Friday, 29 May 2020

🕉️🕉️🕉️ಬ್ರಹ್ಮತತ್ವ🕉️🕉️🕉️


ಮೂಲ ಎಂಬ ಅರ್ಥವುಳ್ಳ ಬೃಃ ಶಬ್ದದಿಂದ ಬ್ರಹ್ಮಶಬ್ದ ಬಂದಿದೆ. ಯಾವುದು ತಾನೇ ತನ್ನ ಅಂತಃಶಕ್ತಿಯಿಂದಲೇ ನಿರಾತಂಕವಾಗಿ ಆವಿರ್ಭವಿಸುವುದೋ ಅದೇ ಬ್ರಹ್ಮ. ಇದೇ ಜಗತ್ತಿಗೆ ಏಕೈಕ ಕಾರಣ ಮತ್ತು ಏಕಮೇವಾದ್ವಿತೀಯವಾದದ್ದು. ಉಪನಿಷತ್ಕಾರರ ಮೊದಲ ತತ್ತ್ವವೇ ಬ್ರಹ್ಮನನ್ನು ಕುರಿತದ್ದು. ಬ್ರಹ್ಮ ಮತ್ತು ಆತ್ಮ ಎಂಬ ಶಬ್ದಗಳು ಮೊಟ್ಟಮೊದಲು ಅಥರ್ವವೇದದಲ್ಲಿ ಉಪಯೋಗಿಸಲ್ಪಟ್ಟಿವೆ. ಪರಮಾತ್ಮಪರವಾಗಿ ಬ್ರಹ್ಮಶಬ್ದದ ಅರ್ಥಪುಷ್ಟಿಯನ್ನು ಅಲ್ಲಿ ಕಾಣುತ್ತೇವೆ.

ಉಪನಿಷತ್ಕಾರರ ಮೊದಲ ಪ್ರಶ್ನೆ ಜಗತ್ತು ಮತ್ತು ನಾವು ಎಲ್ಲಿಂದ ಬಂದೆವು ? ನಮ್ಮ ಮುಂದಿನ ಗತಿಗೂ ಸುಖದುಃಖಗಳಿಗೂ ಕಾರಣರಾರು ? ಎಂಬುದೇ ಆಗಿದೆ. ಉತ್ತರವಾಗಿ ಸತ್, ಆತ್ಮ, ಬ್ರಹ್ಮ, ಅಕ್ಷರ, ಆಕಾಶ ಶಬ್ದಗಳಿಂದ ಜಗತ್ಕಾರಣವಾದ ಪರವಸ್ತುವನ್ನು ಹೇಳಲಾಗಿದೆ. ಬ್ರಹ್ಮನೇ ಜಗತ್ತಿಗೆ ಉಪಾದಾನ ಕಾರಣ ಮತ್ತು ನಿಮಿತ್ತಕಾರಣ ಎರಡೂ. ಬ್ರಹ್ಮ ಹೊರತು ಮತ್ತಾವುದೂ ಮೊದಲು ಇರಲಿಲ್ಲವಾದ್ದರಿಂದ ಜಗತ್ತು ಬ್ರಹ್ಮಮಯ. ಸಂಕಲ್ಪ ಮಾತ್ರದಿಂದ ಜಗತ್ತನ್ನು ಸೃಷ್ಟಿಸಿ ಅದರಲ್ಲಿ ಬ್ರಹ್ಮ ಅಂತರ್ಯಾಮಿಯಾಗಿದೆ. ಸರ್ವಭೂತಗಳಿಗೂ ಅಂತರಾತ್ಮನಾದ ಬ್ರಹ್ಮವೊಂದೇ ಶಾಶ್ವತ, ಸರ್ವಶಕ್ತ, ಅನಂತ, ಪೂರ್ಣಕಾಮ. ಸರ್ವರಿಗೂ ಅಂತರಾತ್ಮನಾದ ಬ್ರಹ್ಮನಲ್ಲಿ ಸರ್ವ ಆತ್ಮಗಳೂ ಚಕ್ರದ ನೇಮಿ ಮತ್ತು ನಾಭಿಯಲ್ಲಿ ಅರೆಕಾಲುಗಳು ಹೇಗೋ ಹಾಗೆ ಅಡಕವಾಗಿದ್ದಾರೆ. ಲವಣ ನೀರಿನಲ್ಲಿ ಕರಗಿ ವ್ಯಾಪಿಸುವಂತೆ ಬ್ರಹ್ಮ ಸರ್ವವನ್ನೂ ವ್ಯಾಪಿಸಿದ್ದಾನೆ. ಅಗ್ನಿಯಿಂದ ಅಗ್ನಿಕಣಗಳೂ ಜೇಡರ ಹುಳುವಿನಿಂದ ಬಲೆಯ ಎಳೆಗಳೂ ವೇಣುವಿನಿಂದ ನಾದದ ಅಲೆಗಳೂ ಉದ್ಭವಿಸುವಂತೆ ಎಲ್ಲ ಭೂತಜಾತಗಳೂ ಬ್ರಹ್ಮನಿಂದಲೇ ಉದ್ಭವಿಸುತ್ತವೆ. ಎಲ್ಲ ಭೂತ ಜಾತಗಳಿಗೂ ಬ್ರಹ್ಮ ಏಕಾಯನನಾಗಿದ್ದಾನೆ.

ಬ್ರಹ್ಮನಿಗೂ ಜಗತ್ತಿಗೂ ಹೇಗೆ ಸಂಬಂಧ ಎಂಬ ವಿಚಾರದಲ್ಲಿ ಉಪನಿಷತ್ತುಗಳು ಹೀಗೆಯೇ ಎಂದು ಸ್ಪಷ್ಟವಾಗಿ ಹೇಳಿಲ್ಲ. ಅಂದರೆ ಆತ ವಿಶ್ವಾಂತರ್ಯಾಮಿಯೆಂದೂ ವಿಶ್ವಾತೀತನೆಂದೂ ಎರಡು ಬಗೆಯಾಗಿ ಹೇಳಿವೆ. ಹಾಗೆಯೇ ಸಪ್ರಪಂಚ ಬ್ರಹ್ಮ, ನಿಷ್ಪ್ರಪಂಚ ಬ್ರಹ್ಮರ ವಿಚಾರವೂ ಬರುತ್ತದೆ. ಈ ಎರಡು ವಾದಗಳ ಸಮರ್ಥನೆಗೂ ಉಪನಿಷತ್ತಿನಲ್ಲಿ ಸಾಕಷ್ಟು ತತ್ತ್ವಪ್ರತಿಪಾದನೆಯನ್ನು ಕಾಣುತ್ತೇವೆ. ಮುಂಡಕೋಪನಿಷತ್ತಿನಲ್ಲಿ ಎರಡು ವಾದಗಳನ್ನೂ ಸಮನ್ವಯ ಮಾಡುವ ಅರ್ಥವುಳ್ಳ ಒಂದು ಮಂತ್ರವಿದೆ. ಬ್ರಹ್ಮನನ್ನು ಬಿಟ್ಟು ಜಗತ್ತಿಗೆ ಬೇರೆ ಅಸ್ತಿತ್ವವಿಲ್ಲ. ಆದರೆ ಬ್ರಹ್ಮ ಜಗತ್ತಿಗೆ ಪರಿಮಿತನಾಗಿಲ್ಲ. ನಾಮರೂಪಗಳಿಗೆ ಸಿಲುಕಿಲ್ಲ. ಬ್ರಹ್ಮ ಪರಿಣಾಮವಾದದ ಪ್ರಕಾರ ಬ್ರಹ್ಮನೇ ಜಗತ್ತಿನ ರೂಪವನ್ನು ತಾಳುತ್ತಾನೆ. ಇದು ಸಪ್ರಪಂಚವಾದ. ಬ್ರಹ್ಮ ಜಗತ್ತಿಗೆ ಕಾರಣನಾಗಿದ್ದು, ನಾಮರೂಪ ಜಗತ್ತು ಬ್ರಹ್ಮನಷ್ಟು ಸತ್ಯವಲ್ಲವೆಂಬುದು ನಿಷ್ಪ್ರಪಂಚವಾದ. ಇದರ ಪ್ರಕಾರ ಬ್ರಹ್ಮ ಜಗತ್ತಿನಂತೆ ಕಾಣಿಸಿಕೊಳ್ಳುತ್ತಾನೆ. ಅಂದರೆ ಬ್ರಹ್ಮವಿವರ್ತವಾದ ಸಮರ್ಥನೆ ಇದೇ. ಆದರೆ ಬ್ರಹ್ಮನೇ ಏಕಮೇವಾದ್ವಿತೀಯವಾದ ಸತ್ಯ ಎಂಬುದನ್ನು ನಿಸ್ಸಂಶಯವಾಗಿ ಸಾರಲಾಗಿದೆ. ನಿಷ್ಪ್ರಪಂಚನಾದ ಬ್ರಹ್ಮ ಸಪ್ರಪಂಚನಂತೆ ಕಾಣಿಸುತ್ತಾನೆಂದು ಹೇಳುವುದು ಮಾಯಾವಾದ. ಅದ್ವೈತವಾದ ಇದನ್ನೇ ಹೆಚ್ಚು ವಿಸ್ತಾರವಾಗಿ ವಿವರಿಸಿದೆ. ಉಪನಿಷತ್ತುಗಳಲ್ಲಿ ಮಾಯೆ ಎಂಬ ಶಬ್ದ ಅಷ್ಟು ನಿರ್ದಿಷ್ಟವಾಗಿಲ್ಲ. ಇದರ ಅರ್ಥವನ್ನೇ ಕೊಡುವ ಅವಿದ್ಯೆ ಎಂಬ ಮತ್ತೊಂದು ಪದದ ಪ್ರಯೋಗವೂ ಇದೆ.

ನಾಮರೂಪ ಜಗತ್ತಿನ ಸೃಷ್ಟಿಕ್ರಮವನ್ನು ಉಪನಿಷತ್ತುಗಳು ಹೇಳುವಾಗ ಚೇತನ, ಅಚೇತನ ಎಂಬ ಭೇದವನ್ನು ಹೇಳಿವೆ. ಅಚೇತನ ಜಗತ್ತು ಚೇತನ ಜೀವಗಳಿಗೆ ಸಾಧನಸಾಮಗ್ರಿ ಮಾತ್ರ. ಅದು ಪಂಚಭೂತಗಳಿಂದ ಕೂಡಿದೆ. ಪೃಥ್ವಿ, ಅಪ್, ತೇಜಸ್, ವಾಯು, ಆಕಾಶ ಎಂಬುವೇ ಇವು. ಛಾಂದೋಗ್ಯೋಪನಿಷತ್ತಿನಲ್ಲಿ ಅಗ್ನಿ, ಜಲ, ಪೃಥ್ವಿ ಎಂಬುವು ಬ್ರಹ್ಮನಿಂದ ಕ್ರಮವಾಗಿ ಸೃಷ್ಟಿಯಾದುವೆಂದು ಹೇಳಲಾಗಿದೆ. ತೇಜಸ್ಸು, ಜಲ, ಅನ್ನಗಳೇ ಇತರ ಸಕಲ ಭೂತಜಾತಗಳಿಗೆ ಮೂಲಕಾರಣ. ಈ ಮೂರನ್ನು ಸೃಷ್ಟಿಸಿದ ಮೇಲೆ ಇದನ್ನು ಒಂದುಗೂಡಿಸಿ ಅವುಗಳೊಂದಿಗೆ ಜೀವನಸಹಿತ ಪ್ರವೇಶಿಸಿ ನಾಮರೂಪಾತ್ಮಕವಾದ ಜಗತ್ತನ್ನು ಸೃಜಿಸಲು ಬ್ರಹ್ಮ ಸಂಕಲ್ಪಿಸಿತು. ಹೀಗೆ ಜಗತ್ತಿಗೆ ಬ್ರಹ್ಮವೇ ಉಪಾದಾನಕಾರಣ, ನಿಮಿತ್ತಕಾರಣ ಎರಡೂ ಆಗಿದೆ. ಐತರೇಯ, ತೈತ್ತಿರೀಯ ಉಪನಿಷತ್ತುಗಳಲ್ಲಿಯೂ ಪರಮಾತ್ಮಸಂಕಲ್ಪದಿಂದ ಸೃಷ್ಟಿ ಯೆಂದೂ ಅದರೊಳಗೆ ಬ್ರಹ್ಮನೇ ಅಂತಃಪ್ರವೇಶ ಮಾಡಿದನೆಂದೂ ಭಾವವಿದೆ. ಕಾರಣರೂಪಿ ಯಾದ ಬ್ರಹ್ಮನನ್ನು ತಿಳಿದವ ಅದರಿಂದಾದ ಪಂಚಭೌತಿಕ ಜಗತ್ತನ್ನೂ ಅರಿಯುತ್ತಾನೆ.

