Friday, 29 May 2020

🐩 ಸುಖವೆಂಬ ಮರೀಚಿಕೆಯ ಬೆನ್ನು ಹತ್ತಿ ಕೊನೆಗೆ ಜಿಗುಪ್ಸೆ ಹೊಂದಿದ್ದ ಯಯಾತಿ 🐦

ಮಹಾಭಾರತ ಮತ್ತು ಭಾಗವತ ಭಾರತ ಭೂಮಿಯ ಸಂಸ್ಕೃತಿ ಮತ್ತು ವೈಚಾರಿಕತೆಗಳ ಜೀವಂತ ಪ್ರತಿಬಿಂಬಗಳು. ಈ ಮಹಾಕಥಾನಕಗಳಲ್ಲಿ ಬರುವ ಸಹಸ್ರಾರು ಉಪಕಥೆಗಳು ಮಾನವ ಜೀವನದ ಅನೇಕ ಸಂಕೀರ್ಣ ಪಾತ್ರಗಳನ್ನು ಜನರ ಮುಂದಿಡುತ್ತವೆ. ಈ ಪಾತ್ರಗಳು ಅನೇಕ ಪಾಠಗಳನ್ನು ಹೇಳುತ್ತವೆ. ಭಾಗವತದಲ್ಲಿ ಬರುವ ಋಷಭದೇವ, ಅಜಾಮಿಳ, ವೃತ್ರಾಸುರ, ಗಜೇಂದ್ರ, ನಹುಷ ಮತ್ತು ಯಯಾತಿಯಂತಹ ವ್ಯಕ್ತಿತ್ವಗಳು ಚಿತ್ರಿಸುವ ಮಾನವ ಜೀವನದ ಸನ್ನಿವೇಶಗಳು ಮತ್ತು ಅವುಗಳಿಂದ ಹೊರಬಂದು ಮುಕ್ತನಾಗುವ ಪರಿ ಇಂದಿಗೂ ಪ್ರಸ್ತುತ.

ಅಧುನಿಕತೆಯ "Materialism"ನ ಮೃಗಜಲದ ಬೆನ್ನು ಹತ್ತಿ ಸುಖವನ್ನು ಅರಸುತ್ತ ನಡೆಯುತ್ತಿರುವ ನಮಗೆಲ್ಲರಿಗೂ ಅತ್ಯಂತ ಪ್ರಸ್ತುತವೆನಿಸುವ ಒಂದು ಕಥೆ ಯಯಾತಿ ರಾಜನದು. ಯಯಾತಿ ರಾಜ ಪುರಾಣ ಪ್ರಸಿದ್ಧ ನಹುಷ ರಾಜ ಮತ್ತು ಸಾಕ್ಷಾತ್ ಮಹಾದೇವ ಮತ್ತು ಪಾರ್ವತಿ ಮಾತೆಯ ಪುತ್ರಿಯಾದ ಅಶೋಕಸುಂದರಿಯರ ಸುಪುತ್ರ.

ನಹುಷ ರಾಜನಿಗೆ ಆರು ಜನ ಗಂಡು ಮಕ್ಕಳು. ನಹುಷನಿಗೆ ವಿರಜೆಯಲ್ಲಿ ಹುಟ್ಟಿದ ಹಿರಿಯವನಾದ ಯತಿ ಚಿಕ್ಕಂದಿನಿಂದಲೇ ವಿರಾಗಿ. ಚಿನ್ನದ ಚಮಚವನ್ನು ಕಚ್ಚಿಕೊಂಡು ಹುಟ್ಟಿದವನಾದರೂ ರಾಜಸಹಜವಾದ ಭೋಗ ಭಾಗ್ಯಗಳಲ್ಲಿ ಅವನಿಗೆ ಎಳ್ಳಷ್ಟೂ ಮೋಹವಿರಲಿಲ್ಲ. ಅವನು ಪಾರಂಪರಿಕವಾಗಿ ಒದಗಿದ ರಾಜ ಪಟ್ಟವನ್ನು ತಿರಸ್ಕರಿಸಿ ತಪಸ್ಸು ಮಾಡಲು ಅಡವಿಗೆ ಹೊರಟು ಹೋದ. ಎರಡನೇಯವನಾದ ಯಯಾತಿ ಮಹಾರಾಜನಾದ.

