳ ಅಧ್ಯಯನವನ್ನೂ ಗುರುವಿನ ಆವಶ್ಯಕತೆಯನ್ನೂ ಸ್ಪಷ್ಟಪಡಿಸಲಾಗಿತ್ತು. ದೇವಕೀಪುತ್ರನಾದ ಕೃಷ್ಣನಿಗೆ ಘೋರ ಅಂಗೀರಸ ಅಧ್ಯಾತ್ಮವಿದ್ಯೆಯನ್ನು ಉಪದೇಶಿಸಿದನೆಂದು 3ನೆಯ ಅಧ್ಯಾಯದಲ್ಲಿ ಹೇಳಲಾಗಿದೆ.

    💐ಬೃಹದಾರಣ್ಯಕೋಪನಿಷತ್ 🌹🌹

ಈ ಹೆಸರು ಪಾಣಿನಿಗಿಂತ ಈಚೆಗೆ ಬಂದ ಶಬ್ದದಿಂದ ಬಂದಿದೆ. ಇದನ್ನು ಬೇರೆ ಬೇರೆ ಕಾಲದಲ್ಲಿದ್ದ ಅನೇಕರು ರಚಿಸಿದ್ದಾರೆ. ಇದರ ಸಂಗ್ರಹವಾದದ್ದು ಛಾಂದೋಗ್ಯಕ್ಕಿಂತ ಈಚೆಗೆ. ಇದು ಶುಕ್ಲ ಯಜುರ್ವೇದಕ್ಕೆ ಸೇರಿದುದು. ಇದರ ಅವಾಂತರ ಭಾಗಗಳನ್ನು ಶತಪಥ ಬ್ರಾಹ್ಮಣದ ಖಿಲಭಾಗಗಳೆಂದು ಎಣಿಸಲಾಗಿತ್ತು. ಆರು ಅಧ್ಯಾಯಗಳೂ ಒಟ್ಟು 57 ಬ್ರಾಹ್ಮಣಗಳೂ ಇವೆ. 5ನೆಯ ಅಧ್ಯಾಯದ ಆರಂಭದಲ್ಲಿ ಬರುವ ‘ಪೂರ್ಣಮದಃ, ಪೂರ್ಣಮಿದಂ’ ಎಂಬುದು ಇದರ ಶಾಂತಿಮಂತ್ರ. ಇದು ಗದ್ಯಮಯವಾಗಿದೆ. ಇದರಲ್ಲಿ ಭಿನ್ನ ಭಿನ್ನವಾದ ವಂಶ ವಿವರಣೆಗಳಿವೆ. ಮಧ್ಯೆ ಮಧ್ಯೆ ಪ್ರಮಾಣ ಶ್ಲೋಕಗಳಿವೆ. ಒಟ್ಟು 3 ಕಾಂಡಗಳೂ ಆರು ಅಧ್ಯಾಯಗಳೂ ಇವೆ. ಮೊದಲ ಅಧ್ಯಾಯದಲ್ಲಿ ಯಜ್ಞಾಶ್ವದ ವರ್ಣನೆ ಇದೆ. ಈ ಅಶ್ವವೇ ವಿರಾಟ್ಪುರುಷನೆಂದೂ ಆತ್ಮವಸ್ತುವೇ ಸರ್ವಕ್ಕಿಂತ ಶ್ರೇಷ್ಠವೆಂದೂ ಪ್ರೇಯವೆಂದೂ ತಿಳಿಸಲಾಗಿದೆ. ದ್ವಿತೀಯಾಧ್ಯಾಯದಲ್ಲಿ ದೃಪ್ತಬಾಲಾಕಿ, ಗಾಗರ್ಯ್‌ ಮತ್ತು ಅಜಾತಶತ್ರು-ಇವರಲ್ಲಿ ಆತ್ಮವಸ್ತುವನ್ನು ಕುರಿತು ನಡೆದ ಸಂವಾದವಿದೆ. ಇದಲ್ಲದೆ ಯಾಜ್ಞವಲ್ಕ್ಯ ಮತ್ತು ಮೈತ್ರೇಯಿ ಇವರ ಸುಪ್ರಸಿದ್ಧ ಸುಂದರ ಸಂವಾದವಿದೆ. ಸುಂದರವಾದ ಉಪಮಾನಗಳಿಂದ ಬ್ರಹ್ಮ ಸರ್ವಕ್ಕೂ ಏಕಾಯನವಾಗಿದೆ ಎಂಬುದನ್ನೂ ಜೇಡರಹುಳುವಿನ ನಿದರ್ಶನದಿಂದ ಭಗವಂತನೇ ಸಮಸ್ತಕ್ಕೂ ಕಾರಣ ಎಂಬುದನ್ನೂ ವರ್ಣಿಸಿ ಮಹೋನ್ನತ ಉಪದೇಶವನ್ನು ನೀಡಲಾಗಿದೆ. ಇದೇ ಅಧ್ಯಾಯದಲ್ಲಿ ಮಧುವಿಧ್ಯೆಯ ವಿವರಣೆಯೂ ಕೊನೆಯ ಭಾಗದಲ್ಲಿ ವಂಶಕ್ರಮ ನಿರೂಪಣೆಯೂ ಇವೆ. 