Monday, 18 February 2019

*ಎಂ. ಕೆ. ಇಂದಿರಾ ಹೇಳಿದ ಕಾಫಿಯ ಕಥೆ*...... *ಶಾಲೆಯಲ್ಲಿ ಮಕ್ಕಳಿಗೆ ಸೊಗಸಾಗಿ ವಿವರಿಸಬಹು ದು...*

ಕೆಲದಿನ ಅದು ಮಡಿವಂತರಿಗೆ ನಿಷೇಧವಾಗಿತ್ತು. ಅದರಲ್ಲೂ ಮಡಿ ಹೆಂಗಸರು ಕುಡಿಯಲೇಬಾರದು. ಆದರೆ ಅಮಲು ಹತ್ತಿಯಾಗಿತ್ತು. ಕಡೆಗೆ ಅದರ ಚಟ ಪೂರಾ ಹತ್ತಿದವರೊಬ್ಬರು ಅದಕ್ಕೆ "ಕೈಲಾಸದ ಕಷಾಯ" ಎಂದು ಹೆಸರಿಟ್ಟು ವೇದ_ವ್ಯಾಸರಂತೆ ಅದಕ್ಕೊಂದು ಪೌರಾಣಿಕ ಕಥೆಯನ್ನು ಕಲ್ಪಿಸಿ ಹೇಳಿದರು. ಅದು ಕಲ್ಪನೆಯಾದರೂ ಸ್ವಾರಸ್ಯವೂ ಸಹಜವೂ ಆಗಿ ಕಾಣಿಸುತ್ತೆ.

 "ಭಗೀರಥನ ಪ್ರಾರ್ಥನೆಯ ಮೇರೆಗೆ ಗಗನಾಂತರದಿಂದ  ಧುಮುಕಿದ ಗಂಗೆಯನ್ನು ಪರಶಿವ ತಡೆದು ಜಟೆಯಲ್ಲಿ ಬಿಗಿದು ಕೂರಿಸಿಕೊಂಡ. ಮುಂದೆ ಗಂಗೆ ಸಾವಧಾನವಾಗಿ ಹರಿದು ಭಾಗೀರಥಿ ಎನಿಸಿಕೊಂಡಳು.
 ಸಗರಪುತ್ರರೇನೋ ಮುಕ್ತಿ ಪಡೆದರು, ಆದರೆ ಕೈಲಾಸದಲ್ಲಿ ಗಂಗೆಯನ್ನು ತಲೆಯಲ್ಲಿ ಹೊತ್ತ  ಪರಮೇಶ್ವರನಿಗೆ  ಅಸಾಧ್ಯ ನೆಗಡಿ ಪ್ರಾರಂಭವಾಯ್ತು. ಏನು ಮಾಡಿದರೂ ನೆಗಡಿ ನಿಲ್ಲಲೊಲ್ಲದು. ಶಿವನ ಜಟೆಯಿಂದ ಧುಮುಕುತ್ತಿದ್ದುದಲ್ಲದೆ  ಗಂಗೆ ಆತನ ಮೂಗಿನಿಂದಲೂ ದ್ವಿಧಾರೆಯಾಗಿ ಇಳಿಯತೊಡಗಿದಳು. ತಲೆನೋವು, ಮೈ ನೋವು, ಜ್ವರ ಎಲ್ಲಾ ಹೊಡೆದು ಬಾರಿಸಿತು ಹರನಿಗೆ. ಮೂಗು ಒರೆಸಿಕೊಳ್ಳಲು ಅವನಲ್ಲಿ ಒಂದು ತುಂಡು ಬಟ್ಟೆಯಿಲ್ಲ. ಕಡೆಗೆ ವಿಧಿಯಿಲ್ಲದೆ ಪಾರ್ವತಿಯ ಪೀತಾಂಬರದ ಸೆರಗನ್ನೇ ಮೂಗಿಗೆ ಒತ್ತಿ ಹಿಡಿದ.

 ಹರನ ಕಾಯಿಲೆಯ ವಿಷಯ ತಿಳಿದು ಅಗ್ನಿದೇವ ಓಡಿ ಬಂದು ಕೈಲಾಸದಲ್ಲಿ ಧಗೆ ಎಬ್ಬಿಸಿ ಎಲ್ಲರಿಗೂ ಬೆಚ್ಚಗೆ ಮಾಡಿದ. ಉಹೂಂ !  ಜಗ್ಗಲಿಲ್ಲ. ಮುಂದೇನೆಂದು  ದೇವಾಧಿದೇವತೆಗಳಿಗೆ  ಚಿಂತೆಯಾಗಿ ಕಡೆಗೆ ದೇವವೈದ್ಯನಾದ ಧನ್ವಂತರಿಯನ್ನು ಕರೆಸಿದರು.