ಯಯಾತಿ ಮಹಾರಾಜನಾಗಿ ಇಡೀ ಜಗತ್ತನ್ನೇ ಗೆದ್ದು ಚಕ್ರವರ್ತಿ ಎನಿಸಿಕೊಳ್ಳುತ್ತಾನೆ. ತನ್ನ ನಾಲ್ಕು ತಮ್ಮಂದಿರನ್ನು ನಾಲ್ಕು ದಿಕ್ಕುಗಳ ರಾಜ್ಯಗಳನ್ನೆಲ್ಲಾ ಮೇಲ್ವಿಚಾರಣೆ ಮಾಡಲು ನೇಮಕ ಮಾಡುತ್ತಾನೆ. ಅಂತಹ ಚಕ್ರವರ್ತಿ ಕ್ಷತ್ರಿಯವೀರ ಯಯಾತಿ ಅಸುರರ ಗುರುವಾದ ಶುಕ್ರಾಚಾರ್ಯರ ಮಗಳು ದೇವಯಾನಿಯನ್ನು ಮದುವೆಯಾದನೆಂಬ ಕಥೆ ಅನೇಕರಿಗೆ ಗೊತ್ತು. ತನ್ನ ತಂದೆಯ ಶಿಷ್ಯನಾದ ಮತ್ತು ದೇವಗುರು ಬೃಹಸ್ಪತಿಯ ಮಗ ಕಚನಿಂದ ತಿರಸ್ಕೃತಳಾದ ದೇವಯಾನಿ ಮುಂಗೋಪಿ. ತನ್ನ ಅತಿ ಕೋಪದಿಂದಲೇ ಕಚನನ್ನು ಶಪಿಸಿ ಆತನಿಂದ ಮರುಶಪಿತಳಾದ ದೇವಯಾನಿ ಮತ್ತೊಮ್ಮೆ ತನ್ನ ಕೋಪದ ಪ್ರಭಾವದಿಂದಲೇ ತನ್ನ ಗೆಳತಿ ಮತ್ತು ದಾನವರಾಜ ವೃಷಪರ್ವನ ಮಗಳು ಶರ್ಮಿಷ್ಠೆಯನ್ನು ತನ್ನ ಬಟ್ಟೆಗಳನ್ನು ಹಾಕಿಕೊಂಡಿದ್ದಕ್ಕಾಗಿ ನಿಂದಿಸುತ್ತಾಳೆ. ರಾಜಕುವರಿ ಶರ್ಮಿಷ್ಠೆ, ದೇವಯಾನಿಯ ಅಹಂಕಾರದ ಮಾತುಗಳಿಂದ ಕೆರಳಿ, ಅವಳ ಬಟ್ಟೆಗಳನ್ನ ಕಿತ್ತುಕೊಂಡು ನಗ್ನಳಾದ ಅವಳನ್ನು ಪಾಳು ಬಿದ್ದ ಭಾವಿಯೊಂದಕ್ಕೆ ತಳ್ಳಿ ಬಿಟ್ಟು ಅಲ್ಲಿಂದ ಹೊರಟು ಹೋಗಿ ಬಿಡುತ್ತಾಳೆ.


ವನವಿಹಾರಕ್ಕೆ ಬಂದ ಚಕ್ರವರ್ತಿ ಯಯಾತಿ ಪಾಳುಭಾವಿಯಿಂದ ಬರುತ್ತಿದ್ದ ಆರ್ತನಾದವನ್ನು ಕೇಳಿ ಅಲ್ಲಿಗೆ ಹೋಗಿ ನೋಡಲು ನಗ್ನ ಸುಂದರಿಯಾದ ದೇವಯಾನಿ ಕಾಣುತ್ತಾಳೆ. ತನ್ನ ಹೊದಿಕೆಯನ್ನು ಅವಳಿಗೆ ಕೊಟ್ಟು, ಅವಳ ಕೈ ಹಿಡಿದು ಅವಳನ್ನು ಮೇಲಕ್ಕೆತ್ತುತ್ತಾನೆ. ತನ್ನ ಕೈಹಿಡಿದ ಮಹಾರಾಜ ಯಯಾತಿಯೇ ತನ್ನ ಪತಿ ಎಂದು ದೇವಯಾನಿ ಭಾವಿಸುತ್ತಾಳೆ. ದೇವಯಾನಿಯ ಅಪೂರ್ವ ಸೌಂದರ್ಯವನ್ನು ಕಂಡು ಪರವಶನಾದ ಯಯಾತಿ ಕೂಡ ಆಕೆ ತನಗೆ ಒಲಿದುದನ್ನು ತನ್ನ ಭಾಗ್ಯ ಎಂದುಕೊಳ್ಳುತ್ತಾನೆ.