3ನೆಯ ಅಧ್ಯಾಯದಲ್ಲಿ ಜನಕರಾಜನ ಸಭೆಯಲ್ಲಿ ಯಾಜ್ಞವಲ್ಕ್ಯರಿಗೆ ತತ್ತ್ವಜ್ಞರು ಪ್ರಶ್ನೆಗಳನ್ನು ಕೇಳಿ ಪರಾಭವ ಹೊಂದಿದ್ದು, ಗಾರ್ಗಿ ವಾಚಕ್ನವೀ ಎಂಬ ಬ್ರಹ್ಮವಾದಿನಿ ಈ ಚರ್ಚೆಯಲ್ಲಿ ಭಾಗವಹಿಸಿದ್ದು, ಕೊನೆಯಲ್ಲಿ ಯಾಜ್ಞವಲ್ಕ್ಯರಿಗೆ ಜನಕರಾಜನ ಸಂಭಾವನೆ ಸಲ್ಲುವುದು-ಇವನ್ನು ಸ್ವಾರಸ್ಯವಾಗಿ ಚಿತ್ರಿಸಲಾಗಿದೆ. 4ನೆಯ ಅಧ್ಯಾಯದಲ್ಲಿ ಜನಕನಿಗೆ ಯಾಜ್ಞವಲ್ಕ್ಯ ಮಾಡಿದ ಆತ್ಮತತ್ತ್ವ ವಿವರಣೆ ಈ ಉಪನಿಷತ್ತಿಗೇ ರತ್ನಪ್ರಾಯವಾಗಿದೆ. ಮೈತ್ರೇಯಿಯ ವೃತ್ತಾಂತವೂ ಬಂದಿದೆ. 5ನೆಯ ಅಧ್ಯಾಯದಲ್ಲಿ ಪೂರ್ಣಮಿದಂ ಎಂಬ ಮಂತ್ರದ ಆವೃತ್ತದಿಂದ ಪ್ರಾರಂಭವಾಗಿ ನೀತಿ, ಸೃಷ್ಟಿ, ಪರಲೋಕ ಇವುಗಳ ಅನೇಕ ವಿಚಾರಗಳಿವೆ. ದಯೆ, ದಾನ, ಧರ್ಮ ಇವುಗಳ ಪ್ರಶಂಸೆ ಇದೆ. 6ನೆಯ ಅಧ್ಯಾಯದಲ್ಲಿ ಛಾಂದೋಗ್ಯ ಉಪನಿಷತ್ತಿನಲ್ಲಿ ಬಂದಿರುವ ಆತ್ಮದ (ಪ್ರಾಣ) ಶ್ರೇಷ್ಠತೆಯನ್ನೇ ಪುನಃ ಪ್ರಸ್ತಾಪಿಸಿ ಪಂಚೇಂದ್ರಿಯ ಗಳನ್ನು ಕುರಿತ ರೂಪಕವನ್ನು ಕೊಡಲಾಗಿದೆ. ಇದರಲ್ಲೂ ಶ್ವೇತಕೇತು ಜೈವಲಿಗಳ ದಾರ್ಶನಿಕ ಸಂವಾದ, ಜೈವಲಿಯ ಪಂಚಾಗ್ನಿ ವಿದ್ಯೆಯ ಉಪದೇಶಗಳು ಇವೆ. ಈ ಉಪನಿಷತ್ತಿನಲ್ಲಿ ಗಮನಾರ್ಹ ಅಂಶಗಳು ಇವು; ದೇವತೆಗಳಲ್ಲೂ ವರ್ಣಭೇದಗಳನ್ನು ನಿರೂಪಿಸಲಾಗಿದೆ. ಪುಷನ್ ಶೂದ್ರ, ಅಗ್ನಿ ಮಾತ್ರ ಬ್ರಾಹ್ಮಣ, ಇಂದ್ರಾದಿಗಳು ಕ್ಷತ್ರಿಯರು, ವೈಶ್ಯರು, ಕ್ಷತ್ರಿಯರು ಸರ್ವಶ್ರೇಷ್ಠರೆಂದೂ ಬ್ರಾಹ್ಮಣಹಿಂಸೆ ಮಹಾಪಾಪವೆಂದೂ ಹೇಳಲಾಗಿದೆ. ಅಹಿಂಸಾ ಪರಮೋಧರ್ಮಃ ಎಂಬ ತತ್ತ್ವ ಬೆಳೆಯುತ್ತ ಇತ್ತು. ಇದರಲ್ಲಿ ಉದಾಹರಿಸಲ್ಪಟ್ಟಿರುವ ಶ್ಲೋಕಗಳು ಸಂಹಿತೆಗಳಿಂದ ತೆಗೆದುಕೊಂಡವಾಗಿರದೆ ಬ್ರಹ್ಮವಾದಿಗಳೂ ಆಚಾರ್ಯರೂ ರಚಿಸಿದವಾಗಿವೆ.