ಬ್ರಹ್ಮಜ್ಞಾನವನ್ನು ಪಡೆಯುವ ಕ್ರಮವನ್ನು ಕುರಿತು ಪರಾವಿದ್ಯೆ, ಅಪರಾವಿದ್ಯೆಗಳ ಭೇದವನ್ನು ಹೇಳಿದೆ. ಬ್ರಹ್ಮನನ್ನು ತಿಳಿಯುವುದು ಪರಾವಿದ್ಯೆ. ನಾಮರೂಪವಾದ ಜಗತ್ತನ್ನು ತಿಳಿಯುವುದು ಅಪರಾವಿದ್ಯೆ. ಮಣ್ಣನ್ನು ತಿಳಿಯುವುದರಿಂದ ಮಣ್ಣಿನಿಂದಾದುವೆಲ್ಲವನ್ನೂ ತಿಳಿಯುವಂತೆ, ಬ್ರಹ್ಮನನ್ನು ತಿಳಿದರೆ ಎಲ್ಲವನ್ನೂ ತಿಳಿದಂತೆ, ಇದಕ್ಕಿಂತ ಹೆಚ್ಚಿನ ವಿದ್ಯೆ ಯಾವುದೂ ಇಲ್ಲ. ಹೀಗೆಂದು ಮುಂಡಕೋಪನಿಷತ್ ಹೇಳುತ್ತದೆ. ಆದರೆ ಈಶೋಪನಿಷತ್ ಬ್ರಹ್ಮನನ್ನು ಅರಿಯಲು ಸಾಧ್ಯವಿಲ್ಲವೆಂದು ಬ್ರಹ್ಮಸ್ವರೂಪವನ್ನು ಹೇಳುವಾಗ ಸೂಚಿಸುತ್ತದೆ. ‘ಚಲಿಸುತ್ತದೆ, ಚಲಿಸುವುದಿಲ್ಲ, ದೂರದಲ್ಲಿದೆ, ಸಮೀಪದಲ್ಲಿದೆ, ಒಳಗೂ ಇದೆ, ಹೊರಗೂ ಇದೆ.’ ಹೀಗೆಯೇ ಬೃಹದಾರಣ್ಯಕದಲ್ಲಿ ಅಕ್ಷರರೂಪಿಯಾದ ವಿಶ್ವಾತ್ಮನನ್ನು ಕುರಿತು `ಸ್ಥೂಲನಲ್ಲ, ಅಣುವಲ್ಲ, ಹ್ರಸ್ವನಲ್ಲ, ದೀರ್ಘನಲ್ಲ, ಅಗ್ನಿಯಂತೆ ಕೆಂಪಾಗಿಲ್ಲ, ಜಲದಂತೆ ಹರಿಯುವುದಿಲ್ಲ. ನೆರಳಲ್ಲ, ಕತ್ತಲೆಯಲ್ಲ, ವಾಯುವಾಗಲೀ ಆಕಾಶವಾಗಲೀ ಅಲ್ಲ, ಸಂಸರ್ಗವುಳ್ಳದ್ದಲ್ಲ, ರಸವಲ್ಲ, ಗಂಧವಲ್ಲ. ಅದಕ್ಕೆ ಕಣ್ಣುಗಳಿಲ್ಲ, ಅದು ಅಳತೆಗೊಳಗಾದುದಲ್ಲ, ಒಳಗಿಲ್ಲ, ಹೊರಗಿಲ್ಲ’ ಎಂಬ ವಿವರಣೆ ಇದೆ. ಕೊನೆಯಲ್ಲಿ ಅರಿಯಲ್ಪಡುವವನೂ ನೋಡುವವನೂ ಮನನಮಾಡು ವವನೂ ಅರಿಯುವವನೂ ಅದಲ್ಲದೆ ಬೇರೆಯಲ್ಲ. ಈ ಅಕ್ಷರನಲ್ಲಿ ಎಲ್ಲವೂ ಓತಪ್ರೋತವಾಗಿದೆ. ಯಾವನು ಈ ಅಕ್ಷರನನ್ನು ತಿಳಿದು, ಈ ಲೋಕವನ್ನೇ ಬಿಡುವನೋ ಅವನು ಬ್ರಹ್ಮಜ್ಞನೆನಿಸುವನು ಎಂದು ಹೇಳಿದ್ದರೂ ವಾಕ್ಕಿಗೂ ಮನಸ್ಸಿಗೂ ದೂರನಾಗಿರುವನೆಂಬ ಸೂಚನೆ ಇದೆ. ಇದು ವಾಚಕ್ನವೀಗಾರ್ಗಿಗೆ ಯಾಜ್ಞವಲ್ಕ್ಯ ಜನಕನ ಸಭೆಯಲ್ಲಿ ಮಾಡಿದ ಉಪದೇಶ. ಧನದಲ್ಲಿ ನಿರಾಸಕ್ತಳಾಗಿ, ಅಮೃತತ್ವವನ್ನು ಪಡೆಯುವ ಅಭಿಲಾಷೆಯಿಂದ ತನ್ನ ಪತ್ನಿ ಮೈತ್ರೇಯಿ ಬ್ರಹ್ಮೋಪದೇಶ ಮಾಡಬೇಕೆಂದು ಬೇಡಿದಾಗಲೂ ಯಾಜ್ಞವಲ್ಕ್ಯ ಸರ್ವಾಂತರ್ಯಾಮಿಯಾದ ಆತ್ಮನನ್ನು (ಬ್ರಹ್ಮ) ತಿಳಿಯುವುದರಿಂದ ಮಾತ್ರವೇ ಅಮೃತತ್ವವನ್ನು ಪಡೆಯಬಹುದೆಂದೂ ಅವನೊಬ್ಬನನ್ನು ತಿಳಿದರೆ ಸರ್ವವನ್ನೂ ತಿಳಿದಂತಾಗುವುದೆಂದೂ ಹೇಳುತ್ತಾನೆ. ಆದರೆ ಬ್ರಹ್ಮತತ್ತ್ವವನ್ನು ತಿಳಿಯುವುದಾಗುವುದಿಲ್ಲ. ಬ್ರಹ್ಮನ ಹೊರತು ಮತ್ತಾವುದೂ ಇಲ್ಲ ಎಂದು ತಿಳಿಯಬೇಕಾದರೆ ಬ್ರಹ್ಮತ್ವವನ್ನು ಪಡೆಯುವುದರಿಂದ ಮಾತ್ರ ಸಾಧ್ಯ ಎಂದೂ ಅಹಂ ಬ್ರಹ್ಮಾಸ್ಮಿ, ತತ್ತ್ವಮಸಿ ಎಂಬ ಜ್ಞಾನವುಂಟಾಗಬೇಕೆಂದೂ ಇದೇ ಉಪನಿಷತ್ತಿನ ಸಾರವೆಂದೂ ಶಂಕರಾಚಾರ್ಯರು ಪ್ರತಿಪಾದಿಸುತ್ತಾರೆ. ಅವರ ವೇದಾಂತಸೂತ್ರಭಾಷ್ಯದಲ್ಲಿ ಬಾಷ್ಕಲಿ ಎಂಬ ಶಿಷ್ಯ ಬಾಧ್ವ ಎಂಬ ಗುರುವಿನಲ್ಲಿ ಬ್ರಹ್ಮಜ್ಞಾನವನ್ನು ಉಪದೇಶಿಸಬೇಕೆಂದು ಕೋರಿದ ಸಂದರ್ಭದಲ್ಲಿ ಮೂರನೆಯ ಸಲ ಕೇಳಿದಾಗಲೂ ಮೌನವಾಗಿದ್ದ ಗುರು ‘ಉಪಶಾಂತೋಯಂ ಆತ್ಮಾ’ ಎಂದು ಕೊನೆಯಲ್ಲಿ ಉಪದೇಶಿಸಿದುದನ್ನು ಉದಾಹರಿಸಿದ್ದಾರೆ. ಬ್ರಹ್ಮನನ್ನು ವರ್ಣಿಸಲು ಸಾಧ್ಯವಿಲ್ಲ, ಬ್ರಹ್ಮನನ್ನು ಅರಿತವ ಬ್ರಹ್ಮನಾಗುತ್ತಾನೆ-ಎಂಬುದೇ ಸಾರಾಂಶ. ಬೃಹದಾರಣ್ಯಕ ‘ನೇತಿ, ನೇತಿ’ ಎಂದು ಬ್ರಹ್ಮಸ್ವರೂಪವನ್ನು ತಿಳಿಸಲೆತ್ನಿಸಿದೆ.

ಜ್ಞಾನಮಾರ್ಗವನ್ನಷ್ಟೇ ಅಲ್ಲದೆ, ಉಪನಿಷತ್ತುಗಳು ಭಕ್ತಿ ಮತ್ತು ಕರ್ಮಮಾರ್ಗಗಳನ್ನೂ ಅನುಮೋದಿಸಿವೆ. ಜಾಗ್ರತ್, ಸ್ವಪ್ನ, ಸುಷುಪ್ತಿ, ತುರೀಯ ಎಂಬ ನಾಲ್ಕು ಅವಸ್ಥೆಗಳಲ್ಲಿ ನಾಲ್ಕನೆಯದರಲ್ಲಿ ಯೋಗಶಕ್ತಿಯಿಂದ ಬ್ರಹ್ಮಜ್ಞಾನ ಉಂಟಾಗುತ್ತದೆ ಎಂದು ಉಪನಿಷತ್ತುಗಳಲ್ಲಿ ಹೇಳಲಾಗಿದೆ. ಆದರೂ ಈ ಜ್ಞಾನಮಾರ್ಗದಲ್ಲಿ ಕರ್ಮಕ್ಕೂ ಭಕ್ತಿಗೂ ಅವಕಾಶವನ್ನು ಕಲ್ಪಿಸಲಾಗಿದೆ. ತೈತ್ತಿರೀಯೋಪನಿಷತ್ತಿನಲ್ಲಿ ಸತ್ಯನಿಷ್ಠೆ, ತಪಸ್ಸು, ವೇದಾಧ್ಯಯನಗಳಿಂದ ಅಮೃತತ್ವವುಂಟಾಗುತ್ತದೆ ಎಂದು ಹೇಳಲಾಗಿದೆ. ಅಹಂಕಾರನಿವೃತ್ತಿಯಾದಾಗಲೇ ಬ್ರಹ್ಮಜ್ಞಾನ ಪ್ರಾಪ್ತಿ. ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ ಎಂಬ ಮೂರು ಆಶ್ರಮಗಳಲ್ಲಿದ್ದು ಮಾನವ ಸರ್ವಸಂಗ ಪರಿತ್ಯಾಗ ಭಾವನೆಯಿಂದ ವೈರಾಗ್ಯವನ್ನು ಅಭ್ಯಾಸ ಮಾಡಿದರೆ ಸಂನ್ಯಾಸಾಶ್ರಮ, ಅದರೊಂದಿಗೆ ಬ್ರಹ್ಮಜ್ಞಾನ ಪ್ರಾಪ್ತಿಯಾಗುತ್ತವೆ ಎಂದು ತಿಳಿಸಲಾಗಿದೆ. ಹೀಗೆ ಮೋಕ್ಷಕ್ಕೆ ಅಂದರೆ ಬ್ರಹ್ಮಸಾಕ್ಷಾತ್ಕಾರಕ್ಕೆ ಪೂರ್ವಭಾವಿಯಾಗಿ ಸಾಧನೆಯೂ ಅಗತ್ಯ. ಬೃಹದಾರಣ್ಯಕದಲ್ಲಿ ಪ್ರಜಾಪತಿಯ ಮಕ್ಕಳನ್ನು ದೇವ, ಮನುಷ್ಯ, ಅಸುರ ಎಂದು ವರ್ಗೀಕರಿಸಿ ಅವರಿಗೆ ಪ್ರಜಾಪತಿ ಕರ್ತವ್ಯವನ್ನು ವಿಧಿಸುವಾಗ ಅಸುರರಿಗೆ ದಯಧ್ವಂ ಎಂದೂ ಮನುಷ್ಯರಿಗೆ ದತ್ತ ಎಂದೂ ದೇವತೆಗಳಿಗೆ ದಾಮ್ಯತ ಎಂದೂ ವಿಧಿಸಿರುವ ಸಂಗತಿ ಇದೆ. ಅಂದರೆ ಮಾನವರು ಸಮಾಜದಲ್ಲಿ ಪರಹಿತವನ್ನು ಆಚರಿಸತಕ್ಕದ್ದು, ಲೋಕವನ್ನು ತ್ಯಜಿಸಿ ಒಂಟಿಯಾಗಿದ್ದರೆ ಮಾತ್ರ ಮೋಕ್ಷಪ್ರಾಪ್ತಿಯಲ್ಲ ಎಂಬುದೇ ಸಾರಾಂಶ.

*ತುಂಬಾ ಮನಮುಟ್ಟುವ ಕಥೆ ದಯವಿಟ್ಟು ಸಂಪೂರ್ಣ ಓದಿ.*

*ಒಂದು ಕಪ್ ಮೊಸರೂ,
ಅಪ್ಪನ ಬಿಸಿಯುಸಿರೂ. *

ಬೆಂಗಳೂರಿನ ಯಶವಂತಪುರದಿಂದ ಹಾಸನಕ್ಕೆ ಅಥವಾ ತುಮಕೂರಿಗೆ ಹೋಗುವ ದಾರಿಯಲ್ಲೇ ಗೊರಗುಂಟೆಪಾಳ್ಯವಿದೆ. ಅಲ್ಲಿಂದ ಹೆಬ್ಬಾಳಕ್ಕೆ ಹೋಗುವ ರಸ್ತೆಯಲ್ಲಿ ಅರ್ಧ ಕಿಲೋ ಮೀಟರ್ ಹೋದರೆ,ಸ್ಟ್ಯಾಂಡರ್ಡ್ ಮೆಕ್ಯಾನಿಕಲ್  ವರ್ಕ್ಸ್ ಫ್ಯಾಕ್ಟರಿ ಸಿಗುತ್ತದೆ. ಹೆಚ್ಚಿನ ಸದ್ದಾಗದಂತೆ ಕಾರ್ಯ ನಿರ್ವಹಿಸುವ ವಿದೇಶಿ ನಿರ್ಮಿತ ಯಂತ್ರಗಳು ಅಲ್ಲಿವೆ. ಫ್ಯಾನ್, ರೆಫ್ರಿಜರೇಟರ್, ಟಿ.ವಿಗಳಿಗೆ ಅಗತ್ಯವಾಗಿ ಬೇಕಾಗುವ ಬಿಡಿಭಾಗಗಳನ್ನು ಅಲ್ಲಿ ಉತ್ಪಾದಿಸಲಾಗುತ್ತದೆ. ಎಲ್ಲಾ ಪ್ರಮುಖ ಕಂಪನಿಗಳಿಗೂ ಬಿಡಿ ಭಾಗಗಳನ್ನು ಸಪ್ಲೈ ಮಾಡುತ್ತಿರುವುದರಿಂದ ಸ್ಟ್ಯಾoಡರ್ಡ್ ಮೆಕ್ಯಾನಿಕಲ್‌ಸ್‌ ಫ್ಯಾಕ್ಟರಿಗೆ ಒಳ್ಳೆಯ ಹೆಸರೂ ಇದೆ.