ದೇವಯಾನಿ ಮನೆಗೆ ಮರಳಿ ತಂದೆಗೆ ಶರ್ಮಿಷ್ಠೆ ಮಾಡಿದ ಕೃತ್ಯವನ್ನು ಹೇಳಿ, ಅವಳ ತಂದೆಯ ರಾಜ್ಯವನ್ನು ತಾನು ಬಿಟ್ಟು ಹೋಗುವುದಾಗಿ ಹೇಳುತ್ತಾಳೆ. ಮಗಳ ಪ್ರೀತಿಯಲ್ಲಿ ಅಂಧರಾದ ಶುಕ್ರಾಚಾರ್ಯರು ಅವಳೊಂದಿಗೆ ದೇಶ ಬಿಟ್ಟು ಹೊರಟು ನಿಲ್ಲುತ್ತಾರೆ. ತನ್ನ ರಾಜ್ಯಕ್ಕೆ ಅವರ ಅಗತ್ಯವನ್ನು ಅರಿತ ವೃಷಪರ್ವ ಮಹಾರಾಜನು ಶುಕ್ರಾಚಾರ್ಯರಿಗೆ ತಮ್ಮ ತಪ್ಪುಗಳನ್ನು ಕ್ಷಮಿಸಬೇಕೆಂದು ಕೇಳಿಕೊಳ್ಳುತ್ತಾನೆ. ಕೊನೆಗೆ ವೃಷಪರ್ವನ ಮಗಳು ಶರ್ಮಷ್ಠೆ ದೇವಯಾನಿಯ ದಾಸಿಯಾಗಿರಲು ಒಪ್ಪಿಕೊಂಡ ಮೇಲೆ ಶುಕ್ರಾಚಾರ್ಯರು ದಾನವಗುರುವಾಗಿ ಮುಂದುವರೆಯಲು ಅಂಗೀಕರಿಸುತ್ತಾರೆ.

ಮುಂದೆ ದೇವಯಾನಿಯ ಇಚ್ಛೆಯಂತೆ ಶುಕ್ರಾಚಾರ್ಯರು ಅವಳನ್ನು ಚಕ್ರವರ್ತಿ ಯಯಾತಿಗೆ ಧಾರೆಯೆರೆದು ಕೊಡುತ್ತಾರೆ. ದೇವಯಾನಿಯ ಜೊತೆ ಅವಳ ದಾಸಿಯಾದ ಶರ್ಮಿಷ್ಠೆ ಕೂಡ ಚಕ್ರವರ್ತಿ ಯಯಾತಿಯ ರಾಜ್ಯಕ್ಕೆ ತೆರಳುತ್ತಾಳೆ. ದೇವಯಾನಿಯಂತಹ ಅದ್ಭುತ ಸುಂದರಿಯೊಂದಿಗೆ ಸಕಲ ಭೋಗ ಭಾಗ್ಯಗಳನ್ನು ಅನುಭವಿಸುತ್ತಿದ್ದರೂ ಯಯಾತಿಯ ಕಣ್ಣಿಗೆ ಶರ್ಮಿಷ್ಠೆ ಬಿದ್ದ ಮೇಲೆ ಅವನು ಅವಳಲ್ಲಿ ಕೂಡ ಅನುರಕ್ತನಾದ. ಅವಳು ಕೂಡ ಯಯಾತಿಯನ್ನು ಕಂಡು ಅವನ ಪ್ರೀತಿಯನ್ನು ಬಯಸುತ್ತಾಳೆ.

ದೇವಯಾನಿಗೆ ತಿಳಿಯದಂತೆ ಯಯಾತಿ ಶರ್ಮಿಷ್ಠೆಯನ್ನು ಕೂಡ ವರಿಸುತ್ತಾನೆ. ದೇವಯಾನಿಯಲ್ಲಿ ಯದು ಮತ್ತು ತುರ್ವಸುಗಳನ್ನು ಪುತ್ರರಾಗಿ ಪಡೆದರೆ, ಶರ್ಮಿಷ್ಠೆಯಲ್ಲಿ ದ್ರುಹ್ಯು, ಅನು ಮತ್ತು ಪುರುಗಳನ್ನು ಪುತ್ರರಾಗಿ ಪಡೆಯುತ್ತಾನೆ. ಆದರೆ ಯಯಾತಿ ಮತ್ತು ಶರ್ಮಿಷ್ಠೆಯರ ಸಂಗಮದ ವಿಷಯ ತಿಳಿದು ಕ್ರುದ್ಧಳಾದ ದೇವಯಾನಿ ತನ್ನ ತಂದೆ ಶುಕ್ರಾಚಾರ್ಯರಿಗೆ ದೂರು ನೀಡುತ್ತಾಳೆ. ಶುಕ್ರಾಚಾರ್ಯರು ಸಿಟ್ಟಿನಿಂದ ಯಯಾತಿಗೆ ವೃದ್ಧನಾಗಿ ಹೋಗೆಂದು ಶಪಿಸುತ್ತಾರೆ. ಯಯಾತಿ ಕ್ಷಮೆ ಬೇಡಲು ಬೇರೆ ಯಾರಾದರೂ ಅವನ ವೃದ್ಧಾಪ್ಯವನ್ನು ಪಡೆದುಕೊಂಡು ತಮ್ಮ ಯೌವನವನ್ನು ಅವನಿಗೆ ಕೊಡಲು ಒಪ್ಪಿದರೆ ಹಾಗಾಗಬಹುದು ಎಂಬ ಪರಿಹಾರವನ್ನು ಶುಕ್ರಾಚಾರ್ಯರು ನೀಡುತ್ತಾರೆ.