    🎉🎉ಶ್ವೇತಾಶ್ವತರೋಪನಿಷತ್ 🎊🎊

ಇದು ಕೃಷ್ಣ ಯಜುರ್ವೇದಕ್ಕೆ ಸೇರಿದುದಾಗಿದ್ದು ಆರು ಅಧ್ಯಾಯಗಳಿಂದ ಕೂಡಿದೆ. ಪದ್ಯಮಯವಾಗಿದೆ. ಸಹನಾವವತು ಎಂಬುದು ಇದರ ಶಾಂತಿಮಂತ್ರ, ವಿಚಾರಪುರಿತವಾದ 113 ಮಂತ್ರಗಳಿವೆ. ಜಗತ್ಕಾರಣವಾವುದು ? ನಾವು ಎಲ್ಲಿಂದ ಬಂದೆವು ? ಯಾರ ಕಟ್ಟಳೆಗೊಳಗಾಗಿ ಸುಖ ದುಃಖಗಳುಂಟಾಗುವುವು ? ಎಂಬ ಪ್ರಶ್ನೆಗಳ ಮಾಲೆಯಿಂದ ಇದು ಪ್ರಾರಂಭವಾಗಿದೆ. ಜೀವ, ಬ್ರಹ್ಮರ (ಜ್ಞ, ಅಜ್ಞ) ವಿಚಾರ ಪ್ರಸ್ತುತವಾಗಿದೆ. 2ನೆಯ ಅಧ್ಯಾಯದ ಯೋಗದ, ಯೋಗಾನುಭವದ ನಿರೂಪಣೆ ಇದೆ. ಇದು ಪಾತಂಜಲಯೋಗದ ಪೀಠಿಕೆಯಂತಿದೆ. 3-4ನೆಯ ಅಧ್ಯಾಯಗಳಲ್ಲಿ ಬ್ರಹ್ಮತತ್ತ್ವ, ಆತ್ಮತತ್ತ್ವಗಳ ಸ್ವರೂಪ ನಿರೂಪಣೆ ಇದೆ. ಬ್ರಹ್ಮವನ್ನು ಮಹೇಶ್ವರ ಎಂದು ಕರೆಯಲಾಗಿದೆ. 5ನೆಯ ಅಧ್ಯಾಯದಲ್ಲಿ ಕಪಿಲ ಋಷಿಯ ಸಾಂಖ್ಯತತ್ತ್ವದ ಉಲ್ಲೇಖವಿದೆ. ಆದರೆ ನಿರೀಶ್ವರ ಸಿದ್ಧಾಂತದ ಛಾಯೆ ಇಲ್ಲ. ಏಕೈಕ ಕಾರಣನೂ ಸರ್ವಾಧಿಪನೂ ಆದ ಅದ್ವಿತೀಯನನ್ನು ಅರಿಯುವುದರಿಂದ, ಮುಕ್ತಿ ಎಂದು ಹೇಳಲಾಗಿದೆ. 6ನೆಯ ಅಧ್ಯಾಯದಲ್ಲಿ ಕರ್ಮಸಿದ್ಧಾಂತದ ನಿರೂಪಣೆ ಇದ್ದು ಕರ್ಮಕ್ಷಯದಿಂದ ಮೋಕ್ಷಪ್ರಾಪ್ತಿ ಎಂದೂ ಮಹೇಶ್ವರ ಕರ್ಮಚಕ್ರದಿಂದ ಹೊರಗಿರುವ, ಕರ್ಮಾಧ್ಯಕ್ಷನೆಂದೂ ಶ್ವೇತಾಶ್ವತರ ಉಪದೇಶಿಸಿದ್ದಾನೆ. ಪರಮಾತ್ಮನ ಸಾಕ್ಷಾತ್ಕಾರಕ್ಕೆ ಎಲ್ಲಕ್ಕಿಂತಲೂ ಮೊದಲಾಗಿ ಗುರುಭಕ್ತಿ ಇರಬೇಕೆಂಬುದನ್ನು ಕೊನೆಯಲ್ಲಿ ಒತ್ತಿಹೇಳಲಾಗಿದೆ.