ಈ ಫ್ಯಾಕ್ಟರಿ ಮಾಲೀಕನೇ ರಂಗಸ್ವಾಮಿ. ಈತ, ಅರಸೀಕೆರೆ ಸಮೀಪದ ಹಳ್ಳಿಯವನು. ಸಿದ್ದಗಂಗಾ ಮಠದಲ್ಲಿ ಹೈಸ್ಕೂಲು, ತುಮಕೂರಿನಲ್ಲಿ ಐಟಿಐ ಓದಿದವನು ಸೀದಾ ಬಂದಿದ್ದು ಪೀಣ್ಯಕ್ಕೆ. ಹೆಲ್ಪರ್ ಆಗಿ ಒಂದು ಫ್ಯಾಕ್ಟರಿ ಸೇರಿಕೊಂಡವನು ಐದು ವರ್ಷದಲ್ಲಿ ಎಲ್ಲ ಬಗೆಯ ಕೆಲಸ ಕಲಿತ. ನಂತರ ಮಾರ್ಕೆಟಿಂಗ್ ಮ್ಯಾನೇಜರ್ ಆದ. ಮಾರಾಟಕ್ಕೆ ಸಂಬಂಧಿಸಿದ ಆಳ-ಅಗಲಗಳು ರಂಗಸ್ವಾಮಿಗೆ ಪರಿಚಯವಾದದ್ದೇ ಆಗ. ಹತ್ತಾರು ಕಂಪನಿಗಳ ಮುಖ್ಯಸ್ಥರ ಒಡನಾಟ, ವಿಶ್ವಾಸ, ಅಲ್ಲಿನ ವಹಿವಾಟುಗಳಿಗೆ ಇರುವ ಬೇಡಿಕೆಯನ್ನು ಗಮನಿಸಿದ ನಂತರ, ಹೇಗಿದ್ರೂ ಎಲ್ಲ ಕೆಲಸದ ಬಗ್ಗೆ ಗೊತ್ತಿದೆ. ಒಂದೆರಡು ಕಂಪನಿಗಳಿಂದ ಕಾಂಟ್ರಾಕ್ಟ್ ತಗೊಂಡು ಸ್ಪೇರ್ ಪಾರ್ಟ್ಸ್ ಉತ್ಪಾಾದನೆಯ ಸ್ವಂತ ಫ್ಯಾಕ್ಟರಿ ಶುರು ಮಾಡಿದ್ರೆ ಹೇಗೆ ಎಂಬ ಯೋಚನೆಯೂ ಅವನಿಗೆ ಬಂತು.

ರಂಗಸ್ವಾಮಿ ತಡಮಾಡಲಿಲ್ಲ. ಒಂದು ಪುಟ್ಟ ಶೆಡ್‌ನಲ್ಲಿ ಫ್ಯಾಕ್ಟರಿಯನ್ನು ಆರಂಭಿಸಿಯೇಬಿಟ್ಟ. ಯೌವನದ ಹುಮ್ಮಸ್ಸು ಹಾಗೂ ಗೆಲ್ಲಬೇಕೆಂಬ ಹಠದಿಂದ ಹಗಲಿರುಳೂ ದುಡಿದ. ಪರಿಣಾಮ, ಕೆಲವೇ ದಿನಗಳಲ್ಲಿ ರಂಗಸ್ವಾಮಿಯ ಬ್ಯಾಂಕ್ ಬ್ಯಾಲೆನ್ಸ್  ದುಪ್ಪಟ್ಟಾಯಿತು. ಅದುವರೆಗೂ ಸೆಕೆಂಡ್‌ ಹ್ಯಾಂಡ್  ಹೀರೋ ಹೋಂಡಾದಲ್ಲಿ ಓಡಾಡುತ್ತಿದ್ದವನು, ಒಟ್ಟಿಗೇ ಎರಡು ಕಾರ್ ಖರೀದಿಸುವಷ್ಟು ಶ್ರೀಮಂತನಾದ. 25 ಮಂದಿಗೆ ಕೆಲಸ ಕೊಟ್ಟ. ಫ್ಯಾಕ್ಟರಿಗೆ ಸ್ವಂತ ಬಿಲ್ಡಿಂಗ್ ಕಟ್ಟಿಸಿದ. ವಾಸಕ್ಕೆ, ಯಶವಂತಪುರದಲ್ಲೇ ಒಂದು ಮನೆ ಖರೀದಿಸಿದ. ಇಷ್ಟೆಲ್ಲ ಆದಮೇಲೆ, ರಂಗಸ್ವಾಮಿಯ ಯಶೋ ಗಾಥೆ ನೂರಾರು ಮಂದಿಯನ್ನು ತಲುಪಿತು. ಹೇಗಿದ್ದವನು ಹೇಗಾಗಿಬಿಟ್ಟ ಅಲ್ವ ಎಂದು ಎಲ್ಲರೂ ಬೆರಗಾಗುವ ವೇಳೆಗೇ, ಹಳೇ ಪರಿಚಯದ ಹುಡುಗಿಯೊಂದಿಗೆ ಮದುವೆಯಾದ ರಂಗಸ್ವಾಮಿ, ವರ್ಷದ ನಂತರ ಗಂಡು ಮಗುವಿನ ತಂದೆಯೂ ಆದ.

ಕೈ ತುಂಬಾ ವರಮಾನ ಕೊಡುವ ಕೆಲಸ, ಮನ ಮೆಚ್ಚಿದ ಹೆಂಡತಿ, ಖುಷಿ ಹೆಚ್ಚಿಸುವ ಮಗ, ಸಮಾಜದಲ್ಲಿ ವಿಶೇಷ ಸ್ಥಾನಮಾನ, ಯಾರಿಗೂ ಸಾಲ ಕೊಡಬೇಕಿಲ್ಲ ಎಂಬ ನಿರಾಳ ಭಾವ... ಲೈಫ್ ಈಸ್ ಬ್ಯೂಟಿಫುಲ್ ಎನ್ನಲು ಇಷ್ಟು ಸಾಕಲ್ಲವೇ? ರಂಗಸ್ವಾಮಿಯೂ ಇಂಥದೇ ಸಂಭ್ರಮದಲ್ಲಿದ್ದ. ಆಗಲೇ, ಯಾರೂ ನಿರೀಕ್ಷಿಸದ ಆಘಾತವೊಂದು ಅವನನ್ನು ಅಪ್ಪಳಿಸಿತು. ಅದೊಂದು ದಿನ ಮಾರ್ಕೆಟ್‌ಗೆ ಹೋಗಿ ವಾಪಸಾಗುತ್ತಿದ್ದ ರಂಗಸ್ವಾಮಿಯ ಪತ್ನಿಗೆ ವೇಗವಾಗಿ ಬಂದ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ...
***
‘ಈಗಾಗ್ಲೇ ನನಗೂ ನಲವತ್ತೈದು ತುಂಬಿದೆ. ಮಗ 7ನೇ ಕ್ಲಾಸ್‌ಗೆ ಬಂದಿದಾನೆ. ಹೀಗಿರುವಾಗ ಇನ್ನೊಂದು ಮದುವೆಯಾಗಿ ಸಾಧಿಸೋದೇನಿದೆ? ಸೆಕೆಂಡ್ ಮ್ಯಾರೇಜ್ ಮಾಡ್ಕೊಂಡೆ ಅಂತಿಟ್ಕೊಳ್ಳಿ, ಹೊಸದಾಗಿ ಬಂದ ಹೆಂಡತಿ ನನ್ನ ಮಗನನ್ನು ತಿರಸ್ಕಾರದಿಂದ ನೋಡಿಬಿಟ್ರೆ, ಅಥವಾ ಹೆಂಡತಿಯ ಮೇಲಿನ ಮೋಹದಿಂದ ನಾನೇ ವಿಲನ್ ಥರಾ ವರ್ತಿಸಿಬಿಟ್ರೆ? ಬೇಡ ಬೇಡ. ಇಂಥ ಸಂದರ್ಭಗಳು ಜೊತೆಯಾಗೋದೇ ಬೇಡ. ನನಗಿನ್ನು ಮಗನೇ ಸರ್ವಸ್ವ . ಹೆಂಡತಿಯ ನೆನಪನ್ನು ಜೊತೆಗಿಟ್ಟುಕೊಂಡೇ ಇವನನ್ನು ಚೆನ್ನಾಗಿ ಓದಿಸ್ತೇನೆ...’. ಎರಡನೇ ಮದುವೆ ಮಾಡಿಕೊಳ್ಳಪ್ಪಾ ಎಂದು ಒತ್ತಾಯಿಸಲು ಬಂದ ಬಂಧುಗಳು ಹಾಗೂ ಹಿತೈಷಿಗಳಿಗೆ ರಂಗಸ್ವಾಮಿ ಹೇಳಿದ ಖಡಕ್ ಮಾತುಗಳಿವು.

ರಂಗಸ್ವಾಮಿ ಮಾತಿಗೆ ತಪ್ಪಲಿಲ್ಲ. ಅವನು ಮಗನನ್ನು ಕಣ್ರೆಪ್ಪೆಯಷ್ಟು ಜೋಪಾನವಾಗಿ ನೋಡಿಕೊಂಡ. ಒಳ್ಳೆಯ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದಿಸಿದ. ನನಗೆ ನೀನೇ ಪ್ರಪಂಚ. ನೀನು ಜೊತೆಗಿಲ್ಲದೆ ನಾನು ಬದುಕಲಾರೆ ಎಂಬುದನ್ನು ಪರೋಕ್ಷವಾಗಿ ಮನದಟ್ಟು ಮಾಡಿಕೊಟ್ಟ.ಮುಂದೊಂದು ದಿನ- ‘ನನ್ನ ಕ್ಲಾಸ್ ಮೇಟ್ ಹುಡುಗೀನ ಲವ್ ಮಾಡಿದೀನಪ್ಪಾ. ಅವಳನ್ನೇ ಮದುವೆ ಆಗ್ತೀನಿ. ಅವರ ಮನೇಲಿ ಒಪ್ಪಿದಾರೆ. ನಿನ್ನ ಒಪ್ಪಿಗೆ ಬೇಕಪ್ಪಾ...’ ವಿಧೇಯನಾಗಿಯೇ ಹೇಳಿದ್ದ ಮಗ. ರಂಗಸ್ವಾಮಿ ಅದನ್ನೂ ಆಕ್ಷೇಪಿಸಲಿಲ್ಲ. ಅದ್ಧೂರಿಯಾಗಿ  ಮದುವೆ ಮಾಡಿಕೊಟ್ಟ. ಇದಾಗಿ ವರ್ಷ ಕಳೆಯುತ್ತಲೇ ಫ್ಯಾಕ್ಟರಿ ವ್ಯವಹಾರವನ್ನೆಲ್ಲ ಮಗನಿಗೆ ವಹಿಸಿಕೊಟ್ಟು, ‘ನನಗೆ ವಯಸ್ಸಾಯಿತು ಕಣಪ್ಪಾ. ರೆಸ್ಟ್ ಬೇಕು ಅನ್ನಿಸ್ತಿದೆ. ಇನ್ಮುಂದೆ ನಾನು ಮನೇಲಿರ್ತೀನಿ. ಶ್ರದ್ಧೆ ಮತ್ತು ಎಚ್ಚರದಿಂದ ಫ್ಯಾಕ್ಟರಿ ನಡೆಸ್ಕೊಂಡು ಹೋಗು’ ಎಂದಿದ್ದ. ಮರುದಿನವೇ ವಕೀಲರ ಜೊತೆಗೂ ಮಾತಾಡಿ ಫ್ಯಾಕ್ಟರಿಯನ್ನು ಮಗನ ಹೆಸರಿಗೆ ರಿಜಿಸ್ಟ್ರೇಷನ್ ಮಾಡಿಸಿಬಿಟ್ಟ.

