Thursday 25 August 2016

*ಕೃಷ್ಣ ಜನ್ಮಾಷ್ಟಮಿ ಶುಭ ತರಲಿ*

ಕೃಷ್ಣ ಎಂದಿನಂತೆ ಬೆಣ್ಣೆ ಕದಿಯಲು ಹೋದ . ಯಶೋದೆಗೆ ಅವನ ತುಂಟತನ ನೋಡಿ ಸಾಕಾಗಿತ್ತು. ಸರಿ ಬೆಣ್ಣೆಯ ಕುಡಿಕೆಯನ್ನ ನೆಲುವಿನ ಮೇಲೆ ಕಟ್ಟಿ ಒಂದು ಗಂಟೆಯನ್ನ ಕಾವಲಿಗೆ ನೇಮಿಸಿ ಕೃಷ್ಣ ಬಂದು ಬೆಣ್ಣೆ ಕದ್ದರೆ ತನಗೆ ಅರುಹುವಂತೆ ಹೇಳುತ್ತಾಳೆ . ಕೃಷ್ಣ ಬರ್ತಾನೆ . ಅಮ್ಮ ಕಟ್ಟಿದ ಗಂಟೆ ನೋಡ್ತಾನೆ. ಸರಿ ಗಂಟೆಗೆ ತಾಕೀತು ಮಾಡ್ತಾನೆ 'ನಾ ಬೆಣ್ಣೆ ಕದಿಯೋದನ್ನ ಅಮ್ಮನಿಗೆ ಹೇಳಬಾರದು' ಗಂಟೆ ಒಪ್ಪಿಕೊಳ್ಳುತ್ತದೆ.. ಕೃಷ್ಣ ಎಂದಿನಂತೆ ಗೆಳೆಯರ ಸಹಾಯದಿಂದ ಬೆಣ್ಣೆಯ ಗಡಿಗೆ ಇಳಿಸಿ ಎಲ್ಲರಿಗೂ ಬೆಣ್ಣೆ ಹಂಚುತ್ತಾನೆ. ಗಂಟೆ ಅವನಿಗೆ ಕೊಟ್ಟ ಮಾತಿನಂತೆ ಸುಮ್ಮನಿರುತ್ತದೆ. ಗೆಳೆಯರೆಲ್ಲ ಖುಷಿಖುಷಿಯಿಂದ ತಿಂತಾರೆ .. ಎಲ್ಲರಿಗೂ ಹಂಚಿದ ಕೃಷ್ಣ ತಾನೂ ತಿನ್ನಲು ಬಾಯಿಗಿಡುತ್ತಾನೆ ಅಷ್ಟೇ .. ಗಂಟೆ ಒಂದೇ ಸಮ ಸದ್ದು ಮಾಡಲು ಶುರು ಮಾಡುತ್ತದೆ.. ಗೋಪಮ್ಮ ಓಡಿ ಬಂದು ಕೃಷ್ಣನನ್ನ ಹಿಡಿಯುತ್ತಾಳೆ . ಎಂದಿನಂತೆ ಬಣ್ಣದ ಮಾತಿನಿಂದ ಅಮ್ಮನನ್ನ ನಗಿಸಿದ ಕೃಷ್ಣ ಅಮ್ಮನಿಂದ ಮುತ್ತು ಪಡೆದುಕೊಂಡು ಅಮ್ಮನನ್ನ ಮರುಳು ಮಾಡುತ್ತಾನೆ. ಎಲ್ಲಾ ಆದ ಮೇಲೆ ಗಂಟೆಯನ್ನ ತರಾಟೆಗೆ ತೆಗೆದುಕೊಳ್ಳುತ್ತಾನೆ. 'ಅಲ್ಲಾ, ನನಗೆ ಮಾತು ಕೊಟ್ಟಿದ್ದೆ ತಾನೇ ? ಎಲ್ಲರೂ ತಿನ್ನುವವರೆಗೂ ಸುಮ್ಮನಿದ್ದು ನಾ ತಿನ್ನುವಾಗ ಏಕೆ ಹೀಗೆ ಮಾಡಿದೆ?' ಅಂದು ಕೇಳುತ್ತಾನೆ. ಗಂಟೆ 'ಇದರಲ್ಲಿ ನನ್ನ ತಪ್ಪೇನು ಇಲ್ಲ ಗೋಪಾಲ .. ನಿನಗೆ ನೈವೇದ್ಯ ಮಾಡುವಾಗ ನಾನು ಸದ್ದು ಮಾಡುವುದು ನನಗೆ ಅಭ್ಯಾಸವಾಗಿ ಬಿಟ್ಟಿದೆ' ಅನ್ನುತ್ತದೆ ..!!!! ಕೃಷ್ಣ ನಕ್ಕು ಬಿಡುತ್ತಾನೆ ... 
ಎಲ್ಲಾ ವಯಸ್ಸಿನವರಿಗೂ ಕೃಷ್ಣ ಇಷ್ಟ ಆಗೋದು ಕೃಷ್ಣನ ವಿಶೇಷ.. ಓಹ್ ಇಂತಹ ಒಬ್ಬ ಕಂದನೋ, ಆಪ್ತನೋ, ಪ್ರಿಯಕರನೋ, ಹಿತೈಷಿಯೋ, ಮಂತ್ರಿಯೋ, ರಕ್ಷಕನೋ ಇರಬಾರದಿತ್ತೇ ಅನಿಸುವಷ್ಟು ಆಯಾ ವಯಸ್ಸಿಗೆ ಇಷ್ಟವಾಗ್ತಾ ಹೋಗ್ತಾನೆ ... 
ನನಗೂ ಕೃಷ್ಣ ಇಷ್ಟವಾಗ್ತಾನೆ ...... ಅಮ್ಮ ನಾನು ದೇವರಾಣೆ ಬೆಣ್ಣೆ ಕದ್ದಿಲಮ್ಮ ಎನ್ನುವ ಕೃಷ್ಣ, ರಾಧೆಯ ಗೆಲ್ಲುವ ಕಳ್ಳ ಕೃಷ್ಣ , ಮತ್ತೆ ಗೀತೋಪದೇಶ ಮಾಡುವ ಬೃಹತ್ ಕೃಷ್ಣ .... 
ತುಂಟತನ, ಪ್ರೀತಿ, ಸ್ನೇಹ, ಕುಟಿಲತೆ, ಆಪ್ತತೆಗಳ ಪ್ರತೀಕವಾಗಿ .... ನಮ್ಮದೇ ಬದುಕಿನ ಪ್ರತಿಬಿಂಬಗಳಂತೆ ಕೃಷ್ಣ ಕಾಣುತ್ತಾನೆ ...

No comments:

Post a Comment

TOP 10

  Top 10 Sites for your career 1. Linkedin 2. Indeed 3. Naukri 4. Monster 5. JobBait 6. Careercloud 7. Dice 8. CareerBuilder 9. Jibberjobber...