ಯಯಾತಿಗೆ ಇನ್ನೂ ಭೋಗ ಜೀವನದಲ್ಲಿ ಅಪಾರ ಆಸಕ್ತಿ. ಆದುದರಿಂದ ಆತನು ಆಗ ತಾನೇ ಯೌವನದ ಹೊಸ್ತಿಲಲ್ಲಿದ್ದ ತನ್ನ ಪುತ್ರರಿಗೆ ಅವರ ಯೌವನವನ್ನು ತನಗೆ ಧಾರೆಯೆರೆಯಲು ಕೇಳಿಕೊಳ್ಳುತ್ತಾರೆ. ಯದು ಮೊದಲಾದ ಬೇರಾವ ರಾಜಕುಮಾರರು ಅದನ್ನು ಒಪ್ಪುವುದಿಲ್ಲ. ಕೊನೆಯ ಪುತ್ರ ಪುರು ಮಾತ್ರ ತಂದೆಯ ಮಾತನ್ನು ಒಪ್ಪಿ ತನ್ನ ಯೌವನವನ್ನು ತಂದೆಗೆ ನೀಡಿ ತಾನು ವೃದ್ಧಾಪ್ಯವನ್ನು ಪಡೆದುಕೊಳ್ಳುತ್ತಾನೆ.

ಅನೇಕ ವರ್ಷಗಳ ಭೋಗ ಜೀವನದ ನಂತರವೂ ತಣಿಯದ ತನ್ನ ಭೋಗಾಸಕ್ತಿಯ ಮೇಲೆ ಕೊನೆಗೆ ಯಯಾತಿಗೆ ಜಿಗುಪ್ಸೆ ಉಂಟಾಗುತ್ತದೆ. ಯೌವನದ ಹೊಸ್ತಿಲಲ್ಲೇ ತನ್ನ ಮಗ ವೃದ್ಧಾಪ್ಯ ಅನುಭವಿಸುವಂತೆ ಮಾಡಿದ ಅವನಿಗೆ ಅಪಾರ ಪಶ್ಚಾತ್ತಾಪ ಉಂಟಾಗುತ್ತದೆ. ಕೊನೆಗೆ ಅವನು ತನ್ನ ವೃದ್ಧಾಪ್ಯವನ್ನು ಮಗನಿಂದ ವಾಪಸ್ಸು ಪಡೆದು ಅವನಿಗೆ ಯೌವನವನ್ನು ಮರಳಿಸಿ ಅವನಿಗೆ ರಾಜ್ಯಾಭಿಷೇಕ ಮಾಡಿ ತಾನು ತಪಸ್ಸಿಗೆ ಹೊರಟು, ಕೊನೆಗೆ ಲೌಕಿಕ ಲಾಲಸೆಗಳಿಂದ ಬಿಡುಗಡೆ ಪಡೆದು ಭಗವಂತನ ಕೃಪೆಯಿಂದ ಮುಕ್ತಿ ಪಡೆಯುತ್ತಾನೆ.


ಪುರಾಣ ಕಾಲದ ಯಯಾತಿ, ಸುಖವೆಂಬ ಮರೀಚಿಕೆಯ ಬೆನ್ನು ಹತ್ತಿ ತನ್ನ ಬದುಕಿನ ವೈಚಾರಿಕ ಮತ್ತು ಅಧ್ಯಾತ್ಮಿಕ ಆಯಾಮಗಳನ್ನು ತಿರಸ್ಕರಿಸಿ ಕೊನೆಗೆ ಜಿಗುಪ್ಸೆ ಹೊಂದುವ ಜನರ ಪ್ರತಿನಿಧಿಯಾಗುತ್ತಾನೆ. ಮಗನಿಂದ ತನ್ನ ಸುಖಕ್ಕಾಗಿ ಬಲಿದಾನ ಬಯಸುವ ಅನೇಕ ಮಹತ್ವಾಕಾಂಕ್ಷಿ ತಂದೆ ತಾಯಿಯರ ಪ್ರತಿನಿಧಿ ಕೂಡ ಆಗುತ್ತಾನೆ

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...