ನಮಸ್ಕಾರ ಸ್ನೇಹಿತರೇ, ಇಂದು ನಾವು ತಮಿಳುನಾಡು ಶೈಲಿಯ ರಸಂ ಮಾಡುವ ವಿಧಾನವನ್ನು ನಿಮಗೆ ತಿಳಿಸಲಾಗಿದೆ. ತಮಿಳುನಾಡು ಶೈಲಿಯ ರಸಂ ಮಾಡಲು ಬೇಕಾಗುವ ಸಾಮಗ್ರಿಗಳು: 2 ಬಟ್ಟಲು ತೊಗರಿಬೇಳೆ, ಸ್ವಲ್ಪ ಎಣ್ಣೆ, 1 ಟೊಮೇಟೊ , 2 ಚಮಚ ಕಾಳುಮೆಣಸು, 3 ಚಮಚ ಸಾಸಿವೆ, ಎರಡೂವರೆ ಚಮಚ ಜೀರಿಗೆ, 2 ಚಮಚ ಮೆಂತ್ಯ, 1 ಬಟ್ಟಲು ಧನಿಯಾ, ಸ್ವಲ್ಪ ಇಂಗು, 8 – 10 ಹಸಿಮೆಣಸಿನಕಾಯಿ, ಸ್ವಲ್ಪ ಕರಿಬೇವು, 1 ಚಮಚ ಅರಿಶಿನ ಪುಡಿ, ಸ್ವಲ್ಪ ಬೆಲ್ಲ, ಸ್ವಲ್ಪ ಹುಣಸೆ ಹಣ್ಣಿನ ರಸ, ರುಚಿಗೆ ತಕ್ಕಷ್ಟು ಉಪ್ಪು, ಸ್ವಲ್ಪ ಕೊತ್ತಂಬರಿ ಸೊಪ್ಪು.
ತಮಿಳುನಾಡು ಶೈಲಿಯ ರಸಂ ಮಾಡುವ ವಿಧಾನ: ಮೊದಲಿಗೆ ಒಂದು ಕುಕ್ಕರನ್ನು ತೆಗೆದುಕೊಂಡು ಅದಕ್ಕೆ 2 ಬಟ್ಟಲು ತೊಗರಿಬೇಳೆ, 4 ಬಟ್ಟಲು ನೀರು, 1 ಚಮಚ ಎಣ್ಣೆ, 1 ಟೊಮೇಟೊವನ್ನು ಹಾಕಿ 4 – 5 ವಿಷಲ್ ನನ್ನು ಹಾಕಿಸಿ ತಣ್ಣಗಾಗಲು ಬಿಡಿ. ಮತ್ತೊಂದು ಕಡೆ ಗ್ಯಾಸ್ ಮೇಲೆ ಒಂದು ಬಾಣಲೆಯಲ್ಲಿ ಇಟ್ಟುಕೊಂಡು ಅದಕ್ಕೆ 1 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ 2 ಚಮಚದಷ್ಟು ಕಾಳುಮೆಣಸನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 2 ಚಮಚದಷ್ಟು ಸಾಸಿವೆ, 2 ಚಮಚದಷ್ಟು ಜೀರಿಗೆ, 2 ಚಮಚ ಮೆಂತ್ಯವನ್ನು ಹಾಕಿ ಕಹಿ ಹೋಗುವವರೆಗೂ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 1 ಬಟ್ಟಲಿನಷ್ಟು ಧನಿಯಾವನ್ನು ಹಾಕಿ 5 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 1 ಚಮಚದಷ್ಟು ಇಂಗುವನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಒಂದು ಬಟ್ಟಲಿಗೆ ಹಾಕಿ ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಒಂದು ಮಿಕ್ಸಿ ಜಾರಿಗೆ ಹಾಕಿಕೊಂಡು ನುಣ್ಣಗೆ ಪುಡಿಮಾಡಿಕೊಂಡರೆ ತಮಿಳುನಾಡು ಶೈಲಿಯ ರಸಂ ಪುಡಿ ರೆಡಿಯಾಗುತ್ತದೆ.
ನಂತರ ಗ್ಯಾಸ್ ಮೇಲೆ ಒಂದು ಪಾತ್ರೆಯನ್ನು ಇಟ್ಟುಕೊಂಡು ಅದಕ್ಕೆ 2 ಚಮಚದಷ್ಟು ಎಣ್ಣೆಯನ್ನು ಹಾಕಿ ಕಾಯಲು ಬಿಡಿ. ಎಣ್ಣೆ ಕಾದ ನಂತರ 1 ಚಮಚ ಸಾಸಿವೆ, ಅರ್ಧ ಚಮಚ ಜೀರಿಗೆ, ಉದ್ದನೆ ಹಚ್ಚಿದ ಹಸಿಮೆಣಸಿನಕಾಯಿ, ಸ್ವಲ್ಪ ಕರಿಬೇವನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 1 ಚಮಚದಷ್ಟು ಅರಿಶಿನ ಪುಡಿಯನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ತದನಂತರ 1 ಚಿಟಿಕೆ ಇಂಗು, ಬೇಯಿಸಿಕೊಂಡ ಬೇಳೆ ಹಾಗೂ ಟೊಮೊಟೊವನ್ನು ಹಾಕಿ ಮಿಕ್ಸ್ ಮಾಡಿಕೊಳ್ಳಿ. ನಂತರ ಇದಕ್ಕೆ ಸ್ವಲ್ಪ ಬೆಲ್ಲ, ಹುಣಸೆ ಹಣ್ಣಿನ ರಸ, ರುಚಿಗೆ ತಕಷ್ಟು ಉಪ್ಪು, 4 ಚಮಚ ರಸಂ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಯಲು ಬಿಡಿ. ಕೊನೆಯದಾಗಿ ಇದಕ್ಕೆ ಸಣ್ಣಗೆ ಹಚ್ಚಿದ ಕೊತ್ತಂಬರಿ ಸೊಪ್ಪನ್ನು ಹಾಕಿ 5 ನಿಮಿಷಗಳ ಕಾಲ ಕುದಿಸಿಕೊಂಡರೆ ತಮಿಳುನಾಡು ಶೈಲಿಯ ರಸಂ ಸವಿಯಲು ಸಿದ್ದ.
No comments:
Post a Comment