ಚಿತ್ರಾನ್ನ-ಕಾಯಿಚಟ್ನಿ, ದೋಸೆ-ಜಾಮೂನ್, ಬಿಸಿಬೇಳೆಬಾತ್- ಚಿಪ್ಸ್, ವಾಂಗೀಬಾತ್-ಆಲೂಬೋಂಡಾ, ಪಲಾವ್-ಗಟ್ಟಿಮೊಸರು- ಹೀಗೆ ಪ್ರತಿಯೊಂದು ತಿಂಡಿಗೂ ಒಂದು ಸೈಡ್ ಐಟಂ ಇರಬೇಕು ಎಂಬುದು ರಂಗಸ್ವಾಮಿಯ ಆಸೆಯಾಗಿತ್ತು. ಅದರಲ್ಲೂ ಪಲಾವ್-ಮೊಸರು ಅವನ ಮೆಚ್ಚಿನ ತಿಂಡಿಯಾಗಿತ್ತು. ನಾವು ಎಷ್ಟು ದಿನ ಇರ್ತೀವೋ ಗೊತ್ತಿಲ್ಲ. ಇರುವಷ್ಟು ದಿನ ಚೆನ್ನಾಗಿ ತಿಂದುಂಡು ಬಾಳಬೇಕು ಎಂಬುದು ಅವನ ವಾದವಾಗಿತ್ತು.

ಅವತ್ತು ರಂಗಸ್ವಾಮಿಯ ಮಗ ಜಾಗಿಂಗ್ ಮುಗಿಸಿ ಬಾಗಿಲ ಬಳಿ ಬಂದಾಗಲೇ ಪಲಾವ್‌ನ ಘಮ ಮೂಗಿಗೆ ಅಡರಿತು. ಓಹ್, ಇವತ್ತು ಅಪ್ಪನ ಫೇವರಿಟ್ ತಿಂಡಿ ಎಂದುಕೊಂಡು ಅವನು ಒಳಬರುವುದಕ್ಕೂ, ಡೈನಿಂಗ್ ಟೇಬಲ್ ಮುಂದೆ ತಿಂಡಿಗೆ ಕುಳಿತಿದ್ದ ರಂಗಸ್ವಾಮಿ- ಸ್ವಲ್ಪ ಮೊಸರು ಇದ್ರೆ ಕೊಡಮ್ಮ. ಪಲಾವ್ ಜೊತೆ ಮೊಸರು ಕೊಡೋದನ್ನೇ ಮರೆತಿದ್ದೀಯಲ್ಲ.. ಅನ್ನುವುದಕ್ಕೂ ಸರಿಹೋಯಿತು. ರಂಗಸ್ವಾಮಿಯ ಸೊಸೆ ಸರ್ರನೆ ಹೊರಬಂದವಳೇ- ‘ಇಲ್ಲ, ಮೊಸರಿಲ್ಲ; ಮೊಸರು ಖಾಲಿಯಾಗಿದೆ’ ಅಂದು ಭರ್ರನೆ ಹೋಗಿಬಿಟ್ಟಳು. ಹೌದಾ? ಹೋಗ್ಲಿ ಬಿಡಮ್ಮ ಎನ್ನುತ್ತಾ ರಂಗಸ್ವಾಮಿ ತಿಂಡಿಯ ಶಾಸ್ತ್ರ ಮುಗಿಸಿದ.

ದಿನವೂ ಹೆಂಡತಿಯೊಂದಿಗೆ ತಿಂಡಿ ತಿಂದು ನಂತರ ಫ್ಯಾಕ್ಟರಿಗೆ ಹೋಗುವುದು ರಂಗಸ್ವಾಮಿಯ ಮಗನ ದಿನಚರಿಯಾಗಿತ್ತು. ಅವತ್ತೂ ಹಾಗೆಯೇ ತಿಂಡಿಗೆ ಕೂತವನು ಅಸಹನೆ ಮತ್ತು ಗೊಂದಲದಿಂದ ಹೆಂಡತಿಯನ್ನು ನೋಡಿದ. ಕಾರಣ; ಹೆಂಡತಿ ತಂದಿಟ್ಟ ತಿಂಡಿಯೊಂದಿಗೆ ಅರ್ಧ ಲೀಟರಿನಷ್ಟು ಗಟ್ಟಿ ಮೊಸರಿತ್ತು. ''ಅಪ್ಪ ಕೇಳಿದಾಗ ಮೊಸರೇ ಇಲ್ಲ ಅಂದೆಯಲ್ಲ? ಇದು ಎಲ್ಲಿತ್ತು? ಯಾಕೆ ಸುಳ್ಳು ಹೇಳ್ದೆ?'' ಎಂದು ಪ್ರಶ್ನಿಸಿದ. ಆಕೆ- ‘ಗಟ್ಟಿಯಾಗಿ ಮಾತಾಡಬೇಡಿ. ಸೈಲೆಂಟಾಗಿ ತಿಂಡಿ ತಿನ್ನಿ. ನಿಮ್ಮಪ್ಪ ಕೇಳ್ತಾರೆ ಅಂತ ಅವರು ಕೇಳಿದ್ದನ್ನೆಲ್ಲ ಕೊಡೋಕಾಗುತ್ತಾ? ಬಾಯಿ ಚಪಲ ಯಾವತ್ತೂ ಒಳ್ಳೆಯದಲ್ಲ. ಇವತ್ತು ಮೊಸರು ಕೇಳ್ತಾರೆ. ನಾಳೆ ತುಪ್ಪಾನೇ ಬೇಕು ಅಂತಾರೆ. ಕೇಳಿದ್ದನ್ನೆಲ್ಲ ರೆಡಿ ಮಾಡಿ ಇಟ್ಕೊoಡಿರೋಕೆ ಆಗುತ್ತಾ?’ ಅಂದುಬಿಟ್ಟಳು. ತಿರುಗಿ ಮಾತಾಡಿದರೆ ಜಗಳ ಆಗುತ್ತೆ. ಜಗಳ ಆಗಿಬಿಟ್ರೆ ರಾತ್ರಿ ಅನ್ನೋದು ನರಕ ಆಗುತ್ತೆ. ಉಹೂಂ, ಅಂಥ ಪರಿಸ್ಥಿತಿ ಜೊತೆಯಾಗಬಾರದು ಎಂದು ಯೋಚಿಸಿದ ರಂಗಸ್ವಾಮಿಯ ಮಗ, ಮೌನವಾಗಿ ಫ್ಯಾಕ್ಟರಿಗೆ ಹೋಗಿಬಿಟ್ಟ. ರಂಗಸ್ವಾಮಿ, ಮನೆಯ ಹೊರಗಿನ ಕೈ ತೋಟದಲ್ಲಿ ಇದ್ದುದರಿಂದ ಗಂಡ-ಹೆಂಡಿರ ದುಸುಮುಸು ಅವನಿಗೆ ಗೊತ್ತಾಾಗಲೇ ಇಲ್ಲ.

ಅವತ್ತು ನಾಲ್ಕೈದು ಕಂಪನಿಗಳ ಮುಖಂಡರೊಂದಿಗೆ ಹೋಟೆಲೊಂದರಲ್ಲಿ ವ್ಯವಹಾರ ಸಂಬಂಧಿ ಮೀಟಿಂಗ್ ನಡೆಸಬೇಕಾಗಿ ಬಂತು. ಊಟದ ಸಮಯದಲ್ಲಿ ಅವರೆಲ್ಲಾ- ''ಊಟ ಬೇಡ, ದೋಸೆ ವಡಾ ಥರದ ಐಟಮ್ಸ್ ತಗೊಳ್ಳೋಣ. ಕಡೆಗೆ ಮೊಸರನ್ನ ಇರಲಿ''ಎಂದರು. ಮೊಸರನ್ನದಲ್ಲಿದ್ದ ಕೆನೆಮೊಸರು, ದಾಳಿಂಬೆ, ಗೋಡಂಬಿಯ ಚೂರುಗಳನ್ನು ಕಂಡಾಗ ಛಕ್ಕನೆ, ಮೊಸರು ಇದ್ಯಾ ಎಂದು ಕೇಳಿದ ಅಪ್ಪನ ಮುಖವೇ ಎದುರು ಕಂಡಂತಾಗಿ ರಂಗಸ್ವಾಮಿಯ ಮಗ ತತ್ತರಿಸಿಹೋದ. ತನಗಾಗಿ ಏನೆಲ್ಲಾ ತ್ಯಾಗ ಮಾಡಿದ ತಂದೆಗೆ ಒಂದು ಕಪ್ ಗಟ್ಟಿ ಮೊಸರು ಕೊಡಲು ಆಗಲಿಲ್ಲವಲ್ಲ ಎಂಬ ಚಿಂತೆ ಅವನನ್ನು ಕ್ಷಣಕ್ಷಣಕ್ಕೂ ಕಾಡತೊಡಗಿತು.

ಉಹೂಂ, ಅವನ ಹೆಂಡತಿಗೆ ಇಂಥ ಯಾವ ‘ಗಿಲ್ಟ್ ಕೂಡ ಇರಲಿಲ್ಲ. ಪ್ರತಿಯೊಂದು ತಿಂಡಿಗೂ ಮತ್ತೊಂದು ಸೈಡ್ ಐಟಂ ಹಾಕಿಕೊಡೋಕೆ ಇದೇನು ಹೋಟ್ಲಾ? ಇಡೀ ದಿನ ಮನೇಲಿ ಇರೋರು ಕೊಟ್ಟಿದ್ದನ್ನು ತಿಂದುಕೊಂಡು ತೆಪ್ಪಗಿರಬೇಕು ಅಲ್ವ ಎಂದೇ ಅವಳು ವಾದಿಸಿದಳು. ಬೆಡ್‌ರೂಂ, ಜಗಳದ ತಾಣವಾದರೆ ಇಡೀ ದಿನದ ಕೆಲಸ ಕೆಡುತ್ತೆ ಎಂದು ಗೊತ್ತಿದ್ದುದರಿಂದ ರಂಗಸ್ವಾಮಿಯ ಮಗ ಹೆಂಡತಿಗೆ ಎದುರು ಮಾತಾಡಲು ಹೋಗಲಿಲ್ಲ.

ಹೀಗೇ ವಾರ ಕಳೆಯಿತು. ಅವತ್ತೊಂದು ದಿನ- ‘ಯಾವುದೋ ಕೋರ್ಟ್ ಕೇಸ್ ಬಂದಿದೆಯಪ್ಪಾ. ನನಗೆ ಸ್ವಲ್ಪ ಕನ್‌ಫ್ಯೂಶನ್ ಇದೆ. ನೀನು ಜೊತೆಗಿದ್ರೆ ದೊಡ್ಡ ಧೈರ್ಯ. ಮಧ್ಯಾಹ್ನ ಬೇಗ ಬಂದ್ಬಿಡೋಣ...’ ಎಂದೆಲ್ಲ ಹೇಳಿ ಆ ಮಗರಾಯ ತಂದೆಯೊಂದಿಗೆ ಕೋರ್ಟ್‌ಗೆ ಬಂದ. ಅಲ್ಲಿ ನೋಡಿದರೆ- ಫ್ಯಾಕ್ಟರಿ, ಮನೆ ಮತ್ತು ಇಡೀ ಆಸ್ತಿಯನ್ನು ರಂಗಸ್ವಾಮಿಯ ಹೆಸರಿಗೆ ಮರು ವರ್ಗಾಯಿಸಿದ ದಾಖಲೆ ಪತ್ರಗಳಿದ್ದವು. ಅವಕ್ಕೆಲ್ಲಾ ತುಂಬಾ ಒತ್ತಾಯದಿಂದಲೇ ಸಹಿ ಹಾಕಿಸಿದ ಮಗ- ‘ಅಪ್ಪಾ, ನೀನು ಇನ್ನೊಂದು ಮದುವೆ ಮಾಡ್ಕೊಳಪ್ಪಾ. ಜನ ಏನಾದ್ರೂ ಅಂದುಕೊಳ್ಳಲಿ. ಅದರ ಬಗ್ಗೆ ಚಿಂತೆ ಮಾಡ್ಬೇಡ. ನಿನ್ನ ಜೊತೆಗೆ ನಾನಿರ್ತೀನಿ. ಈ ವಿಷಯದಲ್ಲಿ ನಿಂಗೆ ಸಪೋರ್ಟ್ ಮಾಡ್ತೀನಿ. ದಯವಿಟ್ಟು ಇನ್ನೊಂದು ಮದುವೆ ಮಾಡ್ಕೊ..’ ಅಂದ.

ಈ ಮಾತುಗಳಿಂದ ರಂಗಸ್ವಾಮಿಗೆ ಅಚ್ಚರಿಯಾಯಿತು. ‘ಯಾಕಪ್ಪಾ? ಯಾಕೆ ಹೀಗೆ ಹೇಳ್ತಿದೀಯ? ನಿನಗೆ ಏನಾದ್ರೂ ಕೊರತೆ ಆಯ್ತಾ? ನಾನು ನಿನಗೆ ಹೊರೆ ಅನ್ನಿಸಿಬಿಟ್ನಾ? ಏನಾದ್ರೂ ತಪ್ಪು ಮಾಡಿದೀನೇನೋ ನಾನು? ಎಲ್ಲವನ್ನೂ ನನ್ನ ಹೆಸರಿಗೇ ಮಾಡಿಸಿದೀಯಲ್ಲ ಯಾಕೋ..,

ಈ ಮಾತುಗಳನ್ನು ಅಷ್ಟಕ್ಕೇ ತಡೆದ ರಂಗಸ್ವಾಮಿಯ ಮಗ ಹೇಳಿದ: ಛೆ,ಛೆ ಖಂಡಿತ ನಿನ್ನಿಂದ ಯಾವುದೇ ತಪ್ಪಾಗಿಲ್ಲಪ್ಪಾ. ಪ್ರತಿ ಹೆಂಗಸು, ತನ್ನ ಗಂಡ ಮತ್ತು ಮಕ್ಕಳ ಬಗ್ಗೆ ಮಾತ್ರ ವಿಶೇಷ ಕಾಳಜಿ ವಹಿಸ್ತಾಳೆ. ಉಳಿದವರನ್ನು ನಿರ್ಲಕ್ಷ್ಯದಿಂದ ನೋಡೋದು ಅವಳಿಗೆ ಅಭ್ಯಾಸ ಆಗಿಬಿಟ್ಟಿರುತ್ತೆ. ಅಂಥದೊಂದು ನಿರ್ಲಕ್ಷ್ಯದ ಅನುಭವ ನಿನಗೆ ಎಂದೆಂದೂ ಆಗದಿರಲಿ ಎಂಬ ಸದಾಶಯದಿಂದಲೇಇನ್ನೊಂದು ಮದುವೆ ಆಗು ಅಂತ ಒತ್ತಾಯಿಸ್ತಾ ಇದೀನಿ. ನಾಳೆಯಿಂದ ನಾನು ಹೆಂಡತಿಯೊಂದಿಗೆ ಬಾಡಿಗೆ ಮನೆಗೆ ಹೋಗ್ತೇನೆ. ಫ್ಯಾಕ್ಟರಿಗೆ ನೀನು ಎಂ.ಡಿ., ನೀನೇ ಸಿ.ಇ.ಒ. ನಾನು ಒಬ್ಬ ನೌಕರನಾಗಿ ಕೆಲಸ ಮಾಡ್ತೀನಿ. ನಮ್ಮಲ್ಲಿ ಎಂಜಿನಿಯರ್‌ಗಳಿಗೆ ಕೊಡ್ತೀಯಲ್ಲ; ಅಷ್ಟೇ ಸಂಬಳವನ್ನು ನನಗೂ ಕೊಡು. ಒಂದು ಬಟ್ಟಲಿನಷ್ಟು ಮೊಸರು ಸಂಪಾದಿಸಲು ಮನುಷ್ಯನಿಗೆ ಎಷ್ಟು ಕಷ್ಟ ಇದೆ ಎಂಬುದನ್ನು ನನ್ನ ಹೆಂಡತಿಗೆ ಪರಿಚಯ ಮಾಡಿಕೊಡಬೇಕು. ಅದರ ಜೊತೆಗೆ, ವೃದ್ಧಾಪ್ಯದಲ್ಲಿ ತುಂಬಾ ಮುತುವರ್ಜಿಯಿಂದ ನೋಡಿಕೊಳ್ಳುವ ಒಬ್ಬರು ನಿನ್ನೊಂದಿಗೆ ಇರುವಂತೆ ವ್ಯವಸ್ಥೆ ಮಾಡಬೇಕು. ಫ್ಯಾಕ್ಟರಿಯನ್ನು ನಿನ್ನ ಹೆಸರಿಗೆ ವರ್ಗಾಯಿಸಿದ್ದಕ್ಕೆ, ನಾಳೆಯಿಂದ ಒಬ್ಬ ಆರ್ಡಿನರಿ ನೌಕರನಾಗಿ ಕೆಲಸಕ್ಕೆ ಬರ್ತಿರೋದಕ್ಕೆ ಬೇರೆ ಯಾವ ಕಾರಣವೂ ಇಲ್ಲ. ಒಳ್ಳೇದಾಗ್ಲಿ ಅಂತ ಆಶೀರ್ವದಿಸಪ್ಪ...’

ರಂಗಸ್ವಾಮಿ ಏನೂ ಮಾತಾಡಲಿಲ್ಲ. ನಡೆದಿರುವುದೇನೆಂದು ತನಗೆ ಅರ್ಥವಾಗಿದೆ ಎಂಬಂತೆ ಮಗನನ್ನು ಮೆಚ್ಚುಗೆಯಿಂದ ನೋಡಿದ. ಅವನನ್ನು ಬಾಚಿ ತಬ್ಬಿಕೊಂಡು ಹಣೆಗೆ ಮುತ್ತಿಟ್ಟ...

Very beautiful message

A person started to walk on a rope tied between two tall towers. He was walking slowly, balancing a long stick in his hands. He had his son sitting on his shoulders.

Every one on the ground were watching him in bated breath and were very tense. When he slowly reached the second tower, every one clapped, whistled and welcomed him. They shook hands and took selfies.

He asked the crowd “do you all think I can walk back on the same rope now from this side to that side?”

Crowd shouted in one voice “Yes, Yes, you can.."

Do you trust me, he asked? They said yes, yes, we are ready to bet on you.

He said okay, can any one of you give your child to sit on my shoulder; I will take the child to the other side safely..

There was stunned silence. Every one became quiet.

*Belief is different. Trust is different. For Trust you need to surrender totally*

This is what we lack towards God in today’s world.

We believe in Almighty . But do we trust Him?
     
*Very beautiful message, worth pondering over and over again!*

ಭಕ್ತೆ ಮೀರಾದೇವಿ🌷

ಚಿಕ್ಕ ವಯಸ್ಸಿನಲ್ಲಿಯೇ ಭಕ್ತಳಾದ ಮೀರಾ ಅವರ ತಾಯಿಯ ಸಂಗಡ ಇರುವಾಗಲೇ ಅವರ ತಾಯಿ ಕೃಷ್ಣನನ್ನೇ ನಿನ್ನ ಪತಿ ಎಂದು ತೋರಿಸಿದಳು. ಅದೇ ಆಕೆಗೆ ಶಾಶ್ವತ ಬೋಧ ಆಯಿತು, ಲಗ್ನವಾಯಿತು. ಆಗಲು ಗಿರಿಧರ ಗೋಪಾಲನೇ ನನ್ನ ಪತಿ ಎನ್ನುತ್ತಿದ್ದಳು. ಪತಿಯು ಮಹಾರಾಜನಾದರೂ ಸಾಮಾನ್ಯರ ಜೊತೆಯಲ್ಲಿ ಕುಳಿತು ಗಿರಿಧರ ಗೋಪಾಲನ ಭಜನೆ ಮಾಡುತ್ತಿದ್ದಳು. ಅದನ್ನು ಏನು ಮಾಡಿದರೂ ಬಿಡಿಸಲಾಗಲಿಲ್ಲ. ಆಕೆಯ ರಾಜಮನೆತನದವರಾರು ಸಾಮಾನ್ಯರ ಜೊತೆಯಲ್ಲಿ ಕುಳಿತು ಭಜನೆ ಮಾಡುವುದು ಅವರಿಗೆ ಸರಿ ಕಾಣಲಿಲ್ಲ. ಅವರು ಎಷ್ಟೇ ವಿರೋಧಿಸಿದರೂ ಅವಳು ಸಾಮಾನ್ಯರ ಜೊತೆಯಲ್ಲಿ ಭಜನೆ ಮಾಡುವುದನ್ನು ಬಿಡಲಿಲ್ಲ. ಒಂದು ಸಾರಿ ಒಂದು ಪೆಟ್ಟಿಗೆಯಲ್ಲಿ ಮಿಡಿ ನಾಗರ ಸರ್ಪವನ್ನು ಹಾಕಿ ಬೃಂದಾವನದಿಂದ ಶ್ರೀ ಗಿರಿಧರ ಗೋಪಾಲನು ಬಂದಿದ್ದಾನೆ ತೆಗೆದುಕೊ ಎಂದಾಗ ಆಕೆಗೆ ಬಹಳ ಸಂತೋಷವಾಗಿ ಗಿರಿಧರ ಗೋಪಾಲ ಎಂದು ಕಣ್ಣು ತುಂಬ ನೀರನ್ನು ಹರಸುತ್ತಾ ಮುಟ್ಟುತ್ತಾಳೆ. ಅದು ನಿಜವಾದ ಗಿರಿಧರ ಗೋಪಾಲನೇ ಆಗುತ್ತದೆ. ಆಕೆಯ ಸ್ಥಿತಿ ಅಂತಹ ಉತ್ತಮ ಮಟ್ಟಕ್ಕೆ ಏರಿತ್ತು. ಎಲ್ಲೆಲ್ಲಿಯೂ ಗಿರಿಧರ ಗೋಪಾಲನನ್ನೇ ನೋಡುತ್ತಿದ್ದಳು. ಬೃಂದಾವನದಿಂದ ಗಿರಿಧರ ಗೋಪಾಲನ ತೀರ್ಥ ಬಂದಿದೆ ಎಂದು ವಿಷವನ್ನು ಕೊಟ್ಟರು. ಆಗ ಆಕೆ ಬಹಳ ಆನಂದದಿಂದ ಆ ತೀರ್ಥವನ್ನು ಕುಡಿದಳು. ಅದು ತೀರ್ಥವೇ ಆಗಿತ್ತು. “ಯಾದೃಶಿ ಬಾವನ ಯಸ್ಯ ಸಿದ್ಧಿರ್ಭವತಿ ತಾದೃಶಿ” ಯಾರು ಯಾರಿಗೆ ಯಾವ ಯಾವ ಭಾವನೆ ಇರುತ್ತದೆಯೋ ಅವರಿಗೆ ಹಾಗೆಯೇ ಆಗುತ್ತದೆ. ಎಲ್ಲೆಲ್ಲಿಯೂ ಆ ಗಿರಿಧರ ಗೋಪಾಲನನ್ನೇ ನೋಡುತ್ತಿದ್ದಳು. ಸಾಮಾನ್ಯರಂತೆ ಆ ಭಗವಂತನ ನಾಮವನ್ನು ಹೇಳುತ್ತಾ ಕುಣಿಯುತ್ತಿದ್ದಳು. ಎಲ್ಲೆಲ್ಲಿಯೂ ಭಗವಂತನನ್ನು ನೋಡಿರಿ. ಆಗ ನೀವು ಆನಂದವಾಗಿರುತ್ತೀರಿ.

*ಹಿರಿಯರು ಹೇಳಿಕೊಟ್ಟ ಊಟದ ಕಲೆ* ನಿಯಮಗಳು

1)  ಕಾರೆ ಸೊಪ್ಪನ್ನು ತಿಂದರೂ ಕಾಯಕದಿಂದಲೇ ಗಳಿಸಿರಬೇಕು. ....
2)  ಊಟಕ್ಕೆ ಕುಳಿತುಕೊಳ್ಳುವ ಮೊದಲು ಕುಳಿತುಕೊಳ್ಳುವ ಜಾಗ ಶುಚಿಯಾಗಿರಬೇಕು…..
 3)  ಬಾಯಿ ಮುಕ್ಕಳಿಸಿ ಶುಚಿಯಾಗಿ ಕೈತೊಳೆದುಕೊಳ್ಳಬೇಕು....
4)  ಗುರುನಾಮ ಸ್ಮರಣೆ ಮಾಡಿ ನೆಲದ ಮೇಲೆಯೇ ಚಕ್ಕಂಬಕ್ಕಾಲು ಹಾಕಿ ಕುಳಿತುಕೊಳ್ಳಬೇಕು.....
5)  ಊಟಕ್ಕೆ ಕುಳಿತಾಗ ನೆತ್ತಿಯ ಮೇಲೆ ಪೇಟ - ಪಟಗಾ ಸುತ್ತಿರುವುದಾಗಲೀ…. ಟೋಪಿಯಾಗಲೀ  ಇರಬಾರದು….
6) ಕರವಸ್ತ್ರವಾಗಲೀ ಒಲ್ಲಿ ಟವಲ್ ಆಗಲೀ ನಿಮ್ಮ ಜೊತೆಗಿರಬೇಕು……
6)  ಊಟದೆಲೆ ಅಥವಾ ತಟ್ಟೆ ಈಗಾಗಲೇ ಶುಚಿಯಾಗಿಟ್ಟಿದ್ದರೂ ಮತ್ತೊಮ್ಮೆ ಕೊಂಚ ನೀರಿನಲ್ಲಿ ತೊಳೆಯಬೇಕು. …
7) ಊಟಕ್ಕೆ ಕುಳಿತಾಗ ಪಾದರಕ್ಷೆಗಳನ್ನು ಧರಿಸಿರಬಾರದು…..
8) ಊಟ ಮಾಡುವ ವೇಳೆಯಲ್ಲಿ ಕಸ ಗುಡಿಸಬಾರದು…… ಒಂದೇ ಸಮನೆ ದಿಟ್ಟಿಸಬಾರದು….
9) ಯಾರೊಬ್ಬರೂ ಅತ್ತಿಂದಿತ್ತ ಓಡಾಡಬಾರದು…..
10) ಕುಡಿಯುವ ನೀರು ತುಂಬಿದ ಚೆಂಬು -ಲೋಟ ಪಕ್ಕದಲ್ಲಿರಬೇಕು,….
11) ಗಂಟಲು ಮೇಲೆತ್ತಿ ಲೋಟದಲ್ಲಿಯೇ ನೀರು ಕುಡಿಯಬೇಕು,…. ಕಚ್ಚಿ ಕುಡಿಯಬಾರದು……
12) ನಾಯಿಮರಿ ಅಥವಾ ನಮ್ಮ ಜೀವಿಗಳಿಗಾಗಿ ಮೊದಲು ಒಂದು ತುತ್ತು ತೆಗೆದಿರಿಸಬೇಕು.....
13)  ಊಟದ ವೇಳೆಗೆ ಯಾರಾದರೂ ಬಳಿಗೆ ಬಂದರೆ ಮೊದಲು ಅವರಿಗೆ ಊಟ ನೀಡಲು ಆದ್ಯತೆ ಕೊಡಬೇಕು...
14)  ನೀರು ಅಥವಾ ಸಾರಿನಲ್ಲಿ ಒಮ್ಮೆ ಅಂಗೈ ತೇವ ಮಾಡಿಕೊಳ್ಳಬೇಕು…..
15)  ಅಂಗೈ ಮುಂಗೈ ಮೂತಿಗಳಿಗೆ ಅನ್ನ - ಮುದ್ದೆ ಅಥವಾ ತಿನ್ನುವ ಯಾವುದೂ ಮೆತ್ತಿಕೊಳ್ಳದಂತೆ ನಾಜೂಕಾಗಿರಬೇಕು…...
16)  ತೊಡೆಯ ಮೇಲಾಗಲೀ ನೆಲದ ಮೇಲಾಗಲೀ ದರ್ಬಾರಿನಂತೆ ಎಡಗೈ ಹೂರಿಕೊಂಡಿರಬಾರದು.... 
17)  ತಲೆ ಮೈಕೈ ಕೆರೆದುಕೊಳ್ಳಬಾರದು…. ಕಣ್ಣು ಉಜ್ಜಬಾರದು…. ಅತ್ತಲಿತ್ತ ಪದೇ ಪದೇ ತಲೆ ಎತ್ತಿ ನೋಡಬಾರದು
18)  ನಾವು ತಿನ್ನುವ ಶಬ್ಧ ಪಕ್ಕದಲ್ಲಿ ಕುಳಿತವರಿಗೆ ಕೇಳಿಸಬಾರದು.... ಲೊಸ ಲೊಸ ಲೊಸಗುಟ್ಟುತ್ತಾ ಅಥವಾ ಗಬಗಬ ಬುಕ್ಕಬಾರದು...
19)  ಉಣ್ಣುವ ತುತ್ತು ಎಣಿಸಬಾರದು.....ಮುದ್ದೆ - ರೊಟ್ಟಿ ಎಣಿಸಬಾರದು.... ಊಟಕ್ಕೆ ನೀಡುವಾಗಲೇ ಆಳು ನೋಡಿ ಅನ್ನ ಬಡಿಸಬೇಕು
20) ಇಷ್ಟು ತಿಂದ - ಅಷ್ಟು ತಿಂದ ಎಂದು ಮಾತನಾಡಬಾರದು....
21) ಗಂಭೀರವಾದ ಯಾವ ಸಂಗತಿಗಳನ್ನೂ ಪ್ರಸ್ತಾಪಿಸಬಾರದು.... (ಈಗಿನ ಸೇರ್ಪಡೆ: ಟೀವಿ ಮೊಬೈಲ್ ಇತ್ಯಾದಿ ನೋಡಬಾರದು)
22)  ನೆತ್ತಿಗೇರಿಸಿಕೊಳ್ಳುವಂತೆ ನಗುವುದಾಗಲೀ ಮಾತಾಡುವುದಾಗಲೀ ಮಾಡಬಾರದು…..
23) ಊಟಕ್ಕೆ ನೀಡುವ ವ್ಯಕ್ತಿಯನ್ನು ಹೊರತುಪಡಿಸಿ ಕುಟುಂಬದ ಸದಸ್ಯರೆಲ್ಲರೂ ಒಟ್ಟಿಗೆ ಊಟಕ್ಕೆ ಕುಳಿತುಕೊಳ್ಳಬೇಕು….
24) ಕುಳಿತು ಸಾವಧಾನವಾಗಿ ತಿನ್ನಬೇಕೇ ಹೊರತು ನಿಂತುಕೊಂಡು, ಓಡಾಡುತ್ತಾ ಅಥವಾ ಪ್ರಯಾಣಿಸುತ್ತಾ ತಿನ್ನಬಾರದು….
25)  ಮಧ್ಯದಲ್ಲಿ ಅವಶ್ಯಕವಿದ್ದರೆ ಅರ್ಥಮಾಡಿಕೊಂಡು ಊಟಕ್ಕೆ ಬಡಿಸುವವರು ನೀಡಬೇಕೇ ಹೊರತು ಇಷ್ಟು ಸಾಕ - ಅಷ್ಟು ಸಾಕ ಎಂದು ಅಳತೆ ಪ್ರಮಾಣಗಳಲ್ಲಿ ತೋರಿಸಿ ಕೇಳಬಾರದು.
26)  ತಂಗಳಾದರೂ ಸರಿಯೇ ಬಿಸಿಯೆಂದು ಭಾವಿಸಿ ಕಣ್ಣಿಗೊತ್ತಿಕೊಂಡು ಆರೋಗಿಸಬೇಕು...... ಒಂದು ಅಗುಳನ್ನೂ ವ್ಯರ್ಥ ಮಾಡಬಾರದು
27)  ತಿನ್ನುವ ಪದಾರ್ಥವನ್ನು ಇಲಿ ಗೆಬರಾಡಿದಂತೆ ತರಿದು ತಿನ್ನಬಾರದು….. ಅಥವಾ ಕೈನಲ್ಲಿ ತೂಗಿಸಿಕೊಂಡು ತಿನ್ನಬಾರದು…..
28) ಊಟದೆಲೆ ತಟ್ಟೆಯ ಪಕ್ಕದಲ್ಲಿ ಪದಾರ್ಥ ಚೆಲ್ಲಾಡಬಾರದು…..
29) ಬಿಸಿ ಆರಿಸಿಕೊಂಡು ತಿನ್ನಬೇಕು….. ತುಟಿಗಳನ್ನು ಮುಚ್ಚಿಡಿದು ಬಾಯೊಳಗೇ ನಮುಲಿ ನುಂಗಬೇಕು….
30) ಒಮ್ಮೆ ಬಾಯಿಗಿರಿಸಿಕೊಳ್ಳಲು ಎಷ್ಟು ಬೇಕೋ ಅಷ್ಟನ್ನು ಮಾತ್ರ ಬೆರಳುಗಳಿಂದ ತೆಗೆದುಕೊಳ್ಳಬೇಕೇ ಹೊರತು ಅಂಗೈ ಬಳಸಬಾರದು….
31) ಊಟ ಮುಗಿದ ಬಳಿಕ ಅಗತ್ಯವಿರುವಷ್ಟು ನೀರು ಕುಡಿಯಬೇಕು…..
32) ಊಟದ ಬಳಿಕ ಅಭ್ಯಾಸವಿದ್ದಲ್ಲಿ ತಾಂಬೂಲ ಸವಿಯಬೇಕು….  ಕಳ್ಳೇಬೀಜ, ಚಿನಕ್ಹುರುಳಿ, ಹಣ್ಣು ಮುಂತಾದವು ಸೇವಿಸಬಹುದು…..
33)  ಊಟ ಕೊಟ್ಟವರ ಬಳಿ ಕೃತಜ್ಞತೆಯ ನಾಲ್ಕು ಮಾತಾಡಬೇಕು...
34) ಊಟ ಮುಗಿದ ಕೂಡಲೇ.. ಊಟಕ್ಕೆ ಕುಳಿತ ಜಾಗದಲ್ಲಿ ಅರೆಗಳಿಗೆಯೂ ಕೂರಬಾರದು...
 35) ಕೈತೊಳೆದುಕೊಂಡು ಊಟ ಮಾಡಿದವರೇ ಊಟದ ತಟ್ಟೆಯನ್ನು ತೊಳೆದಿಡಬೇಕು....
36) ಹೊತ್ತು ಮೀರಿಯಾಗಲೀ ಹೊತ್ತಿಗೆ ಮುಂಚಿತವಾಗಲೀ ಊಟ ಮಾಡಬಾರದು...
37) ಉಪ್ಪು ಹುಳಿ ಖಾರ ಯಾವುದೇ ವ್ಯತ್ಯಾಸಗಳಿದ್ದರೂ ಅಸಮಾಧಾನ ವ್ಯಕ್ತಪಡಿಸುವುದಾಗಲೀ ಸಿಟ್ಟಿಗೇಳುವುದಾಗಲೀ ಮಾಡಬಾರದು....
38) ಊಟ ಮಾಡುವಾಗ ಊಟವನ್ನಷ್ಟೇ ಮಾಡಬೇಕು ಹೊರತು ಇನ್ನೊಂದು ಮತ್ತೊಂದು ಕೆಲಸ ಮಾಡಬಾರದು....
39) ಇನ್ನೊಂದು ಮಾಡಿಕೊಂಡೇ ಊಟ ಮಾಡಬಾರದು.... ಅಥವಾ ಊಟ ಮಾಡಿಕೊಂಡೇ ಇನ್ನೊಂದು ಮಾಡಬಾರದು.
40) ಊಟ ಮಾಡಿ ಮೈ ಮುರಿಯಬಾರದು
41) ಊಟದ ಬಳಿಕ ಗಾಳಿಗೆ ಮೈಯೊಡ್ಡಿ ನಾಲ್ಕೆಜ್ಜೆ ನಡೆದರೆ ಚೆಂದ
42) ಎದೆ ಬಗ್ಗಿಸಿ ಊಟ ಮಾಡಬೇಕೇ ಹೊರತು ಎದೆ ಸೆಟೆದು (ಸೇದಿಕೊಂಡು) ಊಟ ಮಾಡಬಾರದು
43) ಎಂಜಲ ಕೈನಲ್ಲಿ ತಟ್ಟೆ ಲೋಟ ಇತರೆ ಯಾವುದೇ ಪಾತ್ರೆ ಪಗಡಿ ಮುಟ್ಟಬಾರದು
44) ಸಾರಿನ ಚೌಟು ಅನ್ನಕ್ಕೂ ಅನ್ನದ ಚಮಚವನ್ನು ಪಾಯಸಕ್ಕೂ ಮುಟ್ಟಿಸದೆ ಹೀಗೆ ಎಲ್ಲವೂ ಪ್ರತ್ಯೇಕವಾಗಿ ಇರಿಸಬೇಕು
45) ಎಂಜಲು ಮಾಡಿದ ಪದಾರ್ಥಗಳನ್ನು ಇತರರಿಗೆ ನೀಡಬಾರದು
46) ಊಟದ ಬಳಿಕವೂ ಬಾಯಿ ಮುಕ್ಕಳಿಸುವುದನ್ನು ಮರೆಯಬಾರದು
47) ಊಟ ಮಾಡಿದ ತಕ್ಷಣವೇ ಮಲಗಬಾರದು ಅಥವಾ ಮಲಗಿಕೊಂಡು ಏನನ್ನೂ ತಿನ್ನಬಾರದು
48) ಊಟದ ನಡುವೆ ಇನ್ನೂ ಹೆಚ್ಚಿನ ಅಗತ್ಯ ಅಹಾರ ಬೇಗ ಬರಲಿಲ್ಲವೆಂದು ಕೂಗುವುದಾಗಲೀ ಪಾತ್ರೆ ಶಬ್ದ ಮಾಡುವುದಾಗಲೀ ಮುಂತಾದ ಅಸಮಾಧಾನ ತೋರಬಾರದು.
49) ನಿದ್ರೆಗಣ್ಣಿನಲ್ಲಿ ತೂಕಡಿಸುತ್ತಾ ಊಟ ಮಾಡಬಾರದು.
50) ಮೊದಲು ತಟ್ಟೆಯಲ್ಲಿ ಬಡಿಸಿದ ಆಹಾರವನ್ನು ನೋಡಿಕೊಂಡು, ಇನ್ನೂ ಬೇಕೆನಿಸಿದರೆ ಮಾತ್ರ ಹಾಕಿಸಿಕೊಳ್ಳಬೇಕು. ತಟ್ಟೆಯಲ್ಲಿ ಸ್ವಲ್ಪವೂ ಉಳಿಯದಂತೆ ಊಟ ಮಾಡಬೇಕು.
ಊಟದ ಕಲೆ ಅಂದರೆ 'ಊಟ ಮಾಡುವುದೂ ಒಂದು ಕಲೆ' .
ಯಾರಾದರೂ ಈ ಕಲೆಗಳನ್ನು ರೂಢಿಸಿಕೊಂಡರೆ ಉಂಡ ಅನ್ನಹಾರ ಚೆನ್ನಾಗಿ ಪಚನವಾಗಿ ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ.
ಈ ರೀತಿ ಊಟ ಮಾಡುವವರನ್ನು ನೋಡಿ, ನಾವೂ ಹೀಗೆಯೇ ಊಟ ಮಾಡಬೇಕು ಅಂತ ಬೇರೆಯವರು ಭಾವಿಸುವಂತೆ ಊಟ ಮಾಡಬೇಕು.

Wednesday, 27 May 2020

ವಂಶವೃಕ್ಷ..

ಬ್ರಹ್ಮನ ಮಗ ಮರೀಚಿ
• ಮರೀಚಿಯ ಮಗ ಕಾಶ್ಯಪ
• ಕಾಶ್ಯಪರ ಮಗ ಸೂರ್ಯ
• ಸೂರ್ಯನ ಮಗ ಮನು
• ಮನುವಿನ ಮಗ ಇಕ್ಷ್ವಾಕು
• ಇಕ್ಷ್ವಾಕುವಿನ ಮಗ ಕುಕ್ಷಿ
• ಕುಕ್ಷಿಯ ಮಗ ವಿಕುಕ್ಷಿ
• ವಿಕುಕ್ಷಿಯ ಮಗ ಬಾಣ
• ಬಾಣನ ಮಗ ಅನರಣ್ಯ
• ಅನರಣ್ಯನ ಮಗ ಪೃಥು
• ಪೃಥುವಿನ ಮಗ ತ್ರಿಶಂಕು
• ತ್ರಿಶಂಕುವಿನ ಮಗ ದುಂಧುಮಾರ.(ಯುವನಾಶ್ವ)
• ದುಂಧುಮಾರುವಿನ ಮಗ ಮಾಂಧಾತ
• ಮಾಂಧಾತುವಿನ ಮಗ ಸುಸಂಧಿ
• ಸುಸಂಧಿಯ ಮಗ ಧೃವಸಂಧಿ
• ಧೃವಸಂಧಿಯ ಮಗ ಭರತ
• ಭರತನ ಮಗ ಅಶೀತಿ
• అಶೀತಿಯ ಮಗ ಸಗರ
• ಸಗರನ ಮಗ ಅಸಮಂಜಸ*
• ಅಸಮಂಜಸನ ಮಗ ಅಂಶುಮಂತ
• ಅಂಶುಮಂತನ ಮಗ ದಿಲೀಪ
• ದಿಲೀಪನ ಮಗ ಭಗೀರಥ
• ಭಗೀರಥನ ಮಗ ಕಕುತ್ಸು
• ಕಕುತ್ಸುವಿನ ಮಗ ರಘು
• ರಘುವಿನ ಮಗ ಪ್ರವುರ್ಧ
• ಪ್ರವುರ್ಧನ ಮಗ ಶಂಖನು
• ಶಂಖನುವಿನ ಮಗ ಸುದರ್ಶನ
• ಸುದರ್ಶನನ ಮಗ ಅಗ್ನಿವರ್ಣ
• ಅಗ್ನಿವರ್ಣನ ಮಗ ಶೀಘ್ರವೇದ
• ಶೀಘ್ರವೇದನ ಮಗ ಮರು
• ಮರುವಿನ ಮಗ ಪ್ರಶಿಷ್ಯಕ
• ಪ್ರಶಿಷ್ಯಕನ ಮಗ ಅಂಬರೀಶ
• ಅಂಬರೀಶನ ಮಗ ನಹುಶ
• ನಹುಶನ ಮಗ ಯಯಾತಿ
• ಯಯಾತಿಯ ಮಗ ನಾಭಾಗ
• ನಾಭಾಗನ ಮಗ ಅಜ
• ಅಜನ ಮಗ ದಶರಥ*

ದಶರಥನ ಮಗ #ರಾಮ...

ರಾಮನಿಗೆ ಲವ-ಕುಶರೀರ್ವರು ಮಕ್ಕಳು..

• ಭರತನಿಗೆ ತಕ್ಷ-ಪುಷ್ಕಲರು..
• ಲಕ್ಷ್ಮಣನಿಗೆ ಅಂಗದ-ಚಂದ್ರಕೇತುಗಳು..
• ಶತ್ರುಘ್ನನಿಗೆ ಸುಬಾಹು-ಶತ್ರುಪಾತಿಗಳು..
• ಇವರಲ್ಲಿ ಹಿರಿಯವನಾದ ಕುಶನು ಕುಮುದ್ವತಿಯನ್ನು ವರಿಸಿ ಕುಶಾವತಿ ಅಥವಾ ಕುಶಸ್ಥಲಿಯಲ್ಲಿ ರಾಜ್ಯವಾಳುತ್ತಾನೆ..
• ಲವನು ಶ್ರಾವಸ್ತಿ ಅಥವಾ ಲವಸ್ಥಲಿಯಲ್ಲಿ, ತಕ್ಷನು ತಕ್ಷಶಿಲೆಯಲ್ಲಿ, ಪುಷ್ಕಲನು ಪುಷ್ಕಲಾವತದಲ್ಲಿ, ಅಂಗದನು ಕಾರುಪಥದಲ್ಲಿ,ಚಂದ್ರಕೇತುವು ಚಂದ್ರಕಾಂತದಲ್ಲಿ, ಸುಬಾಹು ಮಧುರಾನಗರಿಯಲ್ಲಿ, ಶತ್ರುಪಾತಿಯು ವಿದಿಶಾನಗರಿಯಲ್ಲಿ ರಾಜ್ಯವಾಳಿದರು..
• ಕುಶ-ಕುಮುದ್ವತೀ ದಂಪತಿಗಳಿಂದ ಅತಿಥಿ.
• ಅವನಿಂದ ನಿಷಧ
• ನಭ
• ಪುಂಡರೀಕ
• ಕ್ಷೇಮಧನ್ವಾ
• ದೇವಾನೀಕ
• ಅನೀಹ
• ಪಾರಿಯಾತ್ರ
• ಬಲಸ್ಥಲ
• ಇವನಿಗೆ ಸೂರ್ಯನ ಅಂಶವನ್ನು ಪಡೆದ ವಜ್ರನಾಭನು ಮಗನಾಗಿ ಹುಟ್ಟಿದ.
• ಇವನ ಮಗ ಖಗಣ
• ವಿಧೃತಿ
• ಹಿರಣ್ಯನಾಭ. ಇವನು ಮಹರ್ಷಿಜೈಮಿನಿಯ ಶಿಷ್ಯನಾಗಿ ಯೋಗಾಚಾರ್ಯನೆಂದು ಖ್ಯಾತನಾಗಿದ್ದ.ಕೋಸಲದೇಶದ ಯಾಜ್ಞವಲ್ಕ್ಯಮಹರ್ಷಿಯು ಹಿರಣ್ಯನಾಭನಿಂದ ಅಧ್ಯಾತ್ಮಶಿಕ್ಷಣವನ್ನು ಪಡೆದ.
• ಹಿರಣ್ಯನಾಭನ ಮಗ ಪುಷ್ಯ
• ಧ್ರುವಸಂಧಿ
• ಸುದರ್ಶನ
• ಅಗ್ನಿವರ್ಣ
• ಶೀಘ್ರ
• ಮರು.ಈ ಮರುವು ಯೋಗಸಮಾಧಿಯಲ್ಲಿ ಸಿದ್ಧಿಯನ್ನು ಪಡೆದಿದ್ದ.ಈಗಲೂ ಈ ಮರುಮಹಾರಾಜನು ಕಲಾಪವೆಂಬ ಗ್ರಾಮದಲ್ಲಿವಾಸಿಸುತ್ತಿದ್ದಾನೆ.ಕಲಿಯುಗದ ಅಂತ್ಯದಲ್ಲಿ ಸೂರ್ಯವಂಶವು ನಷ್ಟವಾದಾಗ ಇವನು ಪುನರಪಿ ಸೂರ್ಯವಂಶವನ್ನು ಬೆಳೆಸುತ್ತಾನೆ.
• ಮರುವಿನ ಮಗ ಪ್ರಸುಶ್ರುತ
• ಸಂಧಿ
• ಅಮರ್ಷಣ
• ಮಹಸ್ವಂತ
• ವಿಶ್ವಸಾಹ್ವ
• ಪ್ರಸೇನಜಿತ್
• ತಕ್ಷಕ
• ಬೃಹದ್ಬಲ-ಈ ಬೃಹದ್ಬಲನನ್ನು ಕುರುಕ್ಷೇತ್ರಯುದ್ಧದಲ್ಲಿ ಅಭಿಮನ್ಯುವು ಸಂಹರಿಸಿದ.
• ಬೃಹದ್ಬಲನ ಮಗ ಬೃಹದ್ರಣ
• ಉರುಕ್ರಿ
• ವತ್ಸವೃದ್ಧ
• ಪ್ರತಿವ್ಯೋಮ
• ಭಾನು
• ದಿವಾಕ
• ಸಹದೇವ
• ಬೃಹದಶ್ವ
• ಭಾನುಮಂತ
• ಪ್ರತೀಕಾಶ್ವ
• ಸುಪ್ರತೀಕ
• ಮರುದೇವ
• ಸುನಕ್ಷತ್ರ
• ಪುಷ್ಕರ
• ಅಂತರಿಕ್ಷ
• ಸುತಪಸ
• ಅಮಿತ್ರಜಿತ್
• ಬೃಹದ್ರಾಜ
• ಬರ್ಹಿ
• ಕೃತಂಜಯ
• ರಣಂಜಯ
• ಸಂಜಯ
• ಶಾಕ್ಯ
• ಶುದ್ಧೋದ
• ಲಾಂಗಲ
• ಪ್ರಸೇನಜಿತ್
• ಕ್ಷುದ್ರಕ
• ರಣಕ
• ಸುರಥ..
ಈ ಸುರಥನಿಗೆ ಸೂರ್ಯವಂಶದ ಕೊನೆಯ ರಾಜನಾದ ಸುಮಿತ್ರನು ಮಗನಾಗಿ ಹುಟ್ಟಿದನು.
ಇವರೆಲ್ಲರೂ ಇಕ್ಷ್ವಾಕು ವಂಶಸಂಭೂತರು.
ಸುಮಿತ್ರನ ನಂತರ ಕಲಿಯುಗದಲ್ಲಿ ಈ ವಂಶವು ಮರೆಯಾಯಿತು.

Thursday, 21 May 2020

🐩 ಸುಖವೆಂಬ ಮರೀಚಿಕೆಯ ಬೆನ್ನು ಹತ್ತಿ ಕೊನೆಗೆ ಜಿಗುಪ್ಸೆ ಹೊಂದಿದ್ದ ಯಯಾತಿ 🐦

ಮಹಾಭಾರತ ಮತ್ತು ಭಾಗವತ ಭಾರತ ಭೂಮಿಯ ಸಂಸ್ಕೃತಿ ಮತ್ತು ವೈಚಾರಿಕತೆಗಳ ಜೀವಂತ ಪ್ರತಿಬಿಂಬಗಳು. ಈ ಮಹಾಕಥಾನಕಗಳಲ್ಲಿ ಬರುವ ಸಹಸ್ರಾರು ಉಪಕಥೆಗಳು ಮಾನವ ಜೀವನದ ಅನೇಕ ಸಂಕೀರ್ಣ ಪಾತ್ರಗಳನ್ನು ಜನರ ಮುಂದಿಡುತ್ತವೆ. ಈ ಪಾತ್ರಗಳು ಅನೇಕ ಪಾಠಗಳನ್ನು ಹೇಳುತ್ತವೆ. ಭಾಗವತದಲ್ಲಿ ಬರುವ ಋಷಭದೇವ, ಅಜಾಮಿಳ, ವೃತ್ರಾಸುರ, ಗಜೇಂದ್ರ, ನಹುಷ ಮತ್ತು ಯಯಾತಿಯಂತಹ ವ್ಯಕ್ತಿತ್ವಗಳು ಚಿತ್ರಿಸುವ ಮಾನವ ಜೀವನದ ಸನ್ನಿವೇಶಗಳು ಮತ್ತು ಅವುಗಳಿಂದ ಹೊರಬಂದು ಮುಕ್ತನಾಗುವ ಪರಿ ಇಂದಿಗೂ ಪ್ರಸ್ತುತ.

ಅಧುನಿಕತೆಯ "Materialism"ನ ಮೃಗಜಲದ ಬೆನ್ನು ಹತ್ತಿ ಸುಖವನ್ನು ಅರಸುತ್ತ ನಡೆಯುತ್ತಿರುವ ನಮಗೆಲ್ಲರಿಗೂ ಅತ್ಯಂತ ಪ್ರಸ್ತುತವೆನಿಸುವ ಒಂದು ಕಥೆ ಯಯಾತಿ ರಾಜನದು. ಯಯಾತಿ ರಾಜ ಪುರಾಣ ಪ್ರಸಿದ್ಧ ನಹುಷ ರಾಜ ಮತ್ತು ಸಾಕ್ಷಾತ್ ಮಹಾದೇವ ಮತ್ತು ಪಾರ್ವತಿ ಮಾತೆಯ ಪುತ್ರಿಯಾದ ಅಶೋಕಸುಂದರಿಯರ ಸುಪುತ್ರ.

ನಹುಷ ರಾಜನಿಗೆ ಆರು ಜನ ಗಂಡು ಮಕ್ಕಳು. ನಹುಷನಿಗೆ ವಿರಜೆಯಲ್ಲಿ ಹುಟ್ಟಿದ ಹಿರಿಯವನಾದ ಯತಿ ಚಿಕ್ಕಂದಿನಿಂದಲೇ ವಿರಾಗಿ. ಚಿನ್ನದ ಚಮಚವನ್ನು ಕಚ್ಚಿಕೊಂಡು ಹುಟ್ಟಿದವನಾದರೂ ರಾಜಸಹಜವಾದ ಭೋಗ ಭಾಗ್ಯಗಳಲ್ಲಿ ಅವನಿಗೆ ಎಳ್ಳಷ್ಟೂ ಮೋಹವಿರಲಿಲ್ಲ. ಅವನು ಪಾರಂಪರಿಕವಾಗಿ ಒದಗಿದ ರಾಜ ಪಟ್ಟವನ್ನು ತಿರಸ್ಕರಿಸಿ ತಪಸ್ಸು ಮಾಡಲು ಅಡವಿಗೆ ಹೊರಟು ಹೋದ. ಎರಡನೇಯವನಾದ ಯಯಾತಿ ಮಹಾರಾಜನಾದ.

ಯಯಾತಿ ಮಹಾರಾಜನಾಗಿ ಇಡೀ ಜಗತ್ತನ್ನೇ ಗೆದ್ದು ಚಕ್ರವರ್ತಿ ಎನಿಸಿಕೊಳ್ಳುತ್ತಾನೆ. ತನ್ನ ನಾಲ್ಕು ತಮ್ಮಂದಿರನ್ನು ನಾಲ್ಕು ದಿಕ್ಕುಗಳ ರಾಜ್ಯಗಳನ್ನೆಲ್ಲಾ ಮೇಲ್ವಿಚಾರಣೆ ಮಾಡಲು ನೇಮಕ ಮಾಡುತ್ತಾನೆ. ಅಂತಹ ಚಕ್ರವರ್ತಿ ಕ್ಷತ್ರಿಯವೀರ ಯಯಾತಿ ಅಸುರರ ಗುರುವಾದ ಶುಕ್ರಾಚಾರ್ಯರ ಮಗಳು ದೇವಯಾನಿಯನ್ನು ಮದುವೆಯಾದನೆಂಬ ಕಥೆ ಅನೇಕರಿಗೆ ಗೊತ್ತು. ತನ್ನ ತಂದೆಯ ಶಿಷ್ಯನಾದ ಮತ್ತು ದೇವಗುರು ಬೃಹಸ್ಪತಿಯ ಮಗ ಕಚನಿಂದ ತಿರಸ್ಕೃತಳಾದ ದೇವಯಾನಿ ಮುಂಗೋಪಿ. ತನ್ನ ಅತಿ ಕೋಪದಿಂದಲೇ ಕಚನನ್ನು ಶಪಿಸಿ ಆತನಿಂದ ಮರುಶಪಿತಳಾದ ದೇವಯಾನಿ ಮತ್ತೊಮ್ಮೆ ತನ್ನ ಕೋಪದ ಪ್ರಭಾವದಿಂದಲೇ ತನ್ನ ಗೆಳತಿ ಮತ್ತು ದಾನವರಾಜ ವೃಷಪರ್ವನ ಮಗಳು ಶರ್ಮಿಷ್ಠೆಯನ್ನು ತನ್ನ ಬಟ್ಟೆಗಳನ್ನು ಹಾಕಿಕೊಂಡಿದ್ದಕ್ಕಾಗಿ ನಿಂದಿಸುತ್ತಾಳೆ. ರಾಜಕುವರಿ ಶರ್ಮಿಷ್ಠೆ, ದೇವಯಾನಿಯ ಅಹಂಕಾರದ ಮಾತುಗಳಿಂದ ಕೆರಳಿ, ಅವಳ ಬಟ್ಟೆಗಳನ್ನ ಕಿತ್ತುಕೊಂಡು ನಗ್ನಳಾದ ಅವಳನ್ನು ಪಾಳು ಬಿದ್ದ ಭಾವಿಯೊಂದಕ್ಕೆ ತಳ್ಳಿ ಬಿಟ್ಟು ಅಲ್ಲಿಂದ ಹೊರಟು ಹೋಗಿ ಬಿಡುತ್ತಾಳೆ.


ವನವಿಹಾರಕ್ಕೆ ಬಂದ ಚಕ್ರವರ್ತಿ ಯಯಾತಿ ಪಾಳುಭಾವಿಯಿಂದ ಬರುತ್ತಿದ್ದ ಆರ್ತನಾದವನ್ನು ಕೇಳಿ ಅಲ್ಲಿಗೆ ಹೋಗಿ ನೋಡಲು ನಗ್ನ ಸುಂದರಿಯಾದ ದೇವಯಾನಿ ಕಾಣುತ್ತಾಳೆ. ತನ್ನ ಹೊದಿಕೆಯನ್ನು ಅವಳಿಗೆ ಕೊಟ್ಟು, ಅವಳ ಕೈ ಹಿಡಿದು ಅವಳನ್ನು ಮೇಲಕ್ಕೆತ್ತುತ್ತಾನೆ. ತನ್ನ ಕೈಹಿಡಿದ ಮಹಾರಾಜ ಯಯಾತಿಯೇ ತನ್ನ ಪತಿ ಎಂದು ದೇವಯಾನಿ ಭಾವಿಸುತ್ತಾಳೆ. ದೇವಯಾನಿಯ ಅಪೂರ್ವ ಸೌಂದರ್ಯವನ್ನು ಕಂಡು ಪರವಶನಾದ ಯಯಾತಿ ಕೂಡ ಆಕೆ ತನಗೆ ಒಲಿದುದನ್ನು ತನ್ನ ಭಾಗ್ಯ ಎಂದುಕೊಳ್ಳುತ್ತಾನೆ.

ದೇವಯಾನಿ ಮನೆಗೆ ಮರಳಿ ತಂದೆಗೆ ಶರ್ಮಿಷ್ಠೆ ಮಾಡಿದ ಕೃತ್ಯವನ್ನು ಹೇಳಿ, ಅವಳ ತಂದೆಯ ರಾಜ್ಯವನ್ನು ತಾನು ಬಿಟ್ಟು ಹೋಗುವುದಾಗಿ ಹೇಳುತ್ತಾಳೆ. ಮಗಳ ಪ್ರೀತಿಯಲ್ಲಿ ಅಂಧರಾದ ಶುಕ್ರಾಚಾರ್ಯರು ಅವಳೊಂದಿಗೆ ದೇಶ ಬಿಟ್ಟು ಹೊರಟು ನಿಲ್ಲುತ್ತಾರೆ. ತನ್ನ ರಾಜ್ಯಕ್ಕೆ ಅವರ ಅಗತ್ಯವನ್ನು ಅರಿತ ವೃಷಪರ್ವ ಮಹಾರಾಜನು ಶುಕ್ರಾಚಾರ್ಯರಿಗೆ ತಮ್ಮ ತಪ್ಪುಗಳನ್ನು ಕ್ಷಮಿಸಬೇಕೆಂದು ಕೇಳಿಕೊಳ್ಳುತ್ತಾನೆ. ಕೊನೆಗೆ ವೃಷಪರ್ವನ ಮಗಳು ಶರ್ಮಷ್ಠೆ ದೇವಯಾನಿಯ ದಾಸಿಯಾಗಿರಲು ಒಪ್ಪಿಕೊಂಡ ಮೇಲೆ ಶುಕ್ರಾಚಾರ್ಯರು ದಾನವಗುರುವಾಗಿ ಮುಂದುವರೆಯಲು ಅಂಗೀಕರಿಸುತ್ತಾರೆ.

ಮುಂದೆ ದೇವಯಾನಿಯ ಇಚ್ಛೆಯಂತೆ ಶುಕ್ರಾಚಾರ್ಯರು ಅವಳನ್ನು ಚಕ್ರವರ್ತಿ ಯಯಾತಿಗೆ ಧಾರೆಯೆರೆದು ಕೊಡುತ್ತಾರೆ. ದೇವಯಾನಿಯ ಜೊತೆ ಅವಳ ದಾಸಿಯಾದ ಶರ್ಮಿಷ್ಠೆ ಕೂಡ ಚಕ್ರವರ್ತಿ ಯಯಾತಿಯ ರಾಜ್ಯಕ್ಕೆ ತೆರಳುತ್ತಾಳೆ. ದೇವಯಾನಿಯಂತಹ ಅದ್ಭುತ ಸುಂದರಿಯೊಂದಿಗೆ ಸಕಲ ಭೋಗ ಭಾಗ್ಯಗಳನ್ನು ಅನುಭವಿಸುತ್ತಿದ್ದರೂ ಯಯಾತಿಯ ಕಣ್ಣಿಗೆ ಶರ್ಮಿಷ್ಠೆ ಬಿದ್ದ ಮೇಲೆ ಅವನು ಅವಳಲ್ಲಿ ಕೂಡ ಅನುರಕ್ತನಾದ. ಅವಳು ಕೂಡ ಯಯಾತಿಯನ್ನು ಕಂಡು ಅವನ ಪ್ರೀತಿಯನ್ನು ಬಯಸುತ್ತಾಳೆ.

ದೇವಯಾನಿಗೆ ತಿಳಿಯದಂತೆ ಯಯಾತಿ ಶರ್ಮಿಷ್ಠೆಯನ್ನು ಕೂಡ ವರಿಸುತ್ತಾನೆ. ದೇವಯಾನಿಯಲ್ಲಿ ಯದು ಮತ್ತು ತುರ್ವಸುಗಳನ್ನು ಪುತ್ರರಾಗಿ ಪಡೆದರೆ, ಶರ್ಮಿಷ್ಠೆಯಲ್ಲಿ ದ್ರುಹ್ಯು, ಅನು ಮತ್ತು ಪುರುಗಳನ್ನು ಪುತ್ರರಾಗಿ ಪಡೆಯುತ್ತಾನೆ. ಆದರೆ ಯಯಾತಿ ಮತ್ತು ಶರ್ಮಿಷ್ಠೆಯರ ಸಂಗಮದ ವಿಷಯ ತಿಳಿದು ಕ್ರುದ್ಧಳಾದ ದೇವಯಾನಿ ತನ್ನ ತಂದೆ ಶುಕ್ರಾಚಾರ್ಯರಿಗೆ ದೂರು ನೀಡುತ್ತಾಳೆ. ಶುಕ್ರಾಚಾರ್ಯರು ಸಿಟ್ಟಿನಿಂದ ಯಯಾತಿಗೆ ವೃದ್ಧನಾಗಿ ಹೋಗೆಂದು ಶಪಿಸುತ್ತಾರೆ. ಯಯಾತಿ ಕ್ಷಮೆ ಬೇಡಲು ಬೇರೆ ಯಾರಾದರೂ ಅವನ ವೃದ್ಧಾಪ್ಯವನ್ನು ಪಡೆದುಕೊಂಡು ತಮ್ಮ ಯೌವನವನ್ನು ಅವನಿಗೆ ಕೊಡಲು ಒಪ್ಪಿದರೆ ಹಾಗಾಗಬಹುದು ಎಂಬ ಪರಿಹಾರವನ್ನು ಶುಕ್ರಾಚಾರ್ಯರು ನೀಡುತ್ತಾರೆ.

ಯಯಾತಿಗೆ ಇನ್ನೂ ಭೋಗ ಜೀವನದಲ್ಲಿ ಅಪಾರ ಆಸಕ್ತಿ. ಆದುದರಿಂದ ಆತನು ಆಗ ತಾನೇ ಯೌವನದ ಹೊಸ್ತಿಲಲ್ಲಿದ್ದ ತನ್ನ ಪುತ್ರರಿಗೆ ಅವರ ಯೌವನವನ್ನು ತನಗೆ ಧಾರೆಯೆರೆಯಲು ಕೇಳಿಕೊಳ್ಳುತ್ತಾರೆ. ಯದು ಮೊದಲಾದ ಬೇರಾವ ರಾಜಕುಮಾರರು ಅದನ್ನು ಒಪ್ಪುವುದಿಲ್ಲ. ಕೊನೆಯ ಪುತ್ರ ಪುರು ಮಾತ್ರ ತಂದೆಯ ಮಾತನ್ನು ಒಪ್ಪಿ ತನ್ನ ಯೌವನವನ್ನು ತಂದೆಗೆ ನೀಡಿ ತಾನು ವೃದ್ಧಾಪ್ಯವನ್ನು ಪಡೆದುಕೊಳ್ಳುತ್ತಾನೆ.

ಅನೇಕ ವರ್ಷಗಳ ಭೋಗ ಜೀವನದ ನಂತರವೂ ತಣಿಯದ ತನ್ನ ಭೋಗಾಸಕ್ತಿಯ ಮೇಲೆ ಕೊನೆಗೆ ಯಯಾತಿಗೆ ಜಿಗುಪ್ಸೆ ಉಂಟಾಗುತ್ತದೆ. ಯೌವನದ ಹೊಸ್ತಿಲಲ್ಲೇ ತನ್ನ ಮಗ ವೃದ್ಧಾಪ್ಯ ಅನುಭವಿಸುವಂತೆ ಮಾಡಿದ ಅವನಿಗೆ ಅಪಾರ ಪಶ್ಚಾತ್ತಾಪ ಉಂಟಾಗುತ್ತದೆ. ಕೊನೆಗೆ ಅವನು ತನ್ನ ವೃದ್ಧಾಪ್ಯವನ್ನು ಮಗನಿಂದ ವಾಪಸ್ಸು ಪಡೆದು ಅವನಿಗೆ ಯೌವನವನ್ನು ಮರಳಿಸಿ ಅವನಿಗೆ ರಾಜ್ಯಾಭಿಷೇಕ ಮಾಡಿ ತಾನು ತಪಸ್ಸಿಗೆ ಹೊರಟು, ಕೊನೆಗೆ ಲೌಕಿಕ ಲಾಲಸೆಗಳಿಂದ ಬಿಡುಗಡೆ ಪಡೆದು ಭಗವಂತನ ಕೃಪೆಯಿಂದ ಮುಕ್ತಿ ಪಡೆಯುತ್ತಾನೆ.


ಪುರಾಣ ಕಾಲದ ಯಯಾತಿ, ಸುಖವೆಂಬ ಮರೀಚಿಕೆಯ ಬೆನ್ನು ಹತ್ತಿ ತನ್ನ ಬದುಕಿನ ವೈಚಾರಿಕ ಮತ್ತು ಅಧ್ಯಾತ್ಮಿಕ ಆಯಾಮಗಳನ್ನು ತಿರಸ್ಕರಿಸಿ ಕೊನೆಗೆ ಜಿಗುಪ್ಸೆ ಹೊಂದುವ ಜನರ ಪ್ರತಿನಿಧಿಯಾಗುತ್ತಾನೆ. ಮಗನಿಂದ ತನ್ನ ಸುಖಕ್ಕಾಗಿ ಬಲಿದಾನ ಬಯಸುವ ಅನೇಕ ಮಹತ್ವಾಕಾಂಕ್ಷಿ ತಂದೆ ತಾಯಿಯರ ಪ್ರತಿನಿಧಿ ಕೂಡ ಆಗುತ್ತಾನೆ

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...