ಅವನು ಪರಶಿವನ ನಾಡಿ ಹಿಡಿದು ನೋಡಿದ. ಶಿವನ ಮೈಯ್ಯ ಜ್ವರದ ಜೊತೆಗೆ  ಅಗ್ನಿಯ  ಶಾಖವೂ ಸೇರಿ ಶಿವನ ಜ್ವರ ನೂರಾಹತ್ತು ಡಿಗ್ರಿಯಾಗಿತ್ತು. ಧನ್ವಂತರಿ ಇದುವರೆಗೆ ಯಾರಿಗೂ ಕೊಡದ ಒಂದು ಔಷಧಿಯನ್ನು ಈಗ ಜಗದೀಶನಿಗೆ ಕೊಡಲೇಬೇಕಾಯ್ತು.

 ಸಂಜೀವಿನಿ ಪರ್ವತದಿಂದ ಆ ಬೀಜವನ್ನು ತರಬೇಕು. ಅದಕ್ಕೆ ಯಾರು ಸಮರ್ಥರು ಎಂದು ಯೋಚಿಸಿ ಕಡೆಗೆ ಆ ಕೆಲಸಕ್ಕೆ ವಾಯುಪುತ್ರನೇ ಸರಿಯೆಂದು ಭುಲೋಕದ ಋಷ್ಯಮೂಕ ಪರ್ವತದ ಕೋಡುಗಲ್ಲಿನ ಮೇಲೆ ಕೂತಿದ್ದ ಮಾರುತಿಯನ್ನು ಕರೆತರಲಾಯ್ತು. ಪರಮೇಶ್ವರನ ಫಜೀತಿ ನೋಡಿ ಅವನಿಗೂ ಗಾಬರಿಯಾಗಿತ್ತು.

 ಧನ್ವಂತರಿಯ ಆಜ್ಞೆಯ ಮೇರೆಗೆ ಹನುಮಂತ ಹಾರಿದ ಸಂಜೀವಿನಿ ಪರ್ವತಕ್ಕೆ. ' ಕೆಂಪು ಸಣ್ಣ ಹಣ್ಣು, ತಿನ್ನಲು ಸಿಹಿ ಸಿಹಿ, ಒಳಗೆ  ದಪ್ಪ ಬೀಜ ಇರುತ್ತೆ. ಅದನ್ನ ಜಾಗ್ರತೆ ತೆಗೆದುಕೊಂಡು ಬಾ' ಎಂದು ಹೇಳಿದ್ದ ಧನ್ವಂತರಿ. ಸರಿ, ಸಂಜೀವಿನಿ ಪರ್ವತವನ್ನು  ಗರಪಾಡಿದ ಪ್ರಾಣೇಶ. ಅಲ್ಲಿ ಆ ಹಣ್ಣಿನ ಗಿಡಗಳ ವನವೇ ಇದೆ. ಮೊದಲು ತಾನು ತಿಂದು ರುಚಿ ನೋಡಿದ. ಬಹು ರುಚಿಯಾಗಿತ್ತು. ಹಸಿಬೀಜವನ್ನೇ ನುಂಗಿಬಿಟ್ಟ. ಹನುಮನ ಬಲ ನೂರ್ಮಡಿಯಾಯ್ತು.

 ಗಿಡಗಳನ್ನೇ ಕಿತ್ತು ಹೊರೆಕಟ್ಟಿ ಹೊತ್ತ ಹನುಮ. ಅವನು ಅಂತರಿಕ್ಷ ಮಾರ್ಗದಲ್ಲಿ ರಭಸದಿಂದ ಹಾರಿ ಬರುತ್ತಿದ್ದಾಗ ಪಕ್ವವಾದ ಕೆಲವು ಹಣ್ಣುಗಳು ಭರತಖಂಡದ ಮೇಲೆ ಅಲ್ಲಲ್ಲಿ ಉದುರಿದವು. ಕ್ರಮೇಣ ಅವು ಭೂಮಿಯಲ್ಲಿ ಸಮೃದ್ಧವಾಗಿಯೇ ಬೆಳೆದವು.

 ಅತ್ತ ಕೈಲಾಸದಲ್ಲಿ ಕೂಡಲೇ ಧನ್ವಂತರಿ ಒಣಗಿದ ಹಣ್ಣನ್ನು ಒಡೆದು, ಬೀಜ ತೆಗೆದು ಅಗ್ನಿಗೆ ಕೊಟ್ಟ. ಅಗ್ನಿ ಹದವಾಗಿ  ಹುರಿದು ಕೊಟ್ಟ. ಅದನ್ನು ಅರೆದು ಪುಡಿಮಾಡಿ ಕಷಾಯಕ್ಕಿಟ್ಟಾಯಿತು. ಅದಕ್ಕೆ ಹಾಲು_ಸಕ್ಕರೆ ಬೇಕು. ಸರಿ, ಗಣಪ, ಸುಬ್ರಹ್ಮಣ್ಯರು  ಓಡಿದರು. ದೇವಲೋಕದಿಂದ  ಸಕ್ಕರೆ ಬಂತು. ವೈಕುಂಠದ ಕ್ಷೀರಸಾಗರದಿಂದ ಹಾಲು ಬಂತು. ಘಂ ಎನ್ನುವ ಕಷಾಯ ತಯಾರಾಯಿತು.