      🎭🎭ಕೌಷೀತಕಿ ಉಪನಿಷತ್ 🎋🎋

ಕೌಷೀತಕಿ ಎಂಬ ಆಚಾರ್ಯರಿಂದ ಇದಕ್ಕೆ ಈ ಹೆಸರು. ಋಗ್ವೇದಕ್ಕೆ ಸೇರಿದ್ದು ಗದ್ಯಮಯವಾಗಿದೆ. 4 ಅಧ್ಯಾಯಗಳಿವೆ. ವಾಙ್ಮೇ ಮನಸಿ ಪ್ರತಿಷ್ಠಿತಾ ಎಂಬುದು ಇದರ ಶಾಂತಿಮಂತ್ರ. ಮೊದಲ ಅಧ್ಯಾಯದಲ್ಲಿ ದೇವಯಾನದ ವಿಸ್ತಾರವಾದ ವರ್ಣನೆ ಇದೆ. ದೇವಯಾನದಲ್ಲಿ ಹೋಗುವವ ಬ್ರಹ್ಮಲೋಕಕ್ಕೆ ಸೇರುವ ರೀತಿ ವಿವರವಾಗಿ ಬಂದಿದೆ. 2ನೆಯ ಅಧ್ಯಾಯದಲ್ಲಿ ಪ್ರಾಣವಿದ್ಯೆಯ ವಿವೇಚನೆ ಇದೆ. ಸಂನ್ಯಾಸಾಶ್ರಮದ ಪ್ರಶಂಸೆಯೂ ಸಾಧಕರು ಅನುಸರಿಸಬೇಕಾದ ವ್ರತಗಳ ವಿವರಣೆಯೂ ಇವೆ. 3-4ನೆಯ ಅಧ್ಯಾಯಗಳಲ್ಲಿ ಬೃಹದಾರಣ್ಯಕ ಮತ್ತು ಛಾಂದೋಗ್ಯೋಪನಿಷತ್ತಿನ ಪ್ರಸಂಗಗಳಿವೆ.


♨️♨️ ಮೈತ್ರಾಯಣೀಯೋಪನಿಷತ್ 🌋🌋

ಕೃಷ್ಣಯಜುರ್ವೇದಕ್ಕೆ ಸೇರಿದ್ದು 7 ಅಧ್ಯಾಯಗಳ ನ್ನೊಳಗೊಂಡಿದೆ. ಶಾಕಾಯನರಿಗೆ ಮೈತ್ರೀ ಋಷಿ ಉಪದೇಶಿಸಿದ ಬ್ರಹ್ಮ ತತ್ತ್ವವನ್ನು ಬೃಹದ್ರಥನಿಗೆ ಹೇಳಲಾಗಿದೆ. ಜ್ಯೋತಿಶ್ಶಾಸ್ತ್ರದ ವಿಚಾರವಾಗಿ ಉಲ್ಲೇಖವಿರುವುದರಿಂದ ಇದರ ಕಾಲವನ್ನು ಪ್ರ.ಶ.ಪು. 1900 ಎಂದು ವಿಮರ್ಶಕರು ನಿರ್ಣಯಿಸಿದ್ದಾರೆ. ಇದರಲ್ಲಿ ಇತರ ಉಪನಿಷತ್ತುಗಳ ವಾಕ್ಯಖಂಡಗಳಿರುವುದರಿಂದ ಅವು ಇದಕ್ಕೂ ಪ್ರಾಚೀನವಾದವು ಗಳೆಂದು ತೀರ್ಮಾನಿಸಬಹುದು. ಇದರಲ್ಲಿ ಗಮನಿಸಬೇಕಾದ ಅಂಶಗಳು: ಚಂದ್ರವಂಶ ಸೂರ್ಯವಂಶಗಳನ್ನು ಬೇರೆ ಬೇರೆ ಹೇಳಿರುವುದು, ಜ್ಯೋತಿರ್ಗಣದ ನಿರೀಕ್ಷಣೆ ನಡೆಯುತ್ತಿದ್ದುದು, ಸಾಂಖ್ಯ ಸಿದ್ಧಾಂತದ ಪರಿಚಯವಿದ್ದುದು, ಪಾತಂಜಲ ಯೋಗಕ್ಕಿಂತ ಬೇರೆಯಾದ ಷಡಂಗಯೋಗದ ವಿಚಾರ ಪ್ರಸ್ತುತವಾಗಿರುವುದು, ತ್ರಿಮೂರ್ತಿಗಳನ್ನೂ ಅವರ ವಿಶಿಷ್ಟ ಗುಣಗಳನ್ನೂ ಹೇಳಿರುವುದು.


📙📙   ಉಳಿದ ಕೆಲವು ಉಪನಿಷತ್ತುಗಳ ಬಹುಸ್ಥೂಲ ಪರಿಚಯ 🛸🛸


ಹಿಂದೆ ವಿವರಿಸಿದ ಮುಖ್ಯ ಉಪನಿಷತ್ತುಗಳಲ್ಲದೆ ಉಳಿದ ಕೆಲವು ಉಪನಿಷತ್ತುಗಳ ಬಹುಸ್ಥೂಲ ಪರಿಚಯ ಹೀಗಿದೆ: ನಾರಾಯಣೀಯ: ಗಾಯತ್ರೀ ಮಂತ್ರದಂತೆಯೇ ಇತರ ದೇವತೆಗಳನ್ನು ಸ್ತುತಿಸುವ ಮಂತ್ರಗಳಿಂದ ಕೂಡಿ ಬಹಳ ದೀರ್ಘವಾಗಿದೆ. ಆತ್ಮಯಾಗದ ನಿರೂಪಣೆಯಿದೆ. ಕೈವಲ್ಯೋಪನಿಷತ್: ಶೈವಪರವಾಗಿದೆ. ಸಂನ್ಯಾಸಾಶ್ರಮ ಮತ್ತು ಗುರುವಿನ ಪ್ರಾಮುಖ್ಯ ಗಳನ್ನು ಒತ್ತಿಹೇಳುತ್ತದೆ. ಗೀತೆಯ ಶ್ಲೋಕಗಳು ಸೇರಿಕೊಂಡಿವೆ. ಜಾಬಾಲೋಪನಿಷತ್: ಶತರುದ್ರೀಯ ಜಪವನ್ನು ಇದು ವಿಧಿಸುತ್ತದೆ. ಇದೂ ಶಿವಪರವಾಗಿದೆ. ಬೃಹಜ್ಜಾಬಾಲ ಉಪನಿಷತ್: ಭಸ್ಮಧಾರಣೆಯ ಮಹತ್ತ್ವವನ್ನು ಕುರಿತದ್ದು. ಅನೇಕ ಪರಮಹಂಸರುಗಳ ಹೆಸರುಗಳನ್ನು ಉಲ್ಲೇಖಿಸಿದೆ. ಜಾಬಾಲೀ ಉಪನಿಷತ್: ಜೀವವನ್ನು ಪಶುವೆಂದೂ ಈಶನನ್ನು ಪಶುಪತಿ ಎಂದೂ ಕರೆಯಲಾಗಿದೆ. ನಾಮಜಪಕ್ಕೆ ಪ್ರಾಶಸ್ತ್ಯ ಕೊಡುತ್ತದೆ. ಮುಕ್ತಿಕೋಪನಿಷತ್: ಇದರಲ್ಲಿ ನೂರೆಂಟು ಉಪನಿಷತ್ತುಗಳನ್ನು ವಿಂಗಡಿಸಲಾಗಿದೆ. ಋಗ್ವೇದಕ್ಕೆ 10, ಶುಕ್ಲಯಜುರ್ವೇದಕ್ಕೆ 19, ಕೃಷ್ಣಯಜುರ್ವೇದಕ್ಕೆ 32, ಸಾಮವೇದಕ್ಕೆ 16, ಅಥರ್ವವೇದಕ್ಕೆ 31 ಸೇರಿವೆಯೆಂದು ತಿಳಿಸಿದೆ

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...