Sunday, 17 March 2019

SHLOKA

ಕಾಮೈಸ್ತೈಸ್ತೈರ್ಹೃತಜ್ಞಾನಾಃ ಪ್ರಪದ್ಯಂತೇSನ್ಯದೇವತಾಃ ।
ತನ್ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ ॥೨೦॥

Translation

ಕಾಮೈಃ ತೈಃ ತೈಃ ಹೃತ ಜ್ಞಾನಾಃ ಪ್ರಪದ್ಯಂತೇ ಅನ್ಯ ದೇವತಾಃ ।
ತಮ್ ತಮ್  ನಿಯಮಮ್ ಆಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ-ಯಾವ ಯಾವುದೋ ಬಯಕೆಗಳಿಂದ ಅರಿವು ಅಳಿದವರು ತಮ್ಮ ಸ್ವಭಾವ –ಸಂಸ್ಕಾರಗಳಿಗೆ ತಕ್ಕಂತೆ ಆಯಾ ಕಟ್ಟಲೆಗಳಿಗೆ ಕಟ್ಟುಬಿದ್ದು ಬೇರೆ ಬೇರೆ ದೇವತೆಗಳಿಗೆ ಮೊರೆಹೋಗುತ್ತಾರೆ.

ಕೃಷ್ಣ ಹಿಂದಿನ ಅಧ್ಯಾಯಗಳಲ್ಲಿ ಹೇಳಿರುವ ವಿಚಾರವನ್ನು ಮತ್ತೆ ಒತ್ತು ಕೊಟ್ಟು ಇಲ್ಲಿ ವಿವರಿಸುತ್ತಾನೆ. ಮನುಷ್ಯ ಅಧ್ಯಾತ್ಮ ಮಾರ್ಗದಿಂದ ದೂರ ಸರಿಯಲು ಮೂಲ ಕಾರಣ ಅವನ ಹುಚ್ಚು ಬಯಕೆಗಳು. ಇದು ನಮ್ಮ ಅರಿವಿಗೆ ದೊಡ್ಡ ಅಡ್ಡಗೋಡೆ. ಬಯಕೆಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಇದ್ದಾಗ, ಮನುಷ್ಯ ಅಧ್ಯಾತ್ಮದ ಬೆನ್ನುಹತ್ತುವ ಬದಲು ಬಯಕೆಗಳ ಬೆನ್ನು ಹತ್ತುತ್ತಾನೆ. ಬಯಕೆಗಳ ಈಡೇರಿಕೆಗೋಸ್ಕರ ಮಾಡಬಾರದ್ದನ್ನು ಮಾಡುತ್ತಾ ಹೋಗುತ್ತಾನೆ ಮತ್ತು  ಅಧಃಪಾತವನ್ನು ಹೊಂದುತ್ತಾನೆ.
ಬಯಕೆಗಳ ಬೆನ್ನುಹತ್ತಿದಾಗ ಬಯಕೆ ಅರಿವನ್ನು ನಿಯಂತ್ರಿಸಲಾರಂಭಿಸುತ್ತದೆ. ಈ ಸಮಯದಲ್ಲಿ ಯಾರಾದರೂ ‘ನಿನ್ನ ಇಷ್ಟಾರ್ಥ ಸಿದ್ಧಿಗಾಗಿ ಈ ದೇವಾಲಯಕ್ಕೆ ಹೋಗು’ ಎಂದರೆ ಆತ ಅಲ್ಲಿಗೆ ಹೋಗುತ್ತಾನೆ . ಹೀಗೆ ಇಷ್ಟಾರ್ಥ ಸಿದ್ಧಿ ಎಲ್ಲಿ ಸಾಧ್ಯ ಎಂದು ಸುದ್ದಿ ಬಂತೋ ಅಲ್ಲಿಗೆ ಭೇಟಿ ಕೊಡಲಾರಂಭಿಸುತ್ತಾನೆ. ಇದರಿಂದಾಗಿ  ಆತ ಮೂಲ ಅಧ್ಯಾತ್ಮ ತತ್ವವನ್ನು ಬಿಟ್ಟು, ಏಕಭಕ್ತಿಯಿಂದ ದೂರ ಸರಿದು, ಎಲ್ಲಿ ತನ್ನ ಅಪೇಕ್ಷೆ ಈಡೇರುತ್ತದೋ ಅಲ್ಲಿ, ಆಯಾ ದೇವತೆಗಳನ್ನು ತನ್ನ ಭೌತಿಕ ಬಯಕೆಗಳನ್ನು ಈಡೇರಿಸುವಂತೆ ಬೇಡಿ ಪೂಜಿಸಲಾರಂಭಿಸುತ್ತಾನೆ. ಅದಕ್ಕಾಗಿ ಯಾವುದ್ಯಾವುದೋ ವೃತಾಚರಣೆ ಮಾಡಲಾರಂಭಿಸುತ್ತಾನೆ. ಇದರಿಂದಾಗಿ ಆತ ನಿಜವಾದ ಭಗವಂತನ ಉಪಾಸನೆಯ ಮಾರ್ಗದಿಂದ ದೂರ ಸರಿಯುತ್ತಾನೆ. ಏಕಭಕ್ತಿ ಉಪಾಸನೆಯಿಂದ  ಈ  ರೀತಿಯ ಅಲ್ಪ ಬಯಕೆ ಎಂದೂ ಈಡೇರುವುದಿಲ್ಲ. ಏಕೆಂದರೆ  ‘ಯದನುಗ್ರಹಮಿಚ್ಛಾಮಿ ತಸ್ಯ ವಿತ್ತಂ ಹರಾಮ್ಯಹಂ’ ಭಕ್ತರ ಸಂಪತ್ತನ್ನು ಇಲ್ಲದಂತೆ ಮಾಡಿ, ಪರೀಕ್ಷಿಸಿ, ನಂತರ ಅವರನ್ನು ಉದ್ಧರಿಸುವುದೇ ಭಗವಂತನ  ಸಂಕಲ್ಪ. ನಮಗೆ ಏನು ಬೇಕು ಎನ್ನುವುದು ನಮಗಿಂತ ಚನ್ನಾಗಿ ಭಗವಂತನಿಗೆ ಗೊತ್ತು. ಆತನ ಅನುಗ್ರಹ ಮಹಾ ಪ್ರಸಾದ. ಈ ಅರಿವು ಬಯಕೆಗಳ ಬೆನ್ನು ಹತ್ತಿದವರಿಗೆ ಇರುವುದಿಲ್ಲ ಮತ್ತು ಇದರಿಂದ ಅವರು ಭಗವಂತನ ಅನುಗ್ರಹದಿಂದ ವಂಚಿತರಾಗುತ್ತಾರೆ.
ಏಕೆ ಹೀಗೆ? ಏಕೆ ಎಲ್ಲರೂ ಒಂದೇ ರೀತಿಯಾಗಿ ಭಗವಂತನನ್ನು ಪೂಜಿಸುವುದಿಲ್ಲ? ಇದಕ್ಕೆ ಕೃಷ್ಣ ಹೇಳುತ್ತಾನೆ “ತನ್ತಂ ನಿಯಮಮಾಸ್ಥಾಯ ಪ್ರಕೃತ್ಯಾ ನಿಯತಾಃ ಸ್ವಯಾ”.   “ಪ್ರತಿಯೊಂದು ಜೀವಕ್ಕೂ ಅದರದ್ದೇ ಆದ ಪ್ರಕೃತಿ ಇದೆ” ಎಂದು.  [ಇಲ್ಲಿ ಹೇಳಿರುವ ‘ಪ್ರಕೃತಿ’ ಅಂದರೆ ಒಂದು ‘ಜೀವ ಸ್ವಭಾವ’ ಹಾಗು ಇನ್ನೊಂದು ‘ಪರಿಸರ ಮತ್ತು ಹುಟ್ಟಿಬಂದ ಮನೆತನದ ಸಂಸ್ಕಾರ(genes and environmental force)’ ] ಮನುಷ್ಯನ ಈ ಜೀವಸ್ವಭಾವವನ್ನು ಎಂದೂ ಯಾರಿಂದಲೂ ಬದಲಿಸಲು ಸಾಧ್ಯವಿಲ್ಲ. ಒಬ್ಬೊಬ್ಬರ ಸ್ವಭಾವ ಒಂದೊಂದು ತರ. ಈ ಕಾರಣದಿಂದ ಏಕರೂಪ ಸ್ವಭಾವ ಈ ಜಗತ್ತಿನಲ್ಲಿಲ್ಲ. ಈ ಭೂಮಿಯ ಮೇಲೆ  ಎಷ್ಟೋ  ಭಾರಿ ಭಗವಂತ ಮತ್ತು ಅನೇಕ ಮಹಾತ್ಮರು ಅವತರಿಸಿ ಬಂದು ಸತ್ಯವನ್ನು ಭೋಧನೆ ಮಾಡಿದರೂ ಕೂಡಾ, ಏಕ ಧರ್ಮ ಸ್ಥಾಪನೆ ಆಗಲಿಲ್ಲ. ಕಾರಣ ಏನೆಂದರೆ ಸ್ವತಃ ಭಗವಂತನೇ ಬಂದು ಹೇಳಿದರೂ ಕೂಡಾ-ಸತ್ಯವನ್ನು ತಿಳಿಯಬಲ್ಲ ಜೀವಸ್ವಭಾವವುಳ್ಳ ಜೀವ ಮಾತ್ರ ಆ ಸತ್ಯವನ್ನು ಗ್ರಹಿಸಿ ಒಪ್ಪುತ್ತದೆ. ಉಳಿದ ಜೀವಗಳು ಈ ಸತ್ಯವನ್ನು ಗ್ರಹಿಸಲಾರವು. ಇದು ತೀರಾ ಸಹಜ. ಆದ್ದರಿಂದ ಕೃಷ್ಣ ಹೇಳುತ್ತಾನೆ “ಸತ್ಯವನ್ನು ಒಪ್ಪುವುದಕ್ಕೂ ಕೂಡಾ ಜೀವಕ್ಕೆ ಯೋಗ್ಯತೆ ಬೇಕು” ಎಂದು. ಹೀಗೆ  ಜೀವ ಸ್ವರೂಪದ ಯೋಗ್ಯತೆಗನುಗುಣವಾಗಿ ಅವರವರಿಗೆ ಇಷ್ಟವಾಗುವ ದೇವತಾ ಉಪಾಸನೆ ಪ್ರಪಂಚದಲ್ಲಿ ನಡೆಯುತ್ತದೆ. ಈ ಕಾರಣದಿಂದ ಪ್ರಪಂಚದಲ್ಲಿ ಎಲ್ಲರೂ ನಿಜವಾದ ಭಗವದ್ ಭಕ್ತರಾಗಲು ಸಾಧ್ಯವಿಲ್ಲ, ಅದು ಕೇವಲ ಸಾತ್ವಿಕ ಚೇತನಕ್ಕೆ ಮಾತ್ರ ಸಾಧ್ಯ.

💐🌹💐🌹💐🌹💐🌹💐

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...