 ದೊಡ್ಡ ಕರಂಡದ ತುಂಬಾ ಕಷಾಯ ತುಂಬಿ ಪರಮೇಶ್ವರನಿಗೆ ಕೊಟ್ಟ  ಧನ್ವಂತರಿ. ಬಿಸಿಬಿಸಿಯಾಗಿ ಬಲು ರುಚಿಯಾಗಿತ್ತು. ಉಮೆ ಶಂಕರನ ಮುಖವನ್ನೇ ನೋಡುತ್ತಿದ್ದಳು. ಆರು ಗಳಿಗೆಯಲ್ಲಿ ಹರನ ಮೂಗಿನ ಗಂಗಾಪ್ರವಾಹ ನಿಂತಿತು. ಮೈ ಹಗುರವಾಗಿ ಜ್ವರಬಿಟ್ಟು ಪರಮೇಶ್ವರ ಪ್ರಸನ್ನನಾದ.

 ಈ ಪವಾಡವನ್ನು ಕಂಡು ದೇವತೆಗಳು ವಿಸ್ಮಯಪಟ್ಟರು. ಉಳಿದ ಕಷಾಯವನ್ನು ಧನ್ವಂತರಿ ನೆರೆದವರೆಲ್ಲರಿಗೂ ಬಿಸಿಬಿಸಿಯಾಗಿ ಕೊಟ್ಟ. ಅಮೃತ ಕುಡಿದು ಕುಡಿದು ಸೀ ಬಡಿದು ಹೋದ ಬಾಯಿಗೆ ಈ ಕಷಾಯ ಅಮೃತಕ್ಕಿಂತ ರುಚಿಯಾಗಿ ಕಂಡಿತು. ಎಲ್ಲರಿಗೂ ಮೈ ಹುರುಪು ಬಂದಿತು. ನಂತರ ದೇವತೆಗಳು ಕೇಳಿದರು ಆ ಬೀಜದ ಹೆಸರೇನು..ಎಂದು?.

 ಧನ್ವಂತರಿ ಯೋಚಿಸಿದ. ಇವರಿಗೆ ತಿಳಿದರೆ ಸಂಜೀವಿನಿ ಪರ್ವತವೇ ಖಾಲಿಯಾದೀತು  ಎಂದುಕೊಂಡು, ಯಾವಾಗಲೂ ಕೆಲವು ಮಹತ್ವದ ಔಷಧಿಗಳ ಹೆಸರು ಹೇಳಬಾರದು. ಹೇಳಿದರೆ ಅದರ ಶಕ್ತಿ ಕಡಿಮೆಯಾಗುತ್ತದೆ. ಅಲ್ಲದೆ ನೀವೆಲ್ಲ ಕೇಳಿದರೆ ಸಂಜೀವ ಇದನ್ನು ಕೊಟ್ಟಾನೆ..? ಬೀಜವನ್ನು ಕಪಿರಾಜ ತಂದುಕೊಟ್ಟಿದ್ದರಿಂದ  ನೀವು  *ಕಪಿಬೀಜ* ಎಂದು ಕರೆಯಿರಿ. ಇಷ್ಟು ಸಾಕು, ಇನ್ನು ಹೊರಡಿ ಎಂದಾಗ ಎಲ್ಲರೂ ಹೊರಟರು.

 ಮೊದಮೊದಲು ಕಲಿಯುಗದಲ್ಲಿ ಆ *ಕಪಿಬೀಜದ* ಹಣ್ಣುಗಳನ್ನು ಮಂಗಗಳೇ ತಿನ್ನುತ್ತಿದ್ದವು. ಮಾರುತಿಯ ಅಂಶದಿಂದ ಹುಟ್ಟಿದ ಅಂದರೆ ಮಂಗನಮೂತಿಯ ಕೆಂಪು ಆಂಗ್ಲ ಜನ ಮೊಟ್ಟಮೊದಲು ಈ ಕಪಿಬೀಜವನ್ನು ಕಂಡುಹಿಡಿದರು... *ಕಫಿ* ಎಂದರು...ಬರುಬರುತ್ತಾ ಅದು  *ಕಾಫಿಯಾಯಿತು*....."
               _________